ಮನೆ ಕೆಲಸದಾಕೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ರೇವಣ್ಣಗೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ರೇವಣ್ಣಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ವಿಚಾರಣೆ ವೇಳೆ, 2025ರ ನವೆಂಬರ್ 19ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸವಾಲು ಮಾಡಲು ಇಷ್ಟೊಂದು ವಿಳಂಬ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸೆಕ್ಷನ್ 354ರ ಅಡಿಯಲ್ಲಿನ ಆರೋಪಗಳನ್ನು ಕೈಬಿಟ್ಟ ತಕ್ಷಣವೇ ಏಕೆ ಮೇಲ್ಮನವಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದು, ‘ಸ್ವಲ್ಪ ಶಿಸ್ತು ಪಾಲಿಸಿ’ ಎಂದು ಸರ್ಕಾರಕ್ಕೆ ಹೇಳಿದೆ.
2024ರ ಲೋಕಸಭೆ ಚುನಾವಣೆಗೂ ಮುನ್ನ ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಪೆನ್‌ಡ್ರೈವ್ ವಿಡಿಯೋಗಳು ಬಹಿರಂಗಗೊಂಡ ಬಳಿಕ ಈ ಇಡೀ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದೇ ವೇಳೆ, ಸಂತ್ರಸ್ತೆಯೊಬ್ಬರು ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಕಳೆದ ವರ್ಷ (2025) ನವೆಂಬರ್ 19ರಂದು, ರೇವಣ್ಣ ವಿರುದ್ಧದ ಸೆಕ್ಷನ್ 354 ಆರೋಪವನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಆರೋಪವನ್ನು ಮಾತ್ರ ಉಳಿಸಿಕೊಂಡಿತ್ತು. ದೂರು ನೀಡಲು ಆಗಿರುವ ವಿಳಂಬವನ್ನು ಪರಿಗಣಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿತ್ತು.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಹಾಸನದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಚ್.ಡಿ. ರೇವಣ್ಣ ಅವರನ್ನು ಈ ಲೈಂಗಿಕ ಕಿರುಕುಳ ಪ್ರಕರಣದಿಂದ ಮುಕ್ತಗೊಳಿಸಿ ಡಿಸೆಂಬರ್ 29ರಂದು ಆದೇಶಿಸಿತ್ತು.
ಇದೀಗ ರಾಜ್ಯ ಸರ್ಕಾರವು ಹೈಕೋರ್ಟ್‌ನ ಮೂಲ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.



