ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ಅಕ್ರಮ ಬಂಧನಕ್ಕೆ ಯತ್ನಿಸಿರುವ ದೆಹಲಿ ಪೊಲೀಸರ ನಡೆಯನ್ನು ಎಪಿಸಿಆರ್ ಕರ್ನಾಟಕ ಘಟಕ ತೀವ್ರವಾಗಿ ಖಂಡಿಸಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನದೀಮ್ ಅವರ ಸಹೋದರ ಕಾಶಿಫ್ ಖಾನ್ ನಿವಾಸಕ್ಕೆ ಅಕ್ರಮ ದಾಳಿ, ಕಿರುಕುಳ ಮತ್ತು ನದೀಮ್ ಖಾನ್ ಅವರನ್ನು ಅಕ್ರಮ ಬಂಧನಕ್ಕೆ ಯತ್ನಿಸಿರುವ ನಡೆ ಖಂಡನೀಯ. ದಿಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಈಗಾಗಲೇ ಕುಟುಂಬಸ್ಥರು ನೀಡಿರುವ ದೂರನ್ನು ಪರಿಗಣಿಸಿ, ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಪಿಸಿಆರ್ಕ ರ್ನಾಟಕ ಘಟಕದ ಅಧ್ಯಕ್ಷ ಅಡ್ವೊಕೇಟ್ ಪಿ. ಉಸ್ಮಾನ್ ಮತ್ತು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಿಯಾಝ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, “ದಿಲ್ಲಿ ಪೊಲೀಸರ ಕ್ರಮ ಕಾನೂನುಬಾಹಿರ, ಅಕ್ರಮವಾದದ್ದು. ಸಂವಿಧಾನದ 14,19 ಮತ್ತು 21ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಖಾನ್ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಕಾರಣ ಪೊಲೀಸರು ಅವರನ್ನು ಗುರಿಯಾಗಿಸಿದ್ದಾರೆ. ಕರ್ನಾಟಕ ಸರ್ಕಾರವು ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಿಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಯಾವುದೇ ಸೂಚನೆ ನೀಡದೆ ನಡೆಸಿದ ದಾಳಿಯು ‘ಅರ್ನೇಶ್ ಕುಮಾರ್ vs ಬಿಹಾರ’ ಮತ್ತು ‘ಸಿದ್ಧಾರ್ಥ್ vs ಉತ್ತರ ಪ್ರದೇಶ’ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಶಾಹೀನ್ ಬಾಗ್ ಪೊಲೀಸ್ ಠಾಣೆಯ ಎಸ್‌ಎಚ್‌ಓ ಹಾಗೂ ಸಿಬ್ಬಂದಿ ಸೇರಿದಂತೆ ದಿಲ್ಲಿ ಪೊಲೀಸ್ ಅಧಿಕಾರಿಗಳು ನದೀಮ್ ಸಹೋದರನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಕುಟುಂಬವನ್ನು ಬೆದರಿಸಿದ್ದಾರೆ ಎಂದು ಎಪಿಸಿಆರ್ ದೂರಿದೆ.
ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ನದೀಮ್ ಖಾನ್ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 196, 353(2) ಮತ್ತು 61ರ ಅಡಿಯಲ್ಲಿ ದಾಖಲಾದ ಪ್ರಕರಣವು ಕಟ್ಟುಕಥೆಯಾಗಿದೆ. ಕ್ರಿಮಿನಲ್ ತನಿಖೆಯ ನೆಪದಲ್ಲಿ ಉತ್ತರ ಪ್ರದೇಶ, ಸೇರಿದಂತೆ ಇತರ ರಾಜ್ಯಗಳಲ್ಲಿ ಆರೋಪಿಗಳ ಮನೆಗಳನ್ನು ಅಕ್ರಮವಾಗಿ ಕೆಡವುದನ್ನು ವಿರೋಧಿಸಿದ್ದರಿಂದ ಈ ರೀತಿ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಎಸ್‌ಐಓ ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಆದಿ ಅಲ್ ಹಸನ್ ಆಯ್ಕೆ
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ನದೀಮ್ ಖಾನ್ ದಿಲ್ಲಿ ಪೊಲೀಸರು ಆಗಮಿಸಿದಾಗ ತನ್ನ ಸಹೋದರನ ನಿವಾಸದಲ್ಲಿದ್ದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಮಧ್ಯಪ್ರವೇಶದ ಹೊರತಾಗಿಯೂ, ಅಧಿಕಾರಿಗಳು ಸರಿಯಾದ ದಾಖಲೆಗಳನ್ನು ಪ್ರಸ್ತುತಪಡಿಸದೆ, ಸ್ಥಳೀಯ ಪೊಲೀಸರ ಅನುಮತಿಯನ್ನು ಪಡೆಯದೆ ನದೀಮ್ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಲು ಮುಂದಾಗಿದ್ದಾರೆ. ದಿಲ್ಲಿ ಪೊಲೀಸರ ವಿರುದ್ಧ ಕಾಶಿಫ್ ಖಾನ್ ಅತಿಕ್ರಮಣ, ಕಿರುಕುಳ ಮತ್ತು ಬೆದರಿಕೆ ಆರೋಪದಲ್ಲಿ ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ ಎಂದು ಎಪಿಸಿಆರ್ ಹೇಳಿದೆ.
