ಈ ದಿನ ಸಂಪಾದಕೀಯ | ಮುಸ್ಲಿಮರು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ ಮೋದಿ

Date:

ಹತ್ತು ವರ್ಷಗಳಲ್ಲಿ ಅಚ್ಚೇ ದಿನ್ ತರಲಾಗದ ಮೋದಿಯವರು, ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮೀನು ತಿಂದರೂ ಎಂದು ತಿನ್ನುವ ತಟ್ಟೆಗೆ ಕೈಹಾಕಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವವರು, ನುಸುಳುಕೋರರು ಎಂದು ಮುಸಲ್ಮಾನರನ್ನು ಎಳೆದು ತಂದು ದ್ವೇಷಾಸೂಯೆ ಬಿತ್ತಿದ್ದಾರೆ. ಸಾಲದು ಎಂದು ಸಂಪತ್ತು, ಸ್ತ್ರೀಧನ ಎಂದು ಮಹಿಳೆಯರ ಮಂಗಳಸೂತ್ರಕ್ಕೂ ಕೈ ಹಾಕಿದ್ದಾರೆ. ಅಂದರೆ ಸೋಲಿನ ಭೀತಿಗೆ ಒಳಗಾಗಿ ಹತಾಶರಾಗಿದ್ದಾರೆ. ವಿಶ್ರಾಂತಿ ಬಯಸುತ್ತಿದ್ದಾರೆ…

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ. ಅದರ ಮೊದಲ ಸಂಪೂರ್ಣ ಅಧಿಕಾರ ಮುಸ್ಲಿಮರಿಗೆ ಎಂದಿದೆ. ಜನರ ಕಷ್ಟದ ದುಡಿಮೆಯ ಫಲವನ್ನು ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ನುಸುಳುಕೋರರಿಗೆ ಹಂಚಬೇಕ? ಮಹಿಳೆಯರ ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ. ಅದು ಆಗಬೇಕ?’ ಎಂದು ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಬನಸ್ವಾರದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಭಾಷಣದಲ್ಲಿ ಜನರನ್ನು ಪ್ರಚೋದಿಸುವ ಮಾತನಾಡಿದ್ದಾರೆ.

ತಮ್ಮ ಮಾತಿನ ಸಮರ್ಥನೆಗೆ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 2006ರ ಹೇಳಿಕೆಯೊಂದನ್ನು ಎಳೆದು ತಂದಿದ್ದಾರೆ.

ಆದರೆ ಮನಮೋಹನ್ ಸಿಂಗ್, ಎಲ್ಲಿಯೂ ಹಾಗೆ ಹೇಳಿಲ್ಲ. ದಾಖಲಾಗಿರುವ ಹೇಳಿಕೆಯನ್ನು ತಿರುಚಿ, ದೇಶದ ಪ್ರಧಾನಿಯೇ ಹೀಗೆ ಸಾರ್ವಜನಿಕವಾಗಿ ಸುಳ್ಳು ಮತ್ತು ದ್ವೇಷವನ್ನು ಬಿತ್ತುತ್ತಾರೆಂದರೆ- ಸೋಲಿನ ಸುಳಿವು ಸಿಕ್ಕಿ ಹತಾಶರಾಗಿರಬೇಕು. ಇಲ್ಲ, ಏನು ಹೇಳಿದರೂ, ಮಾಡಿದರೂ ಜನ ನಂಬುತ್ತಾರೆ ಎಂಬ ಭಂಡತನಕ್ಕೆ ಬಿದ್ದಿರಬೇಕು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾನುವಾರ ಬನಸ್ವಾರದಲ್ಲಿ ಮುಸ್ಲಿಮರ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರ ದ್ವೇಷ ಭಾಷಣವನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಪ್ರಧಾನಿಯವರು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು, ದ್ವೇಷಭರಿತ ಮಾತುಗಳನ್ನು ಆಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಆದರೆ, ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು ಚುನಾವಣಾ ಆಯೋಗ ನಿರಾಕರಿಸಿದೆ. ಸಿಪಿಎಂ ನಾಯಕ ಸೀತಾರಾಂ ಯೆಚೂರಿಯವರು, ‘ಮೋದಿ ಹೇಳಿಕೆ ಬಹಳ ಕ್ರೂರವಾಗಿದೆ. ಇದರ ಜೊತೆಗೆ ಚುನಾವಣಾ ಆಯೋಗದ ಮೌನ ಇನ್ನೂ ಹೆಚ್ಚು ಕ್ರೂರವಾಗಿದೆ’ ಎಂದಿದ್ದಾರೆ.

ಹೌದು, ಚುನಾವಣಾ ಆಯೋಗ ಯಾವುದೇ ರಾಜಕೀಯ ಪಕ್ಷದ ಪರವಲ್ಲ. ದೇಶದ ಜನರ ಪರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸ್ವತಂತ್ರವಾಗಿ, ನ್ಯಾಯಯುತವಾಗಿ ನಡೆಯಬೇಕು ಮತ್ತು ನಡೆಸುತ್ತೇವೆ ಎಂದು ಆಯೋಗ ದೇಶದ ಜನರಿಗೆ ಭರವಸೆ ನೀಡಿದೆ. ಆದರೆ, ಪ್ರತಿದಿನ ಪ್ರಧಾನಿಗಳು ದ್ವೇಷಭಾಷಣ ಮಾಡುತ್ತಿದ್ದರೂ, ಮಾತಿಗಾದರೂ ಎಚ್ಚರಿಕೆ ನೀಡದೆ ನಿರಾಕರಿಸಿದೆ. ಅಂದರೆ, ದೇಶದ ಸ್ವಾಯತ್ತ ಸರ್ಕಾರಿ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಗಳಂತೆ ಚುನಾವಣಾ ಆಯೋಗವೂ ಕೂಡ ಪ್ರಧಾನಿ ಮೋದಿಯವರ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ

ಏತನ್ಮಧ್ಯೆ, ಭಾರತದ ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರಪಂಚದ ಇತರ ದೇಶಗಳಲ್ಲೂ ಮೋದಿಯವರ ಮುಸ್ಲಿಮರ ಕುರಿತ ಭಾಷಣ ಸುದ್ದಿಯಾಗಿದೆ. ಭಾರತದ ಪ್ರಧಾನಿ ಮುಸ್ಲಿಂ ದ್ವೇಷಿ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ, ದೇಶದ ಮಾನವನ್ನು ಹರಾಜು ಹಾಕಿದೆ.

ಇಷ್ಟೆಲ್ಲ ಆದಮೇಲೂ, ಸೋಮವಾರ ಅಲೀಗಢದಲ್ಲಿ ಪ್ರಧಾನಿ ಮೋದಿಯವರು ಮತ್ತೆ ತಮ್ಮ ಭಂಡತನವನ್ನು ಮುಂದುವರೆಸಿದ್ದಾರೆ. ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ದುಡಿಯುತ್ತಾರೆ, ಎಷ್ಟು ಸಂಪತ್ತು ಹೊಂದಿದ್ದಾರೆ ಎನ್ನುವುದನ್ನು ತನಿಖೆ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ರಾಜಕುಮಾರ ಹೇಳುತ್ತಾರೆ. ಕಾಂಗ್ರೆಸ್ ಆಡಳಿತದಲ್ಲಿ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ. ಅದಷ್ಟೇ ಅಲ್ಲ, ಸರ್ಕಾರದ ಸಂಪತ್ತನ್ನು ವಶಪಡಿಸಿಕೊಂಡು, ಮರುಹಂಚಿಕೆ ಮಾಡುತ್ತದೆ ಎಂದೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ’ ಎಂದಿದ್ದಾರೆ.

ಭಾನುವಾರ ಮುಸ್ಲಿಮರ ಬಗ್ಗೆ ಬೆಂಕಿ ಉಗುಳಿದ ಪ್ರಧಾನಿಗಳು, ಸೋಮವಾರ ಮುಸ್ಲಿಮರನ್ನು ಬಿಟ್ಟು ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೃತ್ಯಕ್ಕೆ ಇಳಿದಿದ್ದಾರೆ.

ಅಸಲಿಗೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹಾಗೆ ಹೇಳಿಲ್ಲ. ಇದು ಕೂಡ ಪ್ರಧಾನಿ ಮೋದಿಯವರ ಮತ್ತೊಂದು ಸುಳ್ಳು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿ, ‘ನಮ್ಮ ಪ್ರಣಾಳಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಪದಗಳೇ ಇಲ್ಲ. ಈ ಕುರಿತು ಚರ್ಚಿಸಲು ಸಮಯ ಕೊಡಿ’ ಎಂದು ಕೇಳಿದ್ದಾರೆ.

ಮಹಿಳೆಯರ ಮಂಗಳಸೂತ್ರ, ಚಿನ್ನ, ಸ್ತ್ರೀಧನದ ಬಗ್ಗೆ ಮಾತನಾಡುವ ಮೋದಿಯವರಿಗೆ, ಕೋವಿಡ್ ಕಾಲದಲ್ಲಿ ದೇಶದ ಮಹಿಳೆಯರು ಮಂಗಳಸೂತ್ರ ಅಡವಿಟ್ಟಿದ್ದು ಗೊತ್ತಿಲ್ಲವೇ? ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ?

ದೇಶದ ಇತಿಹಾಸದಲ್ಲೇ ಮಹಿಳೆಯರು ಅಧಿಕ ಪ್ರಮಾಣದಲ್ಲಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರಾಟ ಮಾಡಿದ್ದು, ಇಲ್ಲವೇ ಅಡವಿಟ್ಟು ಕಳೆದುಕೊಂಡಿದ್ದು ಮೋದಿಯವರ ಆಡಳಿತದಲ್ಲಿ ಎಂಬ ಕಟುಸತ್ಯವನ್ನು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಹೊರಹಾಕಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿ ಇದ್ದಾರೆ, ಆದರೆ ಮೋದಿ ಅಲೆ ಇಲ್ಲ

ಕೋವಿಡ್‌ ಸಮಯದಲ್ಲಿ ಮಹಿಳೆಯರು 60 ಸಾವಿರ ಕೋಟಿ ಮೌಲ್ಯದ ಚಿನ್ನವನ್ನು ಅಡವಿಟ್ಟು ಕಟ್ಟಲಾಗದಿದ್ದಾಗ ಬ್ಯಾಂಕ್‌ಗಳು ಕರುಣೆಯಿಲ್ಲದೆ ಹರಾಜು ಹಾಕಿದವು. ಜೊತೆಗೆ ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ಚಿನ್ನದ ಮೇಲಿನ ಸಾಲವು ಮೊದಲ ಬಾರಿಗೆ ಒಂದು ಲಕ್ಷ ಕೋಟಿ ದಾಟಿದೆ. ಕಳೆದ ಐದು ವರ್ಷಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವಿಕೆ ಶೇ.300ರಷ್ಟು ಏರಿದೆ. ಇದಕ್ಕೆ ಪ್ರಧಾನಿ ಮೋದಿ ರೂಪಿಸಿದ ಅಸಮರ್ಪಕ ಆರ್ಥಿಕ ನೀತಿಗಳೇ ಕಾರಣ ಎಂದಿದ್ದಾರೆ.

ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ದೇಶದ ಜನರಿಗೆ ಅಚ್ಚೇ ದಿನ್ ಬರಲಿಲ್ಲ. ಯುವಜನತೆಗೆ ಉದ್ಯೋಗ ಸಿಗಲಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸಲಾಗಲಿಲ್ಲ. ಕೋವಿಡ್ ಕಾಲದಲ್ಲಿ ಹೆಣಗಳು ತೇಲಿ ಹೋಗಿದ್ದನ್ನು ತಡೆಯಲಾಗಲಿಲ್ಲ. ಅದಾನಿಗೂ ಮೋದಿಗೂ ಇರುವ ಸಂಬಂಧವೇನು ಎಂದು ತಿಳಿಸಲಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿಲ್ಲ. ಬಾಂಡ್ ಬಗ್ಗೆ ಬಾಯಿ ಬಿಡಲಿಲ್ಲ.

ಈಗ, ಮತದಾರರ ಮುಂದೆ ನಿಂತಾಗ, ತಪ್ಪನ್ನು ಮುಚ್ಚಿಕೊಳ್ಳಲು ಮೋದಿಯವರು ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ತಾವೊಬ್ಬ ಸರ್ವಧರ್ಮಗಳನ್ನು ಸಮಾನವಾಗಿ ಕಾಣುವ ದೇಶದ ಪ್ರಧಾನಿ ಎಂಬುದನ್ನು ಮರೆತಿದ್ದಾರೆ. ಶ್ರಾವಣ ಮಾಸದಲ್ಲಿ ಮೀನು ತಿಂದರೂ ಎಂದು ತಿನ್ನುವ ತಟ್ಟೆಗೆ ಕೈಹಾಕಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವವರು, ನುಸುಳುಕೋರರು ಎಂದು ಮುಸಲ್ಮಾನರನ್ನು ಎಳೆದು ತಂದು ದ್ವೇಷಾಸೂಯೆ ಬಿತ್ತಿದ್ದಾರೆ. ಸಾಲದು ಎಂದು ಸಂಪತ್ತು, ಸ್ತ್ರೀಧನ ಎಂದು ಮಹಿಳೆಯರ ಮಂಗಳಸೂತ್ರಕ್ಕೂ ಕೈ ಹಾಕಿದ್ದಾರೆ.

ಅಂದರೆ, ಪ್ರಧಾನಿಗಳು ಸೋಲಿನ ಭೀತಿಗೆ ಒಳಗಾಗಿ ಬಾಯಿಗೆ ಬಂದದ್ದನ್ನು ಬಡಬಡಿಸುತ್ತಿದ್ದಾರೆ. ಹತಾಶರಾಗಿದ್ದಾರೆ. ಅವರಿಗೆ ದೇಶದ ಮತದಾರರು ವಿಶ್ರಾಂತಿ ಕೊಡುವ ಅಗತ್ಯವಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ನಾಲಿಗೆ ಮೇಲೆ ಆರ್ ಎಸ್ಎಸ್ ಯಜಮಾನರು ಕುಣಿಯುತ್ತಿರುವಾಗ ವಿಷವಲ್ಲದೇ ಅಮೃತ ಹೊರಬರುವುದೇ?

  2. ಸುಳ್ಳುಗಾರನಿಂದ ಸತ್ಯವನ್ನು ಹೇಗೆ ಬಯಸುತ್ತಿರಿ…?
    ಜನ ಮರುಳಾಗಿದ್ದಾರೆ. ಜನಕ್ಕೆ ಸುಳ್ಳು ರುಚಿಸುತ್ತಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...

ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ...

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ

ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ...

ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು

ಯಾವುದೇ ಪ್ರಕರಣವಾಗಲಿ, ಅದು ಹೊರಬಂದ ಹೊಸದರಲ್ಲಿ ಭಾರೀ ಸುದ್ದಿಯಾಗುತ್ತದೆ. ಆಡಳಿತ ಪಕ್ಷ...