(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಬಂಡೀಪುರ ಸುತ್ತಿ, ಊಟಿ–ಮೈಸೂರು ಹೆದ್ದಾರಿಯ ಬದಿಯಲ್ಲಿನ ಚಿಕ್ಕ ಚಹಾ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿದೆವು. ತುಂಬಾ ತಡವಾಗಿತ್ತು. ಆ ಚಹಾ ಅಂಗಡಿಯ ಅಂದಿನ ಕೊನೆಯ ಗಿರಾಕಿಗಳಿರಬೇಕು ನಾವು. ಒಂದೇ ಒಂದು ಪಟ್ರೋಮ್ಯಾಕ್ಸ್ ಲಾಟೀನು ಹಚ್ಚಿದ್ದ ಅಂಗಡಿ ಅದು. ಚಹಾ ಕುಡಿದು ಮುಗಿಸಿ ಕಾರಿನ ಕಡೆಗೆ ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಕೋಪೋದ್ರಿಕ್ತ ಆನೆಯ ಘೀಳು ಕೇಳಿಸಿತು…
ಪುಸ್ತಕ: ಕೊನೆಯ ಬಿಳಿ ಬೇಟೆಗಾರ (‘ದ ಲಾಸ್ಟ್ ವೈಟ್ ಹಂಟರ್’ನ ಅನುವಾದ | ಲೇಖಕರು: ಡೊನಾಲ್ಡ್ ಆಂಡರ್ಸನ್ (ಕೆನ್ನೆತ್ ಆಂಡರ್ಸನ್ ಮಗ) | ಇಂಗ್ಲಿಷ್ ನಿರೂಪಣೆ: ಜೋಷುವಾ ಮ್ಯಾಥ್ಯೂ | ಕನ್ನಡಕ್ಕೆ ತಂದವರು: ಎಲ್ ಜಿ ಮೀರಾ | ಪ್ರಕಟಣೆ: ಆಕೃತಿ ಪುಸ್ತಕ, ರಾಜಾಜಿನಗರ, ಬೆಂಗಳೂರು | ಪುಟಗಳು: 384 | ಬೆಲೆ: ₹395 | ಪುಸ್ತಕ ಬೇಕಾದವರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 96115 41806
ಭಾರತದ ಅರಣ್ಯಗಳಲ್ಲಿ ಕುಳಿತುಕೊಂಡಿರುವುದು ಒಂದು ಅವರ್ಣನೀಯ ಅನುಭವ. ನೀವು ಕಾಡುಗಳನ್ನು ಮತ್ತು ಅದರಲ್ಲಿನ ಪ್ರಾಣಿಗಳನ್ನು ನಿಜಕ್ಕೂ ಪ್ರೀತಿಸುವಿರಾದರೆ, ಅಲ್ಲಿನ ಒಂದು ಸಂಜೆಯು ನಿಮಗೆ ಯಾವುದೇ ಸಿನಿಮಾಕ್ಕಿಂತ ಹೆಚ್ಚಿನ ಮನರಂಜನೆಯನ್ನು ಕೊಡುತ್ತದೆ ಹಾಗೂ ಇದರಲ್ಲಿನ ಅತ್ಯುತ್ತಮ ಭಾಗ ಅಂದರೆ, ಅದನ್ನು ಈಗಾಗಲೇ ನೀವು ಸಾವಿರ ಸಲ ನೋಡಿದ್ದರೂ ಆ ಸಂಜೆಯು ನೀವು ಹಿಂದೆ ನೋಡಿದ ಯಾವುದೇ ಸಂಜೆಯಂತೆ ಇರುವುದಿಲ್ಲ. ಕಾಲ ಸರಿಯುತ್ತಿದ್ದಂತೆ, ನನ್ನ ತಂದೆಯಂತೆ ನಾನೂ ಹೀಗೆ ಮಾಡುವುದರಲ್ಲಿರುವ ಭಾವೋತ್ಸಾಹವನ್ನು ಸವಿಯಲಾರಂಭಿಸಿದೆ. ಮತ್ತು, ನನ್ನ ಶಿಕಾರಿಜೀವನದ ಕೊನೆಯ ದಿನಗಳಲ್ಲಿ ನಾನು ಏನನ್ನು ಗುಂಡಿಕ್ಕಿ ಕೊಲ್ಲದಿದ್ದರೂ ನನಗೆ ಬೇಸರವೆನ್ನಿಸುತ್ತಲೇ ಇರಲಿಲ್ಲ.
ನೆರಳುಗಳು ಉದ್ದವಾಗುವುದನ್ನು ಮೊದಲು ಘೋಷಿಸುವ ಜೀವಗಳು ಅಂದರೆ ರೆಕ್ಕೆಯುಳ್ಳ ಜೀವಪ್ರಬೇಧಗಳು. ರೆಡ್ ಜಂಗಲ್ ಫೌಲ್ ಮತ್ತು ಪೀಫೌಲ್ ರಾತ್ರಿಯ ವಿಶ್ರಾಂತಿಗೆ ತಯಾರಾಗುತ್ತಿದ್ದಂತೆ ತಮ್ಮ ವಿಶಿಷ್ಟ ಕೂಗನ್ನು ಮೊಳಗಿಸುತ್ತವೆ. ಹಕ್ಕಿಗಳಲ್ಲಿ ಹೆಚ್ಚಿನವು ಹಗಲುಸಂಚಾರಿಗಳು. ಇವುಗಳ ಹಗಲಿನ ಹರಟೆ ಮತ್ತು ದಿನಾಂತ್ಯದ ಹಾಡಿನ ಕಲರವಗಳ ಜಾಗದಲ್ಲಿ ರಾತ್ರಿ ಸಮೀಪಿಸುತ್ತಿದ್ದಂತೆ, ಗೂಬೆ ಮತ್ತು ನತ್ತಿಗ ಕುಟುಂಬದ ಹಕ್ಕಿಗಳ ತುಸು ವಿಷಣ್ಣ ಸ್ವರಗಳು ಕೇಳಿಸಲಾರಂಭಿಸುತ್ತವೆ. ಗೂಬೆಗಳು ಕೆಳದನಿಯಲ್ಲಿ ಭಯ ಹುಟ್ಟಿಸುವಂತೆ ಗೋಳುಕರೆಯನ್ನು ಹೊಮ್ಮಿಸಿದರೆ, ನತ್ತಿಗ ಹಕ್ಕಿಗಳ ಮೃದುವಾದ ‘ಚಕ್…ಚಕ್’ ದನಿಯ ಗತಿಯು ಒಂದು ಸಣ್ಣ ಯಂತ್ರದ ಶಬ್ದದಂತೆ ಕೇಳಿಸುವ ತನಕ ಹೆಚ್ಚಾಗುತ್ತ ಹೋಗುತ್ತದೆ, ಆಮೇಲೆ ನಿಧಾನವಾಗಿ ನಿಂತುಹೋಗುತ್ತದೆ. ಸಸ್ತನಿಗಳಿಗೆ ಅವುಗಳದೇ ಹಸ್ತಾಕ್ಷರವೆನ್ನಬಹುದಾದ ದನಿ ಇರುತ್ತದೆ. ತನ್ನ ಸೋದರ ಸಸ್ಯಹಾರಿ ಕುಲಕ್ಕೆ ಅವು ತೆಗೆದುಕೊಳ್ಳಬೇಕಾದ ಪ್ರತೀಕಾರದ ಬಗ್ಗೆ ಎಚ್ಚರಿಕೆ ನೀಡುವ ಸಾಂಬಾರ್ನ ಘಂಟಾಧ್ವನಿ, ಇದನ್ನು ಚುಕ್ಕಿಜಿಂಕೆಯ ತೀಕ್ಷ್ಣ ಕೂಗು ಪ್ರತಿಧ್ವನಿಸುತ್ತದೆ. ಎಷ್ಟೋ ಸಲ ಗಮನಿಸಿದ್ದೇನೆ, ಕಾಡಿನಲ್ಲಿ ಆನೆಗಳಿವೆ ಎಂಬುದನ್ನು ಬಿಟ್ಟುಕೊಡುವ ಒಂದೇ ಒಂದು ವಿಷಯ ಅಂದರೆ ಕೊಂಬೆಗಳು ಮುರಿಯುವ ಶಬ್ದ ಅಷ್ಟೆ. ಯಾಕೆಂದರೆ, ಆನೆಗಳು ನಿಶ್ಯಬ್ದವಾಗಿ ಆಹಾರ ಸೇವಿಸುವಂಥ ಪ್ರಾಣಿಗಳು. ಮಿಲನಗೊಳ್ಳುವ ಸಂದರ್ಭವನ್ನು ಬಿಟ್ಟರೆ ಹುಲಿಗಳು ಮತ್ತು ಚಿರತೆಗಳು ತೀರಾ ಮೌನಿಗಳು. ಕರಡಿಗಳು, ಕತ್ತೆಕಿರುಬಗಳು, ನರಿಗಳು ಮಾಡುವ ಸದ್ದುಗಳು ತುಂಬಾ ದೂರದಿಂದ ಕೇಳಿಸುವಷ್ಟು ಗಟ್ಟಿಯಾಗಿರುವುದಿಲ್ಲ. ಸಾಂಬಾರ್ನ ಘಂಟಾನಾದ, ಚುಕ್ಕಿಜಿಂಕೆಯ ತೀಕ್ಷ್ಣ ಕೂಗು, ಬೊಗಳುವ ಜಿಂಕೆಯ ಗೊಗ್ಗರುದನಿಯ ಕೂಗು – ಇವೆಲ್ಲವೂ ಕೊಂದು ತಿನ್ನುವ ಪ್ರಾಣಿಯ ಆಗಮನವನ್ನು ಸೂಚಿಸುತ್ತವೆ. ಈ ಸಸ್ಯಾಹಾರಿಗಳು ಚಿರತೆ ಬಂದಾಗಲೂ ಕೂಗುತ್ತವೆ. ಆದರೆ, ಒಬ್ಬ ಅನುಭವೀ ಬೇಟೆಗಾರ ಮಾತ್ರ ಅವುಗಳ ದನಿಯಿಂದ ವ್ಯಕ್ತವಾಗುವ ಭಾವೋದ್ರೇಕ ಮತ್ತು ಚಡಪಡಿಕೆಗಳಿಂದ ಹುಲಿ ಅಥವಾ ಚಿರತೆಯು ಅವುಗಳ ಕೂಗಿಗೆ ಕಾರಣವೇ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಲ್ಲ. ನರಿಗಳು ಕೂಡ ಅಪಾಯದ ಸುಳಿವು ಸಿಕ್ಕಿದಾಗ ತಾರಸ್ವರದಲ್ಲಿ ಊಊಊಊ… ಎಂದು ಈ ಭೂಮಿಯದ್ದೇ ಅಲ್ಲವೆಂಬಂಥ ಕೂಗು ಕೂಗುತ್ತವೆ. ಕಾಡುಗಳಲ್ಲಿ ಯಾವಾಗಲೂ ಸ್ಪಷ್ಟವಾಗಿ ಕಾಣಸಿಗುವ ಸಂಗತಿಯೆಂದರೆ, ತನ್ನ ಭಾವೋದ್ರೇಕವನ್ನು ಗೊಗ್ಗರು ದನಿಯ ಮೂಲಕ ತೋರಿಸುವುದರಲ್ಲಿ ಎಂದೂ ಹಿಂದೆ ಬೀಳದ ಉದ್ದಬಾಲದ ಮಂಗನ ಕಾವಲುಕಹಳೆ. ಹೆಣ್ಣುನವಿಲು ಅಥವಾ ಕಾಡುಕೋಳಿಯ ಕೂಗು ಅಷ್ಟು ವಿಶ್ವಾಸಾರ್ಹವಲ್ಲ. ಏಕೆಂದರೆ, ಅವು ಒಂದು ಮುಂಗುಸಿ ಬಂದರೂ ತೀರಾ ಗಾಬರಿಬಿದ್ದ ದನಿಯಿಂದ ಕೂಗುತ್ತವೆ. ಆದರೆ, ಪ್ರತಿ ಶಬ್ದವೂ ಒಂದು ಅಮೂಲ್ಯ ಹಿಮ್ಮಾಹಿತಿಯೇ (ಫೀಡ್ಬ್ಯಾಕ್) – ಈ ಶಬ್ದಗಳು ತುಂಬ ಭಾವೋತ್ಸಾಹ ಮೂಡಿಸುತ್ತವೆ ಎಂಬುದು ಖಂಡಿತ ನಿಜವಾದರೂ. ಒಂದು ಕಾಡುಪ್ರಾಣಿ ಅದು ಯಾವ ಪ್ರಾಣಿಯಾದರೂ ಆಗಲಿ, ನೀವು ಕುಳಿತಿರುವ ಜಾಗದ ಹತ್ತಿರ ಬಂದಾಗ ನಿಮ್ಮ ಮನಸ್ಸು ಭಾವನೆಯಿಂದ ತುಂಬಿಹೋಗುವುದಕ್ಕೆ ಇದು ಯಾವತ್ತೂ ಸಮವಲ್ಲ. ನಿಜ, ಹುಲಿ, ಚಿರತೆ, ಅಥವಾ ಆನೆ ಬಂದರೆ ನಿಮ್ಮ ರಕ್ತದಲ್ಲಿನ ರಸದೂತಗಳು (ಆಡ್ರಿನಾಲಿನ್) ಸೂರು ಹಾರಿಹೋಗುವಷ್ಟು ವೇಗವಾಗಿ ದೌಡಾಯಿಸಬಹುದು, ಆದರೂ ಮುಸುಗರಿಯುತ್ತ, ದೂರುತ್ತ ಆಹಾರ ಹುಡುಕಿಕೊಂಡು ನೀವು ಕುಳಿತಿರುವ ಮರದಡಿಯೇ ಬಂದ ಒಂದು ಕಾಡುಕರಡಿಯು ಸಹ ನಿಮಗೆ ಅತೀವ ಹಿಗ್ಗಿನ ಕ್ಷಣಗಳನ್ನು ನೀಡುತ್ತದೆ. ಆ ಗಾಳಿಯಲ್ಲೇ ಒಂದು ಗಾರುಡಿ ಇರುತ್ತದೆ ಮತ್ತು ಯಾವ ವ್ಯಕ್ತಿಗಳು ಇದನ್ನೆಂದೂ ಅನುಭವಿಸಿಲ್ಲವೋ ಅವರ ಮಟ್ಟಿಗೆ ಇದು ನಿಜವಾಗಿಯೂ ಎಂದೂ ತುಂಬಲಾರದ ನಷ್ಟ ಅನ್ನುತ್ತೇನೆ ನಾನು.
ಕಾಡುಗಳಲ್ಲಿ ಕಾಡುಪ್ರಾಣಿಗಳು ಮಾತ್ರ ಅತಿ ಖುಷಿ ನೀಡುವ ಸಂಗತಿಗಳು ಎಂದು ಸುಮ್ಮನೆ ಸೂಚಿಸುವುದು ಕೂಡ ಅನ್ಯಾಯ. ಊಹೂಂ, ಹೀಗಲ್ಲವೇ ಅಲ್ಲ. ನೂರಾರು ವರ್ಷ ವಯಸ್ಸಾಗಿರುವ ಮರಗಳು, ಕೆಲವು ಇನ್ನೂ ಭದ್ರವಾಗಿ ನಿಂತಿದ್ದರೆ ಇನ್ನು ಕೆಲವು ನೆಲಕ್ಕೆ ಬಿದ್ದು ಒರಗಿರುತ್ತವೆ. ಸುತ್ತುವರಿದಿರುವ ಬಳ್ಳಿಗಳು ಮತ್ತು ಪರಾವಲಂಬಿ ಲತೆಗಳು, ಪೊದೆ, ಪೊದರುಗಳಲ್ಲಿ ಬೆಳೆಯುವ ಕಾಡು ಹೂಗಳು, ಸಸ್ಯಾಹಾರಿ ಜೀವಿಗಳಿಗೆ ಆಹಾರ ನೀಡುವ ಅಂಜೂರ ಮರದಂಥ ಹಣ್ಣು ಬಿಡುವ ಮರಗಳು. ಒಣಗಿದ ನದಿಪಾತ್ರಗಳು, ಮರಳುಯುಕ್ತ ನಾಲೆಗಳು (ನುಲ್ಲಾ), ಕಡಿದಾದ ಕಲ್ಲುಳ್ಳ ಪ್ರಪಾತಗಳು, ನಿರ್ಜನ ನೀರ್ದಾಣಗಳು, ಹಸಿರು ಬಣ್ಣದ ಕಾಡಿನ ಕೆರೆಗಳು – ಇವೆಲ್ಲವೂ ಕಾಲ್ನಡಿಗೆಯಲ್ಲಿ ನೀವು ಸಂಚರಿಸುವಾಗ ನಿಮ್ಮನ್ನು ಇದಿರುಗೊಳ್ಳುವ ನಿಗೂಢಗಳು ಮತ್ತು ಭಾವೋತ್ಸಾಹದ ಭಾಗಗಳು; ಹೀಗೆ ನಡೆಯುತ್ತಿದ್ದಾಗ, ಒಂದೇ ಪ್ರಾಣಿಯನ್ನು ಎರಡು ದಿನ ನೋಡಿದರೆ ಆ ಅನುಭವ ಒಂದು ದಿನದಂತೆ ಇನ್ನೊಂದು ದಿನ ಇರುವುದಿಲ್ಲ. ಪ್ರತಿ ಸಲವೂ ಅದು ಹೊಸ ಅನುಭವವೇ ಆಗಿರುತ್ತದೆ.
ಭಾರತದಲ್ಲಿ ಬೇಟೆಯಾಡುವ ಅದೃಷ್ಟ ಹೊಂದಿದ ಯಾರೇ ಆದರೂ, ಪ್ರಪಂಚದಲ್ಲಿನ ಅತ್ಯಂತ ಭಾವೋತ್ಸಾಹ ಮತ್ತು ರೋಮಾಂಚನಗಳನ್ನು ನೀಡುವಂಥ ಕ್ರೀಡೆಗಳಲ್ಲಿ ಇದೊಂದು ಎಂಬ ನನ್ನ ಮಾತನ್ನು ಒಪ್ಪುತ್ತಾರೆ. ಆದರೂ, ತುಂಬ ಜನರು ತಿಳಿಯುವಂತೆ, ನನ್ನ ಎಲ್ಲ ಶಿಕಾರಿ ಪ್ರಯಾಣಗಳು ಕೇವಲ ಬೇಟೆಯ ಉದ್ದೇಶ ಹೊಂದಿರುತ್ತಿರಲಿಲ್ಲ. ಪ್ರಬಲವಾದ ಬಂದೂಕನ್ನು ಹಿಡಿದು ಅದನ್ನು ಆರಾಮವಾಗಿ ಉಪಯೋಗಿಸಬಲ್ಲ ಆತ್ಮವಿಶ್ವಾಸ ಹೊಂದಿದ್ದ ಚಿಗುರುಮೀಸೆಯ ಹುಡುಗನಾಗಿದ್ದಾಗಲೂ, ವನ್ಯಜೀವಿಗಳನ್ನು ಕೇವಲ ನೋಡಿ ಖುಷಿಪಡುವ ಪ್ರಯಾಣಗಳು ನನಗಿಷ್ಟವಾಗುತ್ತಿದ್ದವು. ಸಂರಕ್ಷಣೆಯ ಬಗ್ಗೆ ಉಪದೇಶ ಮಾಡಲು ಅಥವಾ ಅದನ್ನು ಕುರಿತು ನನ್ನೊಂದಿಗೆ ಮಾತಾಡಲು ಯಾವುದೇ ವ್ಯಕ್ತಿಯ ಅಗತ್ಯ ನನಗಿರಲಿಲ್ಲ. ನಾನು ದೇವರಬೆಟ್ಟಕ್ಕೆ ಸೈಕಲ್ ಮೇಲೆ ಹೋಗಿ ಸೈಕಲ್ಲನ್ನು ಪ್ರವಾಸಿ ಮಂದಿರದಲ್ಲಿ ಬಿಟ್ಟು, ಆ ಕಾಡಿನ ಮೂರು ನೀರ್ದಾಣಗಳಲ್ಲಿ ಒಂದರ ಬಳಿ ರಾತ್ರಿಯೆಲ್ಲ ಕುಳಿತು ಏಕಾಂತವನ್ನು, ಪ್ರಕೃತಿಯನ್ನು ಸವಿದ ಸಂದರ್ಭಗಳಿದ್ದವು. ಪ್ರವಾಸಿ ಮಂದಿರವು ಹಳ್ಳಿಯಿಂದ ಸಾಕಷ್ಟು ದೂರದಲ್ಲಿದ್ದುದರಿಂದ ನನಗೆ ಬುತ್ತಿ – ಸಾಮಾನ್ಯವಾಗಿ ವಿಂಡಾಲು ಮತ್ತು ಚಪಾತಿ – ಕಟ್ಟಿಕೊಂಡು ಹೋಗುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಅದು ಎರಡು ದಿನ ಇರುತ್ತಿತ್ತು ಮತ್ತು ನನಗೆ ಅದು ಬಿಟ್ಟು ಬೇರೇನೂ ಸಿಗುತ್ತಿರಲಿಲ್ಲ! ಆ ದಿನಗಳಲ್ಲಿ ಬೆಣ್ಣೆಯು ಟಿನ್ಡಬ್ಬಗಳಲ್ಲಿ ಸಿಗುತ್ತಿತ್ತು ಮತ್ತು ಒಂದು ಸಲ ಮುಚ್ಚಳ ತೆಗೆದಿಟ್ಟರೆ ಬಿಸಿಯಾದ ಹವಾಮಾನದಿಂದಾಗಿ ಹಾಳಾಗಿಬಿಡುತ್ತಿತ್ತು. ಆದಕ್ಕಾಗಿ ನಾನು ಇಡೀ ಡಬ್ಬವನ್ನು ಒಂದು ದಿನದಲ್ಲೇ ಮುಗಿಸಿಬಿಡುತ್ತಿದ್ದೆ!
ನಾನು ಅವನತಮುಖಿಯಾದ ಸ್ವಾರ್ಥಿ ಜೀವನ ಮಾಡಿದ್ದೇನೆ. ನನಗೆ ಬೇಕಾದ್ದನ್ನು ಪಡೆದುಕೊಂಡಿದ್ದೇನೆ ಮತ್ತು ನನಗೆ ಬೇಕಾದ್ದನ್ನು ಮಾಡಿದ್ದೇನೆ. ನಾನು ಕೆಟ್ಟದಾಗಿ ಮಾತಾಡುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು; ಆದರೆ, ನಾನು ಬದುಕಿದ ರೀತಿಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ ಅಷ್ಟೆ. ನನಗೋಸ್ಕರ ಮಾಡಿಕೊಂಡ ನಿಯಮಗಳನ್ನು, ನನ್ನನ್ನು ಬಿಟ್ಟು ಬೇರೆ ಯಾವುದೇ ಜೀವಿಯ ಬಗ್ಗೆ ನನಗೆ ಕಿಂಚಿತ್ತೂ ಗೌರವವಾಗಲೀ, ಕಾಳಜಿಯಾಗಲೀ ಇಲ್ಲದೆ ಇದ್ದದ್ದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅರಣ್ಯದಲ್ಲಿ ನನ್ನ ಬಂದೂಕಿನೊಂದಿಗೆ ನಾನಿದ್ದಾಗ ಒಂದು ನಿರ್ವಾಣದ ಸ್ಥಿತಿಯನ್ನು ಮುಟ್ಟಿರುತ್ತಿದ್ದೆ. ಏಕೆಂದರೆ ನಾನೇ ದೇವರು ಎಂಬ ಭಾವನೆ ಆಗ ನನ್ನಲ್ಲಿರುತ್ತಿತ್ತು. ಒಬ್ಬ ಶಿಕಾರಿಯಾಗಿ ನನ್ನ ಕೌಶಲ್ಯದ ಬಗ್ಗೆ ನನಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ, ಯಾವ ಪ್ರಾಣಿಯೂ ಎಂದೂ ನನ್ನನ್ನು ಗಾಯಗೊಳಿಸಲಾರದು ಎಂದು ನನಗೆ ಗೊತ್ತಿತ್ತು. ಹೀಗಾಗಿ, ಆ ಕಾಲದಲ್ಲಿ ನಾನು ನಿಜಕ್ಕೂ ದೊಡ್ಡ-ದೊಡ್ಡ ಗಂಡಾಂತರಗಳಿಗೆ ನಾನೇ ಹೋಗಿ ಸಿಕ್ಕಿ ಹಾಕಿಕೊಂಡೆ. ಒಬ್ಬರಿಗೆ ತೋರಿಸಲು ಸಹಿತ ಆ ಕಾಲದಲ್ಲಿ ಉಂಟಾದ ಒಂದೇ ಒಂದು ಗೀರುಗಾಯ ನನ್ನ ಮೈಮೇಲೆ ಇಲ್ಲ ಮತ್ತು ಇದು ಏಕೆ, ಹೇಗೆ ಎಂಬುದಕ್ಕೆ ನನ್ನಲ್ಲಿ ವಿವರಣೆಯಿಲ್ಲ. ನನ್ನ ತಂದೆ-ತಾಯಿಗಳು ಕೂಡ ನಾನು ಅಜೇಯ ಎಂದು ಭಾವಿಸಿದ್ದರೇನೋ. ಹಾಗಾಗಿ, “ಹುಷಾರಾಗಿರು…” ಎಂಬಿತ್ಯಾದಿ ಮಾತುಗಳನ್ನು ಎಂದೂ ಅವರು ಆಡುತ್ತಿರಲಿಲ್ಲ. ಇದನ್ನು ನಾನು ಅದೃಷ್ಟ ಅಥವಾ ಕರ್ಮ ಎಂದು ಕರೆಯುವುದಿಲ್ಲ, ಅಥವಾ ಶಿಕಾರಿ ಜಾಡುತೋರುಗರು (ಶಿಕಾರಿ ಮಾರ್ಗದರ್ಶಕರು) ಇದಕ್ಕೆ ಕಾರಣ ಎಂದು ಹೇಳುವುದಿಲ್ಲ, ಅಥವಾ ಜಾಡು ಹಿಡಿಯುವುದರಲ್ಲಿ ಇಲ್ಲವೇ ಬಂದೂಕನ್ನು ಬಳಸುವುದರಲ್ಲಿನ ನನ್ನ ಕೌಶಲಗಳ ಕಡೆಗೂ ನಾನು ಬೆರಳು ತೋರಿಸುವುದಿಲ್ಲ. ಏಕೆಂದರೆ, ಇದಕ್ಕೆ ಯಾವುದೇ ತಾರ್ಕಿಕ ವಿವರಣೆ ಇಲ್ಲ. ಸರಾಸರಿಗಳ ನಿಯಮಾನುಸಾರ ನೋಡುವುದಾದರೆ, ನನಗೆ ಒಂದು ಡಝನ್ ಗಂಭೀರ ಗಾಯಗಳಾಗಿರಬೇಕಿತ್ತು. ಆದರೆ, ನನಗೆ ಯಾವತ್ತೂ ಒಂದು ಗಾಯವೂ ಆಗಲಿಲ್ಲ. ಶಿಕಾರಿಯಾಗಿ ನಾನು ಕೆಲವು ನಿಯಮಗಳನ್ನು ಹಾಕಿಕೊಂಡಿದ್ದೆ; ನಾನು ಹೆಣ್ಣುಪ್ರಾಣಿಗಳನ್ನಾಗಲೀ, ಮರಿಗಳನ್ನಾಗಲೀ ಯಾವತ್ತೂ ಕೊಲ್ಲಲಿಲ್ಲ ಅಥವಾ ಗೂಡುಗಳಿಂದ ಮೊಟ್ಟೆಗಳನ್ನು ಕದಿಯಲಿಲ್ಲ. ಆದರೆ, ಇದು ನಾನು ಮಾಡಿದ ಕೆಲಸಗಳಿಂದ ನನ್ನನ್ನು ಮುಕ್ತಗೊಳಿಸುವುದಿಲ್ಲ. ಏಕೆಂದರೆ, ಪರವಾನಗಿ ಇದ್ದು ಬೇಟೆಯಾಡುವುದಕ್ಕೂ ಇಲ್ಲದೆ ಬೇಟೆಯಾಡುವುದಕ್ಕೂ ಇರುವ ಒಂದೇ ಒಂದು ವ್ಯತ್ಯಾಸವೆಂದರೆ, ಒಂದು ಕಾಗದದ ಹಾಳೆ ಮತ್ತು ಕೊಂದ ಜೀವಿಗಳ ಸಂಖ್ಯೆ ಅಷ್ಟೆ ಎಂಬುದು ನನಗೆ ಅರ್ಥವಾಗಿದೆ.
ನನಗೆ ಎಂದೂ ಗಂಭೀರವಾದ ಗಾಯಗಳಾಗಲಿಲ್ಲವಾದರೂ ಇದೇ ಮಾತನ್ನು ನನ್ನ ಒಡನಾಡಿಗಳ ಬಗ್ಗೆ ಹೇಳಲಾಗುವುದಿಲ್ಲ. ಎಪ್ಪತ್ತರ ದಶಕದ ಕೊನೆಯ ವರ್ಷಗಳಲ್ಲಿ ಬಂಡೀಪುರದಲ್ಲಿ ನಡೆದ ಒಂದು ದುರದೃಷ್ಟಕರ ಘಟನೆಯ ಬಗ್ಗೆ ನಿಮಗೆ ಹೇಳುತ್ತೇನೆ. ಶಾಲೆಯಲ್ಲಿ ನನಗೆ ಸಹಪಾಠಿಯಾಗಿದ್ದ ಸ್ನೇಹಿತನೊಬ್ಬ ಆಸ್ಟ್ರೇಲಿಯಾದಿಂದ ಬಂದಿದ್ದ. ಕೆಲವು ಛಾಯಾಚಿತ್ರಗಳನ್ನು ತೆಗೆಯಲು ಅವನು ಬಯಸಿದ್ದರಿಂದ ಅವನನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಲು ನಾನು ನಿರ್ಧರಿಸಿದೆ. ಅವನಿಗೆ ಮೋಟಾರ್ಸೈಕಲ್ ಮೇಲೆ ಹೋಗುವುದು ಅಷ್ಟು ಇಷ್ಟವಿರದಿದ್ದ ಕಾರಣ ನಾವು ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡೆವು. ಆದರೆ, ಆ ಟ್ಯಾಕ್ಸಿ ಚಾಲಕನು ನಮ್ಮನ್ನು ಕರೆದುಕೊಂಡು ಹೋಗಲು ಗಾಡಿ ತಂದಾಗ, ನಾವು ಮೂವರನ್ನು ಬಿಟ್ಟು ಕಾರಿನಲ್ಲಿ ಇನ್ನೂ ಒಬ್ಬ ವ್ಯಕ್ತಿ ಇರುವುದನ್ನು ನಾನು ಗಮನಿಸಿದೆ. ಆ ವ್ಯಕ್ತಿಯನ್ನು ನಮ್ಮ ಜೊತೆಗೆ ಕರೆದುಕೊಂಡು ಹೋಗಲು ಆ ಚಾಲಕನು ಬೇಡಿಕೊಂಡ. ಏಕೆಂದರೆ, ಅರಣ್ಯದ ನಡುವೆ ನಾವು ಗಾಡಿಯಲ್ಲಿ ಹೋಗುತ್ತಿದ್ದ ಕಾರಣ ಅವನ ಧೈರ್ಯ ಕೈಕೊಟ್ಟಿತ್ತು. ನನಗೆ ಅಷ್ಟೇನೂ ಇಷ್ಟವಿರಲಿಲ್ಲವಾದರೂ ಆ ವ್ಯಕ್ತಿ ನಮ್ಮೊಂದಿಗೆ ಬಂದ. ಆ ಸಂಜೆ ನಾವು ಕಾರಿನಲ್ಲಿ ಓಡಾಡಿ ಛಾಯಾಚಿತ್ರಗಳನ್ನು ತೆಗೆದುಕೊಂಡ ನಂತರ, ಅಂದು ಇಳಿದುಕೊಳ್ಳಲು ಕಾದಿರಿಸಿದ್ದ ಸ್ಥಳಕ್ಕೆ ಬಂದೆವು. ಬಂದವರು, ಹೊಟ್ಟೆಗೆ ಏನಾದರೂ ತೆಗೆದುಕೊಳ್ಳೋಣವೆಂದು ನಿರ್ಧರಿಸಿದೆವು. ಚಾಲಕ ಮತ್ತು ಅವನ ಸ್ನೇಹಿತನು ಬೀಡಿ ಸೇದಬಯಸಿದ್ದರಿಂದ ನಾವು ಊಟಿ–ಮೈಸೂರು ಹೆದ್ದಾರಿಯ ಬದಿಯಲ್ಲಿನ ಚಿಕ್ಕ ಚಹಾ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿದೆವು. ಆಗ ತುಂಬ ತಡವಾಗಿತ್ತು. ಆ ಚಹಾ ಅಂಗಡಿಯ ಅಂದಿನ ಕೊನೆಯ ಗಿರಾಕಿಗಳಿರಬೇಕು ನಾವು. ಒಂದೇ ಒಂದು ಪಟ್ರೋಮ್ಯಾಕ್ಸ್ ಲಾಟೀನು ಹಚ್ಚಿದ್ದ ಅಂಗಡಿ ಅದು. ಕೊನೆಯ ಬೀಡಿತುಂಡನ್ನು ತುಳಿದು ನಂದಿಸಿಯಾಯಿತು. ನಾವು ಚಹಾ ಕುಡಿದು ಮುಗಿಸಿಯಾಯಿತು. ನಂತರ, ನಾವು ಕಾರಿನ ಕಡೆಗೆ ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಕೋಪೋದ್ರಿಕ್ತ ಆನೆಯ ಘೀಳು ಕೇಳಿಸಿತು ಮತ್ತು ಒಂದು ಗಂಡಾನೆ ಚಹಾ ಅಂಗಡಿಯ ಹಿಂದಿನಿಂದಲೇ ಎಂಬಂತೆ ನಮ್ಮ ಕಡೆಗೇ ಓಡಿಬರುವುದು ಕಾಣಿಸಿತು. ನಾನು ಮತ್ತು ನನ್ನ ಸ್ನೇಹಿತ ಆಗಲೇ ಸ್ವಲ್ಪ ದೂರ ಹೋಗಿದ್ದೆವು ಮತ್ತು ತಕ್ಷಣ ಓಟ ಕಿತ್ತೆವು. ನಾವು ಬೇರೆ-ಬೇರೆ ದಿಕ್ಕಿನಲ್ಲಿ ಓಡಿ ಸ್ವಲ್ಪ ದೂರದಲ್ಲಿ ನಮಗೆ ಕಾಣುತ್ತಿದ್ದ ಕಟ್ಟಡಗಳತ್ತ ಧಾವಿಸಿದೆವು. ಚಾಲಕನು ಅಂಬಾಸಿಡರ್ ಕಾರಿನ ಪಕ್ಕದಿಂದ ಮತ್ತು ಕಟ್ಟಡಗಳಿಂದ ದೂರಕ್ಕೆ ಓಡಿದ. ಬಹುಶಃ ಸಂಪೂರ್ಣ ಕಾಳಗತ್ತಲೆಯಲ್ಲಿ ಆನೆಗೆ ತಾನು ಕಾಣಿಸಲಿಕ್ಕಿಲ್ಲ ಎಂದು ಅವನು ಭಾವಿಸಿರಬೇಕು. ದುರದೃಷ್ಟವಶಾತ್ ಅವನ ಜೊತೆಗಾರನು – ಅತ್ಯಂತ ಸುರಕ್ಷಿತ ಜಾಗ ಅಂದರೆ ಕಾರಿನ ಒಳಗಡೆ ಇರುವುದು ಎಂದು ಭಾವಿಸಿ, ಕಾರು ಇದ್ದ ಸ್ಥಳ ತಲುಪಿ, ಅದರ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ. ಅದೇನು ದುರದೃಷ್ಟವೋ ನೋಡಿ… ಆ ಇಡೀ ಪ್ರವಾಸದಲ್ಲಿ ನಾವು ಕಾರಿನ ಬಾಗಿಲುಗಳಿಗೆ ಬೀಗ ಹಾಕಿದ ಏಕೈಕ ಸನ್ನಿವೇಶ ಅದು! ಆದರೆ, ಕಾರಿನ ಬಾಗಿಲನ್ನು ತೆರೆಯಲು ಐದು ಅಥವಾ ಆರು ಕ್ಷಣಗಳ ಕಾಲ ಅವನು ಮಾಡಿದ ಪ್ರಯತ್ನವು ನಿರ್ಣಾಯಕವಾಗಿಬಿಟ್ಟಿತು. ನಮಗೆ ಏನೂ ಕಾಣಿಸಲಿಲ್ಲ ಅಥವಾ ಕೇಳಿಸಲೂ ಇಲ್ಲ. ಆದರೆ, ನಾವು ಮತ್ತೆ ಒಟ್ಟುಸೇರಿದಾಗ ಆ ಬಡಪಾಯಿಯು ಸತ್ತುಬಿದ್ದದ್ದನ್ನು ಗಮನಿಸಿದೆವು. ಬಹುಶಃ ಆನೆಯು ತನ್ನ ಸೊಂಡಿಲಿನಿಂದ ಅವನನ್ನು ನೆಲಕ್ಕೆ ಚಚ್ಚಿರಬೇಕು; ಏಕೆಂದರೆ, ಅವನ ನಿರ್ಜೀವ ದೇಹವು ಕಾರಿನಿಂದ ಕೆಲವು ಅಡಿಗಳ ದೂರದಲ್ಲಿ ಬಿದ್ದುಕೊಂಡಿತ್ತು. ಆ ದಿನಗಳಲ್ಲಿ ಅರಣ್ಯದಲ್ಲಿ ನಾವು ಮೈಮೇಲೆ ಎಳೆದುಕೊಂಡಂತಹ ಅಪಾಯಕರ ಪರಿಸ್ಥಿತಿಗಳು ನಮ್ಮ ಪ್ರಾಣವನ್ನೇ ತೆಗೆಯಬಹುದಿತ್ತು. ಈಗ ವಿವರಿಸಿದ ಘಟನೆ ಮತ್ತು ಮುಂದೆ ನಾನು ಹೇಳಲಿರುವ ಕೆಲವು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ.
ನೀವು ಅರಣ್ಯದಲ್ಲಿದ್ದಾಗ ಯಾವಾಗಲೂ ಮಾನಸಿಕವಾಗಿ, ದೈಹಿಕವಾಗಿ ಪೂರ್ವಸಿದ್ಧರಾಗಿರುವುದು ಒಳ್ಳೆಯ ವಿಚಾರ. ಅನುಭವಕ್ಕಿಂತ ಉತ್ತಮ ಶಿಕ್ಷಕ ಯಾವುದೂ ಇಲ್ಲ, ಹೌದು. ಆದರೆ, ಅಲ್ಲಿಗೆ ಮುಂಚೆ ಹೋದವರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುವುದು ಒಳ್ಳೆಯದು. ರೂಢಿಗತವಾಗಿ ಹೇಳುವುದಾದರೆ, ನೀವು ಸಂಪೂರ್ಣ ಕತ್ತಲಲ್ಲಿ ಪ್ರಾಣಿಯೊಂದನ್ನು ಬೇಟೆಯಾಡಲು ಕಾದು ಕೂತಿರುವಾಗ ನಿಮಗೆ ಹುಲಿ ಅಥವಾ ಚಿರತೆಯು ಬರುವ ಸದ್ದು ಕೇಳಿಸುವುದಿಲ್ಲ. ಅವುಗಳ ದೈತ್ಯ ಗಾತ್ರದ ಹೊರತಾಗಿಯೂ ಹೆಜ್ಜೆಗಳು ತುಂಬ ಮೃದು ಮತ್ತು ತಮ್ಮ ಬಲಿಪಶುವನ್ನು ಸಮೀಪಿಸುವುದರಲ್ಲಿ ತೀರಾ ಹಿಂಜರಿತ ಇರುತ್ತೆ ಅವಕ್ಕೆ. ಅದರಲ್ಲೂ, ನರಭಕ್ಷಕಗಳು ಮತ್ತು ಈಗಾಗಲೇ ಗುಂಡೇಟು ತಿಂದಿರುವ ಪ್ರಾಣಿಗಳ ಮಟ್ಟಿಗೆ ಈ ಮಾತು ಹೆಚ್ಚು ನಿಜ. ಆ ಮಾರ್ಜಾಲ ಜಾತಿಯ ಪ್ರಾಣಿಯು ತಿನ್ನಲು ಶುರುಮಾಡಿ, ತನ್ನ ಬಲಿಪಶುವಿನ ಮೂಳೆಗಳನ್ನು ಕರಕರನೆ ಅಗಿಯಲು ಶುರು ಮಾಡಿದಾಗ ಮಾತ್ರವೇ ಅವು ಇದ್ದಾವೆ ಎಂದು ನಿಮಗೆ ತಿಳಿಯುತ್ತದೆ. ಆ ಕಣ್ಣು ಕುರುಡಾಗಿಸುವ ಕತ್ತಲೆಯಲ್ಲಿ, ನಿಮ್ಮ ಟಾರ್ಚಿನ ದೀಪವನ್ನು ನೀವು ಬೆಳಗುವವರೆಗೆ ಅದು ಯಾವ ಕಡೆಗೆ ಮುಖ ಮಾಡಿದೆ ಎಂದು ನಿಮಗೆ ಗೊತ್ತಿರುವುದಿಲ್ಲ. ನೀವು ಅದರ ದೇಹದ ಕೆಲವು ನಿರ್ದಿಷ್ಟ ಬಿಂದುಗಳಿಗೆ ಮಾತ್ರ ಗುಂಡು ಹೊಡೆಯಬೇಕಿರುವುದರಿಂದ ಅದು ಯಾವ ಕಡೆಗೆ ಮುಖ ಮಾಡಿದೆ – ನಿಮ್ಮ ಕಡೆಗೋ ಅಥವಾ ನಿಮಗೆ ವಿರುದ್ಧ ದಿಕ್ಕಿನಲ್ಲಿಯೋ – ಎಂಬ ವಿಷಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ನಿಮಗೆ ಉಕ್ಕಿನ ನರಗಳಿರಬೇಕು ಮತ್ತು ನೀವು ಸಿದ್ಧರಾಗಿರಬೇಕು. ಏಕೆಂದರೆ, ನಿಮಗೆ ಅವಕಾಶ ಸಿಕ್ಕುವುದು ಒಂದೇ ಒಂದು ಗುಂಡು ಹೊಡೆಯಲು ಮಾತ್ರ. ಅದರ ಅರ್ಥವೇನೆಂದರೆ, ನೀವು ಅದರ ಸ್ಥಾನಸ್ಥಿತಿಯನ್ನು ಗಮನಿಸಬೇಕು, ಬಂದೂಕನ್ನೆತ್ತಬೇಕು, ಗುಂಡು ಹೊಡೆಯಬೇಕಾದ ಬಿಂದುವನ್ನು ಗುರುತು ಮಾಡಿಕೊಳ್ಳಬೇಕು, ಒಮ್ಮೆ ಉಸಿರು ಬಿಡಬೇಕು, ಹೊಡೆಯಬೇಕು, ಅಷ್ಟೆ. ನೀವು ಗುಂಡು ಹೊಡೆದು, ಮೊದಲನೇ ಗುಂಡಿಗೆ ಅದನ್ನು ಮಲಗಿಸದಿದ್ದರೆ, ಹಾಗೂ ಅದು ನಿಮ್ಮನ್ನು ನೋಡಿರದಿದ್ದರೆ ನೀವು ಗುಂಡು ಹೊಡೆದಾಗ ಆ ಪ್ರಾಣಿ ಯಾವ ದಿಕ್ಕಿಗೆ ಮುಖ ಮಾಡಿತ್ತೋ ಆ ಕಡೆಗೆ ಓಡುತ್ತದೆ. ಆದರೆ, ನೀವು ಸಮತಟ್ಟಾದ ನೆಲದ ಮೇಲಿದ್ದು, ಒಂದು ವೇಳೆ ಆ ಮಾರ್ಜಾಲ ನಿಮ್ಮ ಕಡೆಗೆ ಮುಖ ಮಾಡಿದ್ದರೆ ನೀವು ನಿಮ್ಮ ಜೀವನಕ್ಕೆ ವಿದಾಯ ಹೇಳಬೇಕು ಅಷ್ಟೆ. ಏಕೆಂದರೆ, ಕ್ಷಣ ಮಿಂಚುವುದರಲ್ಲಿ ಅದು ನಿಮ್ಮ ಮೇಲಿರುತ್ತದೆ.
ಕೆಲವು ದೊಡ್ಡ ಕಾಡುಪ್ರಾಣಿಗಳನ್ನು ಬೇಟೆಯಾಡಿ ಕೊಂದದ್ದನ್ನು ನಾನು ಜನರನ್ನು ರಕ್ಷಿಸಲು ಗೈದ ಸೇವೆ ಎಂದು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಅಸಲು ವಿಷಯವೆಂದರೆ, ಆ ದಿನಗಳಲ್ಲಿ ಹುಲಿಗಳು, ಚಿರತೆಗಳು, ಕಾಡುನಾಯಿಗಳನ್ನು ಕ್ರಿಮಿಕೀಟಗಳಂತೆ ಕಾಣಲಾಗುತ್ತಿತ್ತು ಹಾಗೂ ಬೇಟೆಗಾರರಿಗೆ ಇವುಗಳನ್ನು ಕೊಂದದ್ದಕ್ಕಾಗಿ ಬಹುಮಾನ ಕೊಡಲಾಗುತ್ತಿತ್ತು. ಕರಡಿಗಳು ಮತ್ತು ಕಾಡುಹಂದಿಗಳನ್ನು ‘ಬೇಟೆಯೋಗ್ಯ’ ಪ್ರಾಣಿಗಳು ಎಂದು ಪರಿಗಣಿಸಲಾಗುತ್ತಿರಲಿಲ್ಲ ಮತ್ತು ಅವುಗಳನ್ನು ಬೇಟೆಯಾಡಲು ಯಾರಿಗೂ ಆಸಕ್ತಿ ಇರುತ್ತಿರಲಿಲ್ಲ. ವಿವರಣೆಗೆ ಮೀರಿದ ಯಾವುದೋ ಒಂದು ರೀತಿಯಲ್ಲಿ, ಆನೆಗಳನ್ನು 1873ರಿಂದಲೇ ಸಂರಕ್ಷಿತ ಪ್ರಾಣಿಗಳು ಎಂದು ಪರಿಗಣಿಸಲಾಗಿತ್ತು. ಪುಂಡು ಬಿದ್ದ ಆನೆ ಎಂದು ಘೋಷಿಸದ ಹೊರತೇನಾದರೂ ಆನೆಯನ್ನು ಕೊಂದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಿತ್ತು. ಇಲ್ಲಿ ಮತ್ತೆ, ನಾನು ಕಾಯಿದೆಯ ಬಗ್ಗೆ ತೀರ್ಮಾನವನ್ನು ನೀಡುವುದಿಲ್ಲ. ಆದರೆ, ನನ್ನಂಥ ಶಿಕಾರಿಗಳು ಅರಣ್ಯ ಇಲಾಖೆಯು ಹಾಕಿರುವ ಕಟ್ಟುನಿಟ್ಟಾದ ನಿಯಮಗಳಿಗೆ ಅನುಸಾರವಾಗಿ ಬೇಟೆಯಾಡುತ್ತಿದ್ದೆವು. ಆದರೂ, ನಾವು ಮಾಡಿರುವ ಕೃತ್ಯಗಳಿಗಾಗಿ ಜನ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಬಹುದು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ