ಬೆಳಗಾವಿ ಅಧಿವೇಶನ | ರೈತರ ಬಗ್ಗೆ ಕಟುಕರ ರೀತಿ ವರ್ತಿಸಿದ ಸರ್ಕಾರ: ಆರ್ ಅಶೋಕ‌ ಟೀಕೆ

Date:

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕರಾಗಿರುವ ಆರ್‌ ಅಶೋಕ್‌ ಅವರು ಸುದೀರ್ಘ ಎರಡು ಗಂಟೆಗಳ ಕಾಲ ರಾಜ್ಯದ ಬರಗಾಲ ವಿಚಾರವಾಗಿ ಮಾತನಾಡುತ್ತ, ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸುವ ಪ್ರಯತ್ನ ಮಾಡಿದರು.

16ನೇ ವಿಧಾನಸಭೆಯ ಎರಡನೇ ಅಧಿವೇಶನದ ಎರಡನೆಯ ದಿನವಾದ ಮಂಗಳವಾರ ನಡೆದ ಮಧ್ಯಾಹ್ನದ ಕಲಾಪದಲ್ಲಿ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಬರಗಾಲ ವಿಚಾರವನ್ನು ಚರ್ಚೆಗೆ ಎತ್ತಿಕೊಂಡು ಪ್ರತಿಪಕ್ಷ ನಾಯಕ ಆರ್‌ ಅಶೋಕ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

“223 ತಾಲ್ಲೂಕುಗಳಲ್ಲಿ ಬರ ಇದ್ದು, ಬಹುತೇಕ ಕರ್ನಾಟಕ ಬರಗಾಲಕ್ಕೆ ಸಿಲುಕಿದೆ. ಮುಂಗಾರು ಕೈಕೊಟ್ಟಿದ್ದರಿಂದ ರೈತ ಬೆಳೆದ ಬೆಳೆ ಕೈಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರ ಅನ್ನದಾತರ ವಿಷಯದಲ್ಲಿ ಕಟುಕರ ರೀತಿ ನಡೆದುಕೊಂಡಿದೆ” ಎಂದು ಟೀಕಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯ ಸರ್ಕಾರ ಬರಗಾಲದಲ್ಲಿ ಮಾಡಬೇಕಾದ ಕೆಲಸ ಮಾಡಲಿಲ್ಲ. ಸಂಪೂರ್ಣವಾಗಿ ವಿಫಲವಾಗಿದೆ. ಪ್ರತಿ ದಿನ ಮೊಸಳೆ ಕಣ್ಣೀರು ಹಾಕಿದೆ. ಜೂನ್‌ ನಿಂದ ಕಾಯುತ್ತ ಕುಳಿತೆವು. ಕೊನೆಗೆ ಸೆಪ್ಟೆಂಬರ್‌ 13ಕ್ಕೆ ಬರಗಾಲದ ಮೊದಲ ಪಟ್ಟಿ ಬಿಡುಗಡೆ ಮಾಡಿತು. ಇದರ ಅರ್ಥ, ಉದ್ದೇಶಪೂರ್ವಕವಾಗಿ ಮುಂದೆ ಹಾಕಿದೆ” ಎಂದು ತರಾಟೆಗೆ ತಗೆದುಕೊಂಡರು.

ಇಡೀ ರಾಜ್ಯದ ಜನತೆ ಕಾಂಗ್ರೆಸ್‌ ಕೈಯಲ್ಲಿ ಖಜಾನೆ ಕೊಟ್ಟಿದೆ. ಆಡಳಿತ ಪಕ್ಷದವರು ಹೇಗರಬೇಕು? ಅನ್ನದಾತರ ಬಗ್ಗೆ ಕೇವಲ ಭಾಷಣ ಮಾಡಲಾಗುತ್ತಿದೆ. ಅವರ ಸಂಕಷ್ಟಕ್ಕೆ ಮಿಡಿಯಬೇಕು. ಆಡಳಿತ ಪಕ್ಷಕ್ಕೆ ತಾಯಿಯ ಹೃದಯ ಇರಬೇಕಿತ್ತು. ಆದರೆ, ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಹರಿಹಾಯ್ದರು.

H K patil

“ಅಧಿವೇಶನ ನಡೆಯುತ್ತಿದೆ, ಪ್ರತಿಪಕ್ಷದವರು ತರಾಟೆಗೆ ತಗೆದುಕೊಳ್ಳುತ್ತಾರೆ ಎಂದು ಮೊನ್ನೆ 2000 ಬೆಳೆ ಪರಿಹಾರ ಘೋಷಣೆ ಆಗಿದೆ. ನಮ್ಮ ರೈತರೇನು ಭಿಕ್ಷೆ ಬೇಡುತ್ತಿದ್ದಾರಾ? ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿದೀರಿ. ಎಷ್ಟು ಕೋಟಿ ಎಂಬದು ಸರ್ಕಾರವೇ ಹೇಳಬೇಕು. ನಮ್ಮ ಜಾಹೀರಾತು ಅವರಿಗೇನು ಉಪಯೋಗ? ಕರ್ನಾಟಕದ ದುಡ್ಡು ಅಲ್ಲಿ ಮಜಾ ಮಾಡಲು ಕೊಟ್ಟಂಗೆ ಆಗಿದೆ” ಎಂದು ಟೀಕಿಸಿದರು.

ಕರ್ನಾಟಕ ಜನ ಒಂದು ಮನುಷ್ಯನ ಜೀವಿತಾವಧಿಯನ್ನೆ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಕೊಟ್ಟಿದೆ. ಆದರೂ ಇವತ್ತೂ ಗೂಳೆ ಹೋಗುವುದು ತಪ್ಪಿಲ್ಲ. ಪ್ರತಿ ಬರಗಾಲದಲ್ಲಿ ಇದು ನಡೆಯುತ್ತಿದೆ. ಇಷ್ಟು ವರ್ಷದಲ್ಲಿ ಎಂದಾದರೂ ಇದಕ್ಕೆ ಶಾಶ್ವತ ಪರಿಹಾರ ಹುಡುಕಿದ್ದೀರಾ” ಎಂದು ಪ್ರಶ್ನಿಸಿದರು.

ತಪ್ಪು ಮಾಹಿತಿ ಕೊಡಬೇಡಿ: ಎಚ್ ಕೆ ಪಾಟೀಲ

ಕಾನೂನು ಸಚಿವ ಎಚ್‌ ಕೆ ಪಾಟೀಲ ಮಧ್ಯ ಪ್ರವೇಶಿಸಿ, “ಈ ಮಾತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾತನಾಡಲು ಚೆಂದ. ತಪ್ಪು ಮಾಹಿತಿ ಕೊಡಬೇಡಿ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇದೆ” ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಎಚ್‌ ಕೆ ಪಾಟೀಲ ಮಾತಿಗೆ ಧ್ವನಿಗೂಡಿಸಿ, “ಮನರೇಗಾ ಯೋಜನೆ ಸರಿಯಾಗಿ ನಡೆಯುತ್ತಿಲ್ಲ ಅಂದ್ರೆ ಕೇಂದ್ರ ಸರ್ಕಾರ ಬಂದು ಮಾಡಲಿ. ಮಿನಿಮಮ್‌ ವೇಜಸ್‌ ಹೆಚ್ಚು ಮಾಡಿ ಕರ್ನಾಟಕದಲ್ಲಿ ಜಾರಿ ಮಾಡಿದ್ದೇವೆ. ವರ್ಷಕ್ಕೆ 60-70 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಸುಮ್ಮನೇ ಮಾತನಾಡುವುದಲ್ಲ” ಎಂದರು.

ರಾಯರೆಡ್ಡಿ

ಆರ್‌ ಅಶೋಕರ ಅರ್ಧ ಕಾಲು ಸರ್ಕಾರದಲ್ಲಿದೆ: ರಾಯರೆಡ್ಡಿ

ಆರ್‌ ಅಶೋಕ ಅವರ ಭಾಷಣದ ನಡುವೆ ಶಾಸಕ ಬಸವರಾಜ ರಾಯರೆಡ್ಡಿ ಎದ್ದು ನಿಂತು, “ಆರ್‌ ಅಶೋಕ ಅವರು ವಿರೋಧ ಪಕ್ಷದ ನಾಯಕರಂತೆ ಮಾತನಾಡುತ್ತಿಲ್ಲ. ಬಹಳ ಮೃಧುವಾಗಿ ಅರ್ಧಕಾಲು ಸರ್ಕಾರದಲ್ಲಿ ಇಟ್ಟು ಮಾತನಾಡಿದಂತಿದೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ದೊಡ್ಡ ಬೆಲೆ ಇದೆ. ಅದಕ್ಕೆ ಶಕ್ತಿ ತುಂಬಿ ಮಾತನಾಡಿ” ಎಂದು ಪ್ರೇರೇಪಿಸಿದರು.

ರಾಯರೆಡ್ಡಿ ಮಾತನ್ನು ಆರ್‌ ಅಶೋಕ ನಗುತ್ತಲೇ ಸ್ವೀಕರಿಸಿ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಎಂದರು. ಆರ್‌ ಅಶೋಕ ಅವರು ಮಾತನಾಡುತ್ತಿರುವಾಗ ಮಧ್ಯೆ ಮಧ್ಯೆ ಬಿಜೆಪಿ ಶಾಸಕರು ಎದ್ದು ನಿಂತು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ, “ನನ್ನ ಆತ್ಮೀಯ ಗೆಳೆಯ ಆರ್‌ ಅಶೋಕ ಅವರು ವಿಪಕ್ಷ ನಾಯಕ ಆಗಿರುವುದಕ್ಕೆ ಬಿಜೆಪಿ ನಾಯಕರಲ್ಲಿ ಅಸಮಾಧಾನವಿದೆ. ಹೀಗಾಗಿ ಅವರ ಮಾತಿನ ಗಂಭೀರತೆ ಕಳೆಯಲು ಬಿಜೆಪಿ ಶಾಸಕರು ಪ್ರಯತ್ನಿಸುತ್ತಿದ್ದಾರೆ” ಎಂದು ಛೇಡಿಸಿದರು. “ನನ್ನ ಗೆಳೆಯ ಸವದಿ ಅವರ ಎಚ್ಚರಿಕೆ ಮಾತುಗಳಿಗೆ ಧನ್ಯವಾದ” ಎಂದು ಅಶೋಕ ತಿಳಿಸಿದರು.

ಆರ್‌ ಅಶೋಕ ಅವರ ಭಾಷಣ ಎರಡು ಗಂಟೆ ಆಗುತ್ತಿದ್ದಂತೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿ, “6 ಗಂಟೆ ಆಯ್ತು. ಹೀಗೆ ಎಷ್ಟು ಅಂತ ಕುಳಿತುಕೊಳ್ಳೋಣ. ಮೊದಲ ಬಾರಿಗೆ ಆರ್‌ ಅಶೋಕ ಅವರು ಮಾತನಾಡುತ್ತಿದ್ದಾರೆ. ಅವರಿಗೆ ನಾಳೆಗೆ ಅವಕಾಶ ಮಾಡಿಕೊಟ್ಟು, ಇಂದಿನ ಸದನ ಮುಗಿಸಿ” ಎಂದು ವಿನಂತಿಸಿದರು. ಸಭಾಧ್ಯಕ್ಷರು ಬುಧವಾರಕ್ಕೆ ಸದನ ಮುಂದೂಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...

ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ

ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ...

ಕೋಲಾರ | ಇವಿಎಂ ಮೆಷಿನ್ ಸಾಗಿಸುತ್ತಿದ್ದ ವಾಹನದ ಟೈರ್ ಬ್ಲಾಸ್ಟ್: ಪೊಲೀಸ್ ಬಂದೋಬಸ್ತ್

ಮುಳಬಾಗಿಲಿನಿಂದ ಕೋಲಾರದ ಸ್ಟ್ರಾಂಗ್‌ ರೂಮ್‌ಗೆ ಇವಿಎಂ ಮೆಷಿನ್‌ಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್...