ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ; ನಿಲ್ಲದ ಜನಾಂಗೀಯ ಸಂಘರ್ಷ

Date:

ಮಣಿಪುರದ ಮನಸ್ಸುಗಳು ಒಡೆದು ಹೋಗಿವೆ, ಅದಕ್ಕೆ ಕಾರಣಗಳು ಅನೇಕ. ಆಗಿರುವ ಗಾಯಗಳು ವಾಸಿಯಾಗಿಲ್ಲ, ಆಗುವಂತೆಯೂ ಕಾಣುತ್ತಿಲ್ಲ

ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಕಲಹ ಆರಂಭವಾಗಿ ನಿನ್ನೆಗೆ (ಮೇ 3) ಒಂದು ವರ್ಷವಾಯಿತು. ಸಾವಿರಾರು ಜನರಿದ್ದ ಉದ್ರಿಕ್ತ ಗುಂಪು ಇಬ್ಬರು ಮಹಿಳೆಯರನ್ನು ಬೆತ್ತಲುಗೊಳಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಇಂದಿಗೆ (ಮೇ 4) ವರ್ಷ ಪೂರೈಸಿತು. ಈಗಲೂ 60,000 ಜನರು ನಿರಾಶ್ರಿತ ಶಿಬಿರಗಳಲ್ಲಿ ಜೀವ ಉಳಿಸಿಕೊಂಡರೆ, 226 ಜನರು ಜೀವ ಕಳೆದುಕೊಂಡಿದ್ದಾರೆ. 1500 ಮಂದಿ ಗಾಯಗೊಂಡಿದ್ದು, 28 ಜನರು ಕಾಣೆಯಾಗಿದ್ದಾರೆ ಅರ್ಥಾತ್‌ ನಿಗೂಢವಾಗಿ ಹತ್ಯೆಯಾಗಿದ್ದಾರೆ. 13,247 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.

ಕುಕಿಗಳ ರಾಜಧಾನಿಯೆಂದೇ ಕರೆಯಲಾಗುವ ಚೂರಾಚಾಂದ್ಪುರದಲ್ಲಿ ಮೇ 3ನೇ ತಾರೀಕನ್ನು ’ಕುಕಿ- ಜೋ ಜಾಗೃತಿ ದಿನ’ ಎಂದು ಪರಿಗಣಿಸಿದರೆ, ರಾಜ್ಯ ರಾಜಧಾನಿ ಇಂಫಾಲದಲ್ಲಿ ಕೇಂದ್ರೀಕೃತವಾಗಿರುವ ಮೈತೇಯಿಗಳು, ’ಚಿನ್‌- ಕುಕಿಗಳ ಮಾದಕ ವಸ್ತು ಭಯೋತ್ಪಾದಕ ಆಕ್ರಮಣಕ್ಕೆ 365 ದಿನ’ ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಮೈತೇಯಿ ನಿರಾಶ್ರಿತ ಶಿಬಿರವೊಂದರಲ್ಲಿ ಮಕ್ಕಳು

ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನವನ್ನು ನೀಡಿದ್ದರಿಂದ ಆರಂಭವಾದ ಜನಾಂಗೀಯ ಯುದ್ಧದ ಬಳಿಕ ಇಡೀ ಮಣಿಪುರವೇ ಗುಡ್ಡಗಾಡು ಮತ್ತು ಕಣಿವೆಯಾಗಿ ಬೇರ್ಪಟ್ಟಿತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬುಡಕಟ್ಟು ಜನರ ಮೇಲೆ ಮಾಡಿದ ದಾಳಿಯು ರಾಜ್ಯಾದ್ಯಂತ ಕಿಚ್ಚು ಹತ್ತಿಸಿತು. ಸುಳ್ಳು ಸುದ್ದಿಗಳು ಹರಿದಾಡಿ, ಪರಸ್ಪರ ರಕ್ತಪಾತವಾಯಿತು. ರಾಜ್ಯದಲ್ಲಿ ಸುದೀರ್ಘ ಕಾಲ ಇಂಟರ್‌ನೆಟ್‌ ನಿರ್ಬಂಧವನ್ನೂ ಹೇರಲಾಯಿತು.

ಸಂಘರ್ಷ ಆರಂಭವಾದ ಮೊದಲ ವಾರದೊಳಗೆ ಕುಕಿ ಮತ್ತು ಮೈತೇಯಿ ಸಮುದಾಯಗಳೆರಡೂ ಭಾರೀ ಪ್ರಮಾಣದಲ್ಲಿ ಸ್ಥಳಾಂತರ ಮಾಡಿದವು. ಚೂರಾಚಾಂದ್ಪುರ, ಕಾಂಗ್ಪೊಪ್ಕಿ, ಮೋರೆಯಂತಹ ಕುಕಿ ಪ್ರಾಬಲ್ಯದ ಭಾಗಗಳಿಂದ ಮೈತೇಯಿಗಳು ಇಂಫಾಲ ಕಣಿವೆಗೂ; ಮೈತೇಯಿ ಪ್ರಾಬಲ್ಯದ ಇಂಫಾಲ, ಬಿಷ್ಣುಪುರದಂತಹ ಕಣಿವೆಗಳಿಂದ ಕುಕಿಗಳು ಚೂರಾಚಾಂದ್ಪುರಕ್ಕೂ ಸ್ಥಳಾಂತರಗೊಂಡರು.

ಕುಕಿಗಳ ನಿರಾಶ್ರಿತ ಶಿಬಿರವೊಂದರ ಚಿತ್ರಣ

ಮಣಿಪುರ ಅನಧಿಕೃತವಾಗಿ ಕಣಿವೆ- ಗುಡ್ಡಗಾಡಾಗಿ ವಿಭಾಗಿಸಲ್ಪಟ್ಟವು. ಇಂಫಾಲದಿಂದ ಕುಕಿ ಪ್ರದೇಶಗಳಿಗೆ ಯಾವುದೇ ಸೌಕರ್ಯಗಳು ಸರಬರಾಜಾಗದಂತೆ ತಡೆಯುವುದು ನಡೆಯಿತು. ಔಷಧಿಗಳಿಗಾಗಿ ಪಕ್ಕದ ಮಿಜೊರಾಂ ರಾಜ್ಯವನ್ನು ಕುಕಿಗಳು ಆಶ್ರಯಿಸಬೇಕಾಯಿತು. ಶಾಲೆಗಳಲ್ಲೇ ಶಿಬಿರಗಳನ್ನು ತೆರೆದಿದ್ದರಿಂದ ಮಕ್ಕಳ ಶಿಕ್ಷಣ ಮೂಲೆಗೆ ತಳ್ಳಲ್ಪಟ್ಟಿತು.

ಮಣಿಪುರ ಕಲಹಕ್ಕೆ ಉಭಯ ಸಮುದಾಯಗಳು ತಮ್ಮದೇ ಆದ ನರೇಟಿವ್‌ಗಳನ್ನು ಕಟ್ಟಿಕೊಂಡಿದ್ದು ಬಹುದೊಡ್ಡ ಕಾರಣ. ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಿದರೆ ಗುಡ್ಡಗಾಡು ಭಾಗದಲ್ಲಿ ಭೂಮಿ ಖರೀದಿಸುವ ಹಕ್ಕು ಪಡೆಯುತ್ತಾರೆಂಬುದು ನಿಜ. ಇದಿಷ್ಟೇ ಇಂತಹದೊಂದು ದೊಡ್ಡ ಕಲಹಕ್ಕೆ ನಾಂದಿ ಹಾಡಲಿಲ್ಲ. “ಮಯನ್ಮಾರ್‌ನಿಂದ ಹೆಚ್ಚಿನ ಕುಕಿಗಳು ಮಣಿಪುರಕ್ಕೆ ಬಂದು ನೆಲೆಸಿದ್ದಾರೆ, ಅವರು ಅಫೀಮು ಬೆಳೆಯುವಲ್ಲಿ ಸಕ್ರಿಯವಾಗಿದ್ದಾರೆ” ಎಂಬುದು ಮೈತೇಯಿಗಳ ವಾದ. ಆದರೆ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ತಮ್ಮ ಇತಿಹಾಸವನ್ನು ಕುಕಿಗಳು ಹೇಳಿಕೊಳ್ಳುತ್ತಾರೆ.

ಕುಕಿಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗಾಗಿ ಬೇಡಿಕೆ ಇಟ್ಟರು. ಆದರೆ ಮತ್ತೊಂದು ಪ್ರಬಲ ಬುಡಕಟ್ಟು ಸಮುದಾಯವಾದ ನಾಗಾಗಳು ಕುಕಿಗಳ ಬೇಡಿಕೆಗೆ ವಿರುದ್ಧ ನಿಂತರು. ಕುಕಿಲ್ಯಾಂಡ್ ಸ್ಥಾಪನೆಯಾದರೆ, ನಾಗಾಗಳ ಪ್ರಾಬಲ್ಯವಿರುವ ಉಕ್ರೂಲ್‌, ಸೇನಾಪತಿ ಜಿಲ್ಲೆಗಳನ್ನು ನಾಗಾಲ್ಯಾಂಡ್‌ಗೆ ಸೇರಿಸಬೇಕೆಂಬ ’ಗ್ರೇಟರ್‌ ನಾಗಲ್ಯಾಂಡ್‌’ ಹೋರಾಟ ಮರುಜೀವ ಪಡೆಯುವ ಸಾಧ್ಯತೆ ನಿಚ್ಚಳವಾಗಿತ್ತು. ಎಸ್‌ಟಿ ಸ್ಥಾನಮಾನವನ್ನು ಮೈತೇಯಿಗಳಿಗೆ ನೀಡಿದ್ದನ್ನು ವಿರೋಧಿಸಿದ್ದ ನಾಗಾಗಳು, ಪ್ರತ್ಯೇಕ ಆಡಳಿತ ವಿಚಾರದಲ್ಲಿ ಕುಕಿಗಳ ವಿರುದ್ಧ ನಿಲುವು ತಾಳಿದರು.

ಮಣಿಪುರ ಎರಡೂವರೆ ತಿಂಗಳು ಹೊತ್ತಿ ಉರಿದರೂ ದೇಶದಲ್ಲಿ ತಲ್ಲಣವನ್ನು ಉಂಟು ಮಾಡಿದ್ದು ಮಾತ್ರ ಬೆತ್ತಲೆ ವಿಡಿಯೊ ವೈರಲ್‌ ಆದ ಬಳಿಕ. ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ಮೇ 4ರಂದು ನಡೆದ ಈ ಘಟನೆ ಹೊರ ಜಗತ್ತಿಗೆ ಬರಲು ಎರಡೂವರೆ ತಿಂಗಳು ಬೇಕಾಯಿತು. ಮಣಿಪುರಿ ಪೊಲೀಸರೇ ಸಂತ್ರಸ್ತ ಮಹಿಳೆಯರನ್ನು ಉದ್ರಿಕ್ತ ಗುಂಪಿಗೆ ಹಿಡಿದುಕೊಟ್ಟಿದ್ದರೆಂಬ ಸಂಗತಿಯನ್ನು ಸಿಬಿಐ ಸಲ್ಲಿಸಿರುವ ಚಾರ್ಜ್‌‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಲಹ ಆರಂಭವಾಗಿ ಒಂದು ವರ್ಷವಾದರೂ ಮಣಿಪುರಕ್ಕೆ ಕಾಲಿಡದ ಪ್ರಧಾನಿ ನರೇಂದ್ರ ಮೋದಿ, 78 ದಿನಗಳ ಬಳಿಕ ಅಂತಿಮವಾಗಿ ಮೌನ ಮುರಿದದ್ದು ಬೆತ್ತಲೆ ವಿಡಿಯೊ ಹೊರಬಂದ ನಂತರವಷ್ಟೇ. “ಇಂತಹ ಘಟನೆಗಳು ರಾಜಸ್ಥಾನ, ಛತ್ತೀಸಗಡ ಎಲ್ಲೇ ನಡೆದರೂ ಸಹಿಸುವುದಿಲ್ಲ” ಎಂಬ ಹೇಳಿಕೆಯನ್ನು ಪ್ರಧಾನಿ ನೀಡಿದರು. ಆ ಸಂದರ್ಭದಲ್ಲಿ ರಾಜಸ್ಥಾನ, ಛತ್ತೀಸಗಡದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿ ಅವುಗಳ ಹೆಸರು ಎಳೆದು ತಂದು ಮೋದಿಯವರು ರಾಜಕಾರಣ ಮಾಡಿದರೆಂಬ ಕಟು ಟೀಕೆಗಳು ವ್ಯಕ್ತವಾದವು.

ಮೈತೇಯಿ ದುರುಭಿಮಾನವನ್ನೇ ಉಸಿರಾಡುವ ಆರಂಬೈ ತೆಂಗೋಲ್‌ ಮತ್ತು ಮೈತೇಯಿ ಲೀಪೂನ್‌ ಸಂಘಟನೆಗಳು ಈ ಜನಾಂಗೀಯ ಕಲಹದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿವೆ. ಕಪ್ಪು ಬಣ್ಣದ ಧಿರಿಸು ಧರಿಸುವ ಆರಂಬೈ ತೆಂಗೋಲ್‌ ಹುಡುಗರು- ಒಂದು ರೀತಿಯಲ್ಲಿ ಬಜರಂಗದಳದ ತದ್ರೂಪಿಗಳು. ಮೈತೇಯಿ ಲೀಪೂನ್‌ ಸಂಘಟನೆಯು ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಕುಕಿ ಸ್ಟುಡೆಂಟ್ ಸಂಘಟನೆ (ಕೆಎಸ್‌ಒ), ಇಂಡೀಜಿನಸ್ ಟ್ರೈಬಲ್ ಲೀಡರ್ಸ್ ಫೋರಂನಂತಹ ಸಂಘಟನೆಗಳು ಕುಕಿಗಳ ಹೋರಾಟವನ್ನು ಮುಂದುವರಿಸುತ್ತಿವೆ. ಪ್ರತ್ಯೇಕ ಆಡಳಿತಾಂಗವನ್ನು ಹುಟ್ಟಿಹಾಕಿಕೊಂಡು ‘ಲಾಮ್ಕಾ’ (ಚೂರಾಚಾಂದ್ಪುರಕ್ಕೆ ಕುಕಿಗಳು ಇಟ್ಟಿರುವ ಹೆಸರು) ಜಿಲ್ಲೆಯಲ್ಲಿ ಸಕ್ರಿಯವಾಗಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡಿ ’ಈದಿನ.ಕಾಂ’ ವರದಿ ಮಾಡಿತ್ತು. ಈ ವೇಳೆ ಅನೇಕ ಸತ್ಯಗಳನ್ನು ಕಂಡುಕೊಂಡಿದ್ದೆವು. ಮಾಜಿ ಐಪಿಎಸ್ ಅಧಿಕಾರಿ ತನೌಜಂ ಬೃಂದಾ ಅವರು ನೀಡಿದ್ದ ಸಂದರ್ಶನದಲ್ಲಿ, “ಅಫೀಮು ವ್ಯವಹಾರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಪಾತ್ರವಿದೆ. ಅವರ ಆಪ್ತ ವಲಯವೇ ಇದರಲ್ಲಿ ಭಾಗಿಯಾಗಿದೆ. ಮಾದಕ ವಸ್ತುಗಳ ಜಾಲವನ್ನು ನಿರ್ಮೂಲನೆ ಮಾಡುತ್ತೇವೆ ಎನ್ನುವ ಮುಖ್ಯಮಂತ್ರಿಗಳು ಪಕ್ಷಪಾತಿಯಾಗಿದ್ದಾರೆ” ಎಂದು ಸ್ಪಷ್ಟವಾಗಿ ಹೇಳಿದ್ದರು.

ಶಿಂಗ್ದಾದಾಮ್ ಎಂಬ ಗ್ರಾಮದಲ್ಲಿನ ಬಂಕರ್‌

ಮಣಿಪುರದಲ್ಲಿ ಸುದೀರ್ಘ ಕಾಲ ಸಂಘರ್ಷ ಮುಂದುವರಿಯುತ್ತಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣ- ನಾಗರಿಕರ ಕೈಗೆ ಬಂದೂಕುಗಳು ದೊರಕಿರುವುದು. ಕಲಹ ಆರಂಭವಾದ ದಿನಗಳಲ್ಲಿ ಸರ್ಕಾರಿ ಶಸ್ತ್ರಾಗಾರಗಳನ್ನು ನಾಗರಿಕ ಸಂಘಟನೆಗಳು ಲೂಟಿ ಮಾಡಿದವು. ಕೆಲವು ಕಡೆ ಅಧಿಕಾರಿಗಳೇ ಶಸ್ತ್ರಾಸ್ತ್ರಗಳನ್ನು ಜನರಿಗೆ ಒಪ್ಪಿಸಿದ್ದ ಸತ್ಯವನ್ನೂ ನಾವು ಕಂಡುಕೊಂಡಿದ್ದವು. ಮೈತೇಯಿ- ಕುಕಿ ಗಡಿ ಗ್ರಾಮಗಳಲ್ಲಿ ಬಂಕರ್‌ಗಳು ತಲೆ ಎತ್ತಿದ್ದವು. ನಾಗರಿಕರು ಪಾಳಿಯಲ್ಲಿ ಕೆಲಸ ಮಾಡುತ್ತಾ ಗ್ರಾಮಗಳನ್ನು ಕಾಯುತ್ತಿರುವುದು ಮುಂದುವರಿದಿವೆ. ಕೆಲವು ಬಂಕರ್‌ಗಳಲ್ಲಿ ಹದಿಹರೆಯದ ಯುವಕರೇ ಬಂದೂಕು ಹಿಡಿದು ನಿಂತಿರುವುದು ಮಣಿಪುರದ ಭವಿಷ್ಯ ಎತ್ತ ಕಡೆ ಸಾಗುತ್ತಿದೆ ಎಂಬುದನ್ನು ಹೇಳುತ್ತಿದ್ದವು.

ಬಂದೂಕು ಹಿಡಿದು ಕಾವಲು ಕಾಯುತ್ತಿರುವ ಕುಕಿ ಬಾಲಕ

ಮಣಿಪುರಿ ಮೈತೇಯಿ ಮಹಿಳೆಯರ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿರುವ ಮೈರಾಪೈಬಿಗಳು ಸಂಘರ್ಷದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮೈರಾಪೈಬಿ ಎಂದರೆ- ಪಂಜು ಹಿಡಿದ ಮಹಿಳೆಯರು ಎಂದರ್ಥ. ಎಪ್ಪತ್ತರ ದಶಕದಲ್ಲಿ ನಿಶಾಬಂಧಿ (ಮದ್ಯ ವಿರೋಧಿ ಚಳವಳಿ) ನಡೆಸಿ, ರಾತ್ರಿ ವೇಳೆ ಪಂಜುಗಳನ್ನು ಕೈಯಲ್ಲಿ ಹಿಡಿದು ನಡೆಯುತ್ತಾ ಮದ್ಯದ ಅಂಗಡಿಗಳಿಗೆ ಕಿಚ್ಚು ಹಚ್ಚುತ್ತಾ ಹೋರಾಡಿದ ದಿಟ್ಟ ಇತಿಹಾಸ ಮಣಿಪುರಿ ಮಹಿಳೆಯರಿಗಿದೆ. ಆ ಮೂಲಕ ಮೈರಾಪೈಬಿ ಅಸ್ಮಿತೆ ಚಾಲ್ತಿಗೆ ಬಂದಿತು. ಈಗಲೂ ಇಂಫಾಲ ಕಣಿವೆಯಲ್ಲಿ ರಾತ್ರಿ ವೇಳೆ ಮೈರಾಪೈಬಿಗಳು ಅಲಲ್ಲಿ ಕಾಣಸಿಗುತ್ತಾರೆ. 2004ರಲ್ಲಿ ತನ್‌ಜೋಮ್ ಮನೋರಮಾ ಅವರನ್ನು ಸೇನೆಯವರು ಭೀಕರವಾಗಿ ಅತ್ಯಾಚಾರ ಮಾಡಿ ಕೊಲೆಗೈದಾಗ, “ಇಂಡಿಯನ್ ಆರ್ಮಿ ರೇಪ್ ಅಸ್‌” (ಭಾರತೀಯ ಸೇನೆಯವರೇ ನಮ್ಮನ್ನೂ ರೇಪ್‌ ಮಾಡಿ) ಎಂದು ಬೆತ್ತಲೆ ಹೋರಾಟ ಮಾಡಿದ ಮೈರಾಪೈಬಿಗಳ ಕೈಗೆ ಮಣಿಪುರ ಜನಾಂಗೀಯ ಕಲಹವು ರಕ್ತವನ್ನು ಮೆತ್ತಿತ್ತು.

ಕುಕಿ ಮಹಿಳೆಯರನ್ನು ಮೈತೇಯಿ ಪುರುಷರಿಗೆ ಹಿಡಿದುಕೊಟ್ಟ ಅಪಖ್ಯಾತ ಅವರ ಮೇಲೆ ಬಂದಿತು. ಎಫ್‌ಐಆರ್‌ಗಳಲ್ಲಿ ಮೈರಾಪೈಬಿಗಳ ಹೆಸರುಗಳು ಉಲ್ಲೇಖಗೊಂಡವು. “ಮೈತೇಯಿ ಮಹಿಳೆಯರ ಮೇಲೂ ಅತ್ಯಾಚಾರಗಳಾಗಿವೆ. ಆದರೆ ಇವರು ಮಾನಕ್ಕೆ ಅಂಜುತ್ತಾರೆ. ಹೀಗಾಗಿ ಯಾರೂ ತಮಗಾದ ದೌರ್ಜನ್ಯವನ್ನು ಹೇಳಿಕೊಳ್ಳುತ್ತಿಲ್ಲ” ಎಂದು ಹಿರಿಯ ಮೈರಾಪೈಬಿ (ಬೆತ್ತಲಾಗಿ ಹೋರಾಟ ಮಾಡಿದ ಮಹಿಳೆ) ಇಮಾ ನಾಂಬಿ ’ಈದಿನ.ಕಾಂ’ಗೆ ತಿಳಿಸಿದ್ದರು.

ಇಂಫಾಲದ ಬೀದಿಯೊಂದರಲ್ಲಿ ಮೈರಾಪೈಬಿಗಳು

ಮಣಿಪುರ ಮಾನಸಿಕವಾಗಿ, ಭೌತಿಕವಾಗಿ ಇಬ್ಬಾಗವಾಗಿದ್ದರೂ ಅದನ್ನು ಕೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಲಿಲ್ಲ. ಮೈತೇಯಿ ಪಕ್ಷಪಾತಿಯಾಗಿರುವ ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಿಲ್ಲ. ಬಂದೂಕುಗಳ ನಡುವೆ ಮಣಿಪುರದ ಜನತೆ ಬದುಕುವಂತಾಗಿದೆ. ಪ್ರಧಾನಿ ಮೋದಿಯವರು ಚುನಾವಣೆಯ ಸಂದರ್ಭದಲ್ಲಿಯಾದರೂ ಮಣಿಪುರಕ್ಕೆ ಹೋಗುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಮತಗಟ್ಟೆಯ ಮೇಲೆ ಬಂದೂಕಿನ ದಾಳಿ ಮಾಡಿರುವ ವರದಿಗಳಾಗಿವೆ. ಬೂದಿ ಮುಚ್ಚಿದ ಕೆಂಡದಂತೆ ಮಣಿಪುರ ಹೊಗೆಯಾಡುತ್ತಲೇ ಇದೆ.

ಚಿತ್ರಗಳು: ಯತಿರಾಜ್ ಬ್ಯಾಲಹಳ್ಳಿ

ಚೂರಾಚಾಂದ್ಪುರ (ಲಮ್ಕಾ)ದಲ್ಲಿ ಕುಕಿಗಳು ನಿರ್ಮಿಸಿದ್ದ ’ನೆನಪಿನ ಗೋಡೆ’ (ವಾಲ್ ಆಫ್ ರಿಮೆಂಬರೆನ್ಸ್‌)
ಪಶ್ಚಿಮ ಇಂಫಾಲದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಆಹುತಿಯಾದ ಕಟ್ಟಡ
ಕಾವಲು ಕಾಯುತ್ತಿರುವ ಸೇನೆ
ಯತಿರಾಜ್‌ ಬ್ಯಾಲಹಳ್ಳಿ

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...