ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಎಲ್ಲ 28 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಲಿದೆ, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೇಳಿದ್ದಾರೆ.
ಬೀದರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಹತ್ತು ತಿಂಗಳಿಂದ ಕಾಂಗ್ರೆಸ್ ಶಾಸಕರು ಅಸಮಧಾನಗೊಂಡಿದ್ದು, ಲೋಕಸಭಾ ಚುನಾವಣೆ ಬಳಿಕ ಅಸಮಾಧಾನ ಸ್ಫೋಟಗೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಪದ್ಧತಿ ಪ್ರಕಾರ ರಾಜ್ಯಕ್ಕೆ ಕೊಡಬೇಕಾದ ಪರಿಹಾರ ಕೊಟ್ಟಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕೆಟ್ಟ ಚಾಳಿಯಿಂದ ಮೋದಿ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಆ ಮೂಲಕ ತಾವು ಬಚಾವ್ ಆಗ್ತೇವೆ ಎಂಬ ಭ್ರಮೆಯಲ್ಲಿದ್ದಾರೆ” ಎಂದರು.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದ ಬಡವರಿಗೆ 4 ಕೋಟಿ ಮನೆಗಳನ್ನು ಕೊಟ್ಟಿದ್ದೇವೆ, ಕಾಂಗ್ರೆಸ್ ಸರ್ಕಾರ ವರ್ಷಕ್ಕೆ 7 ಲಕ್ಷ ಮನೆಗಳು ಕೊಟ್ಟಿತ್ತು, ನಾವು ವರ್ಷಕ್ಕೆ 40 ಲಕ್ಷ ಮನೆ ಕೊಟ್ಟಿದ್ದೇವೆ. ದೇಶದ 10.5 ಕೋಟಿ ಜನ ಬಡ ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ವಿತರಣೆ, ಹತ್ತು ವರ್ಷಗಳಲ್ಲಿ ಜೆಜೆಎಂ ಯೋಜನೆಯಡಿ 14 ಕೋಟಿ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, 12 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದರು.