ಕರ್ನಾಟಕದಲ್ಲಿ ಮೂರು ವರ್ಷದ ಅವಧಿಯಲ್ಲೇ ಸೈಬರ್ ಕ್ರೈಂ ಪ್ರಕರಣಗಳು ದುಪ್ಪಟ್ಟಾಗಿದೆ ಎಂದು ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“2020ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 11,000 ಸೈಬರ್ ಕ್ರೈಂ ಪ್ರಕರಣಗಳನ್ನು ದಾಖಲಿಸಿದೆ. 2023ರ ವೇಳೆಗೆ ಈ ಸಂಖ್ಯೆಯು ದುಪ್ಪಟ್ಟಾಗಿ 22,000ಕ್ಕೆ ತಲುಪಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ದಾಖಲಾದ ಈ ಪ್ರಕರಣಗಳು ಕರ್ನಾಟಕ ರಾಜ್ಯ ಪೊಲೀಸರಿಗೆ ಮಾತ್ರವಲ್ಲ ಐಟಿ ವಲಯಕ್ಕೆ ದೊಡ್ಡ ಸವಾಲಾಗಿದೆ,” ಎಂದು ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಹೇಳಿದರು.

ಬೆಂಗಳೂರಿನಲ್ಲೇ ಅಧಿಕವಾಗಿ ಇಂತಹ ಅಪರಾಧಗಳು ನಡೆಯುತ್ತಿದೆ ಎಂದು ಅಲೋಕ್ ತಿಳಿಸಿದ್ದಾರೆ. ರಾಜ್ಯದಲ್ಲಿ ದಾಖಲಾದ ನಾಲ್ಕು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಒಂದು ಬೆಂಗಳೂರಿಗೆ ಸಂಬಂಧಿಸಿದ್ದು ಆಗಿರುತ್ತದೆ. ಒಟ್ಟು ಪ್ರಕರಣದಲ್ಲಿ ಶೇಕಡ 25 ರಷ್ಟು ಬೆಂಗಳೂರಿಗೆ ಸೇರಿದ್ದು ಎಂದು ಡಿಜಿಪಿ ತಿಳಿಸಿದ್ದಾರೆ.
ನ್ಯಾಷನಲ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮೂಲಕ ಕಳೆದ 9 ತಿಂಗಳ ಅವಧಿಯಲ್ಲಿ 64,000 ದೂರುಗಳನ್ನು ದಾಖಲಿಸಲಾಗಿದೆ. ಈ ಪೈಕಿ ಒಟ್ಟಾಗಿ 70 ಕೋಟಿ ರೂಪಾಯಿಯನ್ನು ಸೈಬರ್ ವಂಚನೆಗೆ ಒಳಗಾದವರಿಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಐಟಿ ಕ್ಷೇತ್ರ, ಅಕಾಡೆಮಿಯಾ ಮತ್ತು ಇತರೆ ಸ್ಟೇಕ್‌ಹೋಲ್ಡರ್‌ಗಳ ಜೊತೆಗೆ ಸೇರಿಕೊಂಡು ನಾವು ಈ ಸೈಬರ್ ಅಪರಾಧದ ಜಾಲ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು. ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ 31,000 ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳನ್ನು, ನ್ಯಾಯಾಂಗ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸವಾಲು ಎಂಬ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದ ಡಿಐಜಿ ವಂಶಿ ಕೃಷ್ಣ ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ದಾಖಲಾದ ಸೈಬರ್ ಕ್ರೈಂ ಪ್ರಕರಣಗಳು ಶೇಕಡ 183ರಷ್ಟು ಏರಿಕೆಯಾಗಿದೆ. ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಬದಲಾಗುತ್ತಾ ಸಾಗುತ್ತಿದೆ ಎಂದಿದ್ದರು.
“ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿ ತುಂಬಾ ಗಂಭೀರವಾಯಿತು. ವಂಚಕರು ಬೇರೆ ಬೇರೆ ರೀತಿಯ ತಂತ್ರವನ್ನು ಅಪರಾಧಕ್ಕೆ ಬಳಸುತ್ತಿದ್ದಾರೆ. ಇತ್ತೀಚೆಗೆ ಎಐ ಚಾಲಿತ ಮಾಲ್ವೇರ್ ಬಳಸಿ ವಂಚನೆ ಮಾಡಿರುವುದು ತಿಳಿದು ಬಂದಿದೆ. ಆದ್ದರಿಂದಾಗಿ ಈ ಅಪರಾಧಿಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ,” ಎಂದು ಹೇಳಿದ್ದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.