ದೇಶದ ಅತ್ಯಂತ ದೊಡ್ಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಿಗೆ ಕೇಂದ್ರೀಯ ತನಿಖಾ ದಳ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆಯಿದೆ.
ಸಿಬಿಐನ ಬ್ಲೂ ಕಾರ್ನರ್ ನೋಟಿಸ್ ವಿದೇಶದಲ್ಲಿರುವ ಅಪರಾಧಿಗಳನ್ನು ಕರೆತರುವ ಪ್ರಕ್ರಿಯೆಯಾಗಿದೆ. ಆರೋಪಿ ಇರುವ ದೇಶದಲ್ಲಿಯೇ ಅಲ್ಲಿನ ಸರ್ಕಾರ ಬಂಧಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ನಂತರದಲ್ಲಿ ಇಲ್ಲಿನ ಪೊಲೀಸ್ ತಂಡ ತೆರಳಿ ಆರೋಪಿಯನ್ನು ಬಂಧಿಸಿ ಕರೆತರುತ್ತದೆ.
33 ವರ್ಷದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಗಳನ್ನು ಎದುರಿಸುತ್ತಿದ್ದು, ಕರ್ನಾಟಕ ಸರ್ಕಾರ ಈತನ ವಿರುದ್ಧ ದೌರ್ಜನ್ಯಗಳನ್ನು ತನಿಖೆಗೊಳಪಡಿಸಲು ಎಸ್‌ಐಟಿ ರಚಿಸಿದೆ. ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣವೂ ಸೇರಿ ಮೂವರು ಮಹಿಳೆಯರು ದೂರು ದಾಖಲಿಸಿದ್ದಾರೆ.
ಪ್ರಜ್ವಲ್‌ನನ್ನು ವಿದೇಶಕ್ಕೆ ತೆರಳಲು ಸಹಕರಿಸಿದ ಕಾರಣ ಈತನ ತಂದೆ ಹೆಚ್ ಡಿ ರೇವಣ್ಣನ ವಿರುದ್ಧ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ನಾಗರಿಕರು ಪ್ರಜ್ವಲ್ ರೇವಣ್ಣನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ತನಿಖೆ ಕುರಿತು ವಿಶೇಷ ತನಿಖಾ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸಂಜೆ ತುರ್ತುಸಭೆ ನಡೆಸಿದರು.
ಸಭೆಯ ವೇಳೆ ಮುಖ್ಯಮಂತ್ರಿಗಳಿಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಿಬಿಐನಿಂದ ಪ್ರಜ್ವಲ್ ರೇವಣ್ಣಗೆ ಬ್ಲೂಕಾರ್ನರ್ ನೋಟಿಸ್ ನೀಡುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ತನಿಖಾ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ತಮ್ಮ ತಾಯಿಯನ್ನು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ 20 ವರ್ಷದ ಪುತ್ರ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ.
