ಸೇವಾನಿರತ ಶಿಕ್ಷಕರ ಮರು ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವ ರೀತಿಯ ನಿಯಮ ರೂಪಿಸುತ್ತದೆ ಎಂಬುದರತ್ತ ರಾಜ್ಯದ ಲಕ್ಷಾಂತರ ಮಂದಿ ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಸಮಾನ ಹುದ್ದೆಗೆ ಮರು ನೇಮಕಕ್ಕೆ ಕಡಿವಾಣ ಬಿದ್ದರೆ ಮಾತ್ರ ಹೊಸ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುವುದರ ಜತೆಗೆ, ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆಯೂ ತಗ್ಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿ 15 ಸಾವಿರ ಮಂದಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಕರಡು ವಿಶೇಷ ರಾಜ್ಯಪತ್ರ ಹೊರಡಿಸಿರುವ ಬೆನ್ನಲ್ಲೇ, ಸೇವೆಯಲ್ಲಿರುವ ಶಿಕ್ಷಕರು ಮತ್ತೆ ಅದೇ ಸಮಾನ ಹುದ್ದೆಗೆ ಅರ್ಜಿ ಸಲ್ಲಿಸಿ ಮರು ನೇಮಕವಾಗುತ್ತಿರುವ ಪದ್ಧತಿಗೆ ತಡೆ ಹಾಕಬೇಕು ಎಂಬ ಒತ್ತಾಯ ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿಗಳಿಂದ ಕೇಳಿಬಂದಿದೆ.
ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದ ಕಾರಣ ಡಿ.ಇಡಿ ಹಾಗೂ ಬಿ.ಇಡಿ ಪೂರ್ಣಗೊಳಿಸಿರುವ ಲಕ್ಷಾಂತರ ಮಂದಿ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರು ಮತ್ತೆ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಹೊಸ ಅಭ್ಯರ್ಥಿಗಳ ಉದ್ಯೋಗಾವಕಾಶ ಕಡಿಮೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರು(PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(GPT) ಹಾಗೂ ಪ್ರೌಢಶಾಲಾ ಸಹಾಯಕ ಶಿಕ್ಷಕರು(HST) ಸೇರಿ 15 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಆದರೆ ಹಿಂದಿನ ನೇಮಕಾತಿಗಳಲ್ಲಿಯೂ ಸೇವಾನಿರತ ಶಿಕ್ಷಕರು ಮರು ಅರ್ಜಿ ಸಲ್ಲಿಸಿ ನೇಮಕಗೊಂಡ ಉದಾಹರಣೆಗಳಿದ್ದು, ಇದರಿಂದ ಅನೇಕ ನಿರುದ್ಯೋಗಿಗಳು ಅವಕಾಶ ಕಳೆದುಕೊಂಡಿರುವುದಾಗಿ ಅಭ್ಯರ್ಥಿಗಳು ನೆನಪಿಸುತ್ತಿದ್ದಾರೆ.
ಆಕಾಂಕ್ಷಿಗಳ ಅಭಿಪ್ರಾಯದಂತೆ, ಪಿಎಸ್‌ಟಿ ಅಥವಾ ಜಿಪಿಟಿ ಶಿಕ್ಷಕರು ಬಡ್ತಿ ಸ್ವರೂಪದ ಎಚ್‌ಎಸ್‌ಟಿ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ತಮಗೆ ಅನುಕೂಲವಾದ ಜಿಲ್ಲೆಗೆ ವರ್ಗಾವಣೆ ಪಡೆಯುವ ಉದ್ದೇಶದಿಂದ ಸಮಾನ ಹುದ್ದೆಗೆ ಮರು ಅರ್ಜಿ ಸಲ್ಲಿಸುವುದನ್ನು ಸರ್ಕಾರ ನಿರ್ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಸಾಫ್ಟ್‌ವೇರ್‌ನಲ್ಲೇ ನಿಯಂತ್ರಣಕ್ಕೆ ಒತ್ತಾಯ
ಶಿಕ್ಷಕರ ನೇಮಕಾತಿ ತಂತ್ರಾಂಶದಲ್ಲಿ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳ HRMS ಐಡಿ ಕಡ್ಡಾಯವಾಗಿ ನಮೂದಿಸುವ ವ್ಯವಸ್ಥೆ ಜಾರಿಯಾಗಬೇಕು. ಅಧಿಸೂಚನೆ ಹೊರಡಿಸುವ ಮುನ್ನವೇ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಸೇವೆಯಲ್ಲಿರುವ ಶಿಕ್ಷಕರು ಸಮಾನ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು ಎಂದು ನಿರುದ್ಯೋಗಿಗಳು ಆಗ್ರಹಿಸಿದ್ದಾರೆ.
ಕೆಲವರು ತಮ್ಮ ಸರ್ಕಾರಿ ಸೇವೆಯ ಮಾಹಿತಿಯನ್ನು ಮರೆಮಾಚಿ ಸಾಮಾನ್ಯ ಅಭ್ಯರ್ಥಿಗಳಂತೆ ಅರ್ಜಿ ಸಲ್ಲಿಸಿ, ಹೊಸ ಹುದ್ದೆಗೆ ಆಯ್ಕೆಯಾದ ಬಳಿಕ ಹಿಂದಿನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಇದರಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾಗಿ ಉಳಿಯುತ್ತವೆ. ಆ ಹುದ್ದೆಗಳನ್ನು ಮತ್ತೆ ಭರ್ತಿ ಮಾಡಲು ದೀರ್ಘ ಕಾಲ ಹಿಡಿಯುವುದರಿಂದ ಮಕ್ಕಳ ಕಲಿಕೆಯ ಮೇಲೂ ದುಷ್ಪರಿಣಾಮ ಬೀಳುತ್ತಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.
ಬಿ.ಇಡಿ ಪದವೀಧರ ವಿನಾಯಕ ಹಳಕಟ್ಟಿ ಮಾತನಾಡಿ, “ಮೈಸೂರು, ಮಂಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಶಿಕ್ಷಕರು ಈಗ ವಿಜಯಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮತ್ತೆ ತಮ್ಮ ಜಿಲ್ಲೆಗಳಿಗೆ ಹೋಗಲು ಸಮಾನ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದರೆ ಹೊಸ ಅಭ್ಯರ್ಥಿಗಳಿಗೆ ಅವಕಾಶ ಸಿಗುವುದಿಲ್ಲ. ಜತೆಗೆ ಅವರು ಬಿಟ್ಟ ಹುದ್ದೆಗಳು ದೀರ್ಘಕಾಲ ಖಾಲಿಯಾಗಿ ಉಳಿದು ಗ್ರಾಮೀಣ ಶಾಲೆಗಳ ಶಿಕ್ಷಣ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಬಿ.ಇಡಿ ಪದವಿ ವಿದ್ಯಾರ್ಥಿನಿ ಸುಪ್ರಿಯಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, “ಸರ್ಕಾರಿ ಸೇವೆಯಲ್ಲಿರುವವರು ಮಾಹಿತಿ ಮರೆಮಾಚಿ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಸಂಪೂರ್ಣವಾಗಿ ತಡೆಯಬೇಕು. ನೇಮಕಾತಿ ವೇಳೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದರೆ ಮಾತ್ರ ನಿರುದ್ಯೋಗಿಗಳಿಗೆ ನ್ಯಾಯ ದೊರೆಯುತ್ತದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಬರಗಾಲವನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದ ಉದಾಹರಣೆ ಇದೆಯೇ?
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವ ಈ ಸಂದರ್ಭದಲ್ಲಿ ಸೇವಾನಿರತ ಶಿಕ್ಷಕರ ಮರು ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವ ರೀತಿಯ ನಿಯಮ ರೂಪಿಸುತ್ತದೆ ಎಂಬುದರತ್ತ ರಾಜ್ಯದ ಲಕ್ಷಾಂತರ ಮಂದಿ ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಸಮಾನ ಹುದ್ದೆಗೆ ಮರು ನೇಮಕಕ್ಕೆ ಕಡಿವಾಣ ಬಿದ್ದರೆ ಮಾತ್ರ ಹೊಸ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುವುದರ ಜತೆಗೆ, ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯ ಸಮಸ್ಯೆಯೂ ತಗ್ಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.





