ಕೃಷಿ ಮಾಡುವ ರೈತರು ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಅದರಲ್ಲಿ ರೈತರಿಗೆ ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಅತ್ಯಂತ ಉಪಯುಕ್ತವಾಗಿ ಬೆಳೆಯುವ ಕೋಕೋ ಬೆಳೆಯಾಗಿದೆ. ವಿಶೇಷವಾಗಿ ಕೋಕೋ ಬೆಳೆ ಒಂದು ಲಾಭದಾಯಕ ವಾಣಿಜ್ಯ ಬೆಳೆಯಾಗಿದೆ. ಇದನ್ನು ಮುಖ್ಯವಾಗಿ ಅಡಿಕೆ, ತೆಂಗು ಅಥವಾ ರಬ್ಬರ್ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.

ಕೋಕೋ ಬೆಳೆಯನ್ನು ಹೇಗೆ ಬೆಳೆಯುವುದು? ಉತ್ತಮ ಒಳಚರಂಡಿ ವ್ಯವಸ್ಥೆ ಇರುವ, ಆಳವಾದ, ಫಲವತ್ತಾದ ಗೋಡು ಮಣ್ಣು ಸೂಕ್ತ. ಮಣ್ಣಿನ pH ಮಟ್ಟವು 6.5 ರಿಂದ 7.0 ರ ನಡುವೆ ಇರಬೇಕು. ಹವಾಮಾನ: ಕೋಕೋ ಬೆಳೆಯಲು ಬೆಚ್ಚಗಿನ ಮತ್ತು ಆರ್ದ್ರತೆಯ ಹವಾಮಾನ (20-30°C ತಾಪಮಾನ) ಅಗತ್ಯವಿರಬೇಕು. ಕೋಕೋ ಗಿಡಗಳಿಗೆ ಮೊದಲ 1-2 ವರ್ಷಗಳ ಕಾಲ ಶೇ. 50 ರಷ್ಟು ನೆರಳಿನ ಅವಶ್ಯಕತೆ ಇರುತ್ತದೆ.

ಕೋಕೋ ಬೆಳೆ ನಾಟಿ ಮಾಡುವ ವಿಧಾನ: ಮಳೆಗಾಲ ಆರಂಭದಲ್ಲಿ (ಜೂನ್-ಜುಲೈ) ನಾಟಿ ಮಾಡುವುದು ಉತ್ತಮವಾಗಿದೆ. ಅಡಿಕೆ ತೋಟದಲ್ಲಿ 2.7 ಮೀ x 2.7 ಮೀ. ಅಂತರದಲ್ಲಿ ಅಥವಾ ತೆಂಗಿನ ತೋಟದಲ್ಲಿ ಸೂಕ್ತ ಅಂತರದಲ್ಲಿ ನೆಡಬಹುದು. ನಾಟಿ ಮಾಡಲು 60x60x60 ಸೆಂ.ಮೀ ಅಳತೆಯ ಗುಂಡಿಗಳನ್ನು ತೆಗೆದು, ಮೇಲ್ಮಣ್ಣು ಮತ್ತು ಕಾಂಪೋಸ್ಟ್ ಗೊಬ್ಬರ ಮಿಶ್ರಣವನ್ನು ಹಾಕಬೇಕು.

ಕೋಕೋ ಗಿಡಗಳಿಗೆ ತೇವಾಂಶ ಅತ್ಯಗತ್ಯ. ಬೇಸಿಗೆಯಲ್ಲಿ ಪ್ರತಿ 5-7 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿ ಉತ್ತಮ. ನಾಟಿ ಮಾಡಿದ ಮೊದಲ ವರ್ಷದಲ್ಲಿ ಪ್ರತಿ ಗಿಡಕ್ಕೆ ಅಲ್ಪ ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ನಂತರದ ವರ್ಷಗಳಲ್ಲಿ ಶಿಫಾರಸು ಮಾಡಿದ ಎನ್ಪಿಕೆ (NPK) ಗೊಬ್ಬರಗಳನ್ನು ನೀಡಬೇಕು. ಕೋಕೋ ಗಿಡದಲ್ಲಿ ದಟ್ಟವಾಗಿ ಬೆಳೆದ ಕೊಂಬೆಗಳನ್ನು ಕತ್ತರಿಸಿ, ಸರಿಯಾದ ಆಕಾರಕ್ಕೆ ತರುವುದರಿಂದ ಸೂರ್ಯನ ಬೆಳಕು ಮತ್ತು ಗಾಳಿ ಚೆನ್ನಾಗಿ ಸಿಗುತ್ತದೆ. ಇದು ರೋಗಗಳನ್ನು ತಡೆಯಲು ಸಹಾಯವಾಗುತ್ತದೆ.
ಕೋಕೋ ಬೆಳೆಯ ರೋಗ ಮತ್ತು ಕೀಟ ನಿರ್ವಹಣೆ ಹೇಗೆ?ಕೋಕೋಗೆ ಹೆಚ್ಚಾಗಿ ಕಾಂಡ ಕೊರಕ ಕೀಟ ಮತ್ತು ಕಪ್ಪು ಕೊಳೆ ರೋಗ (Black pod disease) ಬರುತ್ತದೆ. ತೋಟದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಅಗತ್ಯವಿದ್ದಲ್ಲಿ ಬೋರ್ಡೋ ಮಿಶ್ರಣವನ್ನು ಸಿಂಪಡಿಸಬೇಕಾಗುತ್ತದೆ. ಬೆಳೆ ಬಂದಾಗ ಕೊಯ್ಲು ಮತ್ತು ಸಂಸ್ಕರಣೆ ಮಾಡಬೇಕಾಗುತ್ತದೆ. ಅದಕ್ಕಿಂತ ಮುಂಚೆ ಕೋಕೋ ಗಿಡಗಳು 3-4 ವರ್ಷಗಳಿಂದ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಹಣ್ಣಾದ ಕಾಯಿಗಳನ್ನು (ಹಳದಿ/ಕಿತ್ತಳೆ ಬಣ್ಣ) ಎಚ್ಚರಿಕೆಯಿಂದ ಕತ್ತರಿಸಬೇಕಾಗುತ್ತದೆ.

ಕೋಕೋ ಕಾಯಿಗಳನ್ನು ಒಡೆದು ಬೀಜಗಳನ್ನು ತೆಗೆದು, 5-7 ದಿನಗಳ ಕಾಲ ಹುದುಗುವಿಕೆ (Fermentation) ಪ್ರಕ್ರಿಯೆಗೆ ಒಳಪಡಿಸಿ, ನಂತರ ಚೆನ್ನಾಗಿ ಒಣಗಿಸಬೇಕು. ಒಣಗಿದ ಬೀಜಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಬಹುದು. ಎಕರೆಗೆ ಅಂದಾಜು ₹30,000–₹35,000 ಇದ್ದು, ಸರಿಯಾದ ನಿರ್ವಹಣೆಯಿಂದ ಹೆಚ್ಚಿನ ಆದಾಯಗಳಿಸಬಹುದು. 2026ರ ಮೇ ತಿಂಗಳಲ್ಲಿ ಕೋಕೋ ಬೆಲೆಯು ಪ್ರತಿ ಟನ್ಗೆ 4,400 USD ಗಿಂತ ಹೆಚ್ಚಾಗಿದೆ, ಇದು ಕಳೆದ ತಿಂಗಳುಗಳಲ್ಲಿ 35% ಕ್ಕೂ ಜಾಸ್ತಿಯಿದೆ ಎಂದು ಮಲೆನಾಡಿನ ರೈತರೊಬ್ಬರು ವಾರ್ತ ಟೈಮ್ಸ್ ಜೊತೆ ಮಾತಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಾಜ್ಯ ರೈತ ಸಂಘ ಸಮಿತಿ ಮೇರೆಗೆ ತಾಲೂಕು ಸಮಿತಿ ವಜಾ; ಡಿ. ಮಹೇಶ್
ಕೋಕೋ ಬೆಳೆಯ ಉಪಯೋಗಗಳು: ಚಾಕೊಲೇಟ್ ಉತ್ಪಾದನೆ,ಆಹಾರ ಮತ್ತು ಪಾನೀಯ, ಕೇಕ್, ಬಿಸ್ಕತ್ತು ಮತ್ತು ವಿವಿಧ ಸಿಹಿತಿಂಡಿಗಳ ತಯಾರಿಕೆಯಲ್ಲಿ ಕೋಕೋ ಪೌಡರ್ ಬಳಸಲಾಗುತ್ತದೆ. ಕೋಕೋ ಪೌಡರ್ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ರಕ್ತ ಪರಿಚಲನೆ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕಾಸ್ಮೆಟಿಕ್ ಉದ್ಯಮ, ಕೋಕೋ ಬೆಣ್ಣೆಯನ್ನು ಚರ್ಮದ ಆರೈಕೆ, ಲೋಷನ್ ಮತ್ತು ಕ್ರೀಮ್ಗಳಾಗಿ ಬಳಸಲಾಗುತ್ತದೆ. ಔಷಧೀಯ ಬಳಕೆ: ಕೋಕೋ ಬೆಣ್ಣೆಯನ್ನು ಕೆಲವು ಔಷಧಿಗಳು ತಯಾರಿಕೆಯಲ್ಲಿ ಬಳಸಲಾಗುತ್ತದೆ.




