(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಬೆಂಗಳೂರಿನಿಂದ ಹೊರಟು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ, ಸಂಜೆ ನಾಲ್ಕೂವರೆಯ ಭರ್ಜರಿ ಬಿಸಿಲು-ಮಳೆ. ಮಳೆ ಸುರಿಯುತ್ತಿದ್ದರೂ ನಡೆಯುವಂತೆ ಬಿಸಿಲು ಕುಮ್ಮಕ್ಕು ಕೊಡುವ ಸ್ವಾರಸ್ಯಕರ ಸನ್ನಿವೇಶ. ಸ್ವಲ್ಪ ಹೊತ್ತು ಕಾದು ಬಸ್ ನಿಲ್ದಾಣದ ಕಡೆಗೆ ನಡೆದಿದ್ದಾಯ್ತು.
ಹಳ್ಳಿಗಳ ದಾರಿಯಲ್ಲಿ ಸಾಗುವ ಕಪ್ಪು ಬೋರ್ಡಿನ ಬಸ್‌ಗಳ ತಲಾಶ್ ಚಾಲ್ತಿಯಲ್ಲಿತ್ತು. ನಿಲ್ದಾಣದ ತುಂಬಾ ಜನವೋ ಜನ. ಶಾಲಾ-ಕಾಲೇಜು ಮಕ್ಕಳ ದಂಡು. ಎಲ್ಲ ಬಸ್ಸುಗಳೂ ಭರ್ತಿ. ಫುಟ್‌ಬೋರ್ಡುಗಳಲ್ಲಿ ನಿಲ್ಲಲೂ ಜಾಗವಿಲ್ಲ.
ನನಗೆ ಮೂರ್ನಾಲ್ಕು ದಿಕ್ಕುಗಳಿದ್ದವು. ಕೋಲಾರ ಕಡೆ ಹೋಗಬಹುದಿತ್ತು. ಕೆಜಿಎಫ್ ಕಡೆ ಹೋಗಬಹದಿತ್ತು. ಮಾಲೂರಿನ ಕಡೆಗೆ ಹೊರಳಬಹುದಿತ್ತು. ಹಾಗೆಯೇ, ಬಂಗಾರಪೇಟೆ ಸುತ್ತಲ ಒಳಗಿನ ದಾರಿಗಳಲ್ಲಿ ಸಾಗಿ, ಹತ್ತಿರದ ಹಳ್ಳಿಗಳನ್ನು ತಲುಪಬಹುದಿತ್ತು. ಆದರೆ, ನಾನು ಎಲ್ಲಿಗೆ ಹೋಗಬೇಕು ಅನ್ನೋದನ್ನು ತೀರ್ಮಾನ ಮಾಡುವುದು ನಾನಲ್ಲವಲ್ಲ! ಬಸ್ ಬೋರ್ಡುಗಳಲ್ಲಿನ ಊರ ಹೆಸರು ಸ್ವಾರಸ್ಯಕರ ಅನ್ನಿಸಬೇಕು, ಆ ನಂತರವೇ ಪಯಣ.
ಕಾಮಸಮುದ್ರ, ಕನಮನಹಳ್ಳಿ, ಕೆಜಿಎಫ್ ಕಡೆಗಿನ ಕಪ್ಪು ಬೋರ್ಡ್ ಬಸ್‌ಗಳು ಈಗಾಗಲೇ ತುಂಬಿ ತುಳುಕುತ್ತಿದ್ದವು. ಕನಮನಹಳ್ಳಿ ಬೋರ್ಡ್ ಇದ್ದ ಬಸ್ ಡ್ರೈವರ್ ಜೊತೆ ಮಾತಿಗಿಳಿದೆ. “ನಮ್ ರೂಟಲ್ಲಿ ಮೂರ್ನಾಲ್ಕು ಕಿಲೋಮೀಟ್ರು ಹೋದ್ರೆ ಒಂದ್ ಹಳ್ಳಿ ಐತೆ, ಬರ್ತೀರಾ ನೋಡಿ…” ಅಂದ್ರು. ಸರಿ, ಒಂದು ಆಯ್ಕೆ ಅಂತ ತಲೆಯಲ್ಲಿ ಕೂರಿಸಿಕೊಂಡು, ಇನ್ನಷ್ಟು ಆಯ್ಕೆಗಳಿವೆಯೇ ಅಂತ ಹುಡುಕತೊಡಗಿದೆ.
ಬಸ್ ನಿಲ್ದಾಣದಾಚೆ ನಿಂತಿದ್ದ ಶೇರ್ ಆಟೋ ಮನುಷ್ಯ ಜೋರು ಅರಚುತ್ತ, ಬಸ್ ನಿಲ್ದಾಣದ ಒಳಗಿದ್ದವರನ್ನು ಬರಸೆಳೆಯುವ ಪ್ರಯತ್ನದಲ್ಲಿದ್ದ. ಅವನ ಪಕ್ಕವೇ ಹೋಗಿ ನಿಂತರೂ ಕೂಗುತ್ತಿರುವುದು ಯಾವ ಊರ ಹೆಸರು ಅಂತ ಗೊತ್ತಾಗಲೇ ಇಲ್ಲ. “ನಿಮ್ ರೂಟಿನಲ್ಲಿ ಎಷ್ಟು ಹಳ್ಳಿಗಳಿವೆ?” ಕೇಳಿದೆ. ಕೆಳಗಿಂದ ಮೇಲಿನತನಕ ನನ್ನನ್ನು ದಿಟ್ಟಿಸಿದ ಆತ, “ಯಾಕೇಳಿ ಸರ್?” ಅಂತ ಜಾಸೂಸಿ ದನಿಯಲ್ಲಿ ಕೇಳಿದ.
ಬದಲಾದ ಅವನ ಹಾವಭಾವದಿಂದ ನಗು ತುಳುಕಿದರೂ ನುಂಗಿಕೊಂಡು, ಏಕೆ ಅಂತ ವಿವರಿಸಿದೆ. “ಓಹ್ ಒಳ್ಳೇದು ಸರ್… ಆದ್ರೆ ನಮ್ ರೂಟಲ್ಲಿ ಇರೋದೇ ಎರಡು ಹಳ್ಳಿ, ಅವೂ ಸರೀಗಿಲ್ಲ. ನೀವು ಕೋಲಾರ ರೂಟಲ್ಲಿ ಹೋಗ್ತೀರಾ ನೋಡಿ…” ಎಂದ. “ಸರೀಗಿಲ್ಲ ಅಂದ್ರೆ…?” ಅಂತ ಕೇಳಬೇಕು ಅಂದುಕೊಂಡರೂ, ಅಂವ ಕೂಗುವ ಕೆಲಸಕ್ಕೆ ಮರಳಲು ಹವಣಿಸಿದ್ದನ್ನು ಕಂಡು, ನನ್ನಿ ಹೇಳಿ ಮತ್ತೆ ಬಸ್ ನಿಲ್ದಾಣದೊಳಕ್ಕೆ ಹೆಜ್ಜೆ ಹಾಕಿದೆ.
ಈ ಆಡಿಯೊ ಕೇಳಿದ್ದೀರಾ?: ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಮಂಡ್ಯ ಜಿಲ್ಲೆಯ ಚಿಕ್ಕತಮ್ಮನಹಳ್ಳಿಯ ಮರಿಯಮ್ಮ
ಕಪ್ಪನೆಯ ಮೋಡಗಳು ದಂಡು ಕಟ್ಟಿಕೊಂಡು ತಿರುಗತೊಡಗಿದವು. ಇತ್ತ, ಇದ್ದ ಕೆಲವೇ ಬಸ್‌ಗಳೂ ಓಟ ಕಿತ್ತು ನಿಲ್ದಾಣದ ತುಂಬಾ ಜನರಷ್ಟೇ ಉಳಿದರು. ಎಲ್ಲರ ಮೊಗದಲ್ಲೂ ಅನಾಥಪ್ರಜ್ಞೆ! ಅಲ್ಲಿದ್ದವರನ್ನೆಲ್ಲ ನೋಡುತ್ತಿದ್ದರೆ, ಅವರನ್ನೇ ಮಾತನಾಡಿಸುವ ಹುಕಿ. ಆದರೆ…
ಅಷ್ಟರಲ್ಲಿ, “ಕೋಲಾರ್… ಕೋಲಾರ್… ಕೋಲಾರ್…” ಎಂಬ ಗಡಸು ದನಿ. ನಿಲ್ದಾಣದೊಳಗಿದ್ದ ಅರ್ಧ ಮಂದಿ ಅತ್ತ ಓಟ. ಕೂಗುತ್ತಿದ್ದವನ ಬಳಿ ಹೋಗಿ, ಮಾತನಾಡಿಸಲು ನೋಡಿದೆ. ಊಹುಂ… ಆತ ತನ್ನ ಕೊರಳೊಳಗೆ ಮುಳುಗಿಹೋಗಿದ್ದ. ಪ್ರಯೋಜನವಿಲ್ಲ ಅನ್ನಿಸಿ ಮ್ಯಾಪ್ ಓಪನ್ ಮಾಡಿ, ಬಂಗಾರಪೇಟೆ-ಕೋಲಾರ ರೂಟಿನ ಹಳ್ಳಿಗಳ ಹೆಸರು ನೋಡತೊಡಗಿದೆ. ಹತ್ತು ಕಿಲೋಮೀಟರ್ ದೂರದಲ್ಲೊಂದು ಹಳ್ಳಿ – ಹುದುಕುಳ. ಸಾಹಸ ಮಾಡಿ ಬಸ್ಸೇರಿದ್ದಾಯ್ತು.
ಹುದುಕುಳ ಇಳಿದಾಗ, ಮೂಡಣದಲ್ಲಿ ಮಳೆ ತಯಾರಿ ನಡೆದಿತ್ತು. ಆದದ್ದಾಗಲಿ ಅಂತ ಹುದುಕುಳದತ್ತ ನಡೆಯಲು ನೋಡಿದರೆ, ಅದಕ್ಕೆ ವಿರುದ್ಧ ದಿಕ್ಕಿನಲ್ಲೊಂದು ಪುಟ್ಟ ರಸ್ತೆ. ಅರೆ… ಮ್ಯಾಪಿನಲ್ಲಿ ಕಾಣಿಸಲಿಲ್ಲವಲ್ಲ ಅಂದುಕೊಂಡು, ಅತ್ತಲೇ ನಡೆದೆ. ಸ್ವಲ್ಪ ದೂರದಲ್ಲೊಂದು ಬೋರ್ಡು; ಪಾಕರಹಳ್ಳಿ, ಸೂಲಿಕುಂಟೆ. ಸೂಲಿಕುಂಟೆಗೆ ಹೋಗಲಾದೀತೇ ನೋಡುವ ಅಂದುಕೊಂಡು ನಡೆಯತೊಡಗಿದೆ.
ಪಾಕರಹಳ್ಳಿ ದಾಟಿ ಒಂದು ಕಿಲೋಮೀಟರ್ ಕಳೆದಿರಬೇಕು. ರೈತರೊಬ್ಬರು ಸಿಕ್ಕರು. ಮಾತುಕತೆ ಅಷ್ಟು ಚಂದ ಅನ್ನಿಸಲಿಲ್ಲ. ನಿರಾಶೆಯ ಮೊಗ ಹೊತ್ತು ಆಕಾಶ ನೋಡಿದೆ. ಮೋಡಗಳ ಸೈನ್ಯ ಜಮಾವಣೆ ಜೋರಾಗಿಯೇ ಇತ್ತು. ಕತ್ತಲೂ ಬೇಗ ಕವಿದು, ವಾಪಸು ಹೊರಡುವ ತೀರ್ಮಾನ ಮಾಡಿದೆ. ಸಪ್ಪೆ ಮೋರೆ ಮಾಡಿಕೊಂಡು ಪಾಕರಹಳ್ಳಿ ನಡುವೆ ನಡೆಯುವಾಗ, ಪುಟ್ಟ ಓಣಿಯೊಂದರಲ್ಲಿ ಮೂವರು ಪಟ್ಟಾಂಗ ಹೊಡೆಯುತ್ತಿರುವಂತೆ ಕಾಣಿಸಿತು. ಯಾವುದಕ್ಕೂ ಇರಲಿ ಅಂದುಕೊಂಡು ಹತ್ತಿರ ಹೋಗಿ ಮಾತನಾಡಿಸಿದೆ. ಹೀಗೆ ಸಿಕ್ಕವರೇ, ‘ಪಾಕರಹಳ್ಳಿಯ ಭೀಮ’ ದ್ಯಾವ್ರಪ್ಪ.
ದ್ಯಾವ್ರಪ್ಪನವರನ್ನು ಮಾತನಾಡಿಸುವಾಗ ನನ್ನ ಸುತ್ತ ಸೇರಿದ್ದ ದಂಡಿನಲ್ಲಿ ಹುಡುಗನೊಬ್ಬ ನನ್ನನ್ನೇ ದಿಟ್ಟಿಸುತ್ತ ಕುಂತಿದ್ದ. ನನಗೋ ನೂರೆಂಟು ಕಲ್ಪನೆ. ದ್ಯಾವ್ರಪ್ಪನವರೊಡನೆ ಮಾತು ಮುಗೀತು ಅನ್ನುವಾಗ ಆತ ನನ್ನ ಬಳಿ ಬಂದು ಹೇಳಿದ, “ಅಣ್ಣಾ… ಭೀಮನ್ ಮಾತ್ರ ಮಾತಾಡ್ಸದಾ? ಧರ್ಮರಾಯ ಇದಾರೆ, ನಮ್ ದೊಡ್ಡಪ್ಪ!” ವಾಹ್ ಅನ್ನಿಸಿ, ಅವನನ್ನು ಹಿಂಬಾಲಿಸಿದೆ. ಹೀಗೆ ‘ಪಾಕರಹಳ್ಳಿಯ ಧರ್ಮರಾಯ’ ಡಿ ನಾರಾಯಣಸ್ವಾಮಿ ಸಿಕ್ಕರು.
ಭೀಮ ಮತ್ತು ಧರ್ಮರಾಯರ ಜೊತೆಗಿನ ಮಾತುಕತೆಯ ಆಡಿಯೊ ಇಲ್ಲುಂಟು. ಕೇಳಿ, ಸಾಧ್ಯವಾದರೆ ಹೇಗನ್ನಿಸಿತು ಅಂತ ಹೇಳಿ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ