ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದಾರೆ. ಅದೇನೂ ಉಭಯ ಕುಶಲೋಪರಿಯ ಭೇಟಿಯಲ್ಲ; ಒಂದು ಅಜೆಂಡಾದೊಂದಿಗೆ ಅಗ್ನಿಹೋತ್ರಿ ಆದಿತ್ಯನಾಥರನ್ನು ಭೇಟಿ ಮಾಡಿರುವುದು. ಆ ಅಜೆಂಡಾ ಹೆಸರು ‘ದಿ ವ್ಯಾಕ್ಸಿನ್ ವಾರ್’
‘ದಿ ವ್ಯಾಕ್ಸಿನ್ ವಾರ್’ ಎಂದಾಕ್ಷಣ ಅನೇಕರಿಗೆ ನಮ್ಮ ಪ್ರಧಾನಿ ಮೋದಿ ನೆನಪಾಗುತ್ತದೆ. ಇತ್ತೀಚೆಗೆ ತಾನೇ ಪ್ರಧಾನಿ ಮೋದಿ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರವನ್ನು ಹಾಡಿ ಹೊಗಳಿದ್ದರು. ದೇಶದ ವಿಜ್ಞಾನಿಗಳು ಕೊರೊನಾ ಕಾಲದಲ್ಲಿ ಪಟ್ಟ ಕಷ್ಟ, ಮಾಡಿದ ತ್ಯಾಗ ಇರುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ಕರೆ ನೀಡಿದ್ದರು.
#WATCH राजस्थान: जोधपुर में PM मोदी ने कहा, "मैंने सुना है एक फिल्म आई है द वैक्सीन वॉर, भारत में कोविड से लड़ाई लड़ने के लिए हमारे देश के वैज्ञानिकों ने जो रात-दिन मेहनत की, अपने लैब में एक ऋषि की तरह साधना की.. उस फिल्म में इन सभी बातों को दर्शाया गया है…मैं यह फिल्म बनाने… pic.twitter.com/N9vtWkPKsT
— ANI_HindiNews (@AHindinews) October 5, 2023
‘ದಿ ವ್ಯಾಕ್ಸಿನ್ ವಾರ್’ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 8ರಂದು. ಮೊದಲ ದಿನದಿಂದಲೂ ಚಿತ್ರ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಯಾವ ಮಟ್ಟಿಗೆ, ಎಂದರೆ, ಒಂದೇ ವಾರಕ್ಕೆ ಚಿತ್ರವು ಬಹುತೇಕ ಥಿಯೇಟರ್‌ಗಳಿಂದ ಎತ್ತಂಗಡಿಯಾಗಿದೆ.
ಅಕ್ಟೋಬರ್ 6 ರಂದು ಅದರ ದಿನದ ಕಲೆಕ್ಷನ್ ಕೇವಲ 20 ಲಕ್ಷ. ಅಧಿಕೃತ ಮಾಹಿತಿಯ ಪ್ರಕಾರವೇ ಚಿತ್ರದ ಇದುವರೆಗಿನ ಗಳಿಕೆ 8.5 ಕೋಟಿ ರೂಪಾಯಿ. ಬಹುತೇಕ ಥಿಯೇಟರ್‌ಗಳಿಂದ ಚಿತ್ರವು ಎತ್ತಂಗಡಿಯಾಗಿದೆ. ಮೋದಿಯವರು ಹೊಗಳಿದ ನಂತರವೂ, ಈ ಚಿತ್ರವನ್ನು ನೋಡಿ ಎಂದು ಕರೆ ಕೊಟ್ಟ ನಂತರವೂ ಜನ ಚಿತ್ರವನ್ನು ನೋಡಲು ಮನಸ್ಸು ಮಾಡುತ್ತಿಲ್ಲ.
ವಿವೇಕ್ ಅಗ್ನಿಹೋತ್ರಿ ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶನ ಮಾಡಿದ್ದರು. ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಎನ್ನುವುದನ್ನು ಹಲವು ಸುಳ್ಳುಗಳು, ಕಲ್ಪನೆಗಳ ಸಮೇತ ಏಕಮುಖವಾಗಿ ತೋರಿಸಿ, ಇತಿಹಾಸಕ್ಕೆ ದ್ರೋಹ ಬಗೆದ ಆರೋಪಕ್ಕೆ ಅವರು ಗುರಿಯಾಗಿದ್ದರು. ಪ್ರ್ಯಾಪಗಾಂಡಾ ಸಿನಿಮಾ ಎನ್ನುವುದಕ್ಕೆ ಅದು ಅತ್ಯುತ್ತಮ ನಿದರ್ಶನವಾಗಿತ್ತು. ಅದು ಬಿಜೆಪಿಯನ್ನು ಓಲೈಸಲು, ಹಿಂದುತ್ವವಾದಿ ಚಿಂತನೆ ಹರಡಲು ಮಾಡಿದ ಚಿತ್ರವಾಗಿತ್ತು. ವಸ್ತುವಿನ ದೃಷ್ಟಿಯಿಂದ ಸಂಕುಚಿತ ಮನೋಭಾವ, ದ್ವೇಷ ಹರಡುವ ಉದ್ದೇಶದಿಂದ ಕೂಡಿದ್ದ ಚಿತ್ರ ಎನ್ನುವ ಟೀಕೆಗೆ ಒಳಗಾಗಿತ್ತು.
#TheVaccineWar India lifetime is wrapping under 6cr net. @vivekagnihotri tried everything right from targetting Bollywood to SRK to media but Public has given their verdicts. It is OUTRIGHT THE BIGGEST EVER DISASTER.
— CineHub (@Its_CineHub) October 7, 2023
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಕೂಡ ಉತ್ತಮ ಎನ್ನುವಂಥ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ. ಅಗ್ನಿಹೋತ್ರಿ ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳನ್ನು ಸಂಪರ್ಕಿಸಿ, ತೆರಿಗೆ ವಿನಾಯಿತಿ ಪಡೆದಿದ್ದರು. ಕರ್ನಾಟಕದಲ್ಲೂ ಆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿ, ‘ನಿಮ್ಮ ಚಿತ್ರವನ್ನು ಹೆಚ್ಚು ಜನ ನೋಡಲಿ ಎನ್ನುವ ಆಸೆಯಿದ್ದರೆ, ಯೂ ಟ್ಯೂಬ್‌ನಲ್ಲಿ ಹಾಕಿ, ಎಲ್ಲರೂ ನೋಡುತ್ತಾರೆ. ಅದು ಬಿಟ್ಟು ಹಿಂದುತ್ವದ ಹೆಸರಿನಲ್ಲಿ ವ್ಯಾವಹಾರಿಕ ಲಾಭ ಮಾಡಿಕೊಳ್ಳಲು ಪ್ರಯತ್ನಿಸಬೇಡಿ’ ಎಂದಿದ್ದು ಭಾರಿ ಸುದ್ದಿಯಾಗಿತ್ತು. ರಾಮ್‌ಗೋಪಾಲ್ ವರ್ಮಾನಂಥ ಅನೇಕ ಕಸುಬು ಬಲ್ಲ ನಿರ್ದೇಶಕರು ಕಾಶ್ಮೀರ್ ಫೈಲ್ಸ್ ಉತ್ತಮ ಚಿತ್ರ ಅಲ್ಲ ಎಂದಿದ್ದರು. ಕೇವಲ ವಸ್ತುವಿನ ದೃಷ್ಟಿಯಿಂದ ಮಾತ್ರವಲ್ಲ, ನಿರ್ದೇಶನದ ದೃಷ್ಟಿಯಿಂದಲೂ ಕಾಶ್ಮೀರ್ ಫೈಲ್ಸ್ ಒಂದು ಕಳಪೆ ಚಿತ್ರ ಎಂದಿದ್ದರು. ಆದರೆ, ಸರ್ಕಾರಗಳ ಬೆಂಬಲದಿಂದ ಅಗ್ನಿಹೋತ್ರಿ ಅದನ್ನು ಯಶಸ್ವಿ ಚಿತ್ರ ಎನ್ನುವಂತೆ ಮಾಡಿದ್ದರು.
Kudos to @vivekagnihotri for #TheKashmirFiles, a blood-curdling, poignant & honest narrative of the exodus of Kashmiri Pandits from their home land.
To lend our support to the movie & encourage our people to watch it, we will make the movie tax-free in Karnataka.
— Basavaraj S Bommai (@BSBommai) March 13, 2022
ಈಗ ಮತ್ತೆ ಅಗ್ನಿಹೋತ್ರಿ ಅದೇ ದಾರಿ ಹಿಡಿಯಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಆದಿತ್ಯನಾಥರನ್ನು ಭೇಟಿಯಾಗಿ ಶಾಲಾ ಮಕ್ಕಳಿಗೆ ಚಿತ್ರವನ್ನು ತೋರಿಸಲು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಚಿತ್ರದಿಂದ ಮಕ್ಕಳು ಸ್ಫೂರ್ತಿ ಪಡೆಯಲಿ ಎಂದು ಎಲ್ಲ ಕಡೆಯೂ ಮಕ್ಕಳಿಗೆ ಚಿತ್ರ ತೋರಿಸುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರಗಳು ಬೆಂಬಲ ನೀಡಬೇಕೆಂದು ಪ್ರವಾಸ ಮಾಡುತ್ತಿದ್ದಾರೆ. ಆ ಮೂಲಕವಾದರೂ ಚಿತ್ರವನ್ನು ‘ಯಶಸ್ವಿ ಚಿತ್ರ’ವನ್ನಾಗಿ ಮಾಡಲು ಅಗ್ನಿಹೋತ್ರಿ ಕಸರತ್ತು ಮಾಡುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ವೈದ್ಯಕೀಯ ಸಿಬ್ಬಂದಿ ಪಟ್ಟ ಪಾಡು ಕುರಿತು ಚಿತ್ರ ಮಾಡಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ. ಆದರೆ, ಅವರೇ ಇನ್ನೊಂದೆಡೆ ಹೇಳಿಕೊಂಡಂತೆ, ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಭಾರತ ಹೇಗೆ ಸ್ವಾವಲಂಬನೆ ಸಾಧಿಸಿತು ಹಾಗೂ ಜಗತ್ತಿನ ಪಾಲಿಗೆ ಔಷಧಾಲಯವಾಗಿ ಹೇಗೆ ಕೆಲಸ ಮಾಡಿತು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಂದರೆ, ಮೋದಿ ಸರ್ಕಾರವನ್ನು ಹೊಗಳುವ ಚಿತ್ರ. ಸಹಜವಾಗಿಯೇ ಆ ಚಿತ್ರವನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ. ಅದನ್ನು ಜನರೂ ನೋಡಿ ಮೆಚ್ಚಿಕೊಂಡು ಹೊಗಳಲಿ ಎನ್ನುವುದು ಅವರಿಬ್ಬರ ಬಯಕೆ. ಆದರೆ, ಚಿತ್ರ ದೊಡ್ಡ ಡಿಸಾಸ್ಟರ್ ಎಂದು ಈಗಾಗಲೇ ಸಾಬೀತಾಗಿದೆ. ಈ ಚಿತ್ರವನ್ನು ಯಶಸ್ವಿ ಚಿತ್ರವನ್ನಾಗಿ ಮಾಡುವ ಕೊನೆಯ ಪ್ರಯತ್ನವಾಗಿ ಅಗ್ನಿಹೋತ್ರಿ ಅಕ್ಟೋಬರ್ 7ರಂದು ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇಷ್ಟೆಲ್ಲ ಆದರೂ ನಂಜು ಹರಡುವ ಚಿತ್ರವನ್ನು ಜನ ತಿರಸ್ಕರಿಸಿ ಅದಕ್ಕೆ ಸಲ್ಲಬೇಕಾದ ಮರ್ಯಾದೆಯನ್ನೇ ಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ: ಸುಬ್ರಹ್ಮಣ್ಯನ್ ಸ್ವಾಮಿ ಆರ್‌ಟಿಐ ಅರ್ಜಿಗೆ ಉತ್ತರ ನೀಡುವಂತೆ ಮೋದಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ
ಕೊರೊನಾದಿಂದ ಜಗತ್ತಿನಲ್ಲೇ ಅತಿ ಹೆಚ್ಚು ಜನ ಸತ್ತಿದ್ದು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ್ದು ಅಗ್ನಿಹೋತ್ರಿಯಂಥವರಿಗೆ ಮುಖ್ಯ ಎಂದು ಅನ್ನಿಸುವುದೇ ಇಲ್ಲ. ಕೊರೊನಾದಿಂದ ಭಾರತದಲ್ಲಿ 47 ಲಕ್ಷ ಮಂದಿ ಸತ್ತಿದ್ದರು ಎನ್ನುವ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿತ್ತು. ಇಂಥ ಸತ್ಯಗಳನ್ನು ಮುಚ್ಚಿಟ್ಟು, ತಮ್ಮ ಸಿನಿಮಾದ ಮೂಲಕ ಸುಳ್ಳುಗಳನ್ನು ಹರಡಲು ಹೊರಟಿರುವ ಅಗ್ನಿಹೋತ್ರಿ ಈಗ ಆ ಸಿನಿಮಾವನ್ನು ಮಕ್ಕಳಿಗೆ ತೋರಿಸಲು ಹೊರಟಿದ್ದಾರೆ. ಈ ಮೂಲಕ ಅವರು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಟ್ಟಿಯನ್ನು ನೆನಪಿಸುತ್ತಿದ್ದಾರೆ.