ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಸುದಿಪ್ತೋ ಸೇನ್ ಅವರ ವಿವಾದಾತ್ಮಕ ಚಲನಚಿತ್ರ ‘ದ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸಿದ ಕೇರಳದ ಇಬ್ಬರು ಪ್ರತಿನಿಧಿಗಳನ್ನು ಪಣಜಿ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಬಂಧಿಸಿಟ್ಟಿದ್ದ ಘಟನೆ ವರದಿಯಾಗಿದೆ.
‘ದ ಕೇರಳ ಸ್ಟೋರಿ’ ಸಿನಿಮಾವು ಸುಳ್ಳು ಬಂಡಲ್ ಕತೆಯನ್ನು ಒಳಗೊಂಡಿದೆ. ಚಿತ್ರದ ಮೂಲದ ಬಗ್ಗೆ ನಿರ್ದೇಶಕರು ಈವರೆಗೆ ತಿಳಿಸಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಕೇವಲ ಕರಪತ್ರ ಹಿಡಿದಿದ್ದರೆಂಬ ಕಾರಣಕ್ಕೆ ಗೋವಾ ಪೊಲೀಸರು ಶ್ರೀನಾಥ್ ಮತ್ತು ಅರ್ಚನಾ ರವಿ ಎಂಬುವವರನ್ನು ಸೋಮವಾರ(ನ.27) ಸಂಜೆಯ ವೇಳೆಗೆ ಒಂದು ಗಂಟೆ ಬಂಧನದಲ್ಲಿ ಇಟ್ಟಿದ್ದರು ಎಂದು ವರದಿಯಾಗಿದೆ.
2023ರ ವರ್ಷ ಮೇ 5ರಂದು ಬಿಡುಗಡೆಯಾಗಿದ್ದ ‘ದ ಕೇರಳ ಸ್ಟೋರಿ’ ಚಿತ್ರವು ತಪ್ಪು ಮಾಹಿತಿ ಮತ್ತು ಮುಸ್ಲಿಮರ ವಿರುದ್ಧ ಉದ್ದೇಶಿತ ದ್ವೇಷ ಪ್ರಚಾರವನ್ನು ಬಿಚ್ಚಿಟ್ಟಿದೆ ಎಂದು ಆರೋಪ ಕೇಳಿ ಬಂದಿತ್ತು.
Two IFFI Goa delegates detained for peacefully protesting against The Kerala Story screening..
Argument Between Kerala Story Director @sudiptoSENtlm and peacefully protester Archana Ravi, an illustrator by profession, Sreenath, a documentary filmmakerhttps://t.co/DZ8wJqSiEK pic.twitter.com/ShmrXgwX1l
— Irshad Venur (@muhammadirshad6) November 28, 2023
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೇರಳದಿಂದ ಬಂದಿದ್ದ ಪ್ರತಿನಿಧಿಗಳಾಗಿ ಬಂದಿದ್ದ ಚಿತ್ರ ಕಲಾವಿದೆ ಅರ್ಚನಾ ರವಿ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಶ್ರೀನಾಥ್ ಎಂಬುವವರು ಕೇರಳ ಸ್ಟೋರಿ ಕಥೆಯನ್ನು ವ್ಯಂಗ್ಯವಿರುವ ಮೀಮ್‌ಗಳ ಪ್ರತಿಗಳನ್ನು ಜನರಿಗೆ ಹಂಚಿ ತಮ್ಮ ವಿರೋಧ ಸೂಚಿಸಿದ್ದಾರೆ. ಅಲ್ಲದೇ, ಸುದಿಪ್ತೋ ಸೇನ್ ಅವರ ಸಂದರ್ಶನ ವೇಳೆ ಕೂಡ ಭಾಗವಹಿಸಿ ಇತರ ಪ್ರತಿನಿಧಿಗಳಿಗೆ ಮೀಮ್‌ಗಳನ್ನು ವಿತರಿಸಿದರು. ಅಲ್ಲದೇ, ಖುದ್ದು ನಿರ್ದೇಶಕ ಸುದಿಪ್ತೋ ಸೇನ್‌ಗೂ ವಿತರಿಸಿದ್ದಾರೆ.

“ಸುದಿಪ್ತೋ ಸೇನ್: ದಿ ಕೇರಳ ಸ್ಟೋರಿ, ಮೂಲ: ನನ್ನನ್ನು ನಂಬು ಬ್ರೋ!” ಎಂಬ ಶೀರ್ಷಿಕೆಯೊಂದಿಗೆ ವಿಚಿತ್ರವಾದ ಬೊಂಬೆ ಕೋತಿಯ ಜನಪ್ರಿಯ ಟೆಂಪ್ಲೇಟ್ ಅನ್ನು ಈ ಮೀಮ್ ಒಳಗೊಂಡಿತ್ತು.
ಇವರಿಬ್ಬರ ಶಾಂತಿಯುತ ಪ್ರತಿಭಟನೆಯನ್ನು ಗಮನಿಸಿದ ನಂತರ ಚಿತ್ರದ ನಿರ್ದೇಶಕ ಸುದಿಪ್ತೋ ಅವರೊಂದಿಗೆ ಮಾತಿನ ಚಕಮಕಿ ಕೂಡ ಕೆಲ ನಿಮಿಷಗಳವರೆಗೆ ನಡೆಸಿದ ಬಗ್ಗೆ ಕೇರಳದ ಪ್ರತಿನಿಧಿಗಳು ಇನ್‌ಸ್ಟಾಗ್ರಾನ್ ಲೈವ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬೆಳವಣಿಗೆಯ ನಂತರ ಪೊಲೀಸರು ಮಧ್ಯಪ್ರವೇಶಿಸಿ, ಅವರನ್ನು ಠಾಣೆಗೆ ಕರೆದೊಯ್ದು, ಒಂದು ಗಂಟೆಗಳ ಕೂರಿಸಿದ್ದರು. ಸುದೀಪ್ತೋ ಅವರು ದೂರು ನೀಡಿದ ಬಳಿಕ ಚಲನಚಿತ್ರೋತ್ಸವದ ಸಂಘಟಕರು ತಮ್ಮ ಪಾಸ್‌ಗಳನ್ನು ಕಿತ್ತುಕೊಳ್ಳಲಾಯಿತು ಎಂದು ಶ್ರೀನಾಥ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
“ನೀವು ದ್ವೇಷವನ್ನು ಹರಡುತ್ತಿರುವುದರಿಂದ ನೀವು ಇದನ್ನು ಮಾಡಬಾರದು ಎಂದು ಪೊಲೀಸರು ಹೇಳಿದ್ದಾರೆ. ಆದರೆ ವಾಸ್ತವವಾಗಿ ನಾವು ದ್ವೇಷವನ್ನು ವಿರೋಧಿಸುತ್ತಿದ್ದೇವೆ. ಕೇರಳ ಸ್ಟೋರಿ ಕೇರಳದ ಜನರ ವಿರುದ್ಧ ದ್ವೇಷ ಪ್ರಚಾರದ ಚಿತ್ರವಾಗಿದೆ. ಹಾಗಾಗಿ, ಅದನ್ನು ನೋಡಿಯೂ ನಾವು ಸುಮ್ಮನೆ ಕೂರುವುದಿಲ್ಲ. ನಾವು ಕೇರಳದವರು. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ ಚಲನಚಿತ್ರದ ವಿರುದ್ಧ ನಿಂತಿದ್ದೇವೆ” ಎಂದು ಶ್ರೀನಾಥ್ ಹೇಳಿದರು.
ಕಳೆದ ವರ್ಷ ಗೋವಾದಲ್ಲಿ ನಡೆದಿದ್ದ ಚಲನಚಿತ್ರೋವದಲ್ಲಿ ಮತ್ತೋರ್ವ ವಿವಾದಾತ್ಮಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತೀರ್ಪುಗಾರರ ಸಮಿತಿಯ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್, “ಅಶ್ಲೀಲ” ಮತ್ತು “ಪ್ರೊಪಗ್ಯಾಂಡ ಚಲನಚಿತ್ರ” ಎಂದು ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.