ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಪರಾಧಿ ಎಂದು ಹೈಕೋರ್ಟ್ ಹೇಳಿಲ್ಲ. ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂಬ ತೀರ್ಪು ನೀಡಿದೆ. ಇದರಿಂದ ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಸಿಎಂ ಕುಟುಂಬ ಒಳಗೊಂಡ ಕುರಿತ ಬಿಜೆಪಿ ಹೋರಾಟ ಮತ್ತು ಪಾದಯಾತ್ರೆಗೆ ಹಿನ್ನಡೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಮೈಸೂರಿನ ಮುಡಾ ಹಗರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದರು. ಆ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ. ಅದರ ಅರ್ಥ ಸಿಎಂ ಸಿದ್ದರಾಮಯ್ಯನವರು ನಿರಪರಾಧಿ ಎಂದು ಹೈಕೋರ್ಟ್ ಹೇಳಿಲ್ಲ” ಎಂದರು.
“ಲೋಕಾಯುಕ್ತ ಮತ್ತು ಇ.ಡಿ. ತನಿಖೆ ನಡೆಯುತ್ತಿದೆ. ಮುಂದೇನಾಗುತ್ತದೆ ಕಾದು ನೋಡೋಣ. ರಾಜ್ಯ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಿಎಂ ಕುಟುಂಬ ನಿರಪರಾಧಿಗಳೆಂದು ಹೇಳಿಲ್ಲ. ಮುಡಾ ಹಗರಣದಲ್ಲಿ ಸಿಎಂ ಕುಟುಂಬ ಭಾಗಿ ಆಗಿರುವುದು ಮತ್ತು ಸಾವಿರಾರು ಕೋಟಿ ರೂಪಾಯಿ ಲೂಟಿ ಆದುದನ್ನು ತಿಳಿಸಿ ನಾವು ಹೋರಾಟ ಮಾಡಿದ್ದೆವು. ನಮ್ಮ ಆರೋಪಕ್ಕೆ ಇವತ್ತಿಗೂ ನಾವು ಬದ್ಧರಾಗಿದ್ದೇವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ
“ಯಡಿಯೂರಪ್ಪ ಅವರ ವಿರುದ್ಧ ಇದ್ದ ಪೋಕ್ಸೋ ಕೇಸಿನಲ್ಲಿ ಕೆಳಹಂತದ ಕೋರ್ಟಿನ ಸಮನ್ಸ್ ಅನ್ನು ರಾಜ್ಯ ಹೈಕೋರ್ಟ್ ಬದಿಗಿರಿಸಿದೆ. ರಾಜ್ಯ ಹೈಕೋರ್ಟ್‍ನಲ್ಲಿ ಈ ಕುರಿತು ಬಹಳ ದಿನ ವಾದ ವಿವಾದ ನಡೆದಿದೆ. ಅದರ ಆಧಾರದಲ್ಲಿ ನಮ್ಮ ಅರ್ಜಿಯನ್ನೂ ಪುರಸ್ಕರಿಸಿ, ಕೆಳಹಂತದ ಕೋರ್ಟಿನ ಸಮನ್ಸ್ ರದ್ದು ಮಾಡಿ ಮರು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಿದೆ” ಎಂದರು.