- ವೋಟರ್ ಐಡಿ ಮರೆತು ಮತ ಚಲಾವಣೆಗೆ ಬಂದಿದ್ದ ಪ್ರಮೋದಾದೇವಿ
- ಮೂಲ ದಾಖಲೆಯೊಂದಿಗೇ ಮತ ಚಲಾಯಿಸಲು ಸೂಚಿಸಿದ ಅಧಿಕಾರಿಗಳು
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತದಾನಕ್ಕೆ ಬಂದು ಪೇಚಿಗೆ ಸಿಲುಕಿದ ಘಟನೆ ಮೈಸೂರಿನಲ್ಲಿ ದಾಖಲಾಗಿದೆ.
ವೋಟ್ ಮಾಡಲು ಬಂದಿದ್ದ ಪ್ರಮೋದಾದೇವಿ ಒಡೆಯರ್ ಅವರು ದಾಖಲೆ ಮರೆತು ಬಂದಿದ್ದರು. ಹೀಗಾಗಿ ತಮ್ಮ ಬಳಿ ಇದ್ದ ಸಾಫ್ಟ್ ಕಾಪಿ ತೋರಿಸಿ ಮತ ಚಲಾವಣೆಗೆ ಅವಕಾಶ ಕೊಡುವಂತೆ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೆ ಇದಕ್ಕೊಪ್ಪದ ಅಧಿಕಾರಿಗಳು ಮೂಲ ದಾಖಲೆ ತರುವಂತೆ ತಿಳಿಸಿ ಅವರ ಮನವಿ ನಿರಾಕರಿಸಿದ್ದರು.
ಹೀಗಾಗಿ ಮತ್ತೆ ಬಂದು ವೋಟ್ ಮಾಡುವುದಾಗಿ ತಿಳಿಸಿ ಪ್ರಮೋದಾದೇವಿ ಒಡೆಯರ್ ಹಿಂದಿರುಗಿ, ಮತಗಟ್ಟೆ ಹೊರಗೆ ಕಾದುನಿಂತಿದ್ದರು. ಇದಾದ ಒಂದು ಗಂಟೆ ಬಳಿಕ ತಮ್ಮ ಮೂಲ ದಾಖಲೆಗಳೊಂದಿಗೆ ಬಂದ ರಾಜಮಾತೆ, ಅಧಿಕಾರಿಗಳ ಒಪ್ಪಿಗೆ ಪಡೆದು ಮತ ಚಲಾಯಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಮೊದಲೆಲ್ಲ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫೀಸ್ ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಅದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದ್ರು. ಆಫೀಸ್ ನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ ತಡವಾಯ್ತು’ ಎಂದವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಕರ್ನಾಟಕ ಚುನಾವಣೆಗೆ ಗೋವಾದಿಂದ ವೇತನ ಸಹಿತ ರಜೆ; ವಿಪಕ್ಷಗಳ ಟೀಕೆ
ಬಳಿಕ ಮತದಾನದ ಮಹತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಬೇಕು. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿ ಇದ್ದರೂ ಅದನ್ನ ಇಲ್ಲಿ ಬಂದು ವ್ಯಕ್ತಪಡಿಸಿ. ಪರವೋ ವಿರೋಧವೋ ಎಲ್ಲವನ್ನೂ ಮತಗಟ್ಟೆಯಲ್ಲಿ ಮತ ಚಲಾಯಿಸಿ ಅಭಿಪ್ರಾಯ ತಿಳಿಸಿ ಎಂದ ಅವರು ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದರು