ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಕಾಶಿನಾಥ ಬಂಡಿ ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಕಲಬುರಗಿ ಜಿಲ್ಲೆ ಕಾಳಗಿಯಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಶಿನಾಥ ಬಂಡಿ, “2024ರ ಲೋಕಸಭಾ ಚುನಾವಣೆ ಮತ್ತೆ ಪ್ರಾರಂಭವಾಗುತ್ತಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ, ಡಾ ಸ್ವಾಮಿನಾಥನ್ ಅವರ ಶಿಫಾರಸಿನಂತೆ ಬೆಂಬಲ ಬೆಲೆ, ಕಾನೂನು ರಚಿಸುವುದಾಗಿ ತಿಳಿಸಿದ್ದರು. ಆದರೆ ಸಬ್‌ಕಾ ಸಾಥ್ ಎಂದು ಜನಸಾಮಾನ್ಯರು ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನವನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಿಸಿದ್ದಾರೆ. ಜನರಿಗೆ 2,700 ಕ್ಯಾಲರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನದಲ್ಲಿದೆ” ಎಂದು ಹೇಳಿದರು.
“ಭಾರತದ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಿಸಿದಲ್ಲದೆ, ಸರ್ಕಾರದ ಆಸ್ತಿಯನ್ನು ಎನ್‌ಎಂಪಿಯ ಮುಖಾಂತರ ಖಾಸಗಿಯವರಿಗೆ ದಾನ ಮಾಡಿದರೆ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಲು ಸಾಧ್ಯವಿದೆಯಾ? ಗರಿಷ್ಟ ಆಡಳಿತ ಕನಿಷ್ಟ ಸರ್ಕಾರ ಎಂದರೆ ಸಾರ್ವಜನಿಕ ಒಡೆತನವನ್ನು ಖಾಸಗಿ ವ್ಯಕ್ತಿಗಳಿಗೆ ಅಡಮಾನ ಇಡುವುದೇ” ಎಂದು ಪ್ರಶ್ನಿಸಿದ್ದಾರೆ.
“ದೇಶದ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥ್‌ನ ಶಿಫಾರಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿತೆಗೆದುಕೊಳ್ಳುವ ನೀತಿ ಸರಿಯೇ?. ಕೋಮುಭಾವನೆಗಳನ್ನು ಪ್ರಚೋದನೆಗೋಳಿಸಿ ಜನರನ್ನು ಧಾರ್ಮಿಕವಾಗಿ ಕಿತ್ತಾಡಲು ಬೇಕಾದ ವಿಷಮ ವಾತವರಣವನ್ನು ಸೃಷ್ಟಿಸುವುದು ಸಬಕಾ ವಿಶ್ವಾಸ್ ಎಂದರಾಗುತ್ತದೆಯೇ, ಆದ್ದರಿಂದ ಭಾರತ ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕು” ಎಂದು ಒತ್ತಾಯಿಸಿದರು.
“ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಾಗೂ ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಕೊಡಲು ಕಾನೂನು ರೂಪಿಸಬೇಕು” ಎಂದು ಆಗ್ರಹಿಸಿದರು.
“49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು 20 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ ₹31,000 ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ ₹10,000 ಪಿಂಚಣಿ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ರಾ.ಹೆ. ಕಾಮಗಾರಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತೀವ್ರ ತರಾಟೆ
“ಕಾಳಗಿ ತಾಲೂಕಿನಲ್ಲಿ ಸಮರ್ಪಕವಾಗಿ ಮನರೇಗಾ ಜಾರಿ ಮಾಡಬೇಕು. ಕಾಳಗಿ ಪಟ್ಟಣ ಪಂಚಾಯತ್‌ನಲ್ಲಿ ದುಡಿಯುವ ಕೈಗಳಿಗೆ ಮನರೇಗಾ ಕೆಲಸ ನೀಡಬೇಕು. ಸರ್ಕಾರಿ ಜಮೀನು ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಬರಗಾಲ ಪರಿಹಾರ ನೀಡಬೇಕು ಹಾಗೂ ರೈತರಿಗೆ ಬೆಂಬಲ ಬೆಲೆ ನೀಡಬೇಕು. ಬಾಕಿ ವೇತನ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುರುನಂದೇಶ ಕೋಣಿನ್, ದಿಲೀಪ ನಾಗೂರ, ಪರಮೇಶರ ಕಾಂತಾ, ಪಾರ್ವತಿ ಡೊಣ್ಣೂರ, ಹನೀಫಾ ಕೋಡದೂರ, ಕಸ್ತೂರಬಾಯಿ ಕೊಡದೂರ, ಸಲೀಂ ಪಟೇಲ್,
ರೇವಯ್ಯಾ ಸ್ವಾಮಿ, ಅನಿಲ್ ಗುತ್ತೇದಾರ, ಬಲವಂತ ಬಡಿಗೇರ, ರಿಯಾಜ್ ಮಂಗಲಗಿ ಸೇರಿದಂತೆ ಇತರರು ಇದ್ದರು.