ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಬಾರದು ಎಂದು ಜೆಡಿಎಸ್ ಕಾರ್ಯಕರ್ತರು ಸಿಪಿಐಎಂ ಕಾರ್ಯಕರ್ತನಿಗೆ ಬೆದರಿಕೆ ಹಾಕಿರುವ ಪ್ರಕರಣ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ನಡೆದಿದೆ.
ಕೆ.ಎಂ.ದೊಡ್ಡಿ ಬಳಿಯ ಅಣ್ಣೂರು ಗ್ರಾಮದಲ್ಲಿನ ಸಿಪಿಐಎಂ ಕಾರ್ಯಕರ್ತ ಹನುಮೇಶ್ ಎಂಬುವವರಿಗೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳಿ ಕಂಬಕ್ಕೆ ಕಟ್ಟಿ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಬೇಡ ಎಂದಿರುವುದಲ್ಲದೆ ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಹನುಮೇಶ್ ಅವರು ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಮತ ಕೇಳಿದ್ದರು. ಆದರೆ ಈಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷವನ್ನು ಸೇರಿರುವುದರಿಂದ ನಮ್ಮ ಪಕ್ಷ ಹಾಗೂ ಸಂಘಟನೆ ಹೇಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಸ್ವತಃ ಹನುಮೇಶ್ ಹೇಳಿದರೂ ಜೆಡಿಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ ಮೋದಿ
ಬೆದರಿಕೆ ಘಟನೆ ಖಂಡಿಸಿರುವ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಸಂಘಟನೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು ಅದರಂತೆ ಹನುಮೇಶ್ ಮತಯಾಚಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತನಿಗೆ ಗ್ರಾಮದಲ್ಲಿ ಪ್ರಚಾರ ಮಾಡಬೇಡಿ ಎಂದು ಹೇಳಿ ಅವರನ್ನು ಹಿಂದೆ ಸರಿಸುವುದು ಸಾಧ್ಯವಿಲ್ಲ. ನಮ್ಮ ಸಂಘಟನೆ ಹಾಗೂ ಕಾರ್ಯಕರ್ತರು ಬೆದರಿ ಪ್ರಚಾರದಿಂದ ಹಿಂದೆ ಸರಿಯುವುದೂ ಇಲ್ಲ. ಜೆಡಿಎಸ್ ಕಾರ್ಯಕರ್ತರು ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯ ಸಿ. ಕುಮಾರಿ ನಮ್ಮ ಸಂಘಟನೆ ಕಾರ್ಯಕರ್ತ ಹನುಮೇಶ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಬೆದರಿಕೆ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಿಚಾರ ಹೇಳಲು ಸ್ವಾತಂತ್ರ್ಯವಿದೆ. ಅದರಂತೆ ಒಂದು ಪಕ್ಷದ ಪರವಾಗಿ, ಮತ್ತೊಂದು ಪಕ್ಷದ ವಿರುದ್ಧವಾಗಿ ಮಾತನಾಡಲು ಕೂಡ ಸ್ವಾತಂತ್ರ್ಯವಿದೆ. ಆದರೆ ಜೆಡಿಎಸ್ ಮುಖಂಡರು ಪ್ರಚಾರ ಮಾಡದಂತೆ ಬೆದರಿಕೆಯೊಡ್ಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ನಮ್ಮ ಸಂಘಟನೆಯ ನಿಲುವನ್ನು ಹೇಳುವುದು ನಮ್ಮ ಹಕ್ಕು. ಕುಮಾರಸ್ವಾಮಿಯವರು ಕಾರ್ಮಿಕ ವಿರೋಧಿ, ಜನವಿರೋಧಿ, ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು ಇದನ್ನು ನಾವು ವಿರೋಧಿಸುತ್ತೇವೆ. ಬೆದರಿಕೆ ಹಾಕಿ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಸದೆಬಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
