"ಗುಲಾಮನಿಗೆ ಅವನು ಗುಲಾಮನೆಂದು ನೆನಪಿಸಿ, ಆಗ ಅವನು ಬಂಡೇಳುತ್ತಾನೆ" ಎಂಬ ಅವರ ಮಾತುಗಳೇ ಸಾಕು, ಇಂದಿಗೂ ಅನ್ಯರ ಕೃಪಾಕಟಾಕ್ಷದಡಿ ಗುಲಾಮರಂತೆ ಬದುಕುತ್ತಿರುವವರ ಸುಪ್ತಪ್ರಜ್ಞೆಯನ್ನು ಬಡಿದೆಬ್ಬಿಸಲು. ಯಾರು ಪರರ ಹಂಗಿನಲ್ಲಿ ಬದುಕುತ್ತಿದ್ದಾರೋ, ಅಂತಹವರ ಎದೆಯೊಳಗೆ ಈ ಮಾತುಗಳು ಕಿಚ್ಚು ಹಚ್ಚಬೇಕು.
ಆಧುನಿಕ ಭಾರತದ ಇತಿಹಾಸದಲ್ಲಿ ಮತ್ತೆ ಮತ್ತೆ ಉಲ್ಲೇಖಿಸಲ್ಪಟ್ಟಿರುವ ಹೆಸರು ಅಂಬೇಡ್ಕರ್. ಅವರ ಬದುಕು ಮತ್ತು ಬರೆಹಗಳು ಶತಮಾನಗಳಿಂದ ಬೇರೂರಿದ್ದ ಭಾರತದ ಸಾಂಪ್ರದಾಯಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದವು. ಅವರು ತಮ್ಮ ಸುದೀರ್ಘ ಹೋರಾಟದಲ್ಲಿ ಪ್ರತಿಪಾದಿಸಿದ ಅತ್ಯಂತ ಕ್ರಾಂತಿಕಾರಿ ವಿಚಾರವೆಂದರೆ, “ಹಿಂದೂ ಧರ್ಮ ಮತ್ತು ಪರಿಶಿಷ್ಟ ಜಾತಿಗಳು (ಅಸ್ಪೃಶ್ಯರು) ಎಂಬ ಎರಡು ಭಿನ್ನ ಅಸ್ತಿತ್ವಗಳು.” ಅವರು ಈ ನಿಲುವು ತಳೆಯಲು ಕಾರಣವಾದ ಐತಿಹಾಸಿಕ, ಸಾಮಾಜಿಕ ಮತ್ತು ತಾತ್ವಿಕ ಕಾರಣಗಳನ್ನು ಅವಲೋಕಿಸುವುದು ಸರ್ವಕಾಲಕ್ಕೂ ಅಗತ್ಯ.
ಬಾಬಾ ಸಾಹೇಬರು ಹಿಂದೂ ಧರ್ಮವನ್ನು ವಿಶ್ಲೇಷಿಸುವಾಗ ಅದನ್ನು ‘ಧರ್ಮ’ ಎನ್ನುವುದಕ್ಕಿಂತ ಹೆಚ್ಚಾಗಿ ಮನುಷ್ಯನ ಪ್ರತಿಯೊಂದು ಕ್ರಿಯೆಯನ್ನು ನಿರ್ಬಂಧಿಸುವ ‘ನಿಯಮಗಳ ಸಂಕಲನ’ ಎಂದು ಕರೆದರು. ಅವರ ಪ್ರಕಾರ, ಹಿಂದೂ ಸಾಮಾಜಿಕ ವ್ಯವಸ್ಥೆ, ಶ್ರೇಣೀಕೃತ ಅಸಮಾನತೆ(Graded Inequality)ಯ ಮೇಲೆ ನಿಂತಿದೆ. ಇಲ್ಲಿ ಸಮಾಜವು ಮೇಲು ಮತ್ತು ಕೀಳು ಎಂದು ವಿಭಜನೆಯಾಗದೆ, ಪ್ರತಿಯೊಂದು ಜಾತಿಯೂ ತನ್ನ ಮೇಲಿನ ಇನ್ನೊಂದು ಜಾತಿಯನ್ನು ದ್ವೇಷಿಸುವಂತೆ, ತನ್ನ ಕೆಳಗಿರುವ ಜಾತಿಗಿಂತ ತಾನು ಶ್ರೇಷ್ಠ ಎಂದು ಹೆಮ್ಮೆಪಡುವಂತೆ ಮಾಡಲಾಗಿದೆ. ಇಲ್ಲಿ ವ್ಯಕ್ತಿಯ ಜ್ಞಾನ ಅಥವಾ ಸಾಮರ್ಥ್ಯಕ್ಕೆ ಬೆಲೆಯಿಲ್ಲ. ಆತನ ಹುಟ್ಟು, ಸ್ಥಾನಮಾನ ಮತ್ತು ವೃತ್ತಿಯನ್ನು ನಿರ್ಧರಿಸುವ ಇದೊಂದು ಅಮಾನವೀಯ ಪದ್ಧತಿ. ಈ ವ್ಯವಸ್ಥೆಯು ಶೋಷಿತ ವರ್ಗಗಳು ಒಂದಾಗಿ ಅನ್ಯಾಯದ ವಿರುದ್ಧ ಹೋರಾಡದಂತೆ ತಡೆಯುವ ಒಂದು ತಾಂತ್ರಿಕ ಸಂಚು ಎನ್ನುತ್ತಾರವರು.

ಹಿಂದೂ ಧರ್ಮದ ವರ್ಣಾಶ್ರಮ ವ್ಯವಸ್ಥೆಯ ಕ್ರೌರ್ಯವು, ಅಸ್ಪೃಶ್ಯರನ್ನು (ಅವರ್ಣೀಯರನ್ನು) ಈ ಚಾತುರ್ವರ್ಣದ ಚೌಕಟ್ಟಿನಿಂದಲೇ ಹೊರಗಿಟ್ಟು ಅವರನ್ನು ಕೇವಲ ‘ಅಗ್ಗದ ಕೂಲಿಗಾರರಾಗಿ’ ಅರ್ಥಾತ್ ಗುಲಾಮರನ್ನಾಗಿ ಬಳಸಿಕೊಳ್ಳುವಲ್ಲಿ ಅಡಗಿತ್ತು. ಅಸ್ಪೃಶ್ಯರಿಗೆ ಶಿಕ್ಷಣ, ಶಸ್ತ್ರಾಸ್ತ್ರ ಮತ್ತು ಆಸ್ತಿಯ ಹಕ್ಕನ್ನು ನಿರಾಕರಿಸುವ ಮೂಲಕ ಅವರನ್ನು ಬೌದ್ಧಿಕವಾಗಿ ಮತ್ತು ದೈಹಿಕವಾಗಿ ದಾಸ್ಯದ ಸಂಕೋಲೆಗೆ ದೂಡಲಾಗಿತ್ತು. ಸಮಾಜದ ಲೆಕ್ಕಾಚಾರದಲ್ಲಿ ಅಥವಾ ರಾಜಕೀಯ ಅನುಕೂಲಕ್ಕಾಗಿ ಮಾತ್ರ ಅವರನ್ನು ಹಿಂದೂಗಳೆಂದು ಕರೆದರೂ, ಸಾಮಾಜಿಕವಾಗಿ ದೇವಸ್ಥಾನ ಪ್ರವೇಶ ನಿರಾಕರಿಸುವುದು, ಕನಿಷ್ಠ ಕುಡಿಯುವ ನೀರನ್ನೂ ಸ್ವತಂತ್ರವಾಗಿ ಪಡೆದುಕೊಳ್ಳಲಾಗದಂತೆ ಮಾಡುವುದು ಅತಿದೊಡ್ಡ ಬೌದ್ಧಿಕ ವಂಚನೆ ಎಂದು ಅಂಬೇಡ್ಕರ್ ವಾದಿಸಿದ್ದರು.
ಈ ವ್ಯವಸ್ಥೆ ಕೇವಲ ಶ್ರಮವನ್ನು ವಿಭಜನೆ ಮಾಡದೆ, ಶ್ರಮಿಕರನ್ನೇ ಪರಸ್ಪರ ದ್ವೇಷಿಸುವಂತೆ ವಿಭಜಿಸಿತ್ತು. ಈ ಮಾನಸಿಕ ಮತ್ತು ಸಾಮಾಜಿಕ ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಅಸ್ಪೃಶ್ಯರು ಈ ಧಾರ್ಮಿಕ ಚೌಕಟ್ಟಿನಿಂದ ಹೊರಬರುವುದು ಅನಿವಾರ್ಯ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅಂದರೆ, ಈ ಅಮಾನವೀಯ ಚೌಕಟ್ಟಿನಲ್ಲಿಟ್ಟು ಅಸ್ಪೃಶ್ಯರನ್ನು ಹಿಂದೂಗಳೆಂದು ಕರೆಯಬೇಕೆಂದರೆ, ಅಂತಹ ಚೌಕಟ್ಟೇ ಅವರಿಗೆ ಅಗತ್ಯವಿಲ್ಲ ಎಂದಿದ್ದರು.
1930ರ ದಶಕದ ದುಂಡು ಮೇಜಿನ ಪರಿಷತ್ತುಗಳಲ್ಲಿ ಅಂಬೇಡ್ಕರ್ ಅವರು ಅಸ್ಪೃಶ್ಯರ ಪರವಾಗಿ ಮಂಡಿಸಿದ ವಾದವು ಅವರ ರಾಜಕೀಯ ಪ್ರಬುದ್ಧತೆಗೆ ಇನ್ನೊಂದು ಸಾಕ್ಷಿ. ಅಸ್ಪೃಶ್ಯರನ್ನು ಹಿಂದೂ ಧರ್ಮದ ಭಾಗವೆಂದು ಅಥವಾ ಹಿಂದೂಗಳೆಂದು ಒಪ್ಪಿಕೊಳ್ಳಲು ನಿರಾಕರಿಸಿದ ಅವರು, ಮುಸ್ಲಿಮರು ಅಥವಾ ಸಿಖ್ಖರಂತೆ ಅಸ್ಪೃಶ್ಯರನ್ನೂ ‘ಪ್ರತ್ಯೇಕ ರಾಜಕೀಯ ಅಲ್ಪಸಂಖ್ಯಾತರು’ ಎಂದು ಪರಿಗಣಿಸಬೇಕೆಂದು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರಿದರು. “ಹಿಂದೂ ಸಮೂಹದ ಒಳಗೇ ಅಸ್ಪೃಶ್ಯರನ್ನು ಸೇರಿಸಿದರೆ, ಬಹುಸಂಖ್ಯಾತ ಮೇಲ್ವರ್ಗವು ಅಲ್ಪಸಂಖ್ಯಾತ ಅಸ್ಪೃಶ್ಯರ ಧ್ವನಿಯನ್ನು ಹತ್ತಿಕ್ಕುತ್ತದೆ” ಎಂಬುದು ಅವರ ದೂರದೃಷ್ಟಿಯಾಗಿತ್ತು. 1932ರ ಪೂನಾ ಒಪ್ಪಂದದವರೆಗೂ ಅವರು ಈ ಪ್ರತ್ಯೇಕ ಗುರುತಿನ ಹಕ್ಕಿಗಾಗಿ ಹೋರಾಟ ಮುಂದುವರೆಸಿದ್ದರು.
ಹಿಂದೂ ಸಮಾಜದಲ್ಲಿ ‘ಶುದ್ಧ’ ಮತ್ತು ‘ಅಶುದ್ಧ’ ಎಂಬ ಕಲ್ಪನೆಗಳಿವೆ. ಅಸ್ಪೃಶ್ಯರ ಮೇಲೆ ಹುಟ್ಟಿದಾಗಿನಿಂದಲೇ ‘ಅಪವಿತ್ರ’ ಎಂಬ ಮುದ್ರೆ ಒತ್ತಲಾಗಿರುತ್ತದೆ. ಹಿಂದೂ ಎನಿಸಿಕೊಂಡವನೊಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್ ವ್ಯಕ್ತಿಯನ್ನು ಮುಟ್ಟಿದರೆ ಹಿಂದೂವಿಗೆ ಮೈಲಿಗೆಯಾಗುವುದಿಲ್ಲ, ಆದರೆ ಒಬ್ಬ ಅಸ್ಪೃಶ್ಯನನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ. ಅಂದರೆ, ಹಿಂದೂ ಧರ್ಮವು ಅಸ್ಪೃಶ್ಯರನ್ನು ಅನ್ಯ ಧರ್ಮೀಯರಿಗಿಂತಲೂ ಕೆಟ್ಟದಾಗಿ ಕಾಣುತ್ತದೆ. ಈ ಸಾಮಾಜಿಕ ಅಂತರವೇ (Social Distance) ಅವರು ಹಿಂದೂಗಳಲ್ಲ ಎಂಬುದಕ್ಕೆ ಅತಿ ದೊಡ್ಡ ಪುರಾವೆಯಾಗಿದೆ ಎನ್ನುತ್ತಾರೆ ಅವರ ‘ಅನಿಹಿಲೇಷನ್ ಆಫ್ ಕಾಸ್ಟ್’ ಕೃತಿಯಲ್ಲಿ.
ಈ ವಿಷಯದಲ್ಲಿ ಅವರ ದೃಢ ನಿಲುವು ಹೇಗಿತ್ತೆಂದರೆ, 1932ರ ಲೋಥಿಯನ್ ಸಮಿತಿ (Lothian Committee) ಮುಂದೆ ಸಾಕ್ಷ್ಯ ನುಡಿಯುವಾಗ ಅಂಬೇಡ್ಕರ್ ಅವರು ಅಸ್ಪೃಶ್ಯರನ್ನು ಹಿಂದೂಗಳಿಗಿಂತ ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಒತ್ತಾಯಿಸುತ್ತಾರೆ. “ಹಿಂದೂಗಳ ಹಿತಾಸಕ್ತಿ ಮತ್ತು ಅಸ್ಪೃಶ್ಯರ ಹಿತಾಸಕ್ತಿಗಳು ಪರಸ್ಪರ ವಿರುದ್ಧವಾಗಿವೆ. ಹಿಂದೂಗಳು ಅಸ್ಪೃಶ್ಯರನ್ನು ಶೋಷಿಸುವ ವರ್ಗಕ್ಕೆ ಸೇರಿದವರು. ಶೋಷಕ ಮತ್ತು ಶೋಷಿತ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಹೇಳುವುದು ಒಂದು ಕ್ರೂರ ವ್ಯಂಗ್ಯ” ಎನ್ನುವುದು ಅವರ ವಾದ. ಈ ಕಾರಣಕ್ಕಾಗಿಯೇ ಅವರು ಪರಿಶಿಷ್ಟ ಜಾತಿಗಳಿಗೆ ಪ್ರತ್ಯೇಕ ಮತಕ್ಷೇತ್ರಗಳಿಗಾಗಿ (Separate Electorates) ಹೋರಾಡಿದರು. ಅವರ ಪ್ರಕಾರ, ರಾಜಕೀಯವಾಗಿ ಅಸ್ಪೃಶ್ಯರು, ಬಹುಸಂಖ್ಯಾತ ಹಿಂದೂಗಳಿಂದ ರಕ್ಷಿಸಲ್ಪಡಬೇಕಾದ ‘ಅಲ್ಪಸಂಖ್ಯಾತರೇ’ (Minorities) ಆಗಿದ್ದಾರೆ.

ಅಸ್ಪೃಶ್ಯತೆಯು ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲ, ಬದಲಿಗೆ ಅದು ಬೌದ್ಧ ಧರ್ಮ ಮತ್ತು ಬ್ರಾಹ್ಮಣಶಾಹಿಯ ನಡುವಿನ ಸುದೀರ್ಘ ಸಂಘರ್ಷದ ಫಲಿತಾಂಶವಾಗಿದೆ ಎನ್ನುತ್ತಾರೆ ಬಾಬಾ ಸಾಹೇಬರು. ಅಂದು ಯುದ್ಧಗಳಲ್ಲಿ ಸೋತು ಚದುರಿಹೋಗಿದ್ದ ಅಲೆಮಾರಿಗಳು ಸಮಾನತೆ ಸಾರುವ ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಇದು ಯಜ್ಞ-ಯಾಗಾದಿ ಮತ್ತು ಪ್ರಾಣಿಬಲಿಯನ್ನು ಆಧರಿಸಿದ್ದ ಅಂದಿನ ಬ್ರಾಹ್ಮಣಶಾಹಿ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಬೌದ್ಧ ಧರ್ಮದ ಪ್ರಭಾವದಿಂದ ಬ್ರಾಹ್ಮಣರ ವರ್ಚಸ್ಸು ಕಡಿಮೆಯಾಗತೊಡಗಿತು. ಆಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಂಸಾಹಾರವನ್ನೇ ತ್ಯಜಿಸಿ ಸಸ್ಯಾಹಾರವನ್ನು ಒಪ್ಪಿಕೊಂಡರು ಹಾಗೂ ಹಸುವನ್ನು ಪವಿತ್ರ ಎಂದು ಘೋಷಿಸಿಕೊಂಡರು.
ಆದರೆ, ಊರಿನ ಹೊರಗೆ ವಾಸಿಸುತ್ತಿದ್ದ ಬಡ ಬೌದ್ಧರು (ಅಸ್ಪೃಶ್ಯರು) ಹಸಿವು ನೀಗಿಸಿಕೊಳ್ಳಲು ಸತ್ತ ದನದ ಮಾಂಸ ತಿನ್ನುವುದನ್ನು ಮುಂದುವರಿಸಿದರು. ಇದನ್ನೇ ಆಯುಧವಾಗಿ ಬಳಸಿಕೊಂಡ ಬ್ರಾಹ್ಮಣಶಾಹಿ, ಗೋಮಾಂಸ ಭಕ್ಷಣೆಯನ್ನು ‘ಮಹಾಪಾಪ’ ಎಂದು ಘೋಷಿಸಿತು. ಯಾರು ಬೌದ್ಧ ಧರ್ಮವನ್ನು ಬಿಡಲಿಲ್ಲವೋ, ಗೋಮಾಂಸ ತಿನ್ನುವುದನ್ನು ಮುಂದುವರಿಸಿದರೋ ಅಂತಹವರನ್ನು ‘ಅಸ್ಪೃಶ್ಯರು’ ಎಂದು ಘೋಷಿಸಿ ಸಮಾಜದಿಂದ ಸಂಪೂರ್ಣವಾಗಿ ಬಹಿಷ್ಕರಿಸಿತು. ಅಂದರೆ, ಅಸ್ಪೃಶ್ಯತೆಯು ಬೌದ್ಧರನ್ನು ದಮನ ಮಾಡಲು ಸೃಷ್ಟಿಸಿದ ಒಂದು ಸಾಮಾಜಿಕ ಆಯುಧವೇ ಹೊರತು ಧರ್ಮದ ಭಾಗವಾಗಿರಲಿಲ್ಲ.
ಬಾಬಾ ಸಾಹೇಬರ ಈ ಕ್ರಾಂತಿಕಾರಿ ಸಿದ್ಧಾಂತದ ಸಾರಾಂಶವೇ ಇದು, ಅಸ್ಪೃಶ್ಯರು ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯ ಭಾಗವಾಗಿ ಹುಟ್ಟಿದವರಲ್ಲ; ಬದಲಿಗೆ ಅವರು ಹಿಂದೂ ಧರ್ಮದ ಸಿದ್ಧಾಂತಗಳನ್ನು ವಿರೋಧಿಸಿದ ಕಾರಣಕ್ಕಾಗಿ ಬಲವಂತವಾಗಿ ಕೆಳಹಂತಕ್ಕೆ ತಳ್ಳಲ್ಪಟ್ಟ ಮೂಲ ಬೌದ್ಧರು. “ಅಸ್ಪೃಶ್ಯರು ಹಿಂದೂ ಸಮಾಜದ ಅಂಗವಲ್ಲ, ಅವರು ಅನ್ಯಾಯವಾಗಿ ಸೋಲಿಸಲ್ಪಟ್ಟ ಪ್ರತ್ಯೇಕ ಗುರುತಿನ ಜನರು” ಎಂದು ಪ್ರತಿಪಾದಿಸಿದರು.
ಒಂದು ಧರ್ಮವು ತನ್ನದೇ ಒಂದು ವರ್ಗವನ್ನು ಎಷ್ಟು ಅಸಹ್ಯವಾಗಿ ಕಾಣುತ್ತದೆ ಎಂದರೆ, ಆ ವರ್ಗದ ನೆರಳು ಕೂಡ ಮೈಲಿಗೆ ಎಂದು ಭಾವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ವರ್ಗವು ಆ ಧರ್ಮದ ಭಾಗವಾಗಿರುವುದು ಹೇಗೆ ಸಾಧ್ಯ? ಇದು ಅತ್ಯಂತ ಕ್ರೂರ, ಅಮಾನವೀಯ ಧಾರ್ಮಿಕ ಬಹಿಷ್ಕಾರ. ಹಾಗಾಗಿಯೇ ಅವರು, “ಹಿಂದೂ ಸಮಾಜವು ಒಂದು ಮಹಲು ಇದ್ದಂತೆ, ಆದರೆ ಅಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಏಣಿಗಳಿಲ್ಲ (Staircase). ಇಲ್ಲಿ ಪ್ರತಿಯೊಂದು ಜಾತಿಯೂ ಒಂದು ಮುಚ್ಚಿದ ಕೋಣೆ” ಎಂದು ಬಣ್ಣಿಸಿದ್ದರು.
1956ರ ಅಕ್ಟೋಬರ್ 14ರಂದು ನಾಗಪುರದ ವಿಶಾಲ ಮೈದಾನದಲ್ಲಿ ನಡೆದ ದೀಕ್ಷಾ ಸಮಾರಂಭವು ಭಾರತದ ಸಾಮಾಜಿಕ ಇತಿಹಾಸದಲ್ಲೇ ಅತಿದೊಡ್ಡ ಧಾರ್ಮಿಕ ಕ್ರಾಂತಿ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಬಿಳಿ ವಸ್ತ್ರಧಾರಿಗಳಾಗಿ ಬಂದಿದ್ದ ಅಂಬೇಡ್ಕರ್, ಹಿರಿಯ ಭಿಕ್ಷು ಚಂದ್ರಮಣಿ ಅವರಿಂದ ಬೌದ್ಧ ಧರ್ಮದ ದೀಕ್ಷೆ ಪಡೆದರು. ತಾವು ಬೌದ್ಧ ಧರ್ಮ ಸ್ವೀಕರಿಸುವುದರ ಜತೆಗೆ, ತಾವೇ ಸ್ವತಃ ಎದ್ದು ನಿಂತು ತಮ್ಮ ಲಕ್ಷಾಂತರ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ಬೋಧಿಸಿದರು. ಈ ಪ್ರತಿಜ್ಞೆಗಳು ಹಿಂದೂ ಧರ್ಮದ ಶ್ರೇಣೀಕೃತ ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆಯ ಹಾದಿಯಲ್ಲಿ ನಡೆಯುವ ಸಂಕಲ್ಪವಾಗಿದ್ದವು.

ಈ ಘಟನೆಯನ್ನು ಅಂಬೇಡ್ಕರ್ ‘ಮತಾಂತರ’ ಎಂದು ಕರೆಯುವ ಬದಲು ‘ಮೂಲ ಮನೆಗೆ ಮರಳುವಿಕೆ’ ಎಂದು ಭಾವಿಸಿದ್ದರು. ಅಸ್ಪೃಶ್ಯತೆಯ ನರಕಯಾತನೆಯಿಂದ ವಿಮೋಚನೆ ಪಡೆಯಲು ಮತ್ತು ಘನತೆಯ ಬದುಕು ಕಟ್ಟಿಕೊಳ್ಳಲು ಬೌದ್ಧ ಧರ್ಮವೇ ಏಕೈಕ ಮಾರ್ಗ ಎಂದು ಸಾರಿದರು. “ನಾನು ಇಂದು ನರಕದಿಂದ ಮುಕ್ತನಾಗಿದ್ದೇನೆ” ಎಂದು ಭಾವಪರವಶರಾಗಿ ನುಡಿದ ಬಾಬಾ ಸಾಹೇಬರ ಈ ಕ್ರಾಂತಿಕಾರಿ ಹೆಜ್ಜೆ, ಭಾರತದ ಶೋಷಿತ ವರ್ಗದ ಜನರಿಗೆ ಆತ್ಮಗೌರವ ಮತ್ತು ಘನತೆಯ ಬದುಕಿನ ಕಡೆಗೆ ಸಾಗಲು ಹೊಸ ಆಯಾಮವನ್ನು ನೀಡಿತು.
ಕೋಟ್ಯಂತರ ಜನರ ಅಸ್ತಿತ್ವದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಬಾಬಾ ಸಾಹೇಬರು “ಪರಿಶಿಷ್ಟರು ಹಿಂದೂಗಳಲ್ಲ” ಎಂದು ಪ್ರತಿಪಾದಿಸಿದರು. ಇದು ಧಾರ್ಮಿಕ ವಿರೋಧವಾಗಿರಲಿಲ್ಲ; ಶೋಷಿತರಿಗೆ ‘ಹಿಂದೂ’ ಎಂಬ ಸೋಗಿನ ಗುಲಾಮಗಿರಿಯಿಂದ ಮುಕ್ತಿ ನೀಡಿ, ಅವರಿಗೆ ತಮ್ಮದೇ ಆದ ಸ್ವತಂತ್ರ ರಾಜಕೀಯ ಮತ್ತು ಸಾಮಾಜಿಕ ಗುರುತನ್ನು (Independent Identity) ನೀಡುವ ಭರವಸೆಯಾಗಿತ್ತು.
ಇಂದು ಪರಿಶಿಷ್ಟ ಜಾತಿಗಳು ಮತ್ತು ಶೋಷಿತ ವರ್ಗಗಳು ಸಾಂವಿಧಾನಿಕವಾಗಿ ಪಡೆಯುತ್ತಿರುವ ಪ್ರತಿಯೊಂದು ಹಕ್ಕು ಮತ್ತು ಗೌರವದ ಹಿಂದೆ, ಅಂದು ಬಾಬಾ ಸಾಹೇಬರು ಮಂಡಿಸಿದ ಕ್ರಾಂತಿಕಾರಿ ಸಿದ್ಧಾಂತಗಳ ಬಲವಿದೆ. ಅಸ್ಪೃಶ್ಯರನ್ನು ಹಿಂದೂ ಸಮಾಜದ ‘ಅವಶೇಷಗಳಂತೆ’ ಬದುಕುವುದರಿಂದ ಬಿಡಿಸಿ, ಅವರನ್ನು ಆಧುನಿಕ ಭಾರತದ ‘ನಿರ್ಮಾರ್ತೃಗಳಾಗಿ’ ರೂಪಿಸಿದರು. ಅವರ ಪ್ರತಿಪಾದನೆಗಳು ಇಂದಿಗೂ ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆಯನ್ನು ಅಳೆಯುವ ಅಳತೆಗೋಲುಗಳಾಗಿ ಉಳಿದಿವೆ.
ಇದನ್ನೂ ಓದಿ: ಅಂಬಾನಿಯ ಹೊಸ ಸೈಡ್ ಬ್ಯುಸಿನೆಸ್ ʼಒಗ್ಗರಣೆʼ: ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್ನ ದುಪ್ಪಟ್ಟು ಈ ʼತಡ್ಕಾʼ ಲಾಭದ ಗುರಿ!
“ಗುಲಾಮನಿಗೆ ಅವನು ಗುಲಾಮನೆಂದು ನೆನಪಿಸಿ, ಆಗ ಅವನು ಬಂಡೇಳುತ್ತಾನೆ” ಎಂಬ ಅವರ ಮಾತುಗಳೇ ಸಾಕು, ಇಂದಿಗೂ ವೈಚಾರಿಕ ದಾಸ್ಯದಲ್ಲಿ, ಅಂಧಶ್ರದ್ಧೆಯಲ್ಲಿ ಮತ್ತು ಅನ್ಯರ ಕೃಪಾಕಟಾಕ್ಷದಡಿ ಗುಲಾಮರಂತೆ ಬದುಕುತ್ತಿರುವವರ ಸುಪ್ತಪ್ರಜ್ಞೆಯನ್ನು ಬಡಿದೆಬ್ಬಿಸಲು. ಯಾರು ತಮ್ಮ ಆತ್ಮಗೌರವವನ್ನು ಮರೆತು ಪರರ ಹಂಗಿನಲ್ಲಿ ಬದುಕುತ್ತಿದ್ದಾರೋ, ಅಂತಹವರ ಎದೆಯೊಳಗೆ ಈ ಮಾತುಗಳು ಕಿಚ್ಚು ಹಚ್ಚಬೇಕು. ದೈಹಿಕ ಗುಲಾಮಗಿರಿಗಿಂತ ಮಾನಸಿಕ ಗುಲಾಮಗಿರಿ ಅತ್ಯಂತ ಅಪಾಯಕಾರಿ. ಆ ಸಂಕೋಲೆಗಳನ್ನು ಪುಡಿಗಟ್ಟಿ, ಅಂಬೇಡ್ಕರ್ ಅವರು ತೋರಿದ ‘ಆತ್ಮಗೌರವದ ಹಾದಿ’ಯಲ್ಲಿ ಎದೆಯುಬ್ಬಿಸಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.




