ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲೇ ಶನಿವಾರ ಅಪಘಾತ ಸಂಭವಿಸಿದ್ದು ಇಬ್ಬರು ವಿದ್ಯಾರ್ಥಿನಿಯರು ಹಾಗೂ ಕಾರು ಚಲಾಯಿಸುತ್ತಿದ್ದ ಪ್ರೊಫೆಸರ್ ಗಾಯಗೊಂಡಿರುವ ಘಟನೆ ನಡೆದಿದೆ.
ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ನಾಗರಾಜ್(52) ಎಂಬುವವರು ಕಾಲೇಜು ಕ್ಯಾಂಪಸ್ನೊಳಗಡೆ ಬಂದು ಪಾರ್ಕಿಂಗ್ ಮಾಡಲು ಯತ್ನಿಸಿದಾಗ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಪರಿಣಾಮ ಈ ಅಪಘಾತ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕಾರು ಚಲಾಯಿಸುತ್ತಿದ್ದ ಪ್ರೊಫೆಸರ್ ಅವರಿಗೆ ಗಾಯಗಳಾಗಿವೆ.
ಘಟನೆಯಲ್ಲಿ ಬಿಕಾಂ ವಿದ್ಯಾರ್ಥಿ ಅಶ್ವಿನಿ(19), ಮತ್ತೊಬ್ಬ ವಿದ್ಯಾರ್ಥಿನಿ ನಂದುಪ್ರಿಯಾ(19) ಎಂಬಾಕೆಗೆ ಗಾಯಗಳಾಗಿವೆ. ಕಾರು ನಿಯಂತ್ರಣ ತಪ್ಪಿದ ಬಳಿಕ ಪಾರ್ಕಿಂಗ್ ಮಾಡಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಆ ಬಳಿಕ ಕಾಲೇಜು ಆವರಣದಲ್ಲಿದ್ದ ಮರವೊಂದಕ್ಕೆ ಗುದ್ದಿ ನಿಂತಿದೆ.
An English professor’s car collided with a student Ashwini, who was seriously injured in the incident at Maharani Cluster College, Bengaluru. Prof’ Nagaraj drove his car at high speed. Injured student Ashwini is undergoing treatment at Martha’s Hospital. @Jointcptraffic pic.twitter.com/xD8g5VmAHe
— Ashik_Mulki (@AshikMulki) October 7, 2023
ಸದ್ಯ ಗಾಯಾಳುಗಳನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾವುದೇ ಆತಂಕವಿಲ್ಲ, ಚಿಕಿತ್ಸೆಗೆ ವಿದ್ಯಾರ್ಥಿನಿಯರು ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ ಸಚಿನ್ ಘೋರ್ಪಡೆ, ‘ಪ್ರೊಫೆಸರ್ ನಾಗರಾಜ್ ಅವರು ಕಾರು ಪಾರ್ಕಿಂಗ್ ಮಾಡುವ ವೇಳೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದಿದ್ದೇ ಅಪಘಾತಕ್ಕೆ ಕಾರಣ ಎಂದು ಪರಿಶೀಲನೆ ನಡೆಸಿದ ಸಂದರ್ಭ ತಿಳಿದುಬಂದಿದೆ. ಘಟನೆಯಲ್ಲಿ ನಾಗರಾಜ್ ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಗಾಯಾಳು ವಿದ್ಯಾರ್ಥಿನಿಯರ ಪೈಕಿ ಅಶ್ವಿನಿಯವರ ತಲೆಗೆ ಸ್ವಲ್ಪ ಹೆಚ್ಚು ಪೆಟ್ಟಾಗಿದೆ. ಜೀವಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಪ್ರೊಫೆಸರ್ ನಾಗರಾಜ್ ಅವರಿಗೂ ಗಾಯವಾಗಿದೆ. ಸದ್ಯ ಅವರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ತಿಳಿಸಿದರು.