ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ಹೈಕಮಾಂಡ್ ತೆರೆ ಎಳೆದಿದೆ. ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೇ, ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಪ್ರಸ್ತುತ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಪೂರ್ಣಗೊಂಡ ತಕ್ಷಣವೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆಗಳು ಚುರುಕಾದಾಗಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರ ಹೆಸರು ಅತ್ಯಂತ ಮುಂಚೂಣಿಯಲ್ಲಿತ್ತು. ಪಕ್ಷದ ಬಲವರ್ಧನೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಮುನ್ನಡೆಸಲು ಜಾರಕಿಹೊಳಿ ಸೂಕ್ತ ನಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಕೊನೆಯ ಹಂತದಲ್ಲಿ ರಾಜಕೀಯ ಸಮೀಕರಣಗಳು ಬದಲಾಗಿವೆ.
ಸತೀಶ್ ಜಾರಕಿಹೊಳಿ ಅವರಿಗೆ ಸಂಘಟನೆಯ ಜವಾಬ್ದಾರಿಯ ಬದಲಾಗಿ ನೂತನ ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನವನ್ನು ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಇದಕ್ಕೆ ಪ್ರತಿಯಾಗಿ, ಸಚಿವ ಸ್ಥಾನದ ರೇಸ್‌ನಲ್ಲಿದ್ದ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ನಿರ್ಧರಿಸಿದೆ.
ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ. ಲೋಕಸಭೆ ಚುನಾವಣೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ದೃಷ್ಟಿಯಿಂದ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು, ಹೈಕಮಾಂಡ್ ರಾಜ್ಯದ ಪಕ್ಷಗೊಳಗಿನ ಎಲ್ಲ ಬಣಗಳಿಗೂ ಸಮ್ಮತವಾಗುವಂತಹ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಬಿ.ಕೆ. ಹರಿಪ್ರಸಾದ್ ಅವರಿಗೆ ಪಕ್ಷ ಸಂಘಟನೆಯಲ್ಲಿ ದಶಕಗಳ ಕಾಲದ ಸುದೀರ್ಘ ಅನುಭವವಿದೆ. ಈ ಹಿಂದೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಧಾನ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಯಶಸ್ವಿಯಾಗಿ ಅವರು ಕೆಲಸ ಮಾಡಿದ್ದರು. ಅವರಿಗಿರುವ ರಾಷ್ಟ್ರೀಯ ಮಟ್ಟದ ಅನುಭವವು ರಾಜ್ಯದಲ್ಲಿ ಮುನಿಸಿಕೊಂಡಿರುವ ನಾಯಕರನ್ನು ಒಗ್ಗೂಡಿಸಲು ನೆರವಾಗಲಿದೆ ಎಂದು ಹೈಕಮಾಂಡ್ ಲೆಕ್ಕಾಚಾರ ಹಾಕಿರುವ ಸಾಧ್ಯತೆಗಳಿವೆ.
ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಸಾರಥ್ಯ ಒಪ್ಪಿಸುತ್ತಿರುವುದು ಪಕ್ಷಕ್ಕೆ ಹೊಸ ಶಕ್ತಿ ತುಂಬುವ ಪ್ರಯತ್ನವಾಗಿದೆ. ಆದರೆ, ಅಧಿಕಾರ ಬದಲಾವಣೆಯ ಬೆನ್ನಲ್ಲೇ ಉದ್ಭವಿಸಬಹುದಾದ ಆಂತರಿಕ ಅಸಮಾಧಾನಗಳನ್ನು ಶಮನಗೊಳಿಸುವುದು, ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಹಾಗೂ ನೂತನ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿಕೊಂಡು ಸಂಘಟನೆಯನ್ನು ಮುನ್ನಡೆಸುವುದು ಹರಿಪ್ರಸಾದ್ ಎದುರಿಗಿರುವ ತಕ್ಷಣದ ಪ್ರಮುಖ ಸವಾಲುಗಳಾಗಿವೆ.




