‘ಹಮಾರೆ ಬಾರಹ್’ ಎಂಬ ಹೆಸರಿನ ಹಿಂದೂಸ್ತಾನೀ ಚಲನಚಿತ್ರವನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ ಎಂದು ವರದಿಯಾಗಿದೆ (ಪ್ರಜಾವಾಣಿ 8 ಜೂನ್ 2024). ಕಳೆದೊಂದು ದಶಕದಲ್ಲಿ, ಸಂಘ ಪರಿವಾರದ ‘ಸಾಂಸ್ಕೃತಿಕ’ ಕಾರ್ಖಾನೆಯು ಹಲವು ಫ್ಯಾಶಿಸ್ಟ್ ಸಿನಿಮಾ ಕೃತಿಗಳನ್ನು ಹೊರಡಿಸಿದ್ದು, ಅವುಗಳ ಗುಣಮಟ್ಟವು ಸಹಜವಾಗಿಯೇ ಎಲ್ಲ ರೀತಿಯಲ್ಲಿಯೂ ಕಳಪೆಯಾದದ್ದಿತ್ತು ಅನ್ನುವುದು ಸೂಕ್ಷ್ಮಜ್ಞರು ಬಲ್ಲ ವಿಷಯ. ಆ ಕಾರ್ಖಾನೆಯ ಸಿನಿಮಾಗಳಂತೆ ನೇರನೇರ ಫ್ಯಾಶಿಸ್ಟ್ ಪ್ರಚಾರಕ್ಕೆ ಇಳಿಯದಿದ್ದರೂ, ಸ್ಥೂಲವಾಗಿ ಅವುಗಳಂಥದೇ ಮನೋಭೂಮಿಕೆಯ ಸಿನಿಮಾಗಳು (ಮತ್ತು ಬಹಳ ದೊಡ್ಡ ಬಂಡವಾಳದ ಹಿನ್ನೆಲೆಯುಳ್ಳವು) ಕನ್ನಡ-ತೆಲುಗು ಸಿನಿಮಾ ಉದ್ಯಮಗಳವರಿಂದಲೂ ಬಂದಿವೆ; ದೊಡ್ಡ ಖ್ಯಾತಿಯನ್ನು ಗಳಿಸಿವೆ; ಹಾಗೂ ನೂರಾರು ಕೋಟಿ ಆದಾಯ ಮಾಡಿಕೊಂಡಿವೆ.
ಆ ಬಗೆಯ ಕೃತಿಗಳನ್ನು ಕಟುವು-ಮೊನಚಾದ ವೈಚಾರಿಕ ವಿಮರ್ಶೆಯ ಮೂಲಕ, ಹಾಗೂ ಜನರ ಸಂವೇದನೆಯ ಸೂಕ್ಷ್ಮಜ್ಞತೆಯನ್ನೂ, ಅವರ ವೈಚಾರಿಕತೆಯನ್ನೂ ಬೆಳಸುವುದರ ಮೂಲಕ ಎದುರಿಸಬೇಕೇ ಹೊರತು ನಿಷೇಧಿಸುವುದರ ಮೂಲಕ ಅಲ್ಲ. ನಿಷೇಧಿಸಿವುದು, ಬೆದರಿಸುವುದು, ದಾಳಿ ಮಾಡುವುದು, ದ್ವೇಷ ಮತ್ತು ಅಸಹನೆಯನ್ನು ಹರಡುವುದು – ಇದೆಲ್ಲ ಫ್ಯಾಶಿಸ್ಟರ ವರಸೆಯೇ ಹೊರತು ಧೀಮಂತರದ್ದಲ್ಲ. ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಸಮಾಜವು ಹಿಂದೂತ್ವದ ಫ್ಯಾಶಿಸ್ಟರು, ಇಸ್ಲಾಮೀಯ ತಾಲಿಬಾನಿಗಳು ಹಾಗೂ ಖೊಮೇನಿಗರ ಹಾದಿಯನ್ನು ತುಳಿಯದಿರಲಿ; ಧೀಮಂತಿಕೆಯನ್ನು ತೋರಲಿ, ಬೆಳೆಸಿಕೊಳ್ಳಲಿ.
– ರಘುನಂದನ
ಕವಿ, ರಂಗ ನಿರ್ದೇಶಕ
ಕುರ್ಆನಿನಲ್ಲಿ ಈ ರೀತಿ ಹೇಳಲಾಗಿದೆಯೆಂಬುದು ಖಂಡಿತಾ ಸುಳ್ಳು… ಸಿನಿಮಾದಲ್ಲಿ ತೋರಿಸಲಾಗಿರುವುದು ಬರೀ ಸುಳ್ಳೆಂಬುದನ್ನು ಟ್ರೇಲರ್ ನೋಡಿಯೇ ಅಂದಾಜಿಸಬಹುದು… ಯಾವುದೇ ಧರ್ಮವನ್ನು ವಿಕ್ರತವಾಗಿ ತೋರಿಸುವ ಸಿನಿಮಾಗಳನ್ನು ಖಂಡಿತವಾಗಿಯೂ ನಿಷೇಧಿಸಬೇಕು…