ಜಮೀನಿನ ಸರ್ವೇ ನಕ್ಷೆ ಮಾಡಿಕೊಡಲು ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಈ ವೇಳೆ ರೈತರೊಬ್ಬರಿಂದ ಹಣ ಪಡೆಯುತ್ತಿದ್ದ ಮಧ್ಯವರ್ತಿ ಸತೀಶ್ ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ₹80,000 ಹಣವನ್ನು ವಶಕ್ಕೆ ಪಡೆದಿದ್ದಾರೆ.
ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಬಳಿಯ ಜಮೀನಿನ ಪೋಡಿ ಮಾಡದೆ ಅಧಿಕಾರಿಗಳು ಮೂರು ವರ್ಷಗಳಿಂದ ರೈತರನ್ನು ಅಲೆದಾಡಿಸುತ್ತಿದ್ದರು. ಅಂತಿಮವಾಗಿ ಸರ್ವೆಯರ್ ಒಬ್ಬರು ₹3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಕೊನೆಗೆ 1 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿದ್ದು, ಮುಂಗಡವಾಗಿ ಎರಡು ದಿನದ ಹಿಂದೆ ₹20,000 ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬರಗಾಲ ನಿರ್ವಹಣೆಗೆ ಅಧಿಕಾರಿಗಳು, ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಸೂಚನೆ
ಉಳಿದ ಹಣ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಧ್ಯವರ್ತಿಯ ವಿಚಾರಣೆ ನಡೆಸಿದ್ದಾರೆ. ದಾಳಿ ಕುರಿತು ಲೋಕಾಯುಕ್ತ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.