ಮೇ 12ರಂದು ತೆರೆಕಾಣಲಿರುವ ʼಕಸ್ಟಡಿʼ ಸಿನಿಮಾ
ಸಿನಿಮಾಗಾಗಿ ಪರೀಕ್ಷೆ ಮುಂದೂಡಲು ಸಜ್ಜಾದ ಸಚಿವ
ತೆಲುಗಿನ ಸ್ಟಾರ್ ನಟ ನಾಗ ಚೈತನ್ಯ ಮುಖ್ಯಭೂಮಿಕೆಯ ʼಕಸ್ಟಡಿʼ ಸಿನಿಮಾ ಮೇ 12ರಂದು ತೆರೆಗೆ ಬರಲಿದೆ. ಕ್ಲಾಸ್ ಬಂಕ್ ಮಾಡಿಯಾದರೂ ಈ ಸ್ಟಾರ್ ಸಿನಿಮಾವನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವಂತೆ ತೆಲಂಗಾಣದ ಶಿಕ್ಷಣ ಸಚಿವ ಮಲ್ಲ ರೆಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಇತ್ತೀಚೆಗಷ್ಟೇ ʼಕಸ್ಟಡಿʼ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹೈದರಾಬಾದ್‌ನಲ್ಲಿರುವ ಸಚಿವ ಮಲ್ಲರೆಡ್ಡಿ ಒಡೆತನದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಈ ಚಿತ್ರದ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಜೊತೆಗೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಲ್ಲ ರೆಡ್ಡಿ, ನಾಗ ಚೈತನ್ಯ ಮತ್ತವರ ಕುಟುಂಬದ ಕಲಾ ಸೇವೆಯನ್ನು ಕೊಂಡಾಡುತ್ತಾ, “ಮುಂಬರುವ ಮೇ 12ರಂದು ʼಕಸ್ಟಡಿʼ ಸಿನಿಮಾ ಬಿಡುಗಡೆಯಾಗುತ್ತಿದೆ. ಕ್ಲಾಸ್ ಬಂಕ್ ಮಾಡಿಯಾದರೂ ಆ ಸಿನಿಮಾವನ್ನು ನೋಡಿ, ಒಂದು ವೇಳೆ ಅದೇ ದಿನ ನಿಮಗೆ ಪರೀಕ್ಷೆಗಳಿದ್ದರೆ, ಅವುಗಳನ್ನು ಕೂಡ ನಾನು ಮುಂದೂಡಿಸುತ್ತೇನೆ” ಎಂದಿದ್ದಾರೆ. ಸಚಿವರ ಈ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಲ್ಲ ರೆಡ್ಡಿ ಅವರ ಒಡೆತನದಲ್ಲಿ 13 ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 65 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ತೆಲಂಗಾಣದ ಶಿಕ್ಷಣ ಸಚಿವರೂ ಆಗಿರುವ ಮಲ್ಲ ರೆಡ್ಡಿ, “ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡಿ, ಬೇಕಿದ್ದರೆ ಪರೀಕ್ಷೆಗಳನ್ನು ಕೂಡ ಮುಂದೂಡಿಸುತ್ತೇನೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮುಲ್ ವಿವಾದ | ಕನ್ನಡಿಗರ ಹೋರಾಟ ಅಸ್ಮಿತೆಗಾಗಿ ; ಕವಿರಾಜ್
ವೆಂಕಟ್ ಪ್ರಭು ನಿರ್ದೇಶನದಲ್ಲಿ ನಾಗ ಚೈತನ್ಯ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿರುವ ʼಕಸ್ಟಡಿʼ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾಮಣಿ ಮತ್ತು ಅರವಿಂದ್ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಳಿಯರಾಜ ಮತ್ತು ಯುವನ್ ಶಂಕರ್ ರಾಜ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.