(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಅಸಲಿಗೆ ಸೀತಾರಾಮಪುರದಲ್ಲಿ ನಾನು ಮಾತಾಡಿಸಬೇಕಿದ್ದದ್ದು ಮರುಗೇಂದ್ರಪ್ಪ ಎಂಬುವವರನ್ನು. ಆದರೆ, ಮಾತಿಗೆ ಸಿಕ್ಕಿದ್ದು ಲಲಿತಮ್ಮ. ಇದರ ಹಿಂದೊಂದು ಸ್ವಾರಸ್ಯಕರ ಕತೆ ಉಂಟು…
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಾಗೆ ಕೋಡಮಗ್ಗೆಯಿಂದ ಹೊರಟು ತಳ್ಳಿಕಟ್ಟೆ ದಾಟಿದ್ದೆ. ಬಲಕ್ಕೊಂದು ಪುಟ್ಟ ರಸ್ತೆ. ರಸ್ತೆ ಬದಿಯ ಬೋರ್ಡಿನಲ್ಲಿ ‘ಸೀತಾರಾಮಪುರ’ ಅನ್ನೋ ಹೆಸರು ಕಾಣಿಸಿದ್ದೇ ತಡ, ಆ ಊರಿಗೆ ಹೋಗಲೇಬೇಕು ಅನ್ನಿಸಿತು. ಎಲ್ಲರೂ ರಾಮನನ್ನು ಮೆರೆಸುತ್ತಿರುವ ಹೊತ್ತಿನಲ್ಲಿ ಇದ್ಯಾರೋ ‘ಸೀತಾರಾಮಪುರ’ ಅನ್ನೋ ಹೆಸರಿಟ್ಟಿದ್ದಾರಲ್ಲ ಅಂತ ಬೆರಗು, ಖುಷಿ. ನಡಿಗೆ ಶುರು.
ಎತ್ತ ತಿರುಗಿದರೂ ಅಡಿಕೆ ತೋಟಗಳು. ದೃಷ್ಟಿಬೊಟ್ಟಿನಂತೆ ತೆಂಗಿನಮರಗಳು. ಸದಾ ಹರಿಯುವ ಪುಟ್ಟ-ಪುಟ್ಟ ಕಾಲುವೆಗಳು. ತೋಟದೊಳಗಿನ ಬಸಿಗಾಲುವೆಗಳಲ್ಲಿ ನೀರು ಹರಿಯುವ ಮೋಹಕ ನಾದ. ಅಡಿಕೆ ಸಿಪ್ಪೆಯನ್ನೇ ಗೊಬ್ಬರವನ್ನಾಗಿ ಬಳಸುವ ತೋಟದ ಮಂದಿ. ಮಧ್ಯೆ-ಮಧ್ಯೆ ಕಬ್ಬು, ಬಾಳೆಯ ಇಣುಕುನೋಟ.
ಕುಮರಿ ನಾರಾಯಣಪುರ ದಾಟಿ ಸ್ವಲ್ಪ ದೂರ ಆಗಿತ್ತು. ಎದುರಿನಿಂದ ಬರುತ್ತಿದ್ದ ಬೈಕಿನವರೊಬ್ಬರು, ನನ್ನ ಬಳಿ ಬರುತ್ತಲೇ ಗಾಡಿ ನಿಲ್ಲಿಸಿ, “ಯಾವೂರಣ್ಣ?” ಕೇಳಿದರು. ನಾನು ನನ್ನ ಪ್ರವರ ಹೇಳಿದೆ. “ನಾವು ಇದೇ ತೋಟ್ದೋರು. ಇವತ್ತು ಪರೇವು. ಕೋಳಿ ಮಾಂಸದೂಟ. ಪೂಜೆ ಆಯ್ತು. ಹುಡುಗ್ರು ಇದ್ದಾರೆ. ಊಟ ಮಾಡ್ಕಂಡೇ ಹೋಗ್ಬೇಕು,” ಅಂತ ಒತ್ತಾಯ. ನನಗೋ ಕೋಳಿ ಮಾಂಸದೂಟ ಅಲರ್ಜಿ. ಅದನ್ನೇ ಹೇಳಿದೆ. “ನೋಡಿ… ನಾಚ್ಕೋಬ್ಯಾಡಿ. ಊಟಕ್ಕೆಲ್ಲ ಹಂಗ್ ಮಾಡ್ಬಾರ್ದು. ಹಸ್ಕಂಡೆಲ್ಲ ಓಡಾಡ್ಬಾರ್ದು…” ಅಂತ ಹೇಳಿ ಹೊರಟರು.
ಅವರು ಹೇಳಿದ ಪರೇವಿನ ಜಾಗಕ್ಕೆ ಬಂದಾಗ, ರಸ್ತೆಯಲ್ಲೇ ಕುಂತಿದ್ದ ಇಬ್ಬರು ಮತ್ತೆ ಕೇಳಿದರು, “ಅಣ್ಣಾ ಯಾವೂರು?” ಮತ್ತೆ ನಾನು ನನ್ನ ಕತೆ ಹೇಳಿದೆ. “ಅಲ್ಲಾ… ಈ ಮಧ್ಯಾಹ್ನದ್ ಬಿಸ್ಲಲ್ಲಿ ನಡ್ಕಂಡ್ ಹೋಯ್ತಿದ್ದೀರಲ್ಲ! ಗಾಡಿ ಇದಾವೆ, ಬಿಟ್ಟು ಬರ್ತೀವಿ ಹೇಳಿ…” ಅಂದ್ರು. ನಾನು ನಡೆದೇ ಹೋಗುವುದಾಗಿ ಅವರಿಗೆ ಮನವರಿಕೆ ಮಾಡಿ ಹೊರಟೆ.
ಸೀತಾರಾಮಪುರ… ಇನ್ನೂ ಎರಡೂವರೆ ಕಿಲೋಮೀಟರ್ ದೂರದಲ್ಲಿತ್ತು. ದಾರಿ ಎಷ್ಟು ಚಂದಿತ್ತು ಅಂದರೆ, ಬಿಸಿಲು ತಾಗಲೇ ಬಿಡುತ್ತಿರಲಿಲ್ಲ – ಅಡಿಕೆ, ಬಾಳೆ, ತೆಂಗಿನ ಮರಗಳ ನೆರಳೋ ನೆರಳು. ಊರ ಹೊರಗಿನ ಸ್ಮಶಾನ, ದೊಡ್ಡದೊಂದು ಕೆರೆ, ಏರಿ ಮೇಲಿನ ಚೌಡಮ್ಮನ ಪುಟ್ಟ ಗುಡಿ, ನಂತರದಲ್ಲಿನ ವೀರಭದ್ರಸ್ವಾಮಿ ದೇಗುಲ, ಹಳೆಯ ಸೀತಾರಾಮಪುರವನ್ನೆಲ್ಲ ದಾಟಿದರೆ ಅಷ್ಟು ದೂರಲ್ಲಿ ಹೆದ್ದಾರಿ ಥರದ್ದೊಂದು ರಸ್ತೆ. ಅರೆ… ಇದ್ಯಾವ ರಸ್ತೆ ಅಂತ ನೋಡಿದರೆ, ಅದು ಭದ್ರಾವತಿ-ಚನ್ನಗಿರಿ ಹೆದ್ದಾರಿ.
ಮಧ್ಯಾಹ್ನ ಮೂರೂವರೆ. ಜೋರು ಹಸಿವು. ಪುಟ್ಟ ಕ್ಯಾಂಟೀನೊಂದನ್ನು ಹೊಕ್ಕು, “ಅಣ್ಣಾ, ಏನಿದೆ ತಿನ್ನೋಕೆ?” ಕೇಳಿದರೆ, “ಎಲ್ಲ ಖಾಲಿ ಸರ್… ಮಸಾಲಾ ವಡೆ-ಟೀ ಮಾತ್ರ ಇರೋದು,” ಎಂಬ ಉತ್ತರ. “ಸರಿ… ಮಸಾಲಾ ವಡೇನೇ ಕೊಡಿ,” ಹೇಳಿ, ಕುಂತು ಅಲ್ಲಿದ್ದವರತ್ತ ಕಣ್ಣಾಡಿಸಿದೆ. “ಊರಿನ ಬಗ್ಗೆ ಚೆನ್ನಾಗಿ ಗೊತ್ತಿರೋರು ಯಾರಾದ್ರೂ ಇದ್ದಾರಾ ನಿಮ್ಗೆ ಗೊತ್ತಿರೋರು?” ಕ್ಯಾಂಟೀನಿನವನನ್ನು ಕೇಳಿದೆ. “ಎದುರಿಗೇ ಕುಂತಿದ್ದೀರಾಲ್ಲ ಕೃಷ್ಣಪ್ನೋರು, ಅವ್ರೇ ಊರಿನ ದೊಡ್ಡ ತಲೆ,” ಅಂತ ಕಣ್ಸನ್ನೆ ಮಾಡಿದ. ಕೃಷ್ಣಪ್ಪನವರು ನಕ್ಕರು.
ಈ ಮಧ್ಯೆ, ಕ್ಯಾಂಟೀನಿನವ ಈರುಳ್ಳಿ ಹೆಚ್ಚಿಟ್ಟಿರುವುದು ಅಚಾನಕ್ಕಾಗಿ ಕಾಣಿಸಿತು. “ಅದ್ಯಾಕೆ ಈರುಳ್ಳಿ ಹಂಗೆ ಹೆಚ್ಚಿಟ್ಟಿದ್ದೀರಿ?” ಕೇಳಿದೆ. “ಮಸಾಲಾ ಮಂಡಕ್ಕಿಗೆ,” ಅಂದನಾತ. ನನಗೆ ಕೋಪವೂ, ನಗುವೂ ಬಂದು, ಮಂಗನಂತಹ ಮುಖ ಮಾಡಿ, “ಅಲ್ರೀ… ತಿನ್ನೋಕೆ ಏನಾದ್ರೂ ಇದೆಯಾ ಅಂದಾಗ, ಮೊದ್ಲಿಗೆ ಇದನ್ನೇ ಹೇಳ್ಬೇಕು ತಾನೇ?” ಅಂದೆ. ಅಂವ ಹಲ್ಲು ಕಿರಿಯುತ್ತ, “ಈಗ್ ಕೊಡ್ಲಾ ಸಾರ್?” ಅಂತ ನನ್ನ ಮೊಗವನ್ನೇ ದಿಟ್ಟಿಸಿದ. “ಕೊಡಿ… ಹಂಗೇ ಆ ಮೆಣಸಿನಕಾಯಿ ಬೋಂಡಾ ಇದಾವಲ್ಲ ಎರಡು, ಅವನ್ನೂ ಕೊಡಿ,” ಅಂದು ಇತ್ತ ತಿರುಗಿದೆ.
“ಏನ್ ಬೇಕಾಗಿತ್ತು ಹೇಳಿ…” ಅನ್ನುತ್ತ ಕೃಷ್ಣಪ್ಪನವರ ಪ್ರಸನ್ನ ವದನ ನನ್ನೊಟ್ಟಿಗೆ ಮಾತಿಗೆ ತೊಡಗಿತು. ಸ್ವಲ್ಪ ಹೊತ್ತಿನ ನಂತರ, “ನಿಮಗೆ ಊರಿನ ಬಗ್ಗೆ ಇನ್ನೂ ಚೆನ್ನಾಗಿ ಗೊತ್ತಾಗ್ಬೇಕು ಅಂದ್ರೆ, ಮುರುಗೇಂದ್ರಪ್ಪ ಅಂತಿದ್ದಾರೆ, ಅವ್ರನ್ನು ಭೇಟಿಯಾಗಿ,” ಅಂತ ಸಲಹೆ. “ಸರಿ… ದಾರಿ ಹೇಳಿದ್ರೆ ನಾನವ್ರನ್ನು ಮಾತಾಡಿಸ್ತೇನೆ,” ಅಂದೆ. ಅವ್ರು ಪಕ್ಕಾ ದಾರಿ ಹೇಳಿದರು.
ಮುರುಗೇಂದ್ರಪ್ಪನವರ ಮನೆ ಎದುರು ನಿಂತಾಗ, ಬದಿಯ ಹಿತ್ತಲಿನಲ್ಲಿದ್ದ ಅವರ ಮಡದಿ ಲಲಿತಮ್ಮ, “ಅವ್ರು ಮಲ್ಗಿದ್ದಾರೆ. ಎಬ್ಬಿಸ್ತೀನಿ ಇರಿ,” ಅಂತ ಒಳಹೋದರು. “ಬ್ಯಾಡ ಬಿಡಿ, ನಿದ್ದೆಯಲ್ಲಿ ಇರೋರನ್ನು ಎಬ್ಬಿಸ್ಬೇಡಿ,” ಅನ್ನುವಷ್ಟರಲ್ಲಿ ಅವರು ನಾಪತ್ತೆ. ಮನೆಯ ಬಾಗಿಲಿನಲ್ಲಿ ಲಲಿತಮ್ಮ ಮತ್ತೆ ಕಂಡಾಗ ಅವರೊಂದಿಗೆ ಮುರುಗೇಂದ್ರಪ್ಪ ಇದ್ದರು. ಅವರಿಗೆ ಮರೆವು, ಹಾಗಾಗಿ ಮಾತಾಡುವುದು ಕಷ್ಟ ಅಂತಾಯ್ತು. ಸ್ವಲ್ಪ ಹೊತ್ತು ಪಟ್ಟಾಂಗ ಆದ ನಂತರ, “ನೀವು ಮಾತಾಡ್ತೀರಾ ಲಲಿತಮ್ನೋರೇ?” ಕೇಳಿದೆ. ಅದಕ್ಕೆ ಕಾರಣ ಅವರು ಹೊನ್ನಾಳಿ ಕಡೆಯವರು ಅಂತ ಹೇಳಿದ್ದು. ಅವರು ಯೋಚಿಸುತ್ತಲೇ, ಹಿಂಜರಿಯುತ್ತಲೇ ಹ್ಞೂಂ ಅಂದಂಗಿತ್ತು. ನನಗೂ ಅಷ್ಟೇ ಸಾಕಿತ್ತು. ಸೀತಾರಾಮಪುರದ ಲಲಿತಮ್ಮ ಮಾತಿಗೆ ಸಿಕ್ಕಿದ್ದು ಹೀಗೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ