2001ರಿಂದ 2024ರವರೆಗೆ ರಾಜ್ಯವು ಸುಮಾರು 17 ಸಲ ಬರಗಾಲಕ್ಕೆ ಬಲಿಯಾಗಿದೆ. ಆದರೆ, ಬರಗಾಲವನ್ನು ಯಾವ ಮುಖ್ಯಮಂತ್ರಿಯೂ ಸಮರ್ಥವಾಗಿ ನಿರ್ವಹಿಸಲಿಲ್ಲ. ಯಾವ ಸರ್ಕಾರಗಳೂ ಶಾಶ್ವತ ಪರಿಹಾರ ಕ್ರಮಗಳತ್ತ ಗಮನ ಹರಿಸಲಿಲ್ಲ.
‘ಸಾಹೇಬ್ರಾ, ಮುಂಗಾರು ಮಳಿ ಅಂತೂ ಹೋತು. ಈಗ ಮಳಿ ಆದ್ರೂ ಸತ್ ಹೋಗಿರೋ ಬೆಳಿಗೆ ಮತ್ತ ಜೀವ ಬರೋಕಾ ಆಗುತ್ತೋ ಇಲ್ಲೋ ಗೋತ್ತಿಲ್ರಿ. ನಮ್ ತಾಲ್ಲೂಕಿನ್ಯಾಗ ಇರೋ ರೈತರ ಪರಿಸ್ಥಿತಿ ಅರ್ಥ ಮಾಡ್ಕೊಂಡು ಬರಗಾಲ ಅಂತಾ ಘೋಷಣಿ ಮಾಡಿ ಪುಣ್ಯಕಟ್ಕೋರಿ ಸರ’ ಎಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರೈತ ಹನುಮಂತಪ್ಪ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮುಂದೆ ಅಳಲು ತೋಡಿಕೊಂಡರು.
ಹಲವು ಗ್ರಾಮಗಳ ಮಳೆ, ಬೆಳೆ, ಕೃಷಿಕರ ಸ್ಥಿತಿಗತಿಯನ್ನು ಖುದ್ದು ಕಾಣಲು ಬಂದ ಜಿಲ್ಲಾಧಿಕಾರಿಗಳಿಗೆ ಮಳೆ ಇಲ್ಲದೆ ಬಿರುಕುಬಿಟ್ಟ ಭೂಮಿ, ಮೊಳಕೆಯೊಡೆಯದ ಬೀಜ, ಬಿಸಿಲಿಗೆ ಬಾಡಿದ ಬೆಳೆ ಕಣ್ಣಿಗೆ ರಾಚುತ್ತಿತ್ತು. ಕೃಷಿಕರು ಕೈ ಮುಗಿಯುವ ಅಗತ್ಯವೇ ಇಲ್ಲದಂತೆ ಬರಗಾಲದ ಚಿತ್ರಣ ಕಾಣುತ್ತಿತ್ತು. ಗದಗ ಜಿಲ್ಲೆಯ ಹಳ್ಳಿಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡ ಜಿಲ್ಲಾಧಿಕಾರಿ ಶ್ರೀಧರ್, ‘ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಅಧಿಕಾರ ನಮ್ಮ ಕೈಯಲ್ಲಿಲ್ಲ. ಬದಲಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಬೆಳೆ ಸಮೀಕ್ಷೆ ವರದಿ ಸಲ್ಲಿಸಲಾಗುತ್ತಿದ್ದು, ಆಗಸ್ಟ್ 20ರವರೆಗೆ ಕಾಲಾವಕಾಶವಿದೆ. ಸರ್ಕಾರ ದತ್ತಾಂಶಗಳನ್ನು ಪಡೆದುಕೊಂಡು ಘೋಷಣೆ ಮಾಡಲಿದೆ’ ಎಂದರು.
ಇತ್ತ ರಾಜಧಾನಿಯ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರ ನಿರ್ವಹಣೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ, ‘ಮಳೆ ಕೊರತೆಯಿಂದ ರಾಜ್ಯದ 178 ತಾಲೂಕುಗಳಲ್ಲಿ ಬರದ ಛಾಯೆ ಕಾಣಿಸಿಕೊಂಡಿದ್ದು, ಬರ ಪರಿಸ್ಥಿತಿ ನಿರ್ವಹಣೆಗೆ ಟೀಮ್ ಕರ್ನಾಟಕ ಸ್ಫೂರ್ತಿಯಿಂದ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಪೇಪರ್ ವರದಿ ಬೇಕಾಗಿಲ್ಲ. ಅಧಿಕಾರಿಗಳು ಫೀಲ್ಡಿಗಿಳಿಯಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಪರಿಹಾರ ಕಾರ್ಯಕ್ಕೆ ಪಿಡಿ ಖಾತೆಯ ಹಣ ಬಳಸಿಕೊಳ್ಳಬೇಕು. ಜನ ಗುಳೆ ಹೋಗುವುದನ್ನು ತಪ್ಪಿಸಿ, ಅವರಿಗೆ ಉದ್ಯೋಗ ಒದಗಿಸಬೇಕು’ ಎಂದು ಜಿಲ್ಲಾಡಳಿತಕ್ಕೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು.
ಇದನ್ನು ಓದಿದ್ದೀರಾ?: ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ
ಈ ಮೂರು ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಧಿಕಾರಸ್ಥರು ಮತ್ತು ಅಧಿಕಾರಿಗಳಿಂದ ಬರ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬುದು ಮನವರಿಕೆಯಾಗುತ್ತದೆ. ಮಳೆ ಕೈ ಕೊಟ್ಟಿದ್ದರಿಂದಾಗಿ ದಿಕ್ಕೆಟ್ಟ ರೈತ ಜಿಲ್ಲಾಧಿಕಾರಿಗೆ ಅಂಗಲಾಚುವುದು; ಜಿಲ್ಲಾಧಿಕಾರಿಗಳು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ಅಧಿಕಾರ ನಮ್ಮ ಕೈಯಲ್ಲಿಲ್ಲ ಎಂದು ಅಲವತ್ತುಕೊಳ್ಳುವುದು; ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳು ಸಮರೋಪಾದಿಯಲ್ಲಿ ಬರ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡುವುದು- ರಾಜ್ಯದಲ್ಲಿ ಬರಗಾಲ ಬಂದಾಗಲೆಲ್ಲ ಕಾಣುವ, ಕೇಳುವ ಯಥಾರೀತಿಯ ಸುದ್ದಿಗಳು.
ಕರ್ನಾಟಕ ಹೇಳಿಕೇಳಿ ಕೃಷಿ ಪ್ರಧಾನ ರಾಜ್ಯ. ಶೇ. 70ಕ್ಕಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನ ಕೃಷಿ ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದೆ. ಈ ಪ್ರದೇಶಗಳಲ್ಲಿ ಆಯಾಯ ಋತುಮಾನಗಳಲ್ಲಿ ಬೀಳುವ ಮಳೆ ವ್ಯತ್ಯಾಸದಿಂದಾಗಿ ಮುಂಗಾರು ಕೈ ಕೊಟ್ಟಿದೆ. ರಾಜ್ಯ ಬರಗಾಲಕ್ಕೆ ತುತ್ತಾಗಿದೆ.
ಬರಗಾಲವು ಕೇವಲ ಕೃಷಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಕುಡಿಯುವ ನೀರಿನ ಕೊರತೆ, ಜಲಾಶಯಗಳ ನೀರಿನ ಮಟ್ಟ ಕುಸಿತ, ಪಶುಸಂಗೋಪನೆಗೆ ಮೇವು ಮತ್ತು ನೀರಿನ ಅಭಾವ, ಕೈಗಾರಿಕೆಗಳಿಗೆ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸ ಹಾಗೂ ವಿದ್ಯುತ್ ಉತ್ಪಾದನೆ ಮೇಲೂ ಇದರ ಪರಿಣಾಮ ಬೀರುತ್ತದೆ. ಹಾಗಾಗಿ ಅದು ಪರಿಸರ, ಕೃಷಿ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ವ್ಯಾಪಕ ಪರಿಣಾಮ ಬೀರುವ ಭೀಕರ ಸಮಸ್ಯೆಯಾಗಿದೆ. ಬರಗಾಲವು ಆಹಾರ ಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಸಾಲದ ಹೊರೆ, ನಿರುದ್ಯೋಗ, ವಲಸೆ ಮತ್ತು ಸಾಮಾಜಿಕ ಅಸಮಾನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟದ ಮೇಲೂ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ.
ಹೀಗಾಗಿ ಬರಗಾಲ ನಿರ್ವಹಣೆ ಸರ್ಕಾರದ ಬಹಳ ಮುಖ್ಯ ಆದ್ಯತೆಯಾಗಬೇಕು. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಮೇವು ವಿತರಣೆ, ಉದ್ಯೋಗ ಖಾತರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಬೆಳೆ ವಿಮೆ, ಪರಿಹಾರ ಧನ ಹಾಗೂ ರೈತರಿಗೆ ಆರ್ಥಿಕ ನೆರವು ಒದಗಿಸುವ ಕ್ರಮಗಳು ಅಗತ್ಯವಾಗಿವೆ. ಆದರೆ ಕೇವಲ ಪರಿಹಾರ ಕ್ರಮಗಳು ಸಾಕಾಗುವುದಿಲ್ಲ. ದೀರ್ಘಕಾಲೀನ ಪರಿಹಾರಕ್ಕಾಗಿ ಜಲಸಂರಕ್ಷಣೆ, ಕೆರೆ-ಕಟ್ಟೆಗಳ ಪುನರುಜ್ಜೀವನ, ಮಳೆನೀರು ಸಂಗ್ರಹಣೆ, ವಾಟರ್‌ಶೆಡ್ ಅಭಿವೃದ್ಧಿ, ಸೂಕ್ಷ್ಮ ನೀರಾವರಿ ಪದ್ಧತಿಗಳಾದ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳ ವಿಸ್ತರಣೆ ಹಾಗೂ ನೀರಿನ ಮರುಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕೃಷಿ ಕ್ಷೇತ್ರದಲ್ಲಿಯೂ ಬದಲಾವಣೆಗಳ ಅಗತ್ಯವಿದೆ. ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಉತ್ತೇಜಿಸುವುದು, ಬರನಿರೋಧಕ ಬೀಜಗಳ ಅಭಿವೃದ್ಧಿ, ಹವಾಮಾನಕ್ಕೆ ಹೊಂದಿಕೊಳ್ಳುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ವೈಜ್ಞಾನಿಕ ಕೃಷಿ ಸಲಹೆಗಳನ್ನು ರೈತರಿಗೆ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಹವಾಮಾನ ಮುನ್ಸೂಚನೆಗಳ ಆಧಾರದ ಮೇಲೆ ಕೃಷಿ ಯೋಜನೆ ರೂಪಿಸುವ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಬರಗಾಲದ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ.
ಇದನ್ನು ಓದಿದ್ದೀರಾ?: ಹೆಣ್ಣುಮಕ್ಕಳ ಸುರಕ್ಷತೆ ಕೇವಲ ರಾಜಕೀಯ ಭಾಷಣದ ಸರಕಾಗದಿರಲಿ
ದುರದೃಷ್ಟಕರ ಸಂಗತಿ ಎಂದರೆ, ರಾಜ್ಯ ಬರಗಾಲಕ್ಕೆ ತುತ್ತಾಗುವುದು ಹೊಸ ಬೆಳವಣಿಗೆಯೇನೂ ಅಲ್ಲ. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಾಗಿಲ್ಲ. 2001ರಿಂದ 2024ರವರೆಗೆ ರಾಜ್ಯವು ಸುಮಾರು 17 ಸಲ ಬರಗಾಲಕ್ಕೆ ಬಲಿಯಾಗಿದೆ. ಆದರೆ, ಬರಗಾಲವನ್ನು ಯಾವ ಮುಖ್ಯಮಂತ್ರಿಯೂ ಸಮರ್ಥವಾಗಿ ನಿರ್ವಹಿಸಲಿಲ್ಲ. ಯಾವ ಸರ್ಕಾರಗಳೂ ಶಾಶ್ವತ ಪರಿಹಾರ ಕ್ರಮಗಳತ್ತ ಗಮನ ಹರಿಸಲಿಲ್ಲ. ಬದಲಿಗೆ, ಪರಿಹಾರದ ಹಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರಿಗೊಬ್ಬರು ದೂರುವುದು, ಬಿಡುಗಡೆಯಾದ ಹಣದಲ್ಲಿ ಚಿಲ್ಲರೆ ಕಾಸನ್ನು ಸಂತ್ರಸ್ತರಿಗೆ ಕೈ ಕೊಟ್ಟು ಕೈ ತೊಳೆದುಕೊಳ್ಳುವುದು- ಅಧಿಕಾರಸ್ಥರ ನಿರಂತರ ನಾಟಕವಾಗಿದೆ.
ಅಧಿಕಾರಸ್ಥರ ಈ ಆಟ-ನಾಟಕಗಳನ್ನು ಖುದ್ದು ಕಂಡ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು, ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಎಂಬ ಪುಸ್ತಕವನ್ನೇ ಬರೆದಿದ್ದರು. ಅದರಲ್ಲಿ ಗ್ರಾಮೀಣ ಬಡಜನರ ಬದುಕು, ರೈತರ ಆತ್ಮಹತ್ಯೆ, ಕೃಷಿಕರ ಕಷ್ಟಕೋಟಲೆಗಳು, ಪರಿಹಾರದ ಹಣವನ್ನು ಕಣ್ಮುಚ್ಚಿ ಬಿಡುವುದರೊಳಗೆ ನುಂಗಿ ನೀರು ಕುಡಿಯುವ ಅಧಿಕಾರಸ್ಥರು- ಎಲ್ಲವನ್ನು ಎಳೆಎಳೆಯಾಗಿ ವಿವರಿಸಿದ್ದರು. ಸಾಯಿನಾಥರ ಸತ್ಯಶೋಧನೆಗೆ ಪುರಾವೆ ಒದಗಿಸುವಂತೆ, ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರಗಾಲದ ನೆಪದಲ್ಲಿ ಸುಮಾರು 5,360 ಕೋಟಿ ರೂಪಾಯಿಗಳು ನೀರಿನಂತೆ ಹರಿದುಹೋಗಿದೆ.
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತೊಂದು ಬರಗಾಲ ಎದುರಾಗಿದೆ, ಮತ್ತೊಮ್ಮೆ ವರದಿ ತಯಾರಾಗುತ್ತಿದೆ, ಬೆಳೆ ಸಮೀಕ್ಷೆಗೆ ಕೇಂದ್ರಕ್ಕೆ ಮನವಿಯೂ ರವಾನೆಯಾಗಿದೆ. ನಾಲ್ಕು ದಶಕಗಳ ನುರಿತ ರಾಜಕಾರಣಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಿಗಳಿಗೆ ದೊಡ್ಡದನಿಯಲ್ಲಿ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದಾರೆ. ಬರಗಾಲ ನಿರ್ವಹಣೆಗೆ ಇದಷ್ಟೇ ಸಾಲದು, ಬಡ ರೈತ ಹನುಮಂತಪ್ಪನ ಅಳಲನ್ನು ಆಲಿಸುವ, ಅರ್ಥ ಮಾಡಿಕೊಳ್ಳುವ, ಸ್ಪಂದಿಸುವ ಅಂತಃಕರಣವೂ ಇರಬೇಕು. ಅದನ್ನವರು ಮೊದಲು ರೂಢಿಸಿಕೊಳ್ಳಬೇಕು.





