1,050 ಕೋಟಿ ರೂಪಾಯಿ ಗಳಿಸಿರುವ ಶಾರುಖ್ ಖಾನ್ ಸಿನಿಮಾ
ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿರುವ ʼಪಠಾಣ್ʼ
ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿ ವೇದಿಕೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಭಾರೀ ಮೊತ್ತವನ್ನು ಕಲೆ ಹಾಕಿರುವ ಈ ಚಿತ್ರ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಹಿನ್ನೆಲೆ ಶಾರುಖ್ ಖಾನ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಹಿಂದಿಯ ಜನಪ್ರಿಯ ವಾಹಿನಿ ʼಸ್ಟಾರ್ ಗೋಲ್ಡ್ʼ, ʼಪಠಾಣ್ʼ ಸಿನಿಮಾ ಸ್ಯಾಟ್‌ಲೈಟ್ ಹಕ್ಕನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಇದೇ ಜೂನ್ 18ರಂದು ರಾತ್ರಿ 8 ಗಂಟೆಗೆ ಚಿತ್ರ ʼಸ್ಟಾರ್ ಗೋಲ್ಡ್ʼನಲ್ಲಿ ಚಿತ್ರ ಪ್ರಸಾರವಾಗಲಿದೆ. ಈ ಹಿನ್ನೆಲೆ ಕಳೆದ ಶನಿವಾರ 250ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ʼಮನ್ನತ್ʼ (ಶಾರುಖ್ ಖಾನ್ ನಿವಾಸ) ಎದುರು ಏಕಕಾಲಕ್ಕೆ ಶಾರುಖ್ ಖಾನ್ ಅವರ ಜನಪ್ರಿಯ ಪೋಸ್ ಅನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ʼಪಠಾಣ್ʼ ಸಿನಿಮಾದ ಜನಪ್ರಿಯ “ಝೂಮೇ ಜೋ ಪಠಾಣ್.. ಮೇರಿ ಜಾನ್..” ಹಾಡಿಗೂ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ಸ್ವತಃ ಶಾರುಖ್ ಖಾನ್ ಕೂಡ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ್ದು, ಕೈ ಚಾಚಿ ಪೋಸ್ ಕೂಡ ನೀಡಿದ್ದಾರೆ.
250 ಮಂದಿ ಅಭಿಮಾನಿಗಳು ಏಕಕಾಲಕ್ಕೆ ಶಾರುಖ್ ಖಾನ್ ಅವರ ಜನಪ್ರಿಯ ಪೋಸ್ ಅನ್ನು ಅನುಕರಿಸಿರುವ ವಿನೂತನ ಪ್ರಯತ್ನ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ತಮ್ಮ ಜನಪ್ರಿಯ ಪೋಸ್ ಅನ್ನು ಅನುಕರಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆದ ಅಭಿಮಾನಿಗಳಿಗೆ ಶಾರುಖ್ ಖಾನ್ ಕೂಡ ಧನ್ಯವಾದ ತಿಳಿಸಿದ್ದಾರೆ. ʼಸ್ಟಾರ್ ಗೋಲ್ಡ್ʼ ವಾಹಿನಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಸುದ್ದಿ ಓದಿದ್ದೀರಾ? ರಾಜ್‌ಕುಮಾರ್ ಸರಳತೆ, ಸಂಸ್ಕಾರದ ರಾಯಭಾರಿ ; ಸಿಎಂ ಸಿದ್ದರಾಮಯ್ಯ
ಅಂದಹಾಗೆ ಗಲ್ಲಾ ಪೆಟ್ಟಿಗೆಯಲ್ಲಿ 1,050 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದ ʼಪಠಾಣ್ʼ ಸಿನಿಮಾ 6 ತಿಂಗಳ ಬಳಿಕ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಜುಲೈ 13ರಂದು ರಷ್ಯಾ ಸೇರಿದಂತೆ 7 ಪ್ರಮುಖ ದೇಶಗಳ 3 ಸಾವಿರ ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪೈಕಿ ಸದ್ಯ ಐದನೇ ಸ್ಥಾನದಲ್ಲಿರುವ ʼಪಠಾಣ್ʼ ಮೂರನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.