ಶೋಷಿತರ ಸಮಾವೇಶ: ಚಿತ್ರದುರ್ಗದಲ್ಲಿ ಅಹಿಂದ ಶಕ್ತಿ ಪ್ರದರ್ಶನ

Date:

Advertisements

‘ಸಿದ್ದರಾಮಯ್ಯನವರ ಕೈ ಬಲಗೊಳಿಸುತ್ತೇವೆ, ಕಾಂತರಾಜ ಆಯೋಗದ ವರದಿ ಬಿಡುಗಡೆಗೊಳಿಸಲಿ’

ತಾತ್ಕಾಲಿಕವಾಗಿ ಬೀಡುಬಿಟ್ಟ ಚಹಾ ಅಂಗಡಿಯ ಮುಂದೆ ಭಾನುವಾರ ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಪೊಲೀಸರಿಬ್ಬರು ಮಾತನಾಡಿಕೊಳ್ಳುತ್ತಿದ್ದರು.

“ಇಷ್ಟು ದೊಡ್ಡ ಪೆಂಡಾಲ್ ಹಾಕಿಸುವ ಅಗತ್ಯವಿರಲಿಲ್ಲ ಅನಿಸ್ತದೆ. ಈ ಹೊತ್ತಿಗಾಗ್ಲೇ ಜನ್ರು ಜಮಾಯಿಸ್ಬೇಬೇಕಿತ್ತು. ದೂರದೂರುಗಳಿಂದ ಬರೋವವ್ರನ್ನ ರಾತ್ರಿಯೇ ಕರೆತರಬೇಕಿತ್ತು. ನೋಡಿದರೆ ಜನವೇ ಕಾಣ್ತಿಲ್ಲ” ಎಂದು ಪೇದೆಯೊಬ್ಬ ಹೇಳಿದ.

Advertisements

ಎಕರೆಗಟ್ಟಲೆ ಪ್ರದೇಶದಲ್ಲಿ ಹಾಕಿರುವ ಪೆಂಡಾಲ್‌ಗೆ ಜನ ತುಂಬುತ್ತಾರಾ ಎಂಬ ಗುಮಾನಿ ಸಹಜವಾಗಿ ಮೂಡುತ್ತಿತ್ತು. ಆದರೆ ಬಿಸಿಲು ಏರಿದಂತೆ, ಜನರ ಬರುವಿಕೆಯೂ ಏರಿದ ಮೇಲೆ, ಎಂಥವರ ಊಹೆಯೂ ಹುಸಿಯಾಯಿತು.

ಹತ್ತಾರು ಎಕರೆಯಲ್ಲಿ ಹಾಕಿದ್ದ ಪೆಂಡಾಲ್ ತುಂಬಿ, ಆಚೆ ಈಚೆ ಹಾಕಿದ್ದ ಊಟದ ಕೌಂಟರ್‌ಗಳಲ್ಲೂ ಜನರು ಗಿಜಿಗಿಜಿ ಎನ್ನುತ್ತಿದ್ದರು.  ಮಾಂಸಾಹಾರದ ಜೊತೆಗೆ ಸಸ್ಯಾಹಾರವೂ ಮಾಡಿಸಲಾಗಿತ್ತು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬಿರಿಯಾನಿ ಬೆಳಿಗ್ಗೆ 10 ಗಂಟೆ ವೇಳೆಗೆ ಸಿದ್ಧವಿತ್ತು. ಸಾವಿರಾರು ಕೆ.ಜಿ ಚಿಕನ್‌ ಬೇಯಿಸುವುದಕ್ಕೆ ಸಿದ್ಧವಿತ್ತು. ಬೆಳಗ್ಗಿನಿಂದಲೇ ಊಟದ ಕೌಂಟರ್‌ಗಳನ್ನು ತೆರೆದು ಜನರ ಹಸಿವು ತಣಿಸಲಾಯಿತು. ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಚಿತ್ರದುರ್ಗದ ಮಾದರ ಚೆನ್ನಯ್ಯ ಪೀಠದ ಪಕ್ಕದ ಬೃಹತ್ ಮೈದಾನದಲ್ಲಿ ಆಯೋಜನೆಯಾಗಿದ್ದ ’ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ’ ಆರಂಭವಾಗಿದ್ದು ಹೀಗೆ.

ಬೆಳಗಾವಿ, ಬೀದರ್‌, ರಾಯಚೂರು, ಕೊಪ್ಪಳ, ಕಲಬುರಗಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ತುಮಕೂರು, ಬೆಂಗಳೂರು ಹೀಗೆ ವಿವಿಧ ಭಾಗಗಳಿಂದ ಸುಮಾರು ಮೂರು ಲಕ್ಷ ಜನರು ಹರಿದುಬಂದು ಶೋಷಿತರ ಜಾಗೃತಿ ಸಮಾವೇಶ ಅಂತಿಮವಾಗಿ ಯಶಸ್ವಿಯಾಯಿತು. ಸಮಾವೇಶ ನಡೆದ ಮೈದಾನದಿಂದ ಸುಮಾರು ಮೂರ್ನಾಲ್ಕು ಕಿಮೀ ದೂರದವರೆಗೂ ವಾಹನಗಳು ನಿಂತಿದ್ದವು, ಹೆದ್ದಾರಿಯು ಜನಜಂಗುಳಿಯಿಂದ ಕೂಡಿತ್ತು. ಅಂದಹಾಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮುದಾಯದ ಜನರು.

Shoshitara samavesha 2

ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಈ ’ಸಮಾವೇಶ’ವು ಬಹುಮುಖ್ಯವಾಗಿ ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಆಗ್ರಹಿಸಿತು.

ಪ್ರಭಾವಿ ಲಿಂಗಾಯತ, ಒಕ್ಕಲಿಗ ಸಮುದಾಯಗಳು ವರದಿಯನ್ನು ವಿರೋಧಿಸುತ್ತಿರುವ ಹೊತ್ತಿನಲ್ಲಿ, ಸಿದ್ದರಾಮಯ್ಯನವರ ಕೈ ಬಲಪಡಿಸಿ, ವರದಿಯನ್ನು ಸ್ವೀಕರಿಸಲು ಬಲ ತುಂಬುವುದಾಗಿ ಸಮಾವೇಶ ಘೋಷಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಮ್ಮ ಒತ್ತಾಯಗಳನ್ನು ಮಂಡಿಸಿ ಮಾತನಾಡಿದ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, “ಈವರೆಗೂ ಪಟ್ಟಿಯಲ್ಲೇ ಇರದ ಜಾತಿಗಳನ್ನು ಗುರುತಿಸುವ ಕೆಲಸವನ್ನು ಕಾಂತರಾಜ ಆಯೋಗ ಮಾಡಿದೆ. ಈ ವರದಿ ಯಾರ ವಿರುದ್ಧವೂ ಇಲ್ಲ. ಇದು ಅವೈಜ್ಞಾನಿಕವಾಗಿದೆ, ಮನೆಯಲ್ಲಿ ಕೂತು ಮಾಡಲಾಗಿದೆ, ಹೊಸದಾಗಿ ಸಮೀಕ್ಷೆ ಮಾಡಿಸಿ ಎನ್ನುವುದಕ್ಕೆ ಕಿವಿ ಕೊಡಬೇಡಿ. ಈ ವರದಿಗಾಗಿ ನಮ್ಮ ತೆರಿಗೆ ಹಣವನ್ನು ಖರ್ಚು ಮಾಡಲಾಗಿದೆ. ಮನೆ ಮನೆಗೂ ಹೋಗಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅದು ವೈಜ್ಞಾನಿಕವಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಇಂತಹ ಸಮೀಕ್ಷೆ ಮಾಡಿಲ್ಲ. ಯಾವುದೇ ಒತ್ತಡ ಬಂದರೂ ಆಯೋಗದ ವರದಿಯನ್ನು ಬಿಡುಗಡೆ ಮಾಡಿರಿ. ಎಲ್ಲ ಸಂದರ್ಭದಲ್ಲೂ ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ. ವಿರೋಧ ಮಾಡುವವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತೇವೆ” ಎಂದು ಗುಡುಗಿದರು.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ,  “ಸಿದ್ದರಾಮಯ್ಯನವರ ಕೈ ಬಲಪಡಿಸಬೇಕಿದೆ. ಅವರ ನೇತೃತ್ವದ ಸರ್ಕಾರದಿಂದಾಗಿ ಸಾಕಷ್ಟು ಬದಲಾವಣೆಗಳಾಗಿವೆ.  ವಿಶೇಷವಾಗಿ ಎಸ್ಸಿ, ಎಸ್‌ಟಿಗಳಿಗೆ ವಿಶೇಷ ಕಾನೂನಿನ ಮೂಲಕ ಸಾವಿರಾರು ಕೋಟಿ ರೂಗಳನ್ನು ಮೀಸಲಿಟ್ಟಿದ್ದಾರೆ. ಗ್ಯಾರಂಟಿಗಳ ಮೂಲಕ ಎಲ್ಲ ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಚುನಾವಣೆ ಬರುತ್ತಿದೆ. ಚುನಾಣೆಯಲ್ಲಿ ವೇಳೆ ಧಾರ್ಮಿಕವಾಗಿ ನಮ್ಮನ್ನು ಎಮೋಷನಲ್‌ ಮಾಡುತ್ತಾರೆ. ನೀವು ನಮ್ಮ ನಾಯಕರ ಪರ ಇರಬೇಕಾಗುತ್ತದೆ. ನ್ಯಾಯದ ಪರ ಇರುವುದಾಗಿ ಪ್ರತಿಜ್ಞೆ ಮಾಡಬೇಕಿದೆ. ಸಿದ್ದರಾಮಯ್ಯನವರ ಕೈ ಬಲಪಡಿಸಬೇಕಿದೆ” ಎಂದು ಕೋರಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, “1996ರಲ್ಲಿ ಜಾತಿಗಣತಿ ಮಾಡಬಾರದೆಂದು ವಾಜಪೇಯಿ ಸರ್ಕಾರ ಹೇಳಿತು. ಅಸಮಾನತೆಯ ಸಮಾಜ ನಮ್ಮದು. ಜಾತಿ ಪದ್ಧತಿಯನ್ನು ಒಪ್ಪಿಕೊಂಡಿದ್ದೇವೆ. ನಾಯಕರ ಹಟ್ಟಿ, ಕುರುಬರ ಹಟ್ಟಿ, ಗೊಲ್ಲರ ಹಟ್ಟಿ , ದಲಿತರ ಹಟ್ಟಿ ಅಭಿವೃದ್ಧಿಯಾಗದೆ ಸಮಸಮಾಜದ ನಿರ್ಮಾಣ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

Shoshitara samavesha 1

“ಕರ್ತವ್ಯ ಮತ್ತು ಜವಾಬ್ದಾರಿಯನ್ನು ಮರೆತು, ಸೂಕ್ಷ್ಮ ವಿಚಾರಗಳನ್ನು ತಂದು ಶೋಷಿತರನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಸಂವಿಧಾನ ಪೀಠಿಕೆಯನ್ನು ಪರಿಪೂರ್ಣ ಮಾಡಲು ನಾವೆಲ್ಲ ಹೋರಾಟ ಮಾಡಬೇಕಿದೆ. ಹೀಗಿರುವಾಗ ನಮ್ಮ ಏಕೈಕ ಆಶಾಕಿರಣ ನಮ್ಮ ಸಿದ್ದರಾಮಯ್ಯ” ಎಂದು ಬಣ್ಣಿಸಿದರು.

“ನಮ್ಮ ಮಕ್ಕಳು ಶಿಕ್ಷಣ ಪಡೆಯಬೇಕು. ಈ ದೇಶದಲ್ಲಿ ಮೂರು ಪರ್ಸೆಂಟ್ ಜನರು ಅಧಿಕಾರ, ಸೌಲಭ್ಯಗಳನ್ನು ಶೋಷಿತರಿಂದ ತಲುಪಲು ಬಿಡದೇ ವಂಚಿಸುತ್ತಿದ್ದಾರೆ. ರಾಜಕೀಯಕ್ಕಾಗಿ ಧಾರ್ಮಿಕ ಸೂಕ್ಷ್ಮ ವಿಚಾರಗಳನ್ನು ಮುಂದಕ್ಕೆ ತರುತ್ತಿದ್ದಾರೆ. ಈ ದೇಶದ ಆತ್ಮ ಸಂವಿಧಾನ. ಅದು ರಕ್ಷಣೆಯಾದರೆ ನಾವು ಉಳಿಯುತ್ತೇವೆ. ಜಾತಿ ಗಣತಿ ವರದಿ ಪಡೆಯಲು ಸಂಘಟನಾತ್ಮಕ ಹೋರಾಟ ಅನಿವಾರ್ಯ. ಐತಿಹಾಸಿಕ ಸಂಘಟನೆಯನ್ನು ಮಾಡಿ ಈ ದೇಶಕ್ಕೆ ಸಂದೇಶವನ್ನು ನೀಡಿದ್ದೀರಿ” ಎಂದರು.

ಅನಂತಕುಮಾರ್‌ ಹೆಗಡೆ ಅಯೋಗ್ಯ: ಮಾವಳ್ಳಿ ಶಂಕರ್‌ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಸಂಭೋದಿಸಿರುವ ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ದಲಿತ ಸಂಘರ್ಷ ಐಕ್ಯತಾ ಚಾಲನಾ ಸಮಿತಿಯ ಸಂಚಾಲಕರಾದ ಮಾವಳ್ಳಿ ಶಂಕರ್‌ ವಾಗ್ದಾಳಿ ನಡೆಸಿದರು.

“ಮನುವಾದ ದೇಶದ ಐಕ್ಯತೆಯನ್ನು ಒಡೆಯುತ್ತದೆ. ಆದರೆ ಅಂಬೇಡ್ಕರ್‌ ವಾದ ಎಲ್ಲರಿಗೂ ರಾಜಕೀಯ ಅಧಿಕಾರವನ್ನು ನೀಡುತ್ತದೆ . ನಮ್ಮ ದೇಶದ ಜನನಾಯಕ ಸಿದ್ದರಾಮಯ್ಯ. ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದರೆ ನಿಮ್ಮ ಬಾಯಿಗೆ ಬೀಗ ಹಾಕಲಾಗುತ್ತಿದೆ. ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡಿರುವ ಅನಂಕುಮಾರ್‌ ಹೆಗಡೆ ಒಬ್ಬ ಅಯೋಗ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಚರಿತ್ರೆಯಲ್ಲಿ ನಮ್ಮ ಪೂರ್ವಿಕರು ಮಾಡಿದ ಮಹಾನ್‌ ಹೋರಾಟಗಳನ್ನು ಈ ಚರಿತ್ರಕಾರರು ಮರೆಮಾಚಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶಾಹು ಮಹಾರಾಜರು ಮೊಟ್ಟಮೊದಲ ಬಾರಿಗೆ ಈ ದೇಶದಲ್ಲಿ ಶೋಷಿತ ಸಮುದಾಯಕ್ಕಾಗಿ ಮೀಸಲಾತಿ ತಂದರು. ಕುರಿ, ದನ ಕಾಯುವವನಿಗೆ, ಮಲ ಹೊರುವವನಿಗೆ ಮೀಸಲಾತಿಯನ್ನು ಕೊಟ್ಟಿದ್ದಾರೆ ಎಂದು ಟೀಕಿಸಿದವರು ಲೋಕಮಾನ್ಯರಾದರು” ಎಂದು ವಿಷಾದಿಸಿದರು.

“ಮುಖ್ಯಮಂತ್ರಿಗಳೇ ಯಾವುದೇ ಕಾರಣಕ್ಕೂ ಅಧೀರರಾಗಬೇಡಿ. ನಿಮ್ಮ ಪರವಾಗಿ ಇಡೀ ರಾಜ್ಯವಿದೆ. ಕಾಂತರಾಜ ಆಯೋಗದ ವರದಿ ಸಾಮಾಜಿಕ ನ್ಯಾಯದ ಅಡಿಗಲ್ಲು, ಅದು ಯಾರಿಗೂ ಮೋಸ ಮಾಡಲ್ಲ. ವರದಿ ಯಾರ ವಿರುದ್ಧವೂ ಇಲ್ಲ. ಅದು ಹೊರಗಡೆ ಬರಲಿ. ತಾಯಿ ಗರ್ಭದಲ್ಲಿ ಮಗುವಿದೆ. ಅದನ್ನು ಗರ್ಭದಲ್ಲೇ ಕೊಲ್ಲುವ ಕೆಲಸವಾದರೆ ಉತ್ತರವನ್ನು ಕೊಡುತ್ತೇವೆ” ಎಂದು ಎಚ್ಚರಿಸಿದರು.

ಮಂಡಲ್‌ ವರದಿ ಜಾರಿಯಾದಾಗ, ಚಿನ್ನಪ್ಪರೆಡ್ಡಿ ವರದಿ ಬಂದಾಗ ಇಡೀ ರಾಜ್ಯಾದ್ಯಂತ ಅದರ ಪರವಾಗಿ ಚಳವಳಿಯನ್ನು ಕಟ್ಟಿದವರು ಕೃಷ್ಣಪ್ಪ, ದಲಿತ ಚಳವಳಿಗೆ ಕಾರಣರಾದವರು ಬಿ.ಬಸವಲಿಂಗಪ್ಪ. ಇವರನ್ನು ಕರ್ನಾಟಕ ರತ್ನ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿ, ಭಾಷಣ ಮುಗಿಸಿದ ಬಳಿಕ ಡಿ.ಕೆ.ಶಿವಕುಮಾರ್‌ ವೇದಿಕೆಯಿಂದ ಹೊರನಡೆದರು. ಅವರು ತಮ್ಮ ಭಾಷಣದಲ್ಲಿ ಕಾಂತರಾಜ ಆಯೋಗದ ವರದಿಯನ್ನು ಪ್ರಸ್ತಾಪಿಸಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಬಣ್ಣಿಸಿದರು.

Chitradurga samavesha

“ಐತಿಹಾಸಿಕವಾದ ಕಾರ್ಯಕ್ರಮವಿದು. ಬದಲಾವಣೆಯ ಪರ್ವಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ‌ಈ ದೇಶದ ಇತಿಹಾಸ. ನಿಮಗೆ ನಮ್ಮೆಲ್ಲರ ಮೇಲೆ ನಂಬಿಕೆ. ಮರಕ್ಕೆ ಬೇರು ಮುಖ್ಯ, ಹಾಗೆಯೇ ನಂಬಿಕೆಯೂ ಕೂಡ ಮನುಷ್ಯನಿಗೆ ಮುಖ್ಯ. ನಾವು ಜಾಗೃತರಾಗಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಯಶಸ್ಸು ಎನ್ನುವುದು ಯಾರ ಆಸ್ತಿಯೂ ಅಲ್ಲ. ಐದು ಗ್ಯಾರಂಟಿಗಳನ್ನು ಚುನಾವಣೆ ಮುಗಿದು ಐದು ತಿಂಗಳಲ್ಲಿ ಜಾರಿಗೆ ತರಲಾಯಿತು. ಐದು ಬೆರಳಿನಿಂದ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿ ಅರಳಿದ ಕಮಲ ಉದುರಿ ಹೋಯಿತು. ತೆನೆಹೊತ್ತ ಮಹಿಳೆ ಎಸೆದು ಹೋದಳು” ಎಂದು ವ್ಯಂಗ್ಯವಾಡಿದರು.

ಜಮೀರ್‌ ಅಹಮ್ಮದ್ ಖಾನ್, ಕೆ.ಎಚ್.ಮುನಿಯಪ್ಪ, ಬೋಸರಾಜ್, ಆರ್‌.ಬಿ. ತಿಮ್ಮಾಪುರ, ದಿನೇಶ್ ಗುಂಡೂರಾವ್,  ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ, ಮಧು  ಬಂಗಾರಪ್ಪ, ಬೈರತಿ ಸುರೇಶ್‌, ಎಚ್.ಎಂ.ರೇವಣ್ಣ, ಭೀಮಾ ನಾಯ್ಕ್, ಮಧು ಬಂಗಾರಪ್ಪ, ರಾಘವೇಂದ್ರ ಇಟ್ನಾಲ್‌, ನಜೀರ್‌ ಅಹಮ್ಮದ್‌, ಪ್ರದೀಶ್ ಈಶ್ವರ್‌, ನಾಗೇಂದ್ರ, ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಎಚ್‌.ಆಂಜನೇಯ, ರಘುಮೂರ್ತಿ, ಸೀತಾರಾಮ್, ಆರ್‌.ವೆಂಕಟರಾಮಯ್ಯ, ಅನಂತ್‌ ನಾಯ್ಕ್‌ ಮೊದಲಾದವರು ಹಾಜರಿದ್ದರು.

samavbesha

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X