ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್‌’

Date:

Advertisements

ಚಿತ್ರ: ‘ರಾಘವೇಂದ್ರ ಸ್ಟೋರ್ಸ್‌’ | ನಿರ್ದೇಶನ: ಸಂತೋಷ್‌ ಆನಂದ್‌ರಾಮ್‌ | ತಾರಾಗಣ: ಜಗ್ಗೇಶ್‌, ಶ್ವೇತಾ ಶ್ರೀವಾತ್ಸವ್, ದತ್ತಣ್ಣ, ರವಿಶಂಕರ್‌ ಗೌಡ, ಅಚ್ಯುತ್‌ ಕುಮಾರ್‌, ಮಿತ್ರ | ಭಾಷೆ: ಕನ್ನಡ | ಸಂಗೀತ ನಿರ್ದೇಶನ: ಅಜನೀಶ್‌ ಲೋಕನಾಥ್‌ | ನಿರ್ಮಾಪಕರು: ವಿಜಯ್‌ ಕಿರಗಂದೂರು |

ಸಿನಿಮಾ ಮತ್ತು ಹೋಟೆಲ್‌ ಹೆಸರು ʼರಾಘವೇಂದ್ರ ಸ್ಟೋರ್ಸ್‌ʼ, ಕಥಾ ನಾಯಕ ಹಯವದನ, ಅದರಲ್ಲೂ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ಜಗ್ಗೇಶ್‌ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ಇನ್ನು ಕಥೆ ಮುಗಿಯಿತು ಎಂದುಕೊಂಡೆ. ಆದರೆ, ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಚಿತ್ರದ ಕಥೆಯನ್ನು ಹೆಣೆದಿರುವ ರೀತಿ ಸಮಾಧಾನ ನೀಡಿತು.

ಸಂಪ್ರದಾಯ, ಮಡಿವಂತಿಕೆಯೇ ತುಂಬಿ ತುಳುಕುವ ಬ್ರಾಹ್ಮಣ ಮನೆತನವೊಂದರ ಅಂಗಳದಲ್ಲಿ ಬ್ರಹ್ಮಚರ್ಯದ ದೊಂಬರಾಟವನ್ನೇ ಶುರು ಮಾಡುವ ನಿರ್ದೇಶಕರು, ಸಿನಿಮಾ ಮುಗಿಯುವ ಹೊತ್ತಿಗೆ ನೋಡುಗರನ್ನು ಕೊಂಚ ಮಟ್ಟಿಗೆ ಭಾವುಕರನ್ನಾಗಿಸುವಲ್ಲೂ ಯಶಸ್ವಿಯಾಗುತ್ತಾರೆ.

Advertisements

ಪ್ರಾಯ ನಲವತ್ತಾದರೂ ಮದುವೆಗೆ ಹೆಣ್ಣು ಸಿಗದೆ ಬ್ರಹ್ಮಚಾರಿಯಾಗಿ ಉಳಿದಿರುವ ನಾಯಕ, ಮದುವೆ ಮಾಡಿಕೊಳ್ಳಲು ಪಡುವ ಪಡಿಪಾಟಲುಗಳನ್ನು ತೆಳು ಹಾಸ್ಯದ ಮೂಲಕ ದಾಟಿಸುವ ಪ್ರಯತ್ನ ಮಾಡಿದ್ದಾರೆ ಸಂತೋಷ್‌ ಆನಂದ್‌ರಾಮ್‌. ಈ ಬ್ರಹ್ಮಚರ್ಯದ ಎಳೆಯನ್ನು ಕೊಂಚ ಎಳೆದಂತೆ ಅನ್ನಿಸಿಸುವುದಿದೆ. ರೆಸಾರ್ಟ್‌ ರಾಜಕಾರಣ, ಮಠಾಧೀಶರ ರಾಜಕೀಯ ಹಿತಾಸಕ್ತಿಗಳು ಹೀಗೆ ಹಲವು ಸೂಕ್ಷ್ಮತೆಗಳ ಸುತ್ತ ʼರಾಘವೇಂದ್ರ ಸ್ಟೋರ್ಸ್‌ʼ ಚಿತ್ರ ಚೆನ್ನಾಗಿಯೇ ಮೂಡಿಬಂದಿದೆ. ಮೊದಲಾರ್ಧ ನಕ್ಕು ನಗಿಸುವ ಬ್ರಹ್ಮಚರ್ಯದ ವ್ಯಥೆಯಾದರೆ, ಇಂಟರ್‌ವಲ್‌ ನಂತರದ ಕಥೆ ನೋಡುಗರನ್ನು ಭಾವುಕರನ್ನಾಗಿಸುವಂಥದ್ದು. ಈ ಕೌಟುಂಬಿಕ ಚಿತ್ರವನ್ನು ಕೊನೆಗೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ ರೀತಿ ನಿಜಕ್ಕೂ ಹಿಡಿಸಿತು.

ಘಳಿಗೆ, ಜಾತಕ ಯಾವುದನ್ನೂ ನೋಡದೆ ಮಗನ ಮದುವೆ ಮಾಡಿಸುವ ದತ್ತಣ್ಣನ ಪಾತ್ರ ಗಮನ ಸೆಳೆಯುತ್ತದೆ.

ಜಾತಿಗ್ರಸ್ಥ ಮಠಾಧೀಶರಿಗೆ ಅನಾಥ ಮಗು ಹೇಳುವ ಕಿವಿಮಾತುಗಳು ಪ್ರಮುಖವಾಗಿ ಗಮನ ಸೆಳೆಯುತ್ತದೆ. ಅಡುಗೆ ಕೆಲಸ ಕೀಳು ಎಂದು ಭಾವಿಸಿದರೆ ಅಮ್ಮನ ಕೈರುಚಿಗೆ ಅರ್ಥವೇ ಇರುತ್ತಿರಲಿಲ್ಲ ಎನ್ನುವ ಸಂಭಾಷಣೆ ಹಿಡಿಸುತ್ತದೆ. ಜಗ್ಗೇಶ್‌ ಅವರ ಸಿನಿಮಾಗಳ ʼಟ್ರೇಡ್‌ ಮಾರ್ಕ್‌ʼ ʼಡಬಲ್‌ ಮೀನಿಂಗ್‌ ಡೈಲಾಗ್‌ʼಗಳು ಸಾಕಷ್ಟಿವೆ. ಮಠಾಧೀಶರುಗಳು ತಮ್ಮ ಜಾತಿಯ ರಾಜಕಾರಣಿಗಳ ಜೊತೆಗೆ ಕೈಜೋಡಿಸಿ, ಜೈ ಎನ್ನುವ ಈ ಕಾಲಘಟ್ಟದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂತೋಷ್‌ ಆನಂದ್‌ರಾಮ್‌, ಮಠಾಧೀಶರ ಕೈಯಿಂದಲೇ ʼಎಂಎಲ್‌ಎʼ ಅಭ್ಯರ್ಥಿಗೆ ರಾಜಕೀಯ ಪಕ್ಷವೊಂದರ ಬಿ-ಫಾರಂ ಕೊಡಿಸಿ ಲೇವಡಿ ಮಾಡುತ್ತಾರೆ. ಇಷ್ಟೆಲ್ಲ ಜಾಣ್ಮೆ ತೋರುವ ನಿರ್ದೇಶಕರು ಮುಟ್ಟಿನ ಸಂದರ್ಭದಲ್ಲಿ ಮಹಿಳೆ ತನ್ನ ಕೋಣೆಯಲ್ಲೇ ಬಂಧಿಯಾಗಿರಬೇಕು, ಅಡುಗೆ ಮನೆಗೂ ಹೊಗಬಾರದು ಎಂದು ದಿಗ್ಬಂಧನ ಹಾಕಿ ಅವರ ಮೇಲಿದ್ದ ಚೂರು ಪಾರು ನಿರೀಕ್ಷೆಯನ್ನು ಹದಗೆಡಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಸೇರಿ ಈ ವಾರ 5 ಪ್ರಮುಖ ಚಿತ್ರಗಳು ತೆರೆಗೆ

ಈ ಚಿತ್ರದಲ್ಲಿ ಸಂತೋಷ್‌ ಆನಂದ್‌ರಾಮ್‌ ಸೂಕ್ಷ್ಮವಾಗಿ ಕಟ್ಟುಪಾಡುಗಳನ್ನು ಮುರಿಯುವ ಪ್ರಯತ್ನ ಮಾತನಾಡಿದ್ದಾರೆ. ಆದರೆ, ಅಸಲಿ ಸಮಸ್ಯೆಗಳ ಆಳಕ್ಕಿಳಿಯುವ ಪ್ರಯತ್ನ ಖಂಡಿತ ಮಾಡಿಲ್ಲ. ಇಡೀ ಕಥೆ ತಕ್ಕ ಮಟ್ಟಿಗೆ ಹಿಡಿಸುತ್ತದೆ. ಆದರೆ, ಮನಸ್ಸಿನಾಳಕ್ಕೆ ಇಳಿಯುವುದಿಲ್ಲ. ಜಗ್ಗೇಶ್‌ ನಟನೆಯಲ್ಲಿ ಹೊಸತನವೇನು ಕಾಣಿಸಲಿಲ್ಲ. ಶ್ವೇತಾ ಶಿವಾತ್ಸವ್‌ ನಟನೆ ಪರವಾಗಿಲ್ಲ. ದತ್ತಣ್ಣ ಮತ್ತು ಅಚ್ಯುತ್‌ ಕುಮಾರ್‌ ಬಗ್ಗೆ ಹೊಸದಾಗಿ ಹೇಳಲಿಕ್ಕೇನಿದೆ. ರವಿಶಂಕರ್‌ ಗೌಡರಿಗೆ ಜುಟ್ಟು ಇಲ್ಲದಿದ್ದರೂ ನಡೆಯುತ್ತಿತ್ತು. ಮಿತ್ರ ಅವರ ನಟನೆಯೂ ಗಮನ ಸೆಳೆಯುತ್ತದೆ.

ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ʼಸಿಂಗಲ್‌ ಸುಂದರʼ ಹಾಡನ್ನು ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವಂಥ ಯಾವ ಹಾಡುಗಳು ಇಲ್ಲ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ ಹಿಡಿಸುತ್ತದೆ. ಒಟ್ಟಿನಲ್ಲಿ ʼರಾಘವೇಂದ್ರ ಸ್ಟೋರ್ಸ್‌ʼ ಒಮ್ಮೆ ನೋಡಬಹುದಾದ ಚಿತ್ರ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X