ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಇಂದು ಡಿಆರ್‌ಡಿಒ-ಸಿಎಬಿಎಸ್‌ಗೆ ಭೇಟಿ ನೀಡಿದ್ದು, ಕೆಲಸ ನಿರಾಕರಣೆಗೊಳಪಟ್ಟಿರುವ 61 ಮಹಿಳಾ ಸಫಾಯಿ ಕರ್ಮಚಾರಿಗಳನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿತು.
ಒಕ್ಕೂಟ ಸರ್ಕಾರದ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಡಿಆರ್‌ಡಿಒ-ಸಿಎಬಿಎಸ್‌ನಲ್ಲಿ ಕಳೆದ 2-3 ದಶಕಗಳಿಂದ ಸಫಾಯಿ ಕರ್ಮಚಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ 61 ಜನ ಸಫಾಯಿ ಕರ್ಮಚಾರಿಗಳು ತಮಗೆ ಕಾನೂನುಬದ್ದವಾಗಿ ಸಿಗಬೇಕಾಗಿರುವ ಸೇವಾ ಸೌಲಭ್ಯಗಳನ್ನು ಕೇಳಿದ್ದಕ್ಕಾಗಿ ಮತ್ತು ಕಾರ್ಮಿಕ ವಿರೋಧಿನೀತಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ 61 ಜನ ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಕೆಲಸ ನಿರಾಕರಣೆಗೊಳಪಟ್ಟಿರುವ ಸಫಾಯಿ ಕರ್ಮಚಾರಿಗಳು, ತಮ್ಮನ್ನು ಸಮಾಜ ಕಲ್ಯಾಣ ಸಚಿವರು ನೀಡಿರುವ ನಿರ್ದೇಶನದ ಮೇರೆಗೆ ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಿಎಬಿಎಸ್ ಡಿಆರ್‌ಡಿಒ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಇಂದು(ಸೆ.3) ಭೇಟಿ ನೀಡಿ 61 ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿತು. ಈ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸುವಂತೆ ನಿರ್ದೇಶಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಕಾರ್ಮಿಕರೊಂದಿಗೆ ಮಾತನಾಡಿದ ಆಯೋಗವು ಆದೇಶದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಿಎಬಿಎಸ್ ಡಿಆರ್‌ಡಿಒ ನಿರ್ದೇಶಕರೊಂದಿಗೆ ಮುಂದಿನ ವಾರ ಸಭೆ ಕರೆಯಲಾಗುವುದು ಎಂದು ಹೇಳಿದರು. ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರಿಸಲಿದ್ದಾರೆ.
ಇದನ್ನು ಓದಿದ್ದೀರಾ? ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ ಅನುಷ್ಠಾನಕ್ಕೆ ತ್ವರಿತ ನಿಯಮಾವಳಿ: ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ
ಕಾರ್ಮಿಕರ ಈ ಹೋರಾಟ ಮತ್ತೊಮ್ಮೆ ಗುತ್ತಿಗೆ ಪದ್ದತಿಯಲ್ಲಿರುವ ಕಾರ್ಮಿಕರ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ. 61 ಕಾರ್ಮಿಕರನ್ನು ಮರು ಉದ್ಯೋಗ ನೀಡಲು ಮತ್ತು ಕಾರ್ಮಿಕರಿಗೆ ನ್ಯಾಯಯುತ ಮತ್ತು ಗೌರವಾನ್ವಿತ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಒಕ್ಕೂಟ ಸರ್ಕಾರದ ರಕ್ಷಣಾ ಸಚಿವರು ತಕ್ಷಣವೇ ಸಿಎಬಿಎಸ್ ಡಿಆರ್‌ಡಿಒಗೆ ನಿರ್ದೇಶನ ನೀಡುವುದು ಅತ್ಯಾವಶ್ಯಕವಾಗಿದೆ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

