- ಯುವತಿ ದೂರು ನೀಡಿಲ್ಲ, ನೀಡಿದರೆ ಸೂಕ್ತ ಕ್ರಮ : ಮೈಸೂರು ಕಮಿಷನರ್ ರಮೇಶ್ ಬಾನೋತ್
- ಮೈಸೂರಿನ ಸಂಗಂ ಥಿಯೇಟರ್ ಬಳಿ ನಡೆದ ಘಟನೆ; ಯುವಕನಿಗೆ ಸಾಥ್ ನೀಡಿದ ಥಿಯೇಟರ್ ವ್ಯವಸ್ಥಾಪಕ
ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ರಚಿಸಿದ್ದ ‘ಟೋಬಿ’ ಸಿನಿಮಾ ಶುಕ್ರವಾರ(ಆ.25) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಇದೇ ವೇಳೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಈ ನಡುವೆ ಮೈಸೂರಿನ ಸಂಗಂ ಥಿಯೇಟರ್ ಎದುರು ‘ಟೋಬಿ ಚೆನ್ನಾಗಿಲ್ಲ’ ಎಂದು ಡಿಜಿಟಲ್ ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಯುವತಿಯೋರ್ವಳಿಗೆ ಸಿನಿಮಾ ವೀಕ್ಷಿಸಲು ಬಂದಿದ್ದ ಯುವಕನೋರ್ವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
‘ಏನ್ ಚೆನ್ನಾಗಿಲ್ಲ ಹೇಳು, ಹೊಯ್ತಾ ಇರಬೇಕು ಆಚೆಗೆ. ನೋಡೋಕ್ಕಾಗೋದಾದರೆ ನೋಡು, ಇಲ್ಲಂತಾದರೆ ಮುಚ್ಕೊಂಡು ಹೊಯ್ತಾ ಇರಬೇಕು’ ಎಂದು ಬೆದರಿಸಿದ್ದಾನೆ. ಇದೇ ವೇಳೆ ಓರ್ವ ರಿಕ್ಷಾ ಚಾಲಕ ಹಾಗೂ ಸಂಗಂ ಥಿಯೇಟರ್‌ನ ವ್ಯವಸ್ಥಾಪಕ ಕುಂಜಪ್ಪ ಎಂಬವರೂ ಕೂಡ ಇದಕ್ಕೆ ಸಾಥ್ ನೀಡಿದ್ದು, ಯುವತಿಯ ವಿರುದ್ಧವೇ ರೇಗಾಡಿ, ಮನೆಗೆ ಹೋಗುವಂತೆ ತಿಳಿಸಿದ್ದಾರೆ.
ಈ ಬೆಳವಣಿಗೆ ಬಳಿಕ ಅದೇ ಡಿಜಿಟಲ್ ಮಾಧ್ಯಮದ ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಸಂಗಂ ಥಿಯೇಟರ್‌ನ ವ್ಯವಸ್ಥಾಪಕ ಕುಂಜಪ್ಪ, ‘ಆ ಯುವತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಯಾರಾದರೂ ಇಲ್ಲಿಗೆ ಕಳುಹಿಸಿರಬಹುದು. ಇದೇ ಕಾರಣ ಇರಬಹುದು’ ಎಂದು ಯುವತಿಯ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
ಯುವಕ ಬೆದರಿಕೆ ಹಾಕಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ‘ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಂಟಿ ಹುಡುಗಿಗೆ ಬಾಯಿಗ್ ಬಂದಂಗೆ ಯುವಕ ಬೈಯ್ಯುತ್ತಾ ಇದ್ದರೂ, ಜನರ ಸುಮ್ಮನೆ ನಿಂತು ನೋಡ್ತಾ ಇದ್ದಾರೆ’ ಎಂದು ನೆಟ್ಟಿಗರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು, ಈ ದಿನ.ಕಾಮ್ ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರನ್ನು ಸಂಪರ್ಕಿಸಿತು.
‘ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಯುವಕ-ಯುವತಿ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ವೈಯಕ್ತಿಕ ಜಗಳವಾಗಿರುವುದರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿಲ್ಲ. ಒಂದು ವೇಳೆ ಯುವತಿಯೇ ಮುಂದೆ ಬಂದು ದೂರು ನೀಡಿದಲ್ಲಿ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ರಮೇಶ್ ಬಾನೋತ್ ತಿಳಿಸಿದ್ದಾರೆ.