ನೆನಪು | ತೆಲುಗು ಜಾನಪದ ಕೋಗಿಲೆ ಗದ್ದರ್

Date:

Advertisements
ತೆಲುಗು ಕ್ರಾಂತಿಕಾರಿ ಕವಿ ಹಾಗೂ ಗಾಯಕ ಗದ್ದರ್ ಅವರ ಧ್ವನಿ ಈಗ ಸ್ತಬ್ಧವಾಗಿರಬಹುದು. ಆದರೆ, ಅವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ನೊಂದವರ ಮತ್ತು ಬೆಂದವರ ಕಥೆಯನ್ನು ಹಾಡಾಗಿಸಿ ರಚಿಸಿದ ದುರಂತ ಕಾವ್ಯಗಳು ಅವಿಭಜಿತ ಆಂಧ್ರಪ್ರದೇಶದ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ.

ಒಂದು ನೆಲದ ಶೋಷಣೆಯ ಕಥೆಯನ್ನು ಹಾಡುಗಬ್ಬವಾಗಿ ಪರಿವರ್ತಿಸಿ ಬದುಕಿನುದ್ದಕ್ಕೂ ಹಾಡುತ್ತಾ, ಕುಣಿಯುತ್ತಾ ಬದುಕಿದ್ದ ತೆಲುಗು ಕ್ರಾಂತಿಕಾರಿ ಕವಿ ಹಾಗೂ ಗಾಯಕ ಗದ್ದರ್ ಭಾನುವಾರ ಮಧ್ಯಾಹ್ನ ಹೈದರಾಬಾದಿನ ಅಪಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗದ್ದರ್ ಅವರ ಧ್ವನಿ ಈಗ ಸ್ತಬ್ಧವಾಗಿರಬಹುದು. ಆದರೆ, ಅವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ನೊಂದವರ ಮತ್ತು ಬೆಂದವರ ಕಥೆಯನ್ನು ಹಾಡಾಗಿಸಿ ರಚಿಸಿದ ದುರಂತ ಕಾವ್ಯಗಳು ಅವಿಭಜಿತ ಆಂಧ್ರಪ್ರದೇಶದ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ.

ಭಾಷೆಯ ಹಂಗಿಲ್ಲದೆ ಇಡೀ ದಕ್ಷಿಣ ಭಾರತದ ರಾಜ್ಯಗಳು ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ಒಡಿಸ್ಸಾ ರಾಜ್ಯಗಳಲ್ಲಿ ಓರ್ವ ಜನಪ್ರಿಯ ಗಾಯಕನಾಗಿ ರೂಪುಗೊಂಡ ಕೀರ್ತಿ ಗದ್ದರ್ ಅವರದು. ಆಂಧ್ರದ ನೆಲವು 1960 ರ ದಶಕದಿಂದಲೂ ಕ್ರಾಂತಿಗೀತೆಗಳ ಮಾತೃಭೂಮಿಯಂತಿದೆ. ಆ ನೆಲದಲ್ಲಿ ಜನಿಸಿದ ಶ್ರೀ ಶ್ರೀ, (ಶ್ರೀರಂಗಂ ಶ್ರೀನಿವಾಸ ರಾವ್), ಚಲಂ, ವರವರರಾವ್ ಹಾಗೂ ಗದ್ದರ್ ಸೇರಿದಂತೆ ನೂರಾರು ಕವಿಗಳನ್ನು ಹೆಸರಿಸಬಹುದು. ಗದ್ದರ್ ಅವರ ಸಾರ್ವಜನಿಕ ಬದುಕಿನ ಕಥನವೆಂದರೆ ಒಂದು ರೀತಿಯಲ್ಲಿ ಏಳುಬೀಳಿನ ಪಯಣ ಎನ್ನಬಹುದು.

ಈಗಿನ ತೆಲಂಗಾಣದ ಹಾಗೂ ಅತ್ಯಧಿಕ ದಲಿತರು ಇರುವ ಮೆಡಕ್ ಜಿಲ್ಲೆಯ ತೂಪ್ರಾನ್ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ 1949 ರಲ್ಲಿ ಜನಿಸಿದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲರಾವ್. ವಾರಂಗಲ್ ನಲ್ಲಿ ಇಂಜಿನಿಯರ್ ಓದುತ್ತಿದ್ದ ಅವರು ಪ್ರಜಾಸಮರಂ ಎಂಬ ನಕ್ಸಲ್ ಹೋರಾಟ ಹುಟ್ಟುಹಾಕಿದ ಕೊಂಡಪಲ್ಲಿ ಸೀತಾರಾಮಯ್ಯ ಮತ್ತು ಕೆ.ಸತ್ಯಮೂರ್ತಿ ಎಂಬ ನಾಯಕರಿಂದ ಪ್ರಭಾವಿತರಾಗಿ ಮಾರ್ಕ್ಸ್ ಮತ್ತು ಲೆನಿಲ್ ವಾದಿ ಕಮ್ಯೂನಿಸ್ಟ್ ಪಕ್ಷವನ್ನು ಸೇರಿ ಚಳವಳಿಯ ನಾಯಕನಾಗಿ ಮತ್ತು ಗಾಯಕನಾಗಿ ಗುರುತಿಸಿಕೊಂಡವರು.

Advertisements

ಆಂಧ್ರಪ್ರದೇಶದ ನಕ್ಸಲ್ ಹೋರಾಟಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಉತ್ತರ ಭಾಗದ ಗೋದಾವರಿ ನದಿಯಾಚೆಗಿನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನ್ದಾರರ ಅಟ್ಟಹಾಸ ಮತ್ತು ಕ್ರೌರ್ಯಗಳಲ್ಲಿ ನಲುಗಿಹೋಗಿದ್ದ ದಲಿತರು ಮತ್ತು ಆದಿವಾಸಿಗಳು, ಈ ರೀತಿಯ ಗುಲಾಮಗಿರಿಯ ಬದುಕು ನಮ್ಮ ಜನ್ಮಕ್ಕೆ ದೇವರು ನೀಡಿರುವ ಪ್ರಸಾದ ಎಂಬಂತೆ ಬದುಕಿದ್ದರು. 1960ರ ದಶಕದಲ್ಲಿ ಶ್ರೀಕಾಳುಂ ಜಿಲ್ಲೆಯಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದ ವೆಂಕಟಾಪು ಸತ್ಯನಾರಾಯಣ, ಪಂಚಡಿ ಕೃಷ್ಣಮೂರ್ತಿ ಎಂಬುವರು ಕೈಲಾಸಂ ಎಂಬ ಗೆಳೆಯನ ಜೊತೆಗೂಡಿ ಜಮೀನ್ದಾರರ ವಿರುದ್ಧ ಆದಿವಾಸಿಗಳನ್ನು ಸಂಘಟಿಸಿದರು.

ಎಚ್ಚೆತ್ತ ಆದಿವಾಸಿಗಳು ಮತ್ತು ಅಲ್ಲಿನ ದಲಿತ ಸಮುದಾಯದ ಮಾದಿಗರು ಜಮೀನ್ದಾರರ ವಿರುದ್ಧ ತಿರುಗಿಬಿದ್ದು ಒಬ್ಬೊಬ್ಬರನ್ನು ಹಿಡಿದು ಸಾರ್ವಜನಿಕವಾಗಿ ನೇಣಿಗೇರಿಸಿದರು. ಇದರ ಅಂತಿಮ ಫಲವೆಂಬಂತೆ ಸತ್ಯನಾರಾಯಣ, ಕೃಷ್ಣಮೂರ್ತಿ ಹಾಗೂ ಕೈಲಾಸಂ ಈ ಮೂವರೂ ಆಂಧ್ರ ಪೊಲೀಸರ ಗುಂಡಿಗೆ ಬಲಿಯಾದರು. ಶ್ರೀಕಾಕುಳಂ ಜಿಲ್ಲೆಯ ನೆಲದಲ್ಲಿ ಹೊತ್ತಿಕೊಂಡಿದ್ದ ಕ್ರಾಂತಿಯ ಕಿಡಿ ಆ ಕ್ಷಣದಲ್ಲಿ ತಣ್ಣಗಾದರೂ ಸಹ ಬೂದಿಮುಚ್ಚಿದ ಕೆಂಡದಂತೆ ಇದ್ದುಕೊಂಡು 1970 ರ ದಶಕದಲ್ಲಿ ಅದು ವಾರಂಗಲ್ ಜಿಲ್ಲೆಯಲ್ಲಿ ಸ್ಪೋಟಗೊಂಡಿತು.

ವಾರಂಗಲ್ ಜಿಲ್ಲಾ ಕೇಂದ್ರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯ ಮತ್ತು ಕೆ.ಸತ್ಯಮೂರ್ತಿ ಇವರಿಬ್ಬರೂ ಆಂಧ್ರ ನೆಲದ ದೀನ ದಲಿತರ ಧ್ವನಿಯಾಗಿ ಹೊರಹೊಮ್ಮಿದರು. ಜಮೀನ್ದಾರರ ವಿರುದ್ಧದ ಹೋರಾಟಕ್ಕೆ ಗಟ್ಟಿಯಾದ ಅಡಿಪಾಯ ಹಾಕುವ ನಿಟ್ಟಿನಲ್ಲಿ ಕೊಂಡಪಲ್ಲಿಯವರು 1972 ರಿಂದ ಜನನಾಟ್ಯಮಂಡಳಿ ಎಂಬ ಕಲಾವಿದರ ತಂಡವನ್ನು ಕಟ್ಟಿಕೊಂಡು ಅಲ್ಲಿನ ಕ್ರೌರ್ಯದ ಕಥೆಗಳನ್ನು ಜನತೆಗೆ ತಲುಪಿಸುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಈ ಕಲಾತಂಡದ ಹಾಡುಗಳು ಅನಕ್ಷರಸ್ಥರಾಗಿದ್ದ ಹಿಂದುಳಿದ ಸಮುದಾಯಗಳಿಗೆ ತಮ್ಮದೇ ಕಥೆಗಳಾಗಿದ್ದು, ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ನಾವು ಬಂಧಿಗಳಾಗಿದ್ದೀವಿ ಎಂಬ ಜಾಗೃತಿಯನ್ನು ಮೂಡಿಸಿತು.

ಇದನ್ನು ಓದಿದ್ದೀರಾ?: ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಅವರ ಜೈಲಿನ ಅನುಭವ ಕಥನ: ಪಂಜರದ ಬಣ್ಣಗಳು

ಕೊಂಡಪಲ್ಲಿಯವರ ಜನನಾಟ್ಯ ಮಂಡಳಿಯ ಪ್ರಮುಖ ಕೇಂದ್ರಬಿಂದುವಾಗಿ ಗದ್ದರ್ ಹೆಸರಿನಲ್ಲಿ ಗುರುತಿಸಿಕೊಂಡ ಮುಮ್ಮಡಿ ವಿಠಲರಾವ್ ನಂತರದ ದಿನಗಳಲ್ಲಿ ತಮ್ಮ ಕಂಠಸಿರಿಯ ಮೂಲಕ ಅಲ್ಲಿನ ಜನರ ಪ್ರೀತಿ ಗಳಿಸಿದರು. ಸತತ ಮೂರು ದಶಕಗಳ ಕಾಲ ಕಮ್ಯೂನಿಸ್ಟ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಅವರು ಸಹವರ್ತಿ ವರವರರಾವ್ ಜೊತೆಗೂಡಿ ನೂರಾರು ಕ್ರಾಂತಿಕಾರಿ ಕವಿತೆಗಳನ್ನು ರಚಿಸಿದರು. ತಮ್ಮ ಮೂವರು ಮಕ್ಕಳಿಗೆ ಚಂದ್ರುಡು, ಸೂರ್ಯಡು ಮತ್ತು ಸಿರಿವೆನ್ನಲ (ಚಂದ್ರ, ಸೂರ್ಯ ಮತ್ತು ಬೆಳದಿಂಗಳು) ಎಂದು ಹೆಸರಿಟ್ಟರು. ಗದ್ದರ್ ಅವರ ಹಾಡುಗಳು ಆಂಧ್ರಪ್ರದೇಶ ಮಾತ್ರವಲ್ಲದೆ ಗಡಿ ಭಾಗದ ಕರ್ನಾಟಕದ ಬಳ್ಳಾರಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿಯೂ ಪ್ರಸಿದ್ಧಿ ಪಡೆದವು.

ತೆಲುಗು ಚಿತ್ರರಂಗದ ಓರ್ವ ಜನಪ್ರಿಯ ನಾಯಕನಿಗೆ ಇರುವ ಜನಪ್ರಿಯತೆಯನ್ನ ಗಳಿಸಿಕೊಂಡಿದ್ದ ಗದ್ದರ್ ಅವರು ಆಂಧ್ರ ಸರ್ಕಾರವು ನಕ್ಸಲಿಯರ ಮೇಲಿನ ನಿಷೇಧವನ್ನು ತೆಗೆದು ಹಾಕಿದಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಮತ್ತು ನಿಷೇಧ ಜಾರಿಯಲ್ಲಿರುವಾಗ ಹಳ್ಳಿಗಳಲ್ಲಿ ಅಡಗಿಕೊಂಡು ಹಳ್ಳಿಯ ಜನರೆದುರು ಹಾಡಿ ಕುಣಿದು ಅವರನ್ನು ಜಾಗೃತಿಗೊಳಿಸುತ್ತಿದ್ದರು. 2010 ರ ವೇಳೆಗೆ ಕಮ್ಯೂನಿಸ್ಟ್ ಚಳವಳಿಯಿಂದ ಹೊರಬಂದು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಇಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರರ ರಾವ್ ಜೊತೆ ಗುರುತಿಸಿಕೊಂಡರು.

ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿಯಲ್ಲಿ ಗದ್ದರ್ ನಕ್ಸಲ್ ಚಳವಳಿಯ ಮಾದರಿಯಲ್ಲಿ ಅನೇಕ ಹಾಡುಗಳನ್ನು ಕಟ್ಟಿ ಹಾಡುವುದರ ಮೂಲಕ ಪ್ರತ್ಯೇಕ ರಾಜ್ಯವಾಗಲು ಶ್ರಮಿಸಿದರು. ಆದರೆ, ಗದ್ದರ್ ಅವರನ್ನು ಏಣಿಯ ಮೆಟ್ಟಿಲಾಗಿ ಉಪಯೋಗಿಸಿಕೊಂಡ ಚಂದ್ರಶೇಖರ ರಾವ್ ಯಾವೊಂದು ರಾಜಕೀಯ ಸ್ಥಾನಮಾನ ನೀಡದೆ ಗದ್ದರ್ ಅವರನ್ನು ಕಡೆಗಣಿಸಿದರು. 2017ರ ವೇಳೆಗೆ ಗದ್ದರ್ ಅವರಿಂದ ದೂರವಾದರು. ಆ ವೇಳೆಗಾಗಲೇ ಗದ್ದರ್ ಅವರ ತತ್ವ ಸಿದ್ಧಾಂತಗಳಲ್ಲಿ ಇದ್ದ ಬದ್ಧತೆ ಮರೆಯಾಗಿತ್ತು. 2017ರಲ್ಲಿ ತಮ್ಮ ಜನಪ್ರಿಯ ವೇಷಭೂಷಣಗಳನ್ನು ಕಳಚಿ ಜುಬ್ಬ ಪೈಜಾಮ, ಶರ್ಟ್, ಪ್ಯಾಂಟ್ ಧರಿಸತೊಡಗಿದರು. ಜೊತೆಗೆ ಯದಾದ್ರಿ ಎಂಬ ದೇವಾಲಯಕ್ಕೆ ಹೋಗಿ ಆರ್ಚಕರ ಪಾದದ ಬಳಿ ಕುಳಿತು ತಮ್ಮ ಶರ್ಟಿನ ತುದಿಯನ್ನು ಸೆರಗು ಒಡ್ಡುವ ಮಾದರಿಯಲ್ಲಿ ಒಡ್ಡಿ ಅವರು ಹಾಕಿದ ಪ್ರಸಾದವನ್ನು ಭಕ್ತಿ ಮತ್ತು ವಿನಯದಿಂದ ಸ್ವೀಕರಿಸಿದರು.

ಈ ಕುರಿತು ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರಿಂದ ಟೀಕೆಗಳು ಬಂದಾಗ, ಹಿಂದೆ ದಲಿತ ಎಂಬ ಕಾರಣಕ್ಕೆ ನನಗೆ ದೇವಾಲಯಕ್ಕೆ ಪ್ರವೇಶ ಇರಲಿಲ್ಲ ಈಗ ಅಲ್ಲಿನ ಅರ್ಚಕರು ಆಹ್ವಾನಿಸಿದ ಕಾರಣಕ್ಕಾಗಿ ಹೋಗಿಬಂದೆ ಎಂಬ ಉತ್ತರ ನೀಡಿದರು. ಇದು ಹೇಗಿತ್ತು ಎಂದರೆ, ನಮ್ಮ ಕನ್ನಡದ ದಲಿತ ಕವಿ ಸಿದ್ಧಲಿಂಗಯ್ಯನವರು ಎಂ.ಎಲ್.ಸಿ. ಮಾಡಿದ ಕಾರಣಕ್ಕಾಗಿ ಬಿ.ಎಸ್.ಯಡಿಯೂರಪ್ಪನವರನ್ನು ಆಧುನಿಕ ಬಸವಣ್ಣ ಎಂದು ಹೊಗಳಿದ ಮಾದರಿಯಲ್ಲಿತ್ತು.

2020ರಲ್ಲಿ ತೆಲಂಗಾಣ ಪ್ರಜಾಪಾರ್ಟಿ ಹೆಸರಿನಲ್ಲಿ ಪ್ರತ್ಯೇಕ ಪಕ್ಷ ಕಟ್ಟಿಕೊಂಡು ತೆಲುಗು ನಟ ಪವನ್ ಕಲ್ಯಾಣ್ ಜೊತೆ ಕೈ ಜೊಡಿಸಿದ್ದರು. ಆದರೆ ಅನಾರೋಗ್ಯ ಕೈ ಕೊಟ್ಟಿತು. 1997ರಲ್ಲಿ ಅವರ ಬೆನ್ನಿಗೆ ಬಿದ್ದಿದ್ದ ಬಂದೂಕಿನ ಗುಂಡು ಅವರ ದೇಹದಲ್ಲೇ ಉಳಿದಿತ್ತು. ಜೊತೆಗೆ ಶ್ವಾಸಕೋಶ ಹಾಗೂ ಗಂಟಲಿನ ಸಮಸ್ಯೆ ಇತ್ತು. ಇತ್ತೀಚೆಗೆ ರಾಹುಲ್ ಗಾಂಧಿಯವರ ಭಾರತ ಜೊಡೊ ಯಾತ್ರೆಯಲ್ಲಿ ಆಂಧ್ರದಲ್ಲಿ ಅವರು ಪಾಲ್ಗೊಂಡಿದ್ದು ಗದ್ದರ್ ಅವರ ಕೊನೆಯ ಸಾರ್ವಜನಿಕ ಪ್ರದರ್ಶನವಾಗಿತ್ತು.

ಅವರ ಬದುಕಿನ ಏಳುಬೀಳಿನ ಕಥನದ ನಡುವೆಯೂ ಗದ್ದರ್ ಅವರು ನಮ್ಮ ನೆನಪಿನಲ್ಲಿ ಹಾಡುಗಳ ಮೂಲಕ ಶಾಶ್ವತವಾಗಿ ಉಳಿಯುತ್ತಾರೆ. ಏಕೆಂದರೆ ಅವರ ಧ್ವನಿ ಜನಸಾಮಾನ್ಯರ ಧ್ವನಿಯಾಗಿತ್ತು. ಅದು ಹೆಮ್ಮೆಯ ಸಂಗತಿ.

Capture 2
ಡಾ. ಎನ್ ಜಗದೀಶ್ ಕೊಪ್ಪ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

Download Eedina App Android / iOS

X