ಅಂಬೇಡ್ಕರ್ ಅವರಿಗೆ ಪ್ರಜಾಸತ್ತೆಯನ್ನು ಸರ್ಕಾರದ ಒಂದು ಬಗೆಯಾಗಿ ನೋಡಲಿಲ್ಲ. ಅದು ಅವರಿಗೆ ಬದುಕುವ ಕ್ರಮವಾಗಿತ್ತು. ಪ್ರಜಾಸತ್ತೆಯನ್ನು ಜನರ, ಜನರಿಗಾಗಿ, ಜನರಿಂದ ಸರ್ಕಾರ ಅಂತ ವ್ಯಾಖ್ಯಾನಿಸಿದರೆ ನಾವು ಯಾವ ಜನರ ಬಗ್ಗೆ ಮಾತನಾಡುತ್ತಿದ್ದೇವೆ. ಅನ್ನುವ ಪ್ರಶ್ನೆ ಬರುತ್ತದೆ. ಜಾತಿಯಾಧಾರಿತ ಸಮಾಜದಲ್ಲಿ ಈ ಪ್ರಶ್ನೆ ಮುಖ್ಯವಾಗುತ್ತದೆ. ಅಂಬೇಡ್ಕರ್ ಅವರಿಗೆ ಜಾತಿ ಹಾಗೂ ಪ್ರಜಾಸತ್ತೆ ಒಮ್ಮೊಟ್ಟಿಗೆ ಹೋಗೊಲ್ಲ ಅಂತ ಬಲವಾಗಿಯೇ ಅನ್ನಿಸಿತ್ತು. ಪ್ರಜಾಸತ್ತೆ ಅನ್ನೋದನ್ನು ಅವರು ಒಳ್ಳೆಯ ಸಮಾಜ ಅನ್ನೋ ಅರ್ಥದಲ್ಲಿ ಗ್ರಹಿಸಿಕೊಂಡಿದ್ದರು. ಅಂದರೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ಆಧರಿಸಿದ ಸಮಾಜ. ಇದು ಪ್ರಜಾಸತ್ತೆಯ ಗುರಿಯೂ ಹೌದು. ಇದನ್ನು ಸಾಧಿಸುವ ವಿಧಾನವೂ ಹೌದು. ಅಂಬೇಡ್ಕರ್ ಒಂದು ಕಡೆ ಹೇಳುತ್ತಾರೆ:
“ಸಮಾನತೆ ಇಲ್ಲದ ಸ್ವಾತಂತ್ರ್ಯ ಹಲವರ ಮೇಲೆ ಕೆಲವರ ಪಾರಮ್ಯವನ್ನು ಸೃಷ್ಟಿಸುತ್ತದೆ. ಸ್ವಾತಂತ್ರವಿಲ್ಲದ ಸಮಾನತೆ ವೈಯಕ್ತಿಕ ಉತ್ಸಾಹವನ್ನು ಕೊಲ್ಲುತ್ತದೆ. ಭ್ರಾತೃತ್ವ ಇಲ್ಲದೇ ಹೋದರೆ ಸಮಾನತೆ ಹಾಗೂ ಸ್ವಾತಂತ್ರ್ಯ ಸಹಜ ಮಾರ್ಗವಾಗುವುದಿಲ್ಲ. ಅದನ್ನು ಜಾರಿಗೊಳಿಸುವುದಕ್ಕೆ ಪೋಲಿಸರು ಬೇಕಾಗುತ್ತಾರೆ.”
ಇದನ್ನೂ ಓದಿ: ಬಾಬಾಸಾಹೇಬ್ ಅಂಬೇಡ್ಕರ್: ಒಬ್ಬ ಅಪರೂಪದ ಅರ್ಥಶಾಸ್ತ್ರಜ್ಞ
ಅಂಬೇಡ್ಕರ್ ಆರ್ಥಿಕ ಹಾಗೂ ಸಾಮಾಜಿಕ ಪ್ರಜಾಸತ್ತೆ ಇಲ್ಲದೆ ರಾಜಕೀಯ ಪ್ರಜಾಸತ್ತೆ ಸಾಧ್ಯವಿಲ್ಲ ಎನ್ನುತ್ತಿದ್ದರು. ನಿಜವಾದ ಅರ್ಥದಲ್ಲಿ ಪ್ರಜಾಸತ್ತೆ ಸಾಧ್ಯವಾಗಬೇಕಾದರೆ ನಮ್ಮ ರಾಜಕೀಯ ಪ್ರಜಾಸತ್ತೆ, ಸಾಮಾಜಿಕ ಪ್ರಜಾಸತ್ತೆಯೂ ಆಗಿರಬೇಕು. ಅಂಬೇಡ್ಕರ್ ಅವರ ಈ ಚಿಂತನೆಗೆ ಇಂದು ಮತ್ತೆ ಜೀವಕೊಡಬೇಕಾಗಿದೆ. ಅಂಬೇಡ್ಕರ್ ಅವರ ಪ್ರಜಾಸತ್ತೆಯ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಅವರ ದೃಷ್ಟಿಯಲ್ಲಿ ಪ್ರಜಾಸತ್ತೆಯ ಜೊತೆಗೇ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವೂ ಇರುತ್ತಿತ್ತು. ಇವೆರಡು ಪ್ರಜಾಸತ್ತೆಗೆ ಅನಿವಾರ್ಯವಾದ ಅಂಶಗಳಾಗಿದ್ದವು.. ಜಾತಿ ವ್ಯವಸ್ಥೆ ನಿಂತಿರುವುದೇ ಅವೈಚಾರಿಕ ಅಂಧನಂಬಿಕೆಯ ಮೇಲೆ. ಇದರಿಂದ ಹೊರಬರಬೇಕಾದರೆ ವೈಚಾರಿಕ ಮನೋಭಾವ ಅವಶ್ಯಕ. ವೈಚಾರಿಕ ಚಿಂತನೆ ಮನುಷ್ಯರನ್ನು ಒಟ್ಟಿಗೆ ತರುವ ಶಕ್ತಿಯಾಗಬಹುದು. ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಇವೆಲ್ಲಾ ವಿದ್ಯಾಭ್ಯಾಸದ ಭಾಗವಾಗುತ್ತಿರುವ ಸಂದರ್ಭದಲ್ಲಿ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ.
ಅಂಬೇಡ್ಕರ್ ಮುಖ್ಯವಾಗಿ ಒತ್ತುಕೊಡುವ ಇನ್ನೊಂದು ಅಂಶ ಸಾಮಾಜಿಕ ನೈತಿಕತೆ. ಅವರ ಪ್ರಕಾರ ಸ್ವಾತಂತ್ರ ಮತ್ತು ಸಮಾನತೆ ಸಾಧ್ಯವಾಗಬೇಕಾದರೆ ಸಾಮಾಜಿಕ ನೈತಿಕತೆ ಸಾಧ್ಯವಾಗಬೇಕು. ಜಾತಿ ವ್ಯವಸ್ಥೆ ಈ ಸಾಮಾಜಿಕ ನೈತಿಕತೆಯನ್ನು ಕೊಂದಿದೆ ಅನ್ನುತ್ತಾರೆ ಅಂಬೇಡ್ಕರ್. ಅವರು ಬೌದ್ಧ ಧರ್ಮಕ್ಕೆ ಆಕರ್ಷಿತರಾಗಿದ್ದೇ ಈ ನೈತಿಕತೆ ಹಾಗು ವೈಚಾರಿಕತೆಗಾಗಿ, ಸಾಮಾಜಿಕ ನೈತಿಕತೆಯನ್ನು ಪ್ರಜಾಸತ್ತೆಯ ಅವಶ್ಯಕ ಭಾಗವಾಗಿ ನೋಡುವುದು ಇಂದಿಗೂ ಪ್ರಸ್ತುತ, ಇಂದು ಭಿಕ್ಷುಕರ, ರಸ್ತೆ ಬದಿಯ ಮಕ್ಕಳ, ಮನೆ ಇಲ್ಲದವರ ಸಮಸ್ಯೆಗಳು ಪ್ರಜಾಸತ್ತಾತ್ಮಕ ರಾಜಕೀಯದ ಭಾಗವಾಗಬೇಕಾದರೆ ಅದು ನೈತಿಕ ಕಾಳಜಿಯಿಂದ ಮಾತ್ರ ಸಾಧ್ಯ. ಸಾಮಾಜಿಕ ನೈತಿಕತೆ ಪ್ರಜಾಸತ್ತಾತ್ಮಕ ರಾಜಕೀಯದ ಕೇಂದ್ರಕ್ಕೆ ಬರುವುದಕ್ಕೆ ಸಾಧ್ಯವಾಗುವುದಾದರೆ ಹೊಸ ಜಗತ್ತು ಸಾಧ್ಯವಾಗುತ್ತದೆ.
ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ತೀವ್ರವಾಗಿದ್ದಾಗ ರಾಜ-ಕೀಯ ಸಮಾನತೆ ಸಾಧ್ಯವಾಗುವುದಿಲ್ಲ. “26 ಜನವರಿ 1950ರಂದು ವೈರುದ್ಯಗಳ ಬದುಕಿಗೆ ಕಾಲಿಡುತ್ತಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನತೆ ಸಾಧ್ಯವಾಗಿದೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ನಾವು ಅಸಮಾನರಾಗಿದ್ದೇವೆ. ನಾವು ಇನ್ನೆಷ್ಟು ಕಾಲ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಸಮಾನತೆಯನ್ನು ತಿರಸ್ಕರಿಸುವುದು? ಬಹು ಕಾಲ ಅದನ್ನು ತಿರಸ್ಕರಿಸುತ್ತಲೇ ಇದ್ದರೆ, ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು ವಿನಾಶಕ್ಕೆ ತಳ್ಳುತ್ತೇವೆ” ಎಂದಿದ್ದರು.
ಈ ವೈರುಧ್ಯವನ್ನು ಹೇಗೆ ಪರಿಹರಿಸೋದು? ಅಂಬೇಡ್ಕರ್ ಈ ವೈರುಧ್ಯಕ್ಕೆ ಪರಿಹಾರವಾಗಿ ಸಂವಿಧಾನತ್ಮಕ ಸಮಾಜವಾದವನ್ನು ಸೂಚಿಸಿದರು. ಅದರಿಂದ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಸತ್ತೆ ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದರು. ಸಂವಿಧಾನಾತ್ಮಕ ಸಮಾಜವಾದದ ನೀಲಿನಕ್ಷೆಯನ್ನು ಅವರು ಸ್ಟೇಟ್ಸ್ ಅಂಡ್ ಮೈನಾರಿಟಿಸ್ ಮನವಿಯಲ್ಲಿ ಪ್ರಸ್ತುತಪಡಿಸಿದ್ದರು. ಇದರಲ್ಲಿ ಭೂಮಿ ಹಾಗೂ ಪ್ರಮುಖ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿ ಇರಬೇಕೆಂದು ಸೂಚಿಸಿದ್ದರು. ಅಂತಹ ಸರ್ಕಾರಿ ಒಡೆತನಕ್ಕೆ ಬೇಕಾದ ಸಂವಿಧಾನಾತ್ಮಕ ರಕ್ಷಣೆಯನ್ನು ಕೊಡುವಂತಹ ಸಮಾಜವಾದಿ ತತ್ವಗಳು ಅದರಲ್ಲಿ ಅಡಕವಾಗಿದ್ದವು. ನಿಜ, ಅದರಲ್ಲಿ ಅವರು ಸೂಚಿಸಿರುವ ಸಾಮೂಹಿಕ ವ್ಯವಸಾಯ ಇವೆಲ್ಲಾ ಇಂದು ನಮಗೆ ಸಾಧ್ಯವಾಗಿ ತೋರುವುದಿಲ್ಲ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಸತ್ತೆಯನ್ನು ರಾಜಕೀಯ ಪ್ರಜಾಸತ್ತೆಯೊಂದಿಗೆ ಬೆಸೆಯಬಲ್ಲ ಸಮಾಜವಾದಿ ಸಂವಿಧಾನ ಇಂದಿಗೂ ಪ್ರಸ್ತುತ. ಅಷ್ಟೇ ಅಲ್ಲ ಅವಶ್ಯಕವೂ ಹೌದು. ಆದರೆ ಅಂಬೇಡ್ಕರ್ ಅವರಿಗೆ ಇದನ್ನು ಸಂವಿಧಾನದ ಭಾಗವಾಗಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಇದನ್ನು ಅಂಬೇಡ್ಕರ್ ನಿರ್ದೇಶನ ತತ್ವಗಳ ಅಡಿಯಲ್ಲಿ ಸೇರಿಸಿದ್ದಾರೆ.
ಪ್ರಜಾಸತ್ತಾತ್ಮಕ ಪ್ರಯಾಣವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ” ಆದರೆ ನಿರ್ದೇಶನ ತತ್ವಗಳನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದನ್ನು ನ್ಯಾಯಾಲಯದಲ್ಲಿ ಜಾರಿಗೊಳಿಸುವುದಕ್ಕೂ ಸಾಧ್ಯವಿಲ್ಲ. ಸರ್ಕಾರ ಅದರ ಜವಾಬ್ದಾರಿಯನ್ನು ಹೊರುವಂತೆ ಒತ್ತಾಯಿಸುವುದಕ್ಕೂ ಮತದಾರರಿಗೆ ಸಾಧ್ಯವಾಗಲಿಲ್ಲ. ಸ್ವಾತಂತ್ರ ಭಾರತದಲ್ಲಿ ಪ್ರಜಾಸತ್ತೆ ಅರಳಲೂ ಇಲ್ಲ. ನಾಶವೂ ಆಗಲಿಲ್ಲ. ಕುಂಟುತ್ತಾ ಸಾಗುತ್ತಿದೆ. ಇಂದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆಯ ಜೊತೆಗೆ, ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ, ಕಾರ್ಪೋರೇಟ್ ಪ್ರಾಬಲ್ಯ, ಕೋಮುವಾದ ಎಲ್ಲವೂ ದೊಡ್ಡ ಮಟ್ಟದಲ್ಲಿ ಸೇರಿಕೊಂಡಿದೆ. ಆದರೂ ಪೂರ್ಣಗೊಳ್ಳದ ಅಂಬೇಡ್ಕರ್ ಅವರ ಚಿಂತನೆಗಳು ಇಂದು ಎಂದಿಗಿಂತ ಪ್ರಸ್ತುತ. ಆದರೆ ಜೇನ್ ಡ್ರಿಜ್ ಹೇಳುವಂತೆ ಇಂದು ಅಂಬೇಡ್ಕರ್ ಅವರ ಅಮೂಲ್ಯ ವಿಚಾರಗಳ ಜೊತೆಗೆ ಇತರ ಪೂರಕ ಚಿಂತನೆಗಳನ್ನು ಬಳಸಿಕೊಂಡು ಶ್ರೀಮಂತಗೊಳಿಸಿಕೊಂಡು ಮುಂದೆ ಸಾಗಬೇಕಾಗಿದೆ.
[ಜೀನ್ ಡ್ರಿಜ್ ಅವರ ಡಾಕ್ಟರ್ ಅಂಬೇಡ್ಕರ್ ಆಂಡ್ ಪ್ಯೂಚರ್ ಒ ಇಂಡಿಯನ್ ಡೆಮಾಕ್ರಸಿ ಲೇಖನವನ್ನು ಆಧರಿಸಿದ ಲೇಖನ)

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





