ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ವಂಚನೆ ಹಿನ್ನಲೆ, ಕಳೆದ ಹಲವು ದಿನಗಳಿಂದ ಐಟಿ ಅಧಿಕಾರಿಗಳು ಏಕಕಾಲಕ್ಕೆ ಆಭರಣ ಅಂಗಡಿ, ಮಾಲೀಕರು, ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿ, ಕೋಟ್ಯಂತರ ಹಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ನಡೆಸಿದ ದಾಳಿ ವೇಳೆ ದೊರೆತ ಕೆಲವು ದಾಖಲೆಗಳ ಆಧಾರದ ಮೇಲೆ ಆಭರಣ, ವ್ಯಾಪಾರಿ ಹಾಗೂ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಪದೇ ಪದೇ ಐಟಿ ದಾಳಿ ನಡೆಯುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ದಾಳಿಗೆ ಪಂಚ ರಾಜ್ಯಗಳ ಚುನಾವಣೆ ನಂಟು ಇದೆ ಎಂಬ ಅನುಮಾನವಿದೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ, ಅಲರ್ಟ್ ಆಗಿರುವ ಐಟಿ ಅಧಿಕಾರಿಗಳು ಸುಳಿವು ಆಧರಿಸಿ, ತಕ್ಷಣವೇ ತೆರಿಗೆ ವಂಚನೆ ಮಾಡುವವರ ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಮಂಚದಡಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರಿನಲ್ಲಿ ಹಣ ಸಾಗಾಟ ಮಾಡುವ ಸುಳಿವು ಪಡೆದ ಐಟಿ ಅಧಿಕಾರಿಗಳು ಅ.12ರ ಸಾಯಂಕಾಲ 6ರ ಸುಮಾರಿಗೆ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ದಾಳಿ ನಡೆಸಿ ಬರೋಬ್ಬರಿ ₹42 ಕೋಟಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಆತ್ಮಾನಂದ ಕಾಲೋನಿಯ ಫ್ಲಾಟ್‌ನಲ್ಲಿ ಬರೊಬ್ಬರಿ 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಯಾರು ಈ ಅಂಬಿಕಾಪತಿ?
ಅಂಬಿಕಾಪತಿ ಇವರು ಗುತ್ತಿಗೆದಾರ. ಇವರ ಪತ್ನಿ ಅಶ್ವಥಮ್ಮ. ಇವರು 2001ರಲ್ಲಿ ಕಾವಲ್ ಭೈರಸಂದ್ರ ವಾರ್ಡ್‌ನ ಕಾರ್ಪೋರೇಟರ್ ಆಗಿದ್ದರು. ಇವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ ಎನ್ನಲಾಗಿದೆ.
ಅಂಬಿಕಾಪತಿ ಅವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಶೇ.40 ಕಮಿಷನ್ ಆರೋಪ ಮಾಡಿದ್ದರು. ಹಾಗೇ ಬಿಬಿಎಂಪಿಯಲ್ಲಿ ಶೇ.50 ನೀಡಬೇಕು ಎಂದು ಆರೋಪಿಸಿದ್ದರು.
ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ಐಟಿ ಅಧಿಕಾರಿಗಳು ಅಂಬಿಕಾಪತಿ ಪತ್ನಿ ಆಶ್ವಥಮ್ಮ ಹೆಸರಲ್ಲಿರುವ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್ ಮೇಲೆ ದಾಳಿ ನಡೆಸಿದ್ದು, ಈ ಫ್ಲಾಟ್‌ನಲ್ಲಿ ಅಂಬಿಕಾಪತಿ ಪತ್ನಿಯ ಸಹೋದರ ಪ್ರದೀಪ್ ವಾಸ ಮಾಡುತ್ತಿದ್ದಾರೆ. ಈ ಮನೆಯ ಕೊಠಡಿಯಲ್ಲಿಯೇ ಕಂತೆ ಕಂತೆ ಹಣ ಪತ್ತೆಯಾಗಿದೆ. ಈ ಮನೆಯಲ್ಲಿ ಪತ್ತೆಯಾಗಿದ್ದ ₹42 ಕೋಟಿ ಹಣ ಯಾರದು ಎಂದು ತಿಳಿದುಬಂದಿಲ್ಲ. ಈ ಹಣ ಸಂಗ್ರಹಿಸಿಟ್ಟ ರೂಮ್ ಅನ್ನು ಯಾರೂ ಬಳಕೆ ಮಾಡುತ್ತಿರಲಿಲ್ಲ. ಅಂಬಿಕಾಪತಿ ಮತ್ತು ಅಕ್ಕ ಅಶ್ವಥಮ್ಮ ಸೇರಿ ಪ್ರದೀಪ್‌ಗೆ ಮನೆ ಕೊಡಿಸಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುಂಡು ಹಾರಿಸಿ ಕೆಜಿ ಚಿನ್ನ ಕಳ್ಳತನ; ಹೈದರಾಬಾದ್‌ನತ್ತ ಪರಾರಿಯಾಗುತ್ತಿದ್ದ ಓರ್ವನ ಬಂಧನ
ಕಾವಲ್ ಭೈರಸಂಧ್ರ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ಆರ್ಟಿ ನಗರದ ವೈಟ್ ಗೌಸ್ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ.
ಸದ್ಯ ಐಟಿ ಅಧಿಕಾರಿಗಳು ₹42 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪಿಎಮ್‌ಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಇಡಿ ಪ್ರವೇಶವಾದರೆ, ಸಂಬಂಧಪಟ್ಟ ವ್ಯಕ್ತಿಗಳ ಬಂಧನ ಸಾಧ್ಯತೆ ಇದೆ.
ಕೋಟ್ಯಂತರ ಹಣ ಸಂಗ್ರಹವಾಗಿರುವ ಹಿನ್ನೆಲೆ, ಹವಾಲಾ ಆಗಿರುವ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಇಷ್ಟು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದರೆ, ಅಂಬಿಕಾಪತಿ ದಂಪತಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.