ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ದಾಖಲಾಗಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಮೇ 30ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ಜನಪರ ಸಂಘಟನೆಗಳು ನಿರ್ಧರಿಸಿದೆ.
ಬೆಂಗಳೂರಿನ ಕಸಾಪ ಭವನದಲ್ಲಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ನಡೆಸಿದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಯಿತು.
ರಾಜ್ಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕು ಎಂದು ಕರೆ ಕೊಡಲಾಯಿತು. ವಿವಿಧ ಜನಪರ, ರೈತ, ಕಾರ್ಮಿಕ, ಯುವಜನ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಸಭೆಯಲ್ಲಿ ಹತ್ತು ಹಲವು ಸಂಘಟನೆಗಳ ನೂರಾರು ಮುಖಂಡರು, ಹೋರಾಟಗಾರರು, ಚಿಂತಕರು, ಸಾಹಿತಿಗಳು ಭಾಗಿಯಾಗಿದ್ದರು.
ರಾಜ್ಯ ಸರಕಾರ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಕೂಡಲೇ ರೆಡ್ ಕಾರ್ನರ್ ನೋಟೀಸ್ ನೀಡಬೇಕು. ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ವೀಸಾವನ್ನು ಕೂಡಲೇ ರದ್ದುಪಡಿಸಿ ಆತ ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಂತಾರಾಷ್ಟ್ರೀಯ ಪೊಲೀಸರ ಸಹಾಯ ಪಡೆದು ಆತನನ್ನು ಕೂಡಲೇ ಬಂಧಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ನೀಡಬೇಕು. ಸಂತ್ರಸ್ತ ಮಹಿಳೆಯರ ಲೈಂಗಿಕ ವೀಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್‌ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ ಹಾಗೂ ಸಾರ್ವಜನಿಕವಾಗಿ ಹಂಚಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಐಎಲ್ ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಆರ್‌ಸಿಬಿ Vs ಚೆನ್ನೈ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗೋದಾಗಿ ಹೇಳಿದ್ದವ ಪೊಲೀಸ್ ಅತಿಥಿ!
ಸಭೆಯಲ್ಲಿ ಹೈ ಕೋರ್ಟ್ ಹಿರಿಯ ವಕೀಲರಾದ ವೆಂಕಟೇಶ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಎಸ್. ವಿಮಲಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗೌರಮ್ಮ ಸಿಐಟಿಯು ರಾಜ್ಯಾಧ್ಯಕ್ಷ ವರಲಕ್ಷ್ಮೀ, ಮೈಸೂರು ಪ್ರಗತಿಪರ ಚಿಂತಕ ಉಗ್ರ ನರಸಿಂಹ ಗೌಡ, ಕರ್ನಾಟಕ ಜನ ಶಕ್ತಿ ಅಧ್ಯಕ್ಷ ಮಲ್ಲಿಗೆ ಕಾಮಾತಿ, ಅಖಿಲ ವಿದ್ಯಾಸಂದ್ರ ಸೇರಿದಂತೆ ಪ್ರಗತಿಪರ ಹೋರಾಟಗಾರರು, ಜನಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
