ರಾಜ್ ಕಪೂರ್ ಸಿನಿಮಾ 'ಅನಾಡಿ'ಯಲ್ಲಿ 'ಕಿಸೀ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್' ಎಂಬ ಅತ್ಯದ್ಭುತ ಹಾಡೊಂದಿದೆ. "ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನವರ ಮೊಗದಲ್ಲಿ ನಗು ಮೂಡಿಸಿ. ನಿಮ್ಮಿಂದ ಸಾಧ್ಯವಾದರೆ, ಇತರರ ನೋವಿನ ಭಾರವನ್ನು ನಿಮ್ಮ ಹೆಗಲಿಗೂ ಸ್ವಲ್ಪ ತಂದುಕೊಳ್ಳಿ. ಎದೆಯಲ್ಲಿ ಸದಾ ಪ್ರೀತಿ ಇರಲಿ. ಇದೆಲ್ಲದರ ಹೆಸರೇ ಬದುಕು..." ಅಂತ ಪಿಸುಗುಡುವ ಈ ಹಾಡು ಸಾಕಷ್ಟು ಮಂದಿಗೆ ಗೊತ್ತು. ಬಹುತೇಕರಿಗೆ ಇದು ಹಾಡು ಮಾತ್ರ. ಆದರೆ, ಸಂಖ್ಯೆಯಲ್ಲಿ ಕಡಿಮೆಯಾದರೂ, ಈ ಹಾಡಿನ ಮೌಲ್ಯವನ್ನು ಬದುಕಲ್ಲಿ ಅಳವಡಿಸಿಕೊಂಡವರೂ ಉಂಟು. ಅಂಥವರಲ್ಲಿ ಗೀತಾ ವಸಂತ ಕೂಡ ಒಬ್ಬರು. ದಟ್ಟ ಕಾಡಿನಂತೆ ಹೆಚ್ಚಾಗಿ ಮೌನವನ್ನೇ ಧ್ಯಾನಿಸುವ ಇವರ ಊರು - ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾನನದ ನಡುವಿನ ಕಾಟೀಮನೆ. ಓದಿದ್ದೆಲ್ಲ ಶಿರಸಿ ಮತ್ತು ಧಾರವಾಡದಲ್ಲಿ. ಕೆಲಸದ ನೆಪದಲ್ಲಿ ಇವರ ಊರಾಗಿದ್ದು ತುಮಕೂರು. ಸದ್ಯ, ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮೇಷ್ಟ್ರು. ಮನಸ್ಸು ತಲ್ಲಣಿಸುವಂತೆ ಮಾಡುವಂತಹ ವಿದ್ಯಮಾನಗಳು ಎಲ್ಲಿಯೇ ನಡೆದರೂ ತಳಮಳಗೊಳ್ಳುವ, ಆ ಕುರಿತು ಆಳವಾಗಿ ಆಲೋಚಿಸುವ, ಅಂತಹ ಘಟನೆಗಳ ನೋವಿನ ಭಾರವನ್ನು ತನ್ನ ಹೆಗಲಿಗೆ ತಂದುಕೊಳ್ಳುವ ಇವರು, ಇದೇ ಕಾರಣಕ್ಕೆ ಅಪರೂಪದ ಲೇಖಕಿ. ಇಂತಹ ಅನನ್ಯ ವ್ಯಕ್ತಿತ್ವದ ಗೀತಾ ವಸಂತ ಅವರ ಬದುಕಿನ ಕತೆಗಳನ್ನು ಅವರದೇ ದನಿಯಲ್ಲಿ ಕೇಳುವ ಸಮಯವಿದು.
ಸಂದರ್ಶನದ ಮುಖ್ಯಾಂಶಗಳು:
“ಈಸಾಡತಾವ ಜೀವಾ ಮಾನಸ ಸರೋವರ ಹೊಕ್ಕು’ ಅನ್ನೋ ಬೇಂದ್ರೆಯವರ ಸಾಲು, ‘ಕತ್ತಲು-ಬೆಳಕು ಬೇರೆ ಅಲ್ಲವೇ ಅಲ್ಲ’ ಅನ್ನೋ ಅಲ್ಲಪ್ರಭುವಿನ ಮಾತು ಸದಾ ನನ್ನ ಜೊತೆಗಿರುತ್ವೆ.”
“ಊರಿನ ನಮ್ಮ ಮನೆಯ ಮುಂದೆ ಗದ್ದೆ. ಗದ್ದೆಯಾಚೆಗೆ ಒಂದು ದೊಡ್ಡ ಗುಡ್ಡ. ಅದು ನನಗೆ ಅಮ್ಮನ ಮಡಿಲಿದ್ದಂತೆ…”
“ಮೊದಲಿಂದಾನೂ ಏನೋ ಭಾರ ಹೊತ್ಕಂಡು ಇದ್ದಂತಿದ್ದ ಹುಡುಗಿ ನಾನು… ಈಗ ಅನ್ನಿಸ್ತಿದೆ ತರ್ಲೆ ಮಾಡ್ಬೇಕಿತ್ತೇನೋ ಅಂತ!
“ನನ್ನ ಮುತ್ತಜ್ಜಿಯೊಬ್ಬರಿದ್ರು… ಕತೆ ಹೇಳೋರು. ಅವರು ಆವೇಶಭರಿತರಾಗಿ ಪಾತ್ರವೇ ತಾವಾಗಿ ಅಭಿನಯಿಸ್ತಾ ಕತೆ ಹೇಳುವಾಗ ನಂಗನ್ನಿಸೋದು… ಅಡುಗೆಮನೇಲಿ ಸುಮ್ನೆ ಇರ್ತಿದ್ದ ಅಜ್ಜಿ ಇವ್ರೇನಾ ಅಂತ!”
“ಧಾರವಾಡದಲ್ಲಿ ಹಾಸ್ಟೆಲ್‌ನಲ್ಲಿ ಇದ್ದಾಗ, ಬಕೆಟ್ ನೀರಿಗಾಗಿ ಜೋರು ಜಗಳ ಮಾಡಿದ್ದೆ. ಈಗ ನೆನೆದರೆ ನಾನು ಜಗಳ ಮಾಡಿದ್ದೆನಾ ಅಂತ ಆಶ್ಚರ್ಯ ಆಗುತ್ತೆ!”
ಗೀತಾ ವಸಂತ ಅವರ ಯುಟ್ಯೂಬ್ ವಾಹಿನಿಯ ಲಿಂಕ್: https://www.youtube.com/@geetavasant730
“ಒಂದಿನ ಬಸ್‌ನಲ್ಲಿ ಕನ್ನಡಕದ ಗೂಡು ಬಿಟ್ಟು ಬಂದಿದ್ದ ಅಪ್ಪ, ಅದರಲ್ಲಿದ್ದ ಫೋನ್ ನಂಬರ್ ಬಳಸಿ ಯಾರಾದ್ರೂ ಫೋನ್ ಮಾಡ್ತಾರೆ ಕಾದಿದ್ದೇ ಕಾದಿದ್ದು… ಕೊನೆಗೂ ಫೋನ್ ಬಂತು. ಅಲ್ಲೆಲ್ಲೋ ಮುಂಡಗೋಡಿನಂಚಿನ ಯಾವುದೋ ಊರು! ಅಪ್ಪ ಹೊರಟೇಬಿಟ್ರು!”
“ಅಪ್ಪ ದುಷ್ಯಂತ-ಶಾಕುಂತಲೆಯ ಕತೆಯನ್ನು ಎಷ್ಟು ಚಿತ್ರವತ್ತಾಗಿ ಹೇಳ್ತಿದ್ರು ಅಂದ್ರೆ, ಅದರಲ್ಲಿನ ಶಾಕುಂತಲೆ ನಾನೇ ಅನ್ನಿಸಿಬಿಡ್ತಿತ್ತು…”
“ಹೆಣ್ಮಕ್ಕಳನ್ನು ಯಾವಾಗಲೂ ಧರ್ಮದಿಂದಾಚೆ, ಚರಿತ್ರೆಯಿಂದಾಚೆ, ಭಾಷೆಯಿಂದಾಚೆ… ಹೀಗೆ ಯಾವಾಗಲೂ ಒಂದಲ್ಲ ಒಂದು ಬಗೆಯಲ್ಲಿ ಆಚೆ ಇರಬೇಕು ಅನ್ನೋದಿದೆಯಲ್ಲ, ಅದು ತುಂಬಾನೇ ಕಾಡುತ್ತೆ…”
“ನಮ್ಮ ಪೌರಕಾರ್ಮಿಕ ಮಹಿಳೆಯರು ಶುದ್ಧಗೊಳಿಸೋದು ರಸ್ತೆಗಳನ್ನೋ, ಆಸ್ಪತ್ರೆಗಳನ್ನೋ ಅಥವಾ ಬರೀ ಕೊಳಕಾಗಿರೋ ಜಾಗಗಳನ್ನೋ ಅಲ್ಲ; ಅವೆಲ್ಲದರ ಜೊತೆಗೆ ನಮ್ಮ ಅಂತರಂಗವನ್ನೂ…”
“ಕಾಟೀಮನೆಯಂತಹ ಕಾಡಿನ, ಏನೇನೂ ಗೊತ್ತಿಲ್ಲದ ಹುಡುಗಿಯಾಗಿದ್ದವಳು ತುಮಕೂರು ವಿಶ್ವವಿದ್ಯಾಲಯದಂತಹ ಬೌದ್ಧಿಕ ಪ್ರಪಚಂಕ್ಕೆ ಬಂದು, ಅನೇಕ ಪಟ್ಟುಗಳನ್ನು ನೋಡಿದ್ದೀನಿ, ಕೆಲವು ಸಾರಿ ಕಲಿತಿದ್ದೀನಿ…”
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ