ದೇಶದ ಎಲೆಕ್ಟ್ರಿಕ್ ವಾಹನಗಳ (EV) ಹಬ್ ಎಂದೇ ಗುರುತಿಸಿಕೊಂಡಿರುವ ಕರ್ನಾಟಕದಲ್ಲಿ ಇನ್ನು ಮುಂದೆ ಪರಿಸರ ಸ್ನೇಹಿ ಕಾರುಗಳ ಖರೀದಿ ದುಬಾರಿಯಾಗಲಿದೆ. ಈವರೆಗೆ ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದ್ದು, ಎಲ್ಲಾ ಮಾದರಿಯ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೊಸದಾಗಿ ‘ಜೀವಿತಾವಧಿ ತೆರಿಗೆ’ (Lifetime Tax) ವಿಧಿಸಿ ಆದೇಶ ಹೊರಡಿಸಿದೆ. ಈ ಹೊಸ ಕಾನೂನಿನಿಂದಾಗಿ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಕನಿಷ್ಠ 50 ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿಗಳವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಸಾಮಾನ್ಯ ಜನರ ಇವಿ ಕನಸಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಕರ್ನಾಟಕ ಮೋಟಾರು ವಾಹನ ತೆರಿಗೆ ತಿದ್ದುಪಡಿ ಕಾಯ್ದೆ 2026ರನ್ವಯ, ಇನ್ನು ಮುಂದೆ ರಾಜ್ಯದಲ್ಲಿ ಮಾರಾಟವಾಗುವ ಎಲ್ಲಾ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಮೇಲೆ ಜೀವಿತಾವಧಿ ತೆರಿಗೆ ಕಡ್ಡಾಯ. ಈ ಮೊದಲು 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಈ ತೆರಿಗೆ, ಈಗ ಸಾಮಾನ್ಯ ಮಧ್ಯಮ ವರ್ಗದ ಜನರು ಖರೀದಿಸುವ ಬಜೆಟ್ ಸ್ನೇಹಿ ಕಾರುಗಳಿಗೂ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ 10 ಲಕ್ಷ ರೂಪಾಯಿವರೆಗಿನ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 5 ರಷ್ಟು, 10 ರಿಂದ 25 ಲಕ್ಷ ರೂಪಾಯಿ ಬೆಲೆಯ ವಾಹನಗಳ ಮೇಲೆ ಶೇಕಡಾ 8 ರಷ್ಟು ಹಾಗೂ 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ವಾಹನಗಳ ಮೇಲೆ ಶೇಕಡಾ 10 ರಷ್ಟು ತೆರಿಗೆ ವಿಧಿಸಲಾಗಿದೆ.
ಈ ತೆರಿಗೆ ಏರಿಕೆಯು ರಾಜ್ಯದ EV ಮಾರುಕಟ್ಟೆ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆಯಿದೆ. ಏಕೆಂದರೆ, ಕರ್ನಾಟಕವು ಪ್ರಸ್ತುತ ದೇಶದಲ್ಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ನಾಲ್ಕು ಚಕ್ರದ ಸುಮಾರು 60,800 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದು, ಕೇವಲ 2025ರಲ್ಲಿ ಮಾತ್ರವೇ ದಾಖಲೆಯ 19,202 ವಾಹನಗಳು ನೋಂದಣಿಯಾಗಿದ್ದವು. 2026ರ ಮೊದಲ ಮೂರು ತಿಂಗಳಲ್ಲೇ 7,000ಕ್ಕೂ ಹೆಚ್ಚು ವಾಹನಗಳು ಮಾರಾಟವಾಗಿ ರಾಜ್ಯವು EV ಕ್ರಾಂತಿಯಲ್ಲಿ ಮುನ್ನಡೆಯುತ್ತಿತ್ತು. ಆದರೆ ಹೊಸ ತೆರಿಗೆ ನೀತಿಯು ಈ ವೇಗಕ್ಕೆ ಬ್ರೇಕ್ ಹಾಕಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಈ ಕ್ರಮದ ಮೂಲಕ 2026-27ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಸುಮಾರು 250 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಇಲಾಖೆಯು ಈ ವರ್ಷ ಒಟ್ಟು 15,500 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಇಲಾಖೆಯು 15,000 ಕೋಟಿ ರೂಪಾಯಿ ಗುರಿ ಹೊಂದಿದ್ದರೂ ಕೇವಲ 14,000 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಈ ಹೊಸ ತೆರಿಗೆಯ ಮೊರೆ ಹೋಗಿದೆ.
ಒಂದು ಕಡೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೊರೆ ಹಾಕಿರುವ ಸರ್ಕಾರ, ಇನ್ನೊಂದೆಡೆ ಐಷಾರಾಮಿ ಬಸ್ಗಳು ಮತ್ತು 12 ಸೀಟಿನ ವಾಹನಗಳ ಮೇಲಿನ ನೋಂದಣಿ ತೆರಿಗೆಯನ್ನು 1,000 ರೂಪಾಯಿಗಳಷ್ಟು ಕಡಿತಗೊಳಿಸಿರುವುದು ವಿಪರ್ಯಾಸವಾಗಿದೆ. ಪ್ರಮುಖವಾಗಿ ಜನರು ಪಾಂಡಿಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಹನ ನೋಂದಾಯಿಸಿ ತೆರಿಗೆ ತಪ್ಪಿಸುವುದನ್ನು ತಡೆಯಲು ಈ ಕಡಿತ ಮಾಡಲಾಗಿದೆ. ಆದರೆ ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಬೇಕಾದ ಸಮಯದಲ್ಲಿ ಇವಿಗಳ ಮೇಲಿನ ರಿಯಾಯಿತಿಯನ್ನು ಹಿಂಪಡೆದಿರುವುದು ರಾಜಕೀಯವಾಗಿ ಮತ್ತು ಪರಿಸರ ಕಾಳಜಿಯ ದೃಷ್ಟಿಯಿಂದ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಸರ್ಕಾರದ ಹೊಸ ತೆರಿಗೆ ನೀತಿಯು ಪರಿಸರವಾದಿಗಳು ಮತ್ತು ಗ್ರಾಹಕರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ, ಜಗತ್ತು ಪಳೆಯುಳಿಕೆ ಇಂಧನಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ, ಉತ್ತೇಜನ ನೀಡುವ ಬದಲು ತೆರಿಗೆ ಹೇರುವುದು ಜನರನ್ನು ಮತ್ತೆ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳತ್ತ ನೂಕಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದು ಸರ್ಕಾರದ ಸ್ವಂತ ‘ಇವಿ ನೀತಿ’ಗೆ ವಿರುದ್ಧವಾದ ನಡೆಯಾಗಿದ್ದು, ಪರಿಸರ ಸ್ನೇಹಿ ಗುರಿಗಳನ್ನು ತಲುಪಲು ತಡೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಈ ಹಿಂದೆ 10 ರಿಂದ 15 ಲಕ್ಷ ರೂಪಾಯಿ ಬೆಲೆಯ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಿಗೆ ಯಾವುದೇ ತೆರಿಗೆ ಇರಲಿಲ್ಲ. ಆದರೆ ಈಗ ಶೇ. 8ರಷ್ಟು ತೆರಿಗೆ ವಿಧಿಸಿರುವುದರಿಂದ, ಗ್ರಾಹಕರು ಸುಮಾರು 80,000 ದಿಂದ 1.20 ಲಕ್ಷ ರೂಪಾಯಿಗಳವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಇದು ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸುವ ಕನಸು ಕಂಡಿದ್ದ ಕುಟುಂಬಗಳಿಗೆ ಭಾರಿ ಆರ್ಥಿಕ ಹೊರೆಯಾಗಿದೆ.
ಈಗಿನ ತೆರಿಗೆ ಏರಿಕೆಯಿಂದಾಗಿ ವಾಹನ ಮಾರಾಟ ಕುಸಿದರೆ, ಹೂಡಿಕೆದಾರರು ಮತ್ತು ವಾಹನ ಉತ್ಪಾದಕರು ನೆರೆಯ ತಮಿಳುನಾಡು ಅಥವಾ ಗುಜರಾತ್ನಂತಹ ರಾಜ್ಯಗಳತ್ತ ತಮ್ಮ ಗಮನ ಹರಿಸುವ ಸಾಧ್ಯತೆಯಿದೆ. ಇದು ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ‘ಇವಿ ಹಬ್’ ಎಂಬ ಹೆಗ್ಗಳಿಕೆಗೆ ದೀರ್ಘಕಾಲೀನ ಧಕ್ಕೆ ತರಬಹುದು ಎಂಬುದು ಉದ್ಯಮ ವಲಯದ ಆತಂಕ.
ಮತ್ತೊಂದೆಡೆ, ಸರ್ಕಾರದ ಆರ್ಥಿಕ ದೃಷ್ಟಿಕೋನದಿಂದ ಈ ಕ್ರಮ ಅನಿವಾರ್ಯ ಎಂಬ ವಾದವೂ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಮೊತ್ತದ ಹಣದ ಅಗತ್ಯವಿದೆ. ಸಾರಿಗೆ ಇಲಾಖೆಯ ತೆರಿಗೆ ಗುರಿಯನ್ನು ತಲುಪಲು ಎಲೆಕ್ಟ್ರಿಕ್ ವಾಹನಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಸುಲಭದ ದಾರಿ ಎಂದು ಸರ್ಕಾರ ಭಾವಿಸಿದೆ. ಈ ಮೂಲಕ ವಾರ್ಷಿಕ ಸುಮಾರು 250 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಪರಿಶಿಷ್ಟರು, ಅಸ್ಪೃಶ್ಯರು ಹಿಂದೂಗಳಲ್ಲ; ಬಾಬಾ ಸಾಹೇಬರು ಪ್ರತಿಪಾದಿಸಿದ್ದು ಹೀಗೆ…
ಅಲ್ಲದೆ, ರಸ್ತೆ ಮೂಲಸೌಕರ್ಯದ ಬಳಕೆಯ ತರ್ಕವನ್ನೂ ಸರ್ಕಾರ ಮುಂದಿಟ್ಟಿದೆ. ಪೆಟ್ರೋಲ್ ವಾಹನಗಳಂತೆಯೇ ಎಲೆಕ್ಟ್ರಿಕ್ ವಾಹನಗಳೂ ರಾಜ್ಯದ ರಸ್ತೆಗಳನ್ನೇ ಬಳಸುವುದರಿಂದ, ಆ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಇವಿ ಮಾಲೀಕರಿಂದಲೂ ಕನಿಷ್ಠ ಕೊಡುಗೆ ಇರಬೇಕು ಎಂಬುದು ಸರ್ಕಾರದ ಸಮರ್ಥನೆ. ಮಹಾರಾಷ್ಟ್ರದಂತಹ ರಾಜ್ಯಗಳು ಈಗಾಗಲೇ ಇವಿಗಳ ಮೇಲೆ ತೆರಿಗೆ ವಿಧಿಸುತ್ತಿರುವುದನ್ನು ಉದಾಹರಣೆಯಾಗಿ ನೀಡಿರುವ ಸರ್ಕಾರ, ಕರ್ನಾಟಕವು ಇಷ್ಟು ವರ್ಷ ನೀಡಿದ್ದ ರಿಯಾಯಿತಿಯನ್ನು ಈಗ ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಸರ್ಕಾರವು ಶೇ.100 ರಷ್ಟು ವಿನಾಯಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಬದಲು, ತೆರಿಗೆಯನ್ನು ಕೇವಲ ಶೇಕಡಾ 1 ಅಥವಾ 2 ರಷ್ಟು ಮಟ್ಟದಲ್ಲಿ ಇರಿಸಿದ್ದರೆ ಗ್ರಾಹಕರಿಗೆ ಹೊರೆಯಾಗುತ್ತಿರಲಿಲ್ಲ ಮತ್ತು ಪರಿಸರ ಸ್ನೇಹಿ ಬದಲಾವಣೆಯ ವೇಗವೂ ಕುಂಠಿತವಾಗುತ್ತಿರಲಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ವಾದ. ಈ ನಿರ್ಧಾರವು ಪರಿಸರ ಸ್ನೇಹಿ ಗುರಿಗೆ ಹಿನ್ನಡೆ ತರುತ್ತದೆಯೇ ಅಥವಾ ಬೊಕ್ಕಸ ತುಂಬಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.





