ಮಂಡ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನು ಆಡಿರುವ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ದರ್ಶನ್ ವಿರುದ್ಧ ಮಹಿಳಾ ಸಂಘಟನೆ ಲಿಖಿತ ದೂರು ನೀಡಿದ್ದು, “ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ” ಎನ್ನುವ ಮಾತುಗಳನ್ನು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ಹೇಳಿಕೆ ನೀಡಿದ್ದಾರೆ. ಆ ಮೂಲಕ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ದರ್ಶನ್ ಈ ಹೇಳಿಕೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದರು.
ತಮ್ಮ ಸಿನಿಮಾ ಬದುಕಿನ ಬಗ್ಗೆ ಮಾತನಾಡುವ ವೇಳೆ, “ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ” ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಮಹಿಳೆಯರ ಕೋಪಕ್ಕೆ ಕಾರಣವಾಗಿದೆ. ಗೌಡತಿಗರ ಸೇನೆ ಎಂಬ ಮಹಿಳಾ ಸಂಘಟನೆ ಈ ದೂರು ನೀಡಿದೆ. ಬೆಂಗಳೂರಿನ ಕಾವೇರಿ ಭವನದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ತೆರಳಿದ ಗೌಡತಿಗರ ಸೇನೆಯ ಪದಾಧಿಕಾರಿಗಳು, ನಟ ದರ್ಶನ್ ವಿರುದ್ಧ ದೂರು ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಹೈಕೋರ್ಟ್ ಆದೇಶದಂತೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬಾಸ್ಟ್: ಕೃಷಿ ಸಚಿವ
ಕಾಟೇರ ಟೈಟಲ್ ವಿಚಾರವಾಗಿ ನಿರ್ದೇಶಕ ಉಮಾಪತಿಗೆ ‘ತಗಡು, ಗುಮ್ಮಿಸ್ಕೊತಿಯಾ’ ಎಂದು ಹೇಳಿಕೆ ನೀಡಿದ್ದ ದರ್ಶನ್ ವಿರುದ್ಧ ನಿನ್ನೆ ಕರ್ನಾಟಕ ಪ್ರಜಾಪರ ವೇದಿಕೆ ಕೂಡ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ದೂರು ಸಲ್ಲಿಸಿದೆ. ರಾಜ್ಯಾಧ್ಯಕ್ಷ ಕನ್ನಡ ಶಫಿ ಅವರಿಂದ ದೂರು ನೀಡಿದ್ದಲ್ಲದೆ, ದರ್ಶನ್ ಈ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
