ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

Date:

Advertisements
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಕೆಲವು ಹಳ್ಳಿಗಳಲ್ಲಿ ಮೊಹರಂ ದೇವರು ಕೂರಿಸುವ ಮಸೀದಿಗಳೂ ಇಲ್ಲ. ದೇವಸ್ಥಾನಗಳಲ್ಲೆ ದೇವರನ್ನು ಕೂರಿಸಲಾಗುತ್ತದೆ. ಬ್ಯಾಲಹುಣಸಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮೊಹರಂ ದೇವರನ್ನು ಕೂರಿಸುತ್ತಾರೆ.

ಕರ್ನಾಟಕದ ಸಾವಿರಾರು ಊರುಗಳಲ್ಲಿ ಮುಸ್ಲಿಮರು ಇಲ್ಲದೆಯೂ ಮೊಹರಂ ಅದ್ದೂರಿಯಾಗಿ ನಡೆಯುತ್ತದೆ. ಇದನ್ನು ವಿಶಿಷ್ಟವೆಂತಲೂ, ಹಿಂದೂ ಮುಸ್ಲಿಂ ಸಾಮರಸ್ಯವೆಂತಲೂ, ಭಾವೈಕ್ಯದ ಕುರುಹು ಎಂತಲೂ ಮಾಧ್ಯಮಗಳು ಅಚ್ಚರಿಯೊಂದಿಗೆ ವರದಿ ಮಾಡುತ್ತವೆ. ಹಿಂದುಗಳೆ ಮುಸ್ಲಿಮರ ಮೊಹರಂ ಹಬ್ಬವನ್ನು ಆಚರಿಸುವ ಬಗ್ಗೆ ಕೌತುಕ ವ್ಯಕ್ತಪಡಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ಮೊಹರಂ ಆಚರಣೆ ನಡೆಯದ ನೂರಾರು ಹಳ್ಳಿಗಳೂ ಇವೆ. ಇಂತಹ ಕಡೆಗಳಲ್ಲಿ ಮೊಹರಂ ಏಕೆ ಇಲ್ಲ ಎಂದು ಕೇಳಿದರೆ, ನಮ್ಮೂರಲ್ಲಿ ಮೊದಲಿನಿಂದಲೂ ಮುಸ್ಲಿಮರಿಲ್ಲ ಎನ್ನುತ್ತಾರೆ. ಹಾಗೆ ನೋಡಿದರೆ ಈ ಕೆಲವು ಹಳ್ಳಿಗಳಲ್ಲಿ ಮುಸ್ಲಿಮರು ಬೇರೆಡೆ ವಲಸೆ ಹೋದ ಕಾರಣ ಹಿಂದೂಗಳು ಮೊಹರಂ ಹಬ್ಬವನ್ನು ನಿಲ್ಲಿಸಿರಬಹುದು. ಅಥವಾ ಎರಡೂ ಧರ್ಮಗಳ ಮೂಲಭೂತವಾದಿ ಸಂಘಟನೆಗಳು ಇಂತಹ ಸಾಮರಸ್ಯದ ಆಚರಣೆ ನಡೆಯದಂತೆ ತಡೆದಿರಬಹುದು.

ಮೊಹರಂ ಚರಿತ್ರೆ ಏಳನೆ ಶತಮಾನಕ್ಕೆ ಕೊಂಡೊಯ್ಯುತ್ತದೆ. ಮಹಮದ್ ಪೈಗಂಬರನ ಮೊಮ್ಮಕ್ಕಳಾದ ಹಸನ್-ಹುಸೇನ್ ವಂಶಸ್ಥರು ಮತ್ತು ದಾಯಾದಿ ಯಾಜೀದನ ವಂಶಸ್ಥರ ನಡುವೆ ಕರ್ಬಲಾ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪುವ ಧಾರುಣ ಘಟನೆಯನ್ನು ನೆನಪಿಸಿಕೊಳ್ಳುವ ಆಚರಣೆ. ಮುಸ್ಲಿಂ ಧರ್ಮದ ಎರಡು ಪ್ರಧಾನ ಪಂಗಡಗಳಾದ ಶಿಯಾ-ಸುನ್ನಿಗಳು ಈ ಆಚರಣೆಯನ್ನು ಭಿನ್ನವಾಗಿ ಆಚರಿಸುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಬಹಮನಿ-ಆದಿಲ್‌ಶಾಹಿಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೈದರಾಬಾದ ನಿಜಾಮನ ಕಾಲದಲ್ಲಿಯೂ ಮೊಹರಂ ಆಚರಣೆ ಈ ಭಾಗದಲ್ಲಿ ವ್ಯಾಪಕವಾಗಿದೆ. ಹೀಗೆ ಮುಸ್ಲಿಂ ಆಡಳಿತದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಮೊಹರಂ ಹಲವು ಹೆಸರುಗಳಲ್ಲಿ ಊರಬ್ಬವಾಗಿ ರಂಗುರಂಗಾಗಿ ಆಚರಣೆಗೊಳ್ಳುತ್ತದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರ, ಕಲಘಟಗಿ ತಾಲೂಕಿನ ಕೆ.ಹುಣಶಿಕಟ್ಟಿ, ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ, ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮುಷ್ಟಗಟ್ಟೆ, ಸವದತ್ತಿ ತಾಲೂಕಿನ ಹರ್ಲಾಪುರ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವಗಡಂಬಳಿ, ಹೂವಿನಹಡಗಲಿ ಸಮೀಪದ ಶಿವಪುರ, ಹಾಳ ತಿಮ್ಮಾಪುರ, ಬ್ಯಾಲಹುಣಸಿ, ಹೀಗೆ ಸುದ್ದಿಯಾದ ಮತ್ತು ನಾನು ಕ್ಷೇತ್ರಕಾರ್ಯದಲ್ಲಿ ಗುರುತಿಸಿದ ಹಳ್ಳಿಗಳ ಹೊರತಾಗಿಯೂ ಸಾವಿರಾರು ಹಳ್ಳಿಗಳಲ್ಲಿ ಮುಸ್ಲಿಮರಿಲ್ಲದ ಮೊಹರಂ ನಡೆಯುತ್ತದೆ. ಕೆಲವು ಹಳ್ಳಿಗಳಲ್ಲಿ ಮೊಹರಂ ದೇವರು ಕೂರಿಸುವ ಮಸೀದಿಗಳೂ ಇಲ್ಲ. ದೇವಸ್ಥಾನಗಳಲ್ಲೆ ದೇವರನ್ನು ಕೂರಿಸಲಾಗುತ್ತದೆ. ಬ್ಯಾಲಹುಣಸಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮೊಹರಂ ದೇವರನ್ನು ಕೂರಿಸುತ್ತಾರೆ.

Advertisements

ಇದನ್ನು ಓದಿದ್ದೀರಾ?: ನುಡಿ ನಮನ | ಮುಂಬಯಿ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರು ಸದಾನಂದ ಸುವರ್ಣ

ಇಂತಹ ಕಡೆಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೆಲವು ಹಳ್ಳಿಗಳಲ್ಲಿ ಬಹಳ ಕಾಲದ ಹಿಂದೆ ಮುಸ್ಲಿಮರು  ನೆಲೆಸಿದ್ದ ಕುರುಹು ಸಿಗುತ್ತದೆ. ಶಿಗ್ಗಾವಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಪ್ಲೇಗ್ ಬಂದಾಗ ಮುಸ್ಲಿಮರು ಗ್ರಾಮ ತೊರೆದಿದ್ದಾರೆ, ಅವರು ಬಿಟ್ಟು ಹೋದ ಮಸೀದಿಯಲ್ಲಿ ಈಗಲೂ ಹಿಂದೂಗಳು ಮೊಹರಂ ಆಚರಿಸುತ್ತಾರೆ. ಸವದತ್ತಿ ತಾಲೂಕಿನ ಹರ್ಲಾಪುರದಲ್ಲಿ ಬಹಳ ಹಿಂದೆ ಮುಸ್ಲಿಂ ಸಮುದಾಯದ ಸೂಫಿ ಫಕೀರನೊಬ್ಬ ವಾಸವಿದ್ದನಂತೆ, ಹಾಗಾಗಿ ಆತ ತೀರಿದ ಬಳಿಕವೂ ಈ ಊರಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗೆ ಮುಸ್ಲಿಮರಿಲ್ಲದ ಊರುಗಳ ಮೊಹರಂ ಆಚರಣೆಗೆ ಆಯಾ ಭಾಗದ ಸೂಫಿ ಸಂತರ ಪ್ರಭಾವವೂ ಇದೆ. ಕೆಲವು ಕಡೆಗಳಲ್ಲಿ ಮೊಹರಂ ದೇವರುಗಳೆ ಮತ್ತೊಂದು ಊರುಗಳಿಗೆ ವಲಸೆ ಬಂದಿರುವುದಾಗಿಯೂ, ಬಹಳ ಊರುಗಳಲ್ಲಿ ಹಳ್ಳಗಳಲ್ಲಿ ಮೊಹರಂ ದೇವರು ಹರಿದುಬಂದು ಈ ಊರಿನಲ್ಲಿ ನೆಲೆಸಿರುವುದಾಗಿಯೂ ರಿವಾಯ್ತ್ ಪದಗಳಲ್ಲಿ ಹೇಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬಹುಪಾಲು ಮುಸ್ಲಿಮರಿಲ್ಲದ ಊರುಗಳಲ್ಲಿ ಮೊಹರಂ ನಡೆಯುತ್ತದೆ ಎಂದರೆ ಹಿಂದೆ ಈ ಊರುಗಳಲ್ಲಿ ಮುಸ್ಲಿಮರು ನೆಲೆಸಿದ್ದರು ಎನ್ನುವುದರ ಸಂಕೇತವಾಗಿದೆ. ಅಂತೆಯೆ ಮುಸ್ಲಿಮರಿಲ್ಲದ ಮೊಹರಂ ನಡೆವ ಹಳ್ಳಿಗಳ ಸುತ್ತಮುತ್ತಣ ಮುಸ್ಲಿಮರನ್ನು ಕರೆತಂದು ಹಬ್ಬ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಪೂರ್ವಜರ ನೆನಪಿಗೆ ಬಿಟ್ಟುಹೋದ ಮನೆತನದ ಮುಸ್ಲಿಂ ಕುಟುಂಬಗಳೆ ಮೊಹರಂ ಹಬ್ಬಕ್ಕೆ ಎರಡು ಮೂರು ದಿನದ ಮಟ್ಟಿಗೆ ಬಂದು ಆಚರಣೆ ಮುಗಿಸಿಕೊಂಡು ಹೋಗುತ್ತಾರೆ.

ಇಂತಹ ಮುಸ್ಲಿಮರ ವಲಸೆಯ ಪ್ರಮಾಣ 1992 ರ ಬಾಬರಿ ಮಸೀದಿ ಧ್ವಂಸದ ನಂತರ ಹೆಚ್ಚಾಗಿರುವುದನ್ನು ಗಮನಿಸಬಹುದು. ಮುಸ್ಲಿಮರ ದುರುಳೀಕರಣ, ಮುಸ್ಲಿಮರ ಬಗೆಗೆ ಹುಟ್ಟಿಸಿದ ಭಯದಿಂದ ಭಾರತೀಯ ಮುಸ್ಲಿಮರಲ್ಲಿ ಭಯ ಆತಂಕ ಅಭದ್ರತೆ ನೆಲೆಸಿದೆ. ಹೀಗಾಗಿ ಮುಸ್ಲಿಮರು ಒಗ್ಗಟ್ಟಾಗುವುದು, ಒಂದೆಡೆ ಬದುಕುವುದು ಅನಿವಾರ್ಯವಾಗಿದೆ. ಹಿಂದೆ ಚಿಕ್ಕಪುಟ್ಟ ವ್ಯಾಪಾರಿಗಳಾಗಿ ಊರುಗಳಿಗೆ ಪ್ರವೇಶಿಸಿ ಆಯಗಾರರಾಗಿ ಒಂದೋ ಎರಡೋ ಮುಸ್ಲಿಂ ಮನೆಗಳು ನೆಲೆಸಿದ್ದರು. ಬದಲಾದ ಕೋಮುಭಾವನೆಯ ಪರಿಣಾಮವಾಗಿ ತಮ್ಮ ವಾಸದ ಹಳ್ಳಿಗಳನ್ನು ತೊರೆದು ಎಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿ ನೆಲೆಸಿದ್ದಾರೋ ಅಂತಹ ಕಡೆಗಳಿಗೆ ಹೆಚ್ಚಾಗಿ ನಗರಗಳಿಗೆ ವಲಸೆ ಹೋಗಿದ್ದಾರೆ. ಹಾಗಾಗಿ ಮುಸ್ಲಿಮರಿಲ್ಲದ ಮೊಹರಂ ಆಚರಣೆ, ಹಿಂದೆ ಈ ಊರುಗಳಲ್ಲಿ ಮುಸ್ಲಿಮರು ಇದ್ದರು ಎಂದು ಹೇಳುವ ಮೌಖಿಕ ಚರಿತ್ರೆಯ ಪಠ್ಯಗಳಾಗಿವೆ.

arun jolada kudligi
ಅರುಣ್‌ ಜೋಳದ ಕೂಡ್ಲಿಗಿ
+ posts

ಲೇಖಕ, ಜಾನಪದ ಸಂಶೋಧಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

2 COMMENTS

  1. ಪ್ರವಾದಿಯವರನ್ನು ಏಕ ವಚನದಲ್ಲಿ ಸಂಬೋಧಿಸುವುದು ತಪ್ಪು.. ತಿದ್ದಿ..

  2. 1992 ರ ಬಾಬರಿ ಮಸೀದಿ ದ್ವಂಸದ ನಂತರ ಈ ವಲಸೆ ಹೆಚ್ಚಾಯ್ತು ಅನ್ನೊಕೆ ನಿಮ್ಮಲ್ಲಿ ಪುರಾವೆಗಳುವೆಯೇ ಸರ್?
    ನಿಮ್ಮ ಅಭಿಪ್ರಾಯಗಳನ್ನು ಸಂಶೋಧನೆಯ ಹೆಸರಲ್ಲಿ ಸಾರ್ವತ್ರಿಕರಣಗಳೊಳಿಸದಿರಿ.. ನಿಮ್ಮ ಊಹೆ ನಿಜವಾಗಿದ್ದರೆ ಧಾರ್ಮಿಕ ಅಭದ್ರತೆಯಿಂದ ವಲಸೆ ಹೋಗಿದ್ದರೆ, ಅಂತಹ ಊರಲ್ಲಿ ಹೇಗೆ ಇನ್ನೊಂದು ಧರ್ಮದ ಹಬ್ಬ ಆಚರಿಸಲು ಸಾದ್ಯ?
    ಸಂಶೋಧನೆಯನ್ನು ನಮ್ಮ ಒಲವು ನಿಲುವುಗಳಾಚೆ ಇಟ್ಟು ನೋಡಿದಾಗ ನಮಗೆ ಸತ್ಯದರ್ಶನವಾಗುತ್ತದೆ, ಇಲ್ಲದಿದ್ದರೆ ನಸವು ಧರಿಸಿದ ಬಣ್ಣದ ಕನ್ನಡಕ ಬಣ್ಣವೇ ಸತ್ಯವಾಗುತ್ತದೆ..
    ನಮಸ್ತೆ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ

ಇಡೀ ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರಾಜಕೀಯ...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X