ಕಳೆದ ವರ್ಷ ಬಡ್ತಿ ಪಡೆದಿದ್ದ 100ಕ್ಕೂ ಅಧಿಕ ನೌಕರರು ಇದೀಗ, ಹಿಂಬಡ್ತಿ ಪಡೆದಿರುವ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. 68 ಮಂದಿ ದ್ವಿತೀಯ ವಿಭಾಗದ ಸಹಾಯಕ (ಎಸ್‌ಡಿಎ)/ಗ್ರಾಮ ಆಡಳಿತಾಧಿಕಾರಿಗಳು, 33 ಮಂದಿ ಪೇದೆಗಳು ಸೇರಿದಂತೆ ಕಂದಾಯ ಇಲಾಖೆಯ 100ಕ್ಕೂ ಅಧಿಕ ನೌಕರರು 2023ರಲ್ಲಿ ಎಫ್‌ಡಿಎ ಹುದ್ದೆಗಳಿಗೆ ಬಡ್ತಿ ಪಡೆದಿದ್ದರು. ಈಗ ಆ ಎಲ್ಲ ನೌಕರರ ಬಡ್ತಿಯನ್ನು ಹಿಂಪಡೆಯಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಚೇರಿಗಳಲ್ಲಿ 68 ನೌಕರರು (33 ದ್ವಿತೀಯ ವಿಭಾಗ ಸಹಾಯಕರು ಮತ್ತು 35 ಗ್ರಾಮಾಭಿವೃದ್ಧಿ ಅಧಿಕಾರಿಗಳು) ಪ್ರಥಮ ವಿಭಾಗದ ಸಹಾಯಕರಾಗಿ (ಎಫ್‌ಡಿಎ) ಬಡ್ತಿ ಪಡೆದಿದ್ದರು. ಅವರೆಲ್ಲರಿಗೂ 2021ರ ಜುಲೈ 17ರಿಂದ ಪೂರ್ವಾನ್ವಯವಾಗುವಂತೆ ಎಫ್ ಡಿಎ ಹುದ್ದೆಯಲ್ಲಿ ವೇತನ ಹೆಚ್ಚಳ ಮತ್ತು ಬಡ್ತಿ ನೀಡಿ 2023ರ ಮೇ 18ರಂದು ಆದೇಶ ನೀಡಲಾಗಿತ್ತು ಎಂದು ‘ಟಿಎನ್‌ಐಎ’ ವರದಿ ಮಾಡಿದೆ.
ಎಸ್‌ಡಿಎ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳಿಗೆ ಬಡ್ತಿ ಮತ್ತು ಪೋಸ್ಟಿಂಗ್ ಮಾಡುವಾಗ ಎಷ್ಟು ಎಫ್‌ಡಿಎ ಹುದ್ದೆಗಳು ಖಾಲಿ ಇವೆ ಎಂಬ ಅಂಶವನ್ನು ಅಂದಿನ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳು ಪರಿಗಣಿಸಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಬಡ್ತಿ ಪಡೆಯುವ ನೌಕರರು ಯಾವುದೇ ಇಲಾಖಾ ವಿಚಾರಣೆ ಎದುರಿಸಿದ್ದಾರೆಯೇ ಎಂಬ ವಿವರಗಳನ್ನು ಪಡೆಯುವುದು ಹಾಗೂ ವಿಚಾರಣೆಯ ಅಂತಿಮ ವರದಿಯನ್ನು ನೀಡುವುದು ಅಗತ್ಯವಾಗಿತ್ತು. ಆದರೆ ಬಡ್ತಿ ನೀಡುವಾಗ ಈ ವಿಧಾನವನ್ನು ಅನುಸರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯಲ್ಲಿ ಎಫ್‌ಡಿಎ ಹುದ್ದೆಗಳು ಖಾಲಿ ಇಲ್ಲದಿದ್ದರೂ ಬಡ್ತಿ ನೀಡಲಾಗಿದೆ ಎಂದು ಬಡ್ತಿ ನೀಡುವ ಪ್ರಕ್ರಿಯೆ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ, ಅಗತ್ಯ ಕ್ರಮ ಕೈಗೊಂಡು ಸರ್ಕಾರಕ್ಕೆ ಅನುಪಾಲನಾ ವರದಿ ಕಳುಹಿಸುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಕಾರ್ಯದರ್ಶಿ ಸೂಚಿಸಿದ್ದಾರೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿರುವ ಈಗಿನ ಜಿಲ್ಲಾಧಿಕಾರಿ ಫೌಜಿಯಾ ತರನಮ್ ಅವರು ರಾಜ್ಯ ಸರ್ಕಾರದ ನಿರ್ದೇಶನಗಳಂತೆ 2023ರಲ್ಲಿ ಹೊರಡಿಸಿದ್ದ ಬಡ್ತಿ ಆದೇಶವನ್ನು 2024ರ ಫೆಬ್ರವರಿ 14ರಂದು ಹಿಂಪಡೆದಿದ್ದಾರೆ. ಬಡ್ತಿ ಪಡೆದಿದ್ದ ನೌಕರರು ತಮ್ಮ ಮೂಲ ಹುದ್ದೆಗಳಿಗೆ ಹಿಂದಿರುಗಲು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ಗ್ರೂಪ್ ನೌಕರರ ಜೇಷ್ಠತಾ ಪಟ್ಟಿಯನ್ನು 2024ರ ಫೆಬ್ರವರಿ 16ರಂದು ಪ್ರಕಟಿಸಲಾಗಿದ್ದು, ಸಂಬಂಧಪಟ್ಟ ನೌಕರರು ತಮ್ಮ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.