ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಆಶಾ ಕಾರ್ಯಕರ್ತೆಯರ ಮುಖಂಡರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ
“ದುಡಿತಕ್ಕೆ ಸರಿಯಾಗಿ ಪ್ರೋತ್ಸಾಹ ಧನ ಸಿಗದೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟಲು ತಕ್ಷಣವೇ ಆಶಾ ಪೇಮೆಂಟ್ ಪ್ರಕ್ರಿಯೆಯಿಂದ ಆರ್‌ಸಿಎಚ್ ಪೋರ್ಟಲ್ ಡೀಲಿಂಕ್ ಮಾಡಬೇಕು; ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಒಟ್ಟು 15,000 ರೂ. ಪ್ರೋತ್ಸಾಹ ಧನ ನೀಡಬೇಕು” ಎಂಬ ಆಗ್ರಹಗಳೊಂದಿಗೆ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ’ವಿಧಾನಸೌಧ ಚಲೋ’ ಎರಡನೇ ದಿನದಲ್ಲೂ ಮುಂದುವರಿಯಿತು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿದೆ.
ಫ್ರೀಡಂ ಪಾರ್ಕಿನಾದ್ಯಂತ ಗುಲಾಬಿ ಬಣ್ಣವನ್ನೇ ಚೆಲ್ಲಿದಂತೆ ಆಶಾ ಕಾರ್ಯಕರ್ತೆಯರು ಕೂತಿದ್ದರು. ಮಂಗಳವಾರ ಸಂಜೆ ಸ್ಥಳಕ್ಕೆ ಧಾವಿಸಿದ್ದ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಅವರ ತಂಡವು ಯಾವುದೇ ಖಚಿತ ಭರವಸೆಯನ್ನು ನೀಡದಿರುವುದು ದುಡಿಯುವ ವರ್ಗದ ಮಹಿಳೆಯರನ್ನು ಚಿಂತನೆ ಈಡು ಮಾಡಿತ್ತು.
‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಹಲವು ಆಶಾ ಕಾರ್ಯಕರ್ತೆಯರು ತಾವು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಹಂಚಿಕೊಂಡಿದ್ದಾರೆ.
ಶಿವಮೊಗ್ಗ ಆಶಾಕಾರ್ಯಕರ್ತೆ ಪಾರ್ವತಿ ಮಾತನಾಡಿ, “ಆರ್‌ಸಿಎಚ್ ಪೋರ್ಟಲ್ ನಮಗೆ ಬೇಡ. ಅದು ಸರಿಯಾಗಿ ವರ್ಕ್ ಆಗ್ತಾ ಇಲ್ಲ. ನಾವು ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ” ಎಂದು ತಿಳಿಸಿದರು.
“ಪ್ರತಿ ತಿಂಗಳು ಒಮ್ಮೆ ಸಭೆ ಮಾಡುತ್ತಾರೆ. ನಾವು ಮಾಡುವ ಸುಮಾರು 35 ಕೆಲಸಗಳ ರಿಪೋರ್ಟ್ ಬರೆದು ಕೊಡುತ್ತೇವೆ. ಅದನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತಿಲ್ಲ. ಅಲ್ಲಿ ದಾಖಲಾಗದೆ ನಮಗೆ ಪ್ರೋತ್ಸಾಹ ಧನ ಸಿಗುವುದಿಲ್ಲ. ಹೀಗಾಗಿ ಆರ್‌ಸಿಎಚ್ ಪೋರ್ಟಲ್ ಬೇಡವೇ ಬೇಡ” ಎಂದು ಆಗ್ರಹಿಸಿದರು.
ವಿಜಯಪುರದ ಆಶಾ ವರ್ಕರ್ ಭಾರತಿ ಮ್ಯಾಗೇರಿ ಮಾತನಾಡಿ, “ನಾಲ್ಕು ತಾಸು ಮಾತ್ರ ಕೆಲಸ ಮಾಡಿ ಎಂದು ನಮ್ಮನ್ನು ನೇಮಿಸಿಕೊಂಡಿದ್ದರು. ಆದರೀಗ ದಿನ 24 ಗಂಟೆಯೂ ಒಂದಲ್ಲ ಒಂದು ರೀತಿ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ಸರಿಯಾದ ವೇತನ ಸಿಗುತ್ತಿಲ್ಲ. ಕೂಲಿ ಮಾಡುವ ಹೆಂಗಸರಿಗೆ ದಿನಕ್ಕೆ ಐದು ನೂರು ರೂಪಾಯಿ ಪೇಮೆಂಟ್ ದೊರಕುತ್ತದೆ. ಹಗಲು ರಾತ್ರಿ ತಾಯಿ- ಮಕ್ಕಳ ಪೋಷಣೆ ಮಾಡುವ ನಮ್ಮ ಸ್ಥಿತಿ ಶೋಚನೀಯ. ಆಶಾ ಕಾರ್ಯಕರ್ತೆಯರನ್ನು ಆಸ್ಪತ್ರೆಗಳಲ್ಲೂ ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯಪುರದ ಆಶಾ ವರ್ಕರ್ ವೇದಾ ಕುಚಬಾಳ ಮಾತನಾಡಿ, “ನಮಗೆ ರಜೆ ಎಂಬುದೇ ಇಲ್ಲ. ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾಗಿ ಒಂದು ತಿಂಗಳು ರಜೆ ತಗೊಂಡರೂ ಪೇಮೆಂಟ್ ಕಟ್ ಮಾಡುತ್ತಾರೆ. ಇಲ್ಲವಾದರೆ ಕೆಲಸದಿಂದಲೇ ತೆಗೆದು ಹಾಕುತ್ತಾರೆ” ಎಂದು ವಿವರಿಸಿದರು.
ಮಂಡ್ಯದ ಆಶಾ ಕಾರ್ಯಕರ್ತೆ ಸವಿತಾ ಮಾತನಾಡಿ, “ಹದಿಮೂರು ವರ್ಷದ ಹಿಂದೆ ನಿಗದಿ ಮಾಡಿರುವ ಪ್ರೋತ್ಸಾಹ ಧನವನ್ನೇ ಇಂದಿಗೂ ಕೊಡುತ್ತಿದ್ದಾರೆ. ಬೇರೆಯವರ ವೇತನವೆಲ್ಲ ಹೆಚ್ಚಾಗುತ್ತದೆ. ಆದರೆ ಆಶಾಗಳ ಪ್ರೋತ್ಸಾಹ ಧನ ಇದ್ದಲ್ಲೇ ಇದೆ” ಎಂದು ಹೇಳಿದರು.
ವಿಜಯಪುರದ ರೇಣುಕಾ ಉಪ್ಪಾರ ಮಾತನಾಡಿ, “ಮೊಬೈಲ್‌ನಲ್ಲಿ ವರ್ಕ್‌ಮಾಡಿ ಎನ್ನುತ್ತಿದ್ದಾರೆ. ಇತ್ತೀಚೆಗೆ ಕೆಲಸಕ್ಕೆ ಸೇರಿದ ಆಶಾ ಕಾರ್ಯಕರ್ತೆಯರಲ್ಲಿ ಹತ್ತನೇ ತರಗತಿ, ಪಿಯುಸಿ ಓದಿದವರು ಇದ್ದಾರೆ. ಆದರೆ ಹಲವು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ ಆಶಾಗಳಲ್ಲಿ ಬಹುತೇಕರು ಮೂರನೇ ತರಗತಿ, ಏಳನೇ ತರಗತಿ ಓದಿದವರೇ ಹೆಚ್ಚು. ಅಂಥವರಿಗೆಲ್ಲ ಮೊಬೈಲ್‌ನಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ” ಎಂದು ಸಮಸ್ಯೆಯನ್ನು ಹೇಳಿಕೊಂಡರು.
ಸಿಎಂಗೆ ಮನವಿ ಸಲ್ಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರ ನಿಯೋಗವು, “ನಾವು ದುಡಿಯುತ್ತಿರುವ ಹಣವನ್ನಷ್ಟೇ ಕೇಳುತ್ತಿದ್ದೇವೆ, ಪೋರ್ಟಲ್‌ನಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ಅದನ್ನು ಸರಿಪಡಿಸಿ” ಎಂದಿದ್ದಾರೆ. “ಹೋರಾಟವನ್ನು ಕೈಬಿಡಬೇಕು” ಎಂದು ಸಿಎಂ ಕೋರಿದ್ದಾರೆ.
