ನಿಫಾ ವೈರಸ್ | ಸೋಂಕಿತ ಪ್ರದೇಶಗಳಲ್ಲಿ ಅನಗತ್ಯ ಓಡಾಡದೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

Date:

ಕೇರಳ ರಾಜ್ಯದಲ್ಲಿ ನಿಫಾ ವೈರಸ್‌ ಪ್ರಕರಣಗಳು ಕಂಡು ಬರುತ್ತಿವೆ. ಇಬ್ಬರು ವೈರಸ್‌ನಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಈ ಹಿನ್ನೆಲೆ, ಕರ್ನಾಟಕಕ್ಕೂ ಈ ಸೋಂಕು ಹರಡಬಾರದು ಎಂಬ ಮುನ್ನೆಚ್ಚರಿಕೆಯಿಂದ ರಾಜ್ಯ ಆರೋಗ್ಯ ಇಲಾಖೆ ಕೇರಳದಲ್ಲಿ ನಿಫಾ ಸೋಂಕು ಕಂಡುಬಂದಿರುವ ಪ್ರದೇಶಗಳಿಗೆ ರಾಜ್ಯದ ಜನ ಅನಗತ್ಯ ಪ್ರಯಾಣ ಬೆಳೆಸದಂತೆ ಎಚ್ಚರ ವಹಿಸಲು ಸೂಚನೆ ನೀಡಿದೆ.

ಕೇರಳದಲ್ಲಿ ದಿಢೀರನೆ ನಿಫಾ ವೈರಸ್ ಉಲ್ಬಣವಾಗಿದೆ. ಅನಾರೋಗ್ಯಕ್ಕೆ ತುತ್ತಾಗಿ ಆಗಸ್ಟ್ 30 ರಂದು ಒಬ್ಬರು ಮತ್ತು ಸೆ.11 ಮತ್ತೊಬ್ಬರು ಕೇರಳದ ಕೋಯಿಕ್ಕೋಡ್​ನಲ್ಲಿ ಮೃತಪಟ್ಟಿದ್ದರು. ಬಳಿಕ, ಅವರು ನಿಫಾ ವೈರಸ್​​ ತಗುಲಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಮೃತರ ಪೈಕಿ ಒಬ್ಬರ ಸಂಬಂಧಿಕರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎರಡು ಪ್ರಕರಣ​ ಸೇರಿದಂತೆ ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಎಲ್ಲ ಪ್ರಕರಣಗಳೂ ಕೋಯಿಕ್ಕೋಡ್ ಜಿಲ್ಲೆಯಲ್ಲಿಯೇ ವರದಿಯಾಗಿದೆ. ಸೋಂಕಿತರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ಕೇರಳದಲ್ಲಿ ಏಕಾಏಕಿ ಉಲ್ಬಣಗೊಂಡಿರುವ ನಿಫಾ ವೈರಸ್ ಬಾಂಗ್ಲಾದೇಶದ ರೂಪಾಂತರಿಯಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೇರಳದಲ್ಲಿ ಸೋಂಕು ಕಾಣಿಸಿಕೊಂಡ ಕೋಯಿಕ್ಕೋಡ್‌ನ 7 ಗ್ರಾಮಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ, ಈ ಗ್ರಾಮಗಳ ಜನರ ಓಡಾಟ ನಿರ್ಬಂಧಿಸಲಾಗಿದೆ. ಶಾಲೆ, ಕಾಲೇಜು ಬಂದ್ ಮಾಡಲಾಗಿದೆ.

ನಿಫಾ ವೈರಸ್ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ

 • ರಾಜ್ಯದ ಜನರು ಕೇರಳದ ನಿಫಾ ವೈರಸ್‌ ಸೋಂಕಿತ ಪ್ರದೇಶಕ್ಕೆ ಅನಗತ್ಯವಾಗಿ ಪ್ರವಾಸ ಮಾಡಬಾರದು.
 • ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಪರಿಶೀಲನೆಗಾಗಿ ಚೆಕ್ ಪೋಸ್ಟ್‌ಗಳ ನಿರ್ಮಾಣ.
 • ನಿಫಾ ಸೋಂಕಿನ ಶಂಕಿತ ಪ್ರಕರಣಗಳ ಕ್ವಾರಂಟೈನ್‌ಗಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 2 ಬೆಡ್‌ಗಳನ್ನು ಕಾಯ್ದಿರಿಸುವುದು.
 • ಕೇರಳದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಫಾ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸುವುದು.
 • ಜ್ವರ ಪ್ರಕರಣಗಳ ಕುರಿತು ನಿಗಾ ವಹಿಸುವುದು.
 • ನಿಫಾ ವೈರಸ್ ಸೋಂಕಿನ ಕುರಿತು ಜನಜಾಗೃತಿ ಮೂಡಿಸುವುದು.
 • ಜನ ಭಯ ಪಡದಂತೆ ನೋಡಿಕೊಳ್ಳುವುದು.
 • ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತರಬೇತಿ ನೀಡುವುದು.
 • ಜಿಲ್ಲೆಗಳಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಎಚ್ಚರಿಸುವುದು
 • ಆಸ್ಪತ್ರೆಗಳಲ್ಲಿ ಎಲ್ಲ ಔಷಧ ಹಾಗೂ ಆಕ್ಸಿಜನ್ ಇರುವಂತೆ ನೋಡಿಕೊಳ್ಳುವುದು
 • ಸ್ಯಾಂಪಲ್ ಕಲೆಕ್ಷನ್‌ಗಾಗಿ ಪಿಪಿಇ ಕಿಟ್ ಹಾಗೂ ಸ್ಯಾಂಪಲ್ ಸಾಗಣೆಗಾಗಿ ಇತರೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು.
 • ಶಂಕಿತ ಪ್ರಕರಣ ಇದ್ದರೂ ಸ್ಯಾಂಪಲ್ ಸಂಗ್ರಹಿಸಿ ಎನ್‌ಐವಿ ಪುಣೆ ಅಥವಾ ಬೆಂಗಳೂರಿಗೆ ಸಾಗಿಸಲು ಅಗತ್ಯ ಕ್ರಮ ವಹಿಸುವುದು.
 • ಶಂಕಿತ ಸೋಂಕಿತರನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸುವುದು.
 • ಕೇರಳದ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಏನಿದು ನಿಫಾ ವೈರಸ್?

ನಿಫಾ ವೈರಸ್ (NiV) ಇದೊಂದು ಝೂನೋಟಿಕ್ ವೈರಸ್ ಆಗಿದೆ. ಇದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ನೇರವಾಗಿ ಹರಡುತ್ತದೆ.

ನಿಫಾ ವೈರಸ್‌ಲಕ್ಷಣಗಳು

ಸೋಂಕಿತ ಜನರಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ತಲೆನೋವು, ಮೈಯಾಲ್ಜಿಯಾ, ವಾಂತಿ ಮತ್ತು ಗಂಟಲು ನೋವು ಕಂಡುಬರುತ್ತದೆ. ನಂತರ ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ಬದಲಾದ ಪ್ರಜ್ಞೆ ಮತ್ತು ತೀವ್ರವಾದ ಎನ್ಸೆಫಾಲಿಟಿಸ್ ಅನ್ನು ಸೂಚಿಸುವ ನರವೈಜ್ಞಾನಿಕ ಚಿಹ್ನೆಗಳು ಅಭಿವೃದ್ಧಿಗೊಳ್ಳುತ್ತವೆ.

ಇನ್ನೂ ಕೆಲವರಲ್ಲಿ ನ್ಯುಮೋನಿಯಾ ಮತ್ತು ತೀವ್ರವಾದ ಉಸಿರಾಟದ ಸಮಸ್ಯೆಗಳು ಕಂಡುಬರುತ್ತದೆ. ಮಿದುಳಿನ ಉರಿಯೂತವೂ ಆಗಬಹುದು. ಕೊನೆಯಲ್ಲಿ ಸೋಂಕಿತರ ದೇಹದಲ್ಲಿ ಸೆಳೆತ ಉಂಟಾಗಿ ಕೋಮಾ ಸ್ಥಿತಿಗೆ ಜಾರಿ ಸಾವನ್ನಪ್ಪಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ನಿಫಾ ರೋಗ ಲಕ್ಷಣದ ಬಗ್ಗೆ ಪಟ್ಟಿ ಮಾಡಿ ಪ್ರಕಟಿಸಿತ್ತು.

ನಿಫಾ ವೈರಸ್ ಪ್ರಾಣಿಗಳಿಂದ (ಬಾವಲಿಗಳು ಅಥವಾ ಹಂದಿಗಳು) ಅಥವಾ ಕಲುಷಿತ ಆಹಾರದಿಂದ ಮನುಷ್ಯರಿಗೆ ಹರಡಬಹುದು ಮತ್ತು ನೇರವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು.

ಈ ಸುದ್ದಿ ಓದಿದ್ದೀರಾ? ಬೆಂ-ಮೈ ಹೆದ್ದಾರಿ | ಪಲ್ಟಿಯಾದ ಕಂಟೇನರ್ ಕೆಳಗೆ ಸಿಲುಕಿದ ಚಾಲಕ

ಮುಂಜಾಗ್ರತಾ ಕ್ರಮಗಳು

 • ಮನೆ ಹಾಗೂ ಸುತ್ತಲಿನ ಪ್ರದೇಶಗಳನ್ನು ಶುಚಿಯಾಗಿಟ್ಟುಕೊಳ್ಳುವುದು.
 • ಅನಾರೋಗ್ಯದ ಪ್ರಾಣಿಗಳು, ಸೋಂಕಿತ ಪ್ರದೇಶಗಳು ಮತ್ತು ಸೋಂಕಿತ ಮನುಷ್ಯರೊಂದಿಗೆ ನಿಕಟ ಸಂಪರ್ಕವನ್ನು ಹೊಂದದೆ ಇರವುದು.
 • ಉತ್ತಮ ನೈರ್ಮಲ್ಯವನ್ನು ಕಾಪಾಡುವುದು.
 • ಬಾವಲಿಗಳ ಲಾವಾರಸದಿಂದ ಕಲುಷಿತಗೊಂಡಿರುವ ಹಣ್ಣು ಸೇವಿಸದೆ ಎಚ್ಚರದಿಂದಿರುವುದು

ನಿಫಾ ವೈರಸ್ ಹಿನ್ನೆಲೆ

1998ರಲ್ಲಿ ಮಲೇಷ್ಯಾದಲ್ಲಿ ಹಂದಿ ಸಾಕಣೆದಾರರಲ್ಲಿ ಏಕಾಏಕಿ ನಿಫಾ ವೈರಸ್ ಕಾಣಿಸಿಕೊಂಡಿತು. ಇದು ಮೊದಲನೇ ಪ್ರಕರಣ ಎಂದು ಗುರುತಿಸಲಾಯಿತು. ಮಲೇಷ್ಯಾ ಹಾಗೂ ಸಿಂಗಪುರ ದೇಶಗಳಲ್ಲಿ ಈ ವೈರಸ್ ಪತ್ತೆಯಾಗಿತ್ತು. 2001ರಲ್ಲಿ ಬಾಂಗ್ಲಾದೇಶದಲ್ಲಿ ಈ ಸೋಂಕು ಗುರುತಿಸಲಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.  

ಕೇರಳದಲ್ಲಿ ಇದುವರೆಗೆ ಮೂರು ಬಾರಿ ನಿಫಾ ವೈರಸ್ ಸೋಂಕು ಹರಡಿದ್ದು, ಎರಡು ಬಾರಿ ಕೋಝಿಕ್ಕೋಡ್‌ನಿಂದಲೇ ವರದಿಯಾಗಿವೆ.

2018ರ ಮೇ ತಿಂಗಳಲ್ಲಿ ಕೋಝಿಕ್ಕೋಡ್‌ನಲ್ಲಿ ದಕ್ಷಿಣ ಭಾರತದ ಮೊಟ್ಟಮೊದಲ ಪ್ರಕರಣ ವರದಿಯಾಗಿತ್ತು. 23 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 18 ಪ್ರಕರಣಗಳು ಪ್ರಯೋಗಾಲಯಗಳಲ್ಲಿ ದೃಢಪಟ್ಟಿದ್ದವು. 17 ಮಂದಿ ಈ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿದ್ದರು. 2019ರಲ್ಲಿ ಎರ್ನಾಕುಲಂನನಲ್ಲಿ ಎರಡನೇ ಪ್ರಕರಣ ವರದಿಯಾಗಿತ್ತು. 2021ರಲ್ಲಿ ಕೋಝಿಕ್ಕೋಡ್‌ನಲ್ಲಿ ಮತ್ತೆ ನಿಫಾ ಸೋಂಕು ಪ್ರಕರಣ ವರದಿಯಾಗಿದ್ದು, 12 ವರ್ಷದ ಬಾಲಕ ಮೃತಪಟ್ಟಿದ್ದನು.

ಸದ್ಯಕ್ಕೆ ನಿಫಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಈ ಸೋಂಕನ್ನು ನಿಗ್ರಹಿಸಲು ರೋಗ ನಿರೋಧಕ ಚುಚ್ಚುಮದ್ದು ಕೂಡಾ ಲಭ್ಯ ಇಲ್ಲ. ಹೀಗಾಗಿ, ನಿಫಾ ವೈರಸ್ ಸೋಂಕಿಗೆ ತುತ್ತಾಗುವವರ ಮರಣ ಪ್ರಮಾಣ ಶೇ.70 ರಷ್ಟಿದೆ. ನಿರ್ದಿಷ್ಟ ಔಷಧ ಇಲ್ಲವಾದರೂ ರೋಗದ ವಿರುದ್ಧ ಹೋರಾಡಲು ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ...

ಮೈಸೂರು | ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ

ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ಸೇವೆಗಳನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು...

ಚಿಕ್ಕಬಳ್ಳಾಪುರ | ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ...

ಚಿಕ್ಕಬಳ್ಳಾಪುರ | ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ

ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು...