ಮಗಳ ಮದುವೆಗಾಗಿ ಸಾಲ ಮಾಡಿ ತಂದಿದ್ದ ₹3 ಲಕ್ಷ ನಗದು, 20 ಗ್ರಾಂ ಚಿನ್ನ, 20 ಸೀರೆ ಹಾಗೂ 50 ಗ್ರಾಂ ಬೆಳ್ಳಿ ಕಾಲುಗೆಜ್ಜೆ ಸೇರಿದಂತೆ, ಮದುವೆ ಸಂಭ್ರಮಕ್ಕೆಂದು ಸಂಗ್ರಹಿಸಿದ್ದ ವಸ್ತುಗಳೆಲ್ಲ ಕಣ್ಣೆದುರೇ ಬೆಂಕಿಗಾಹುತಿಯಾಗುತ್ತಿದ್ದಂತೆ ಹಣಮಂತ ಚಲವಾದಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 28 ತಗಡಿನ ಶೆಡ್ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂತ್ರಸ್ತರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಶೆಡ್ನಲ್ಲಿದ್ದ ದವಸ ಧಾನ್ಯ, ಬಟ್ಟೆ, ಪಾತ್ರೆ, ಕೃಷಿ ಉಪಕರಣಗಳು ಸೇರಿದಂತೆ ಬದುಕಿಗೆ ಅಗತ್ಯವಿದ್ದ ಬಹುತೇಕ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ. ಒಂದು ಎಮ್ಮೆ ಕರು ಸಜೀವ ದಹನಗೊಂಡಿದೆ.
‘ಮಗಳ ಮದುವೆ ಹೇಗೆ ಮಾಡಲಿ? ಮದುವೆಗಾಗಿ ಕಷ್ಟಪಟ್ಟು ಹಣ, ಬಂಗಾರ ಹಾಗೂ ಬಟ್ಟೆಗಳನ್ನು ಕೂಡಿಸಿಟ್ಟಿದ್ದೆ. ಎಲ್ಲವೂ ಕಣ್ಣೆದುರೇ ಸುಟ್ಟುಹೋಯಿತು’ ಎಂದು ಹಣಮಂತ ಚಲವಾದಿ ಕಣ್ಣೀರಿಟ್ಟರು.

ಪುರಾಣದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು; ಇತ್ತ ಶೆಡ್ಗಳಲ್ಲಿ ಬೆಂಕಿ
ಇದ್ದಲಗಿ ಗ್ರಾಮದಲ್ಲಿ ಕಳೆದ 54 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಶಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಮಕ್ಕಳು, ಯುವಕರು, ಮಹಿಳೆಯರು ಹಾಗೂ ವಯೋವೃದ್ಧರು ಸೇರಿದಂತೆ ಬಹುತೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಸಂತ್ರಸ್ತರು ವಾಸವಿದ್ದ ಶೆಡ್ಗಳ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ಸರ್ಕಿಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಒಂದರಿಂದ ಮತ್ತೊಂದು ಶೆಡ್ಗೆ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆ 28 ಶೆಡ್ಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.

‘ಶೆಡ್ಗಳಲ್ಲಿ ಯಾರೂ ಇರಲಿಲ್ಲ. ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದಾಗ ವಿಷಯ ಗೊತ್ತಾಯಿತು. ಓಡಿ ಬಂದು ನೋಡುವಷ್ಟರಲ್ಲಿ ಬೆಂಕಿ ಎಲ್ಲೆಡೆ ಆವರಿಸಿತ್ತು. ಕಣ್ಣೆದುರೇ ದವಸ ಧಾನ್ಯ, ಬಟ್ಟೆ, ಪಾತ್ರೆ ಎಲ್ಲವೂ ಸುಟ್ಟುಹೋದವು’ ಎಂದು ಅಬೀಸಾಬ ನಿಡಗುಂದಿ ಅಳಲು ತೋಡಿಕೊಂಡರು. ಶೆಡ್ಗಳಲ್ಲಿದ್ದ ಎರಡು ಅಡುಗೆ ಅನಿಲ ಸಿಲಿಂಡರ್ಗಳು ಸ್ಫೋಟಗೊಂಡ ಪರಿಣಾಮ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಯಿತು. ಪರಿಸ್ಥಿತಿ ಅಪಾಯಕಾರಿಯಾಗಿದ್ದರೂ ಗ್ರಾಮದ ಯುವಕರು ಧೈರ್ಯದಿಂದ ಬೆಂಕಿಯ ನಡುವೆಯೇ ನುಗ್ಗಿ ಶೆಡ್ಗಳಲ್ಲಿದ್ದ 12 ಎತ್ತುಗಳನ್ನು ಹೊರಗೆ ಕರೆತಂದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದರು. ಶೆಡ್ಗಳಲ್ಲಿದ್ದ ಸಿಲಿಂಡರ್ಗಳನ್ನು ಸುರಕ್ಷಿತವಾಗಿ ಹೊರತೆಗೆದು ಸಂಭವಿಸಬಹುದಾಗಿದ್ದ ಮತ್ತೊಂದು ಅನಾಹುತವನ್ನು ತಪ್ಪಿಸಿದರು.
ಆದರೆ ಒಂದು ಎಮ್ಮೆ ಕರುವನ್ನು ಮಾತ್ರ ರಕ್ಷಿಸಲು ಸಾಧ್ಯವಾಗದೆ ಸಜೀವ ದಹನಗೊಂಡಿರುವುದು ಘಟನೆಯ ದಾರುಣತೆಯನ್ನು ಹೆಚ್ಚಿಸಿದೆ.
ಮಕ್ಕಳ ಪುಸ್ತಕಗಳೂ ಬೆಂಕಿಗಾಹುತಿ*
‘ನನ್ನ ಎಲ್ಲ ಪುಸ್ತಕಗಳು ಸುಟ್ಟುಹೋಗಿವೆ’ ಎಂದು ಮಕ್ಕಳು ಕಣ್ಣೀರು ಹಾಕಿದರು. ಕೃಷಿಗೆ ಬಳಸುತ್ತಿದ್ದ ಯಂತ್ರೋಪಕರಣಗಳು, ದವಸ ಧಾನ್ಯ, ಬಟ್ಟೆ, ಪಾತ್ರೆಗಳು ಸೇರಿದಂತೆ ವರ್ಷಗಳ ಕಾಲ ಕಷ್ಟಪಟ್ಟು ಕೂಡಿಸಿಟ್ಟಿದ್ದ ವಸ್ತುಗಳೆಲ್ಲ ಬೆಂಕಿಯಲ್ಲಿ ನಾಶವಾಗಿವೆ.
‘ಮನೆ ಎಂಬುದೇ ಇಲ್ಲ. ಈಗ ಬೀದಿಯಲ್ಲಿ ಮಲಗುವ ಪರಿಸ್ಥಿತಿ ಬಂದಿದೆ. ಮಕ್ಕಳು ಹಾಗೂ ವಯೋವೃದ್ಧರು ದೇವಾಲಯಗಳಲ್ಲಿ ಮಲಗುವಂತಾಗಿದೆ’ ಎಂದು ಸಂತ್ರಸ್ತರು ತಮ್ಮ ಅಸಹಾಯಕತೆ ತೋಡಿಕೊಂಡರು.
12 ಜೋಡಿ ಸಾಮೂಹಿಕ ವಿವಾಹಕ್ಕೆ ಸಿದ್ಧತೆ; ಎಲ್ಲವೂ ಭಸ್ಮ
ಸೆ.13ರಂದು ಶರಣಬಸವೇಶ್ವರ ಪುರಾಣದ ಮುಕ್ತಾಯ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭದಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಮದುವೆ ಮಾಡಬೇಕಿದ್ದ ಕುಟುಂಬಗಳು ಈಗಾಗಲೇ ಬಟ್ಟೆ, ಆಭರಣ ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದವು.
‘ಮದುವೆಗೆ ಬಂಧು-ಬಳಗದವರು ಬರಲಿದ್ದರು. ಅವರಿಗೆ ಊಟದ ವ್ಯವಸ್ಥೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕಿರಾಣಿ ಸಾಮಗ್ರಿಗಳನ್ನು ತಂದಿದ್ದೆವು. ಮದುವೆಗಾಗಿ ತಂದಿದ್ದ ಬಟ್ಟೆ, ಆಭರಣ ಸೇರಿದಂತೆ ಎಲ್ಲವೂ ಬೆಂಕಿಯಲ್ಲಿ ಸುಟ್ಟುಹೋಯಿತು’ ಎಂದು ಕಮಲಮ್ಮ ಕಣ್ಣೀರಿಟ್ಟರು.

18 ವರ್ಷಗಳಿಂದ ತಗಡಿನ ಶೆಡ್ನಲ್ಲೇ ಬದುಕು
ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳು ಕಳೆದ 18 ವರ್ಷಗಳಿಂದ ತಗಡಿನ ಶೆಡ್ಗಳಲ್ಲೇ ಜೀವನ ನಡೆಸುತ್ತಿವೆ. ಸಮರ್ಪಕ ಮೂಲಸೌಲಭ್ಯವಿಲ್ಲದೆ ಬೇಸಿಗೆಯ ಬಿಸಿಲು, ಮಳೆಗಾಲದ ಸೋರಿಕೆ ನಡುವೆ ಬದುಕು ಸಾಗಿಸುತ್ತಿರುವುದಾಗಿ ಸಂತ್ರಸ್ತರು ದೂರಿದ್ದಾರೆ.
‘ಶೆಡ್ಗಳ ದುರಸ್ತಿ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರುತ್ತಾರೆ, ಭರವಸೆ ನೀಡಿ ಹೋಗುತ್ತಾರೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಶೆಡ್ನಲ್ಲಿ ಬದುಕುತ್ತಿರುವುದರಿಂದ ಮಕ್ಕಳ ಮದುವೆ ಮಾಡುವುದೂ ಕಷ್ಟವಾಗಿದೆ’ ಎಂದು ಸಂತ್ರಸ್ತ ಈರಪ್ಪ ಲೋಕಾಪುರ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ಮನೆ ಕಳೆದುಕೊಂಡ ಬಳಿಕ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದ್ದಲಗಿ ಗ್ರಾಮದ ಸಂತ್ರಸ್ತರು ಕಳೆದ 117 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬುದು ಅವರ ಆರೋಪ. ಪುನರ್ವಸತಿ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ಇದೀಗ ಬೆಂಕಿ ಅವಘಡ ಹೊಸದೊಂದು ಆಘಾತಕ್ಕೆ ಕಾರಣವಾಗಿದೆ.
ಹೊಸ ಶೆಡ್ ನಿರ್ಮಾಣದ ಭರವಸೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಂಗಪ್ಪ, ಬೆಂಕಿಯಲ್ಲಿ ಶೆಡ್ ಕಳೆದುಕೊಂಡಿರುವ ಸಂತ್ರಸ್ತರಿಗೆ ಹೊಸ ಶೆಡ್ಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಈಗಾಗಲೇ ಹೊಸ ಶೆಡ್ಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದರು. ಶೆಡ್ ನಿರ್ಮಾಣ ಕಾರ್ಯ ಆರಂಭಿಸಬೇಕೆನ್ನುವಷ್ಟರಲ್ಲೇ ಈ ಅವಘಡ ಸಂಭವಿಸಿದೆ. ಇದೀಗ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆಯ ಮೂಲಕ ಹೊಸ ಶೆಡ್ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಲ್ಲಿ ಹಾನಿಗೊಳಗಾದ ವಸ್ತುಗಳ ನಷ್ಟದ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದ್ದು, ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರವನ್ನೂ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
‘ಶೆಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ಲಭ್ಯವಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ತಿಳಿಸಿದ್ದಾರೆ.
ಕಣ್ಣೆದುರೇ ಸುಟ್ಟುಹೋದ ಮನೆ, ಮಗಳ ಮದುವೆಗಾಗಿ ಕೂಡಿಟ್ಟಿದ್ದ ಹಣ-ಬಂಗಾರ, ಮಕ್ಕಳ ಪುಸ್ತಕಗಳು, ಕೃಷಿ ಸಲಕರಣೆಗಳು… ಎಲ್ಲವನ್ನೂ ಕಳೆದುಕೊಂಡಿರುವ ಇದ್ದಲಗಿ ಸಂತ್ರಸ್ತರಿಗೆ ಈಗ ಉಳಿದಿರುವುದು ಪುನರ್ವಸತಿಯ ನಿರೀಕ್ಷೆಯೊಂದೇ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



