ಸಿದ್ದರಾಮಯ್ಯನವರ ಕುರ್ಚಿ ಯಾವಾಗ ಬಲ ಕಳಕೊಳ್ಳುತ್ತದೋ, ಯಾವಾಗ ಕುರ್ಚಿ ಅಲ್ಲಾಡುತ್ತಿದೆ ಅನಿಸಿದಾಗ ಸಮಾವೇಶಗಳನ್ನು ಅವರು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಿದ್ದರಾಮಯ್ಯನವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅಹಿಂದ ಸಮುದಾಯಗಳನ್ನು ಮುಂದೆ ಇಡುತ್ತಾರೆ. ಆ ಸಮುದಾಯಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂಥ ಸಮಾವೇಶ ಮಾಡಿ, ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಬೆದರಿಕೆ ಒಡ್ಡುವ ಕುತಂತ್ರಗಳನ್ನು ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ಅವರ ಎರಡೂವರೆ ವರ್ಷದ ಆಡಳಿತದಲ್ಲಿ ಸಾಧನೆ ಶೂನ್ಯ” ಎಂದು ಟೀಕಿಸಿದರು.
“ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಾಧನೆ ಮಾಡಿದ್ದರೆ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಅವರು ಪದೇ ಪದೆ ಬೆಂಗಳೂರಿಗೆ ಬಂದು ಶಾಸಕರನ್ನು ಮಾತನಾಡಿಸುವ ಮತ್ತು ಅವರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಶಾಸಕರ ಅಸಮಾಧಾನ ಅರ್ಥ ಮಾಡಿಕೊಳ್ಳಲು ಮತ್ತು ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕೆಂದು ಶಾಸಕರ ಅಂತರಾಳದಲ್ಲಿ ಏನಿದೆ ಎಂದು ತಿಳಿಯಲು ಸುರ್ಜೇವಾಲಾ ಅವರು ಪದೇ ಪದೆ ಬರುತ್ತಿದ್ದಾರೆ” ಎಂದರು.
“ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ. ಕುದುರೆ ವ್ಯಾಪಾರವೂ ಆರಂಭವಾಗಿದೆ. ಶಾಸಕರ ಬಲಕ್ಕಾಗಿ ರೇಟ್ ಫಿಕ್ಸಿಂಗ್ ನಡೆಯುತ್ತಿದೆ. ಸಿದ್ದರಾಮಯ್ಯನವರು ನಾನೇ 5 ವರ್ಷ ಸಿಎಂ ಎಂದು ದೆಹಲಿಯಲ್ಲಿ ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ನೇರವಾಗಿ ಸವಾಲನ್ನು ಹಾಕಿದ್ದಾರೆ” ಎಂದು ಹೇಳಿದರು.
“ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರಿಗೆ ಭೇಟಿಗೆ ಅವಕಾಶವನ್ನೂ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ವಿವರಿಸಿದರು. ಕಾಂಗ್ರೆಸ್ ಶಾಸಕರು ಒಳಗೊಳಗೇ ಕತ್ತಿ ಮಸೆಯುತ್ತಿದ್ದಾರೆ. ಸಿದ್ದರಾಮಯ್ಯರ ಪರ ಕೆಲವರು, ಡಿಕೆಶಿ ಪರ ಇನ್ನೂ ಹಲವರು ಬ್ಯಾಟಿಂಗ್ ಮಾಡುತ್ತಿದ್ದಾರೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೀದಿ ವ್ಯಾಪಾರಿಗಳಿಗೆ ನೋಟಿಸ್
ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಗೆ ರಾಜ್ಯ ಸರಕಾರದ ನೋಟಿಸ್ ನೀಡಿದೆ. ಪಕ್ಷದ ಮುಖಂಡರು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಒಂದು ಕಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ, ಇದನ್ನೇ ನೆಪ ಒಡ್ಡಿ ಬೀದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಹೆದರಿಸುವ ಕೆಲಸ ಮಾಡುತ್ತಿದೆ” ಎಂದು ಆಕ್ಷೇಪಿಸಿದರು.
ರಾಜಕೀಯವಾಗಿ ಮುಗಿಸುವ ಷಡ್ಯಂತ್ರ
ರೌಡಿ ಶೀಟರ್ ಕೊಲೆ ಕೇಸಿನಲ್ಲಿ ಶಾಸಕ ಬೈರತಿ ಬಸವರಾಜು ಅವರ ಮೇಲೆ ಹೆಸರನ್ನು ಆರೋಪಿಯಾಗಿ ಸೇರಿಸಿದ ಕುರಿತ ಪ್ರಶ್ನೆಗೆ ಉತ್ತರ ನೀಡಿ, “ಕಳೆದ 2 ವರ್ಷದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ಶಾಸಕರನ್ನು ಬೆದರಿಸುವ ಕುತಂತ್ರಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ದಕ್ಷಿಣ ಕನ್ನಡದಲ್ಲಿ ನಮ್ಮ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಎಫ್‍ಐಆರ್ ನೋಂದಾವಣೆ ಮಾಡಿದ್ದರು. ಅವರನ್ನು ಬಂಧಿಸುವ ಪ್ರಯತ್ನ ಮಾಡಿದ್ದು, ಅದು ಸಫಲವಾಗಲಿಲ್ಲ. ನಂತರ ಭರತ್ ಶೆಟ್ಟಿಯವರ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ವಿವಿಧ ಶಾಸಕರ ಮೇಲೆ ಎಫ್‍ಐಆರ್ ದಾಖಲಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಹಿಂದುಳಿದ ವರ್ಗಗಳ ನಾಯಕ- ಮಾಜಿ ಸಚಿವ ಬೈರತಿ ಬಸವರಾಜು ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ವಿಜಯೇಂದ್ರ ತಿಳಿಸಿದರು. ಕೊಲೆಯಾದವನ ತಾಯಿ ಕೂಡ ತಾವು ಬೈರತಿ ಬಸವರಾಜು ಅವರ ಹೆಸರು ಹೇಳಿಲ್ಲ” ಎಂದರು.