ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ಇಂದು ಸಂಜೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲೀಲಾವತಿ ಅವರು ಪುತ್ರ ನಟ ವಿನೋದ್ ರಾಜ್ ಅವರನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ ಲೀಲಾವತಿ ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಒಲವು ಆಸಕ್ತಿ ಹೊಂದಿ ತಮ್ಮ ವೃತ್ತಿಜೀವನ ಆರಂಭಿಸಿದರು. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.

ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಮದುವೆ ಮಾಡಿ ನೋಡು, ಸಂತ ತುಕಾರಾಂ, ತುಂಬಿದ ಕೊಡ, ಕಣ್ತೆರೆದು ನೋಡು, ರಾಣಿ ಹೊನ್ನಮ್ಮ, ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ, ಬಿಳಿ ಹೆಂಡ್ತಿ, ನಾ ನಿನ್ನ ಮರೆಯಲಾರೆ, ಕಳ್ಳ ಕುಳ್ಳ, ಡಾಕ್ಟರ್ ಕೃಷ್ಣ, ಕನ್ನಡದ ಕಂದ, ವೀರ ಕೇಸರಿ ಲೀಲಾವತಿ ನಟಿಸಿದ ಪ್ರಮುಖ ಚಿತ್ರಗಳು.
ಕನ್ನಡ ಚಿತ್ರ ದಿಗ್ಗಜರಾದ ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಅವರಲ್ಲದೆ, ತಮಿಳಿನ ಎಂಜಿಆರ್, ಶಿವಾಜಿ ಗಣೇಶನ್, ತೆಲುಗಿನ ಎನ್‌ಟಿಆರ್, ಎಎನ್‌ಆರ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಜನಪ್ರಿಯ ನಟರೊಂದಿಗೆ ಲೀಲಾವತಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಲೀಲಾವತಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮತ್ತು ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
ಲೀಲಾವತಿ ಅವರ ಪಾರ್ಥೀವ ಶರೀರವನ್ನು ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ಇಡಲಾಗಿದ್ದು ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಇರುತ್ತದೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ.
ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು… pic.twitter.com/3Fa9T8O86d
— CM of Karnataka (@CMofKarnataka) December 8, 2023
ಸಿನಿಮಾ ಪಯಣ
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.

ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ‘ಮಾಂಗಲ್ಯ ಯೋಗ’. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ‘ರಣಧೀರ ಕಂಠೀರವ’.
ಈ ಸುದ್ದಿ ಓದಿದ್ದೀರಾ? ಮೇರಾ ನಾಮ್ ಜೋಕರ್’ ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ
‘ರಾಣಿ ಹೊನ್ನಮ್ಮ’ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ… ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು.
70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.

ಮರೆಯಲಾರದ ಚಿತ್ರಗಳು
ನಾಗರ ಹಾವು: ಮೇಸ್ಟ್ರು ಪಾತ್ರದ ಅಶ್ವಥ್ ಅವರ ಪತ್ನಿಯಾಗಿ, ವಿಷ್ಣುವರ್ಧನ್ ಸಾಕು ತಾಯಿಯ ಪಾತ್ರದ ಲೀಲಾವತಿ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರು ಯಾರು ಇಲ್ಲ.
ನಾ ನಿನ್ನ ಮರೆಯಲಾರೆ: ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಲೀಲಾವತಿಯವರು ನಾಯಕಿ ತಾಯಿಯಾಗಿ ನಟಿಸಿದ್ದರು. ತನ್ನ ಮಗಳು- ಲಕ್ಷ್ಮಿ ಪ್ರೇಮಿಸುವ ಹುಡುಗನನ್ನು ಅಳಿಯನನ್ನಾಗಿ ಅಂಗೀಕರಿಸದೆ ಆಕೆಗೆ ಬೇರೆ ಮದುವೆ ಮಾಡಿ ತನ್ನ ಹಠ ಸಾಧಿಸುವ ಪಾತ್ರವನ್ನು ಯಾರು ಮರೆಯಲು ಸಾಧ್ಯವಿಲ್ಲ.
ವೀರ ಕೇಸರಿ: ಚಿತ್ರದಲ್ಲಿನ ಪ್ರಣಯ ಪಾತ್ರ, ಭಕ್ತ ಕುಂಬಾರ ಚಿತ್ರದ ಗೋರನ ಪತ್ನಿಯ ಪಾತ್ರ ಹಾಗೂ ಡಾಕ್ಟರ್ ಕೃಷ್ಣ ಚಿತ್ರದಲ್ಲಿ ತಾಯಿಯ ಪಾತ್ರಗಳಲ್ಲಿನ ಲೀಲಾವತಿ ಅವರ ಅತ್ಯದ್ಭುತ ಅಭಿನಯ ಇಂದಿಗೂ ಅಚ್ಚಿಳಿಯದೆ ಉಳಿದಿದೆ.
ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಯವರಿಗೆ ನೀಡಲಾಗಿತ್ತು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಿಸಲಾಗಿತ್ತು.

ಪ್ರಶಸ್ತಿ-ಪುರಸ್ಕಾರಗಳು
ಮದುವೆ ಮಾಡಿ ನೋಡು ಹಾಗೂ ಸಂತ ತುಕಾರಾಂ ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.
ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು ಹಾಗೂ ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಜ್ಯ ಪ್ರಶಸ್ತಿಗಳು ಸಂದಿವೆ.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:
ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ
ಗೆಜ್ಜೆಪೂಜೆ – 1970
ಸಿಪಾಯಿ ರಾಮು -1971
ಡಾಕ್ಟರ್ ಕೃಷ್ಣ – 1973
2008 – ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
2006 – ಅತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ – ಕನ್ನಡದ ಕಂದ
1999-2000 – ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
