ಚಿಕ್ಕಮಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ ಕೂಡಿಹಾಕಿ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ಪಿಎಸ್‌ಐ ಸೇರಿ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಿರುವ ಬೆನ್ನಲ್ಲೇ, ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ‘ಬಾರ್ & ಬೆಂಚ್’ ವರದಿ ಮಾಡಿದೆ.
‘ಚಿಕ್ಕಮಗಳೂರಿನಲ್ಲಿ ವಕೀಲರು ಪೊಲೀಸರು ನಡುವಿನ ಕಲಹದಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳು ವಕೀಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನ 1 ಗಂಟೆಗೆ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ’ ಎಂದು ವರದಿ ಮಾಡಿದೆ.
ಚಿಕ್ಕಮಗಳೂರಿನಲ್ಲಿ ವಕೀಲರು ಪೊಲೀಸರು ನಡುವಿನ ಕಲಹದಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳು ವಕೀಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.#KarnatakaHighCourt #Lawyers pic.twitter.com/FyJAniWRIU
— ಬಾರ್ & ಬೆಂಚ್ – Kannada Bar & Bench (@Kbarandbench) December 1, 2023
ಏನಿದು ಘಟನೆ?
ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ ಕೂಡಿಹಾಕಿ ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ಪಿಎಸ್‌ಐ ಸೇರಿ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಯುವ ವಕೀಲ ಪ್ರೀತಂ ಎಂಬುವವರು ಗುರುವಾರ ರಾತ್ರಿ ಹೆಲ್ಮೆಟ್ ಇಲ್ಲದೆ ಮಾರುಕಟ್ಟೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಚಿಕ್ಕಮಗಳೂರು ನಗರ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ. ಬಳಿಕ ಠಾಣೆಯೊಳಗೆ ಕರೆದುಕೊಂಡು ಹೋಗಿ, ಕೂಡಿ ಹಾಕಿದ್ದಲ್ಲದೇ, ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ದೌರ್ಜನ್ಯದಿಂದ ವಕೀಲ ಪ್ರೀತಂ ಅವರ ಎದೆ, ಕೈ ಮತ್ತು ಬೆನ್ನಿಗೆ ಸಾಕಷ್ಟು ಗಾಯಗಳಾಗಿದ್ದು, ಇದು ವಕೀಲ ಸಮೂಹವನ್ನು ಇನ್ನಷ್ಟು ಕೆರಳುವಂತೆ ಮಾಡಿದೆ. ರಾತ್ರಿಯಿಡೀ ಠಾಣೆಯ ಎದುರು ಧರಣಿ ನಡೆಸಿ, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಠಾಣೆಯಲ್ಲಿ ಕೂಡಿಹಾಕಿ ಯುವ ವಕೀಲನಿಗೆ ಥಳಿತ; ಪಿಎಸ್‌ಐ ಸೇರಿ 6 ಮಂದಿ ಅಮಾನತು
ಈ ಬಗ್ಗೆ ಹೇಳಿಕೆ ನೀಡಿದ್ದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ‘ಠಾಣೆಯ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿ ಆರು ಪೊಲೀಸರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಅಷ್ಟೂ ಜನರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಡೀ ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಡಿವೈಎಸ್‌ಪಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದರು.