ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಿಳಾ ಸಬಲೀಕರಣ ಹಾಗೂ ಪಂಚಾಯತ್ ರಾಜ್ ಸಬಲೀಕರಣ ಕುರಿತಾದ ಜಾಗೃತಿ ಅಭಿಯಾನದ ಅಂಗವಾಗಿ ಮನೆಯ ಮುಂದೆ ರಂಗೋಲಿ ಬಿಡಿಸಿ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ‘ ಸೇರುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಪಂಚಾಯತ್ ರಾಜ್ ಕಾಯ್ದೆಯ 73ನೇ ತಿದ್ದುಪಡಿ ಹಾಗೂ ಏಪ್ರಿಲ್ 24 ರ ಪಂಚಾಯತ್ ರಾಜ್ ದಿನದ ಶುಭಾಶಯಗಳನ್ನು ಕೋರಿ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಕಹಳ್ಳಿ, ಆಲಭುಜನಹಳ್ಳಿ, ಅಣ್ಣೂರು ಸೇರಿದಂತೆ ಮಹಿಳೆಯರು 1,418 ರಂಗೋಲಿ ಬಿಡಿಸಿದ್ದರು. ಈ ಮೂಲಕ ಅಣ್ಣೂರು ಗ್ರಾಮ ಪಂಚಾಯತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ ಮಾತನಾಡಿ ” ಪಂಚಾಯುತ್ ರಾಜ್ ಸಂಸ್ಥೆಗಳ ಅಸ್ವಿತ್ವ ಕಾಣಲು, ಆಡಳಿತದಲ್ಲಿ ಜನರ ಸಹಭಾಗಿತ್ವ ಮುಖ್ಯವಾದದ್ದು. ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶ ದೊರೆತಿದ್ದು ಸಂವಿದಾನದ 73 ನೇ ತಿದ್ದುಪಡಿಯಿಂದ. ಇದರ ಕುರಿತಾಗಿ ಗ್ರಾಮದಲ್ಲಿ ಜನರಿಗೆ ತಿಳಿಯಪಡಿಸಲು ರಂಗೋಲಿ ಬಿಡಿಸುವ ಕಾರ್ಯಕ್ರಮ ಸಹಕಾರಿಯಾಯಿತು ” ಎಂದರು.
ಪಿಡಿಓ ಎಂ. ಆರ್. ಅಶ್ವಿನಿ ಮಾತನಾಡಿ ” ಮಹಿಳಾ ಸಶಕ್ತಿಕರಣ ಅಭಿಯಾನದಡಿ ಸರ್ಕಾರ ಸುತ್ತೋಲೆ ಹೊರಡಿಸಿ ಮಾರ್ಚ್. 8 ರಿಂದ ಜೂನ್. 30 ರ ವರೆಗೆ ಹದಿನಾರು ವಾರಗಳ ಕಾಲ ಮೂವತಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಲು ಸೂಚಿಸಿತ್ತು. ಅದರಂತೆ, ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಿದ ಫಲವಾಗಿ ಇಂದು ಇಂತಹ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೆಲ್ಲ ಪ್ರಮುಖ ಕಾರಣ ಗ್ರಾಮದ ಮಹಿಳೆಯರು ” ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಹಾರೋಹಳ್ಳಿಯಲ್ಲಿ ದಕ್ಷಿಣ ಬುದ್ಧಗಯಾ ಸ್ಮಾರಕ ಸ್ಥಾಪನೆಗೆ ಧಮ್ಮ ಸಂಕಲ್ಪ; ಜಾಗೃತಿ ಸಮಾವೇಶ

ಅಣ್ಣೂರು ಗ್ರಾಮ ಪಂಚಾಯತಿ ವಿಶೇಷ ಸಾಧನೆ ಮಾಡುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದೆ.