ಸೆ.12 ರಂದು ಹಾಡಹಗಲೇ ಜ್ಯೂವೆಲ್ಲರಿ ಶಾಪ್ ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಹೈದರಾಬಾದ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್ಲೈನ್ ರಸ್ತೆ ಬಳಿಯಿರುವ ವಿನಾಯಕ ಜ್ಯೂವೆಲ್ಲರಿ ಶಾಪ್‌ಗೆ ಹುಸೇನ್, ಸಿಕಂದರ್, ಶಿವ ಹಾಗೂ ವಿಕಾಸ್ ಎಂಬ ನಾಲ್ವರು ದರೋಡೆಕೋರರು ನುಗ್ಗಿ ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣವನ್ನು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಪೊಲೀಸರು ಹೈದರಾಬಾದ್ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಆರೋಪಿ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಬಳಿಯಿಂದ ಪೊಲೀಸರು ಸ್ವಲ್ಪ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಈ ನಾಲ್ವರು ಆರೋಪಿಗಳಿಗೆ ಜೈಲಿನಲ್ಲಿ ಪರಿಚಯವಾಗಿತ್ತು. ಸಣ್ಣಪುಟ್ಟ ಕಳ್ಳತನ ಹಾಗೂ ಕೃತ್ಯಗಳಲ್ಲಿ ತೊಡಗಿದ್ದ ಈ ಆರೋಪಿಗಳು ಒಟ್ಟಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದರು. ಪ್ಲ್ಯಾನ್ ಮಾಡಿದಂತೆಯೇ ಅ.12ರಂದು ಎರಡು ದ್ವಿಚಕ್ರ ವಾಹನಗಳಲ್ಲಿ ವಿನಾಯಕ ಜ್ಯೂವೆಲ್ಲರಿ ಶಾಪ್‌ಗೆ ಬಂದಿದ್ದರು. ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಗುಂಡು ಹಾರಿಸಿ ಜ್ಯೂವೆಲ್ಲರಿ ಶಾಪ್ ಕಳ್ಳತನ
ಆರೋಪಿಗಳ ಪತ್ತೆಗೆ ಪೊಲೀಸ್ ಇಲಾಖೆ ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಸೇನ್ ಎಂಬಾತ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.