ಬೀದರ್ ಲೋಕಸಭಾ | ಇವರಿಬ್ಬರು ʼಹ್ಯಾಟ್ರಿಕ್‌ʼ ಸಾಧಕರು, ಕ್ಷೇತ್ರದ ಅತಿ ಕಿರಿಯ, ಹಿರಿಯ ಸಂಸದರು

Date:

ಬೀದರ್‌ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ನಡೆದ ಬಹುತೇಕ ಚುನಾವಣೆಗಳು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿವೆ. ಐತಿಹಾಸಿಕವಾಗಿ ಪರಂಪರೆ, ಬಿದರಿ ನಗರ ಎಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೀದರ್‌, ರಾಜಕೀಯವಾಗಿಯೂ ವಿಶಿಷ್ಟವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿದೆ.

ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯ ವಯಸ್ಸಿನ ಸಂಸದರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು ಸೇರಿದಂತೆ ಲೋಕಸಭಾ ಕ್ಷೇತ್ರ ಹಲವು ಮೊದಲುಗಳಿಗೆ ಹೆಸರುವಾಸಿಯಾಗಿದೆ.

ಕ್ಷೇತ್ರದ ಪ್ರಥಮ ಸಂಸದ ಮುಸ್ಲಿಂ :

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1952ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಉತ್ತರ ಪ್ರದೇಶ ಮೂಲದ ಮುಸ್ಲಿಂ ಅಭ್ಯರ್ಥಿ ಡಾ. ಶೌಕತುಲ್ಲಾ ಶಾ ಅನ್ಸಾರಿ ಎಂಬುವರು ಸ್ಪರ್ಧಿಸಿ ಪ್ರಥಮ ಬಾರಿಗೆ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.

ಹೈದರಾಬಾದ್‌ ಸಂಸ್ಥಾನಕ್ಕೆ ಒಳಪಟ್ಟ ಬೀದರ್‌ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಬಾಹುಳ್ಯ ಇರುವ ಕಾರಣದಿಂದ ಪ್ರಧಾನಿ ಪಂಡಿತ್ ಜವಾಹರಲಾಲ್‌ ನೆಹರು‌ ತಮ್ಮ ಪರಮಾಪ್ತರಾಗಿದ್ದ ಅನ್ಸಾರಿ ಅವರನ್ನು ಬೀದರ್‌ ಲೋಕಸಭೆಯಿಂದ ಸ್ಪರ್ಧಿಸುವಂತೆ ಸೂಚಿಸಿದರು. ಅನ್ಸಾರಿ ನೆಹರು ಅವರ ನಿರ್ದೇಶನದಂತೆ ಕಣಕ್ಖಿಳಿದು ಜಯ ಸಾಧಿಸಿದ್ದರು. ಶೌಕತುಲ್ಲಾ ಅನ್ಸಾರಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮುಸ್ಲಿಂ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1962-2004 ತನಕ ಎಸ್‌ಸಿ ಮೀಸಲು ಕ್ಷೇತ್ರ :

ಬೀದರ್‌ ಲೋಕಸಭಾ ರಚನೆಯಾದ ಒಂದು ದಶಕದ ಬಳಿಕ ಕ್ಷೇತ್ರ 1962ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಮೀಸಲು ಕ್ಷೇತ್ರವಾದ ಬಳಿಕ 1962 ರಿಂದ 2004ರವರೆಗೆ ಒಂದು ಉಪ ಚುನಾವಣೆ ಸೇರಿ ಒಟ್ಟು 13 ಚುನಾವಣೆ ನಡೆದಿವೆ. ಆದರೆ ಬರೋಬ್ಬರಿ ನಾಲ್ಕು ದಶಕಗಳ ಕಾಲ ಕ್ಷೇತ್ರ ಪ್ರತಿನಿಧಿಸಿದವರು ಮಾತ್ರ ಕೇವಲ 3 ಅಭ್ಯರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಮೂವರಲ್ಲಿ ರಾಮಚಂದ್ರ ವೀರಪ್ಪ ಹಾಗೂ ನರಸಿಂಗರಾವ್ ಸೂರ್ಯವಂಶಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದರೆ, ಶಂಕರ ದೇವ್‌ ಅವರು ಎರಡು ಬಾರಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದರು.

ʼಹ್ಯಾಟ್ರಿಕ್‌ʼ ಗೆಲುವು ಕಂಡ ಇಬ್ಬರು ಸಂಸದರು :

1962-67ರಲ್ಲಿ ನಡೆದ ಚುನಾವಣೆಯಲ್ಲಿ ರಾಮಚಂದ್ರ ವೀರಪ್ಪನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡು ಬಾರಿ ಸತತವಾಗಿ ಗೆದ್ದು ಲೋಕಸಭಾ ಸದಸ್ಯರಾಗಿ ಸಂಸತ್‌ ಪ್ರವೇಶಿಸಿದ್ದರು.1980-89 ತನಕ ನಡೆದ ಮೂರು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ನರಸಿಂಗರಾವ್‌ ಹುಲ್ಲಾ ಸೂರ್ಯವಂಶಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆಗೈದು ದಾಖಲೆ ಬರೆದಿದ್ದರು.

ಬಳಿಕ ನಡೆದ 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಸ್ಪರ್ಧಿಸಿದ ರಾಮಚಂದ್ರ ವೀರಪ್ಪ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿಗೆ ಪಾತ್ರರಾದರು. ತರುವಾಯ 1996, 1998, 1999 ಹಾಗೂ 2004ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸತತವಾಗಿ ಗೆದ್ದು ದಿಗ್ವಿಜಯ ಸಾಧಿಸಿದರು.

28 ವಯಸ್ಸಿಗೆ ಸಂಸದರಾದ ನರಸಿಂಗ್‌ರಾವ್‌ ಸೂರ್ಯವಂಶಿ :

ನರಸಿಂಗರಾವ್ ಸೂರ್ಯವಂಶಿ ಮೂಲತಃ ಬೀದರ್‌ ಜಿಲ್ಲೆಯ ಔರಾದ್ ತಾಲೂಕಿನ ಡೊಣಗಾಂವ್‌ ಗ್ರಾಮದವರು. ಮಾರಾಠಿ ಭಾಷೆಯಲ್ಲಿ ಬಿಎಸ್ಸಿ ಪೂರೈಸಿದ ಅವರು ಯುವ ಕಾಂಗ್ರೆಸ್‌ ನಲ್ಲಿ ಸಕ್ರಿಯವಾಗಿದ್ದರು. 1980 ರಲ್ಲಿ ಲೋಕಸಭಾ ಸ್ಪರ್ಧಿಸಬೇಕೆಂಬ ಆಸಕ್ತಿಯಿಂದ 50 ಪೈಸೆ ಖರ್ಚು ಮಾಡಿ ಅಂಚೆ ಮೂಲಕ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಬೀದರ್‌ ಕ್ಷೇತ್ರದಿಂದ ಬಂದ ಅರ್ಜಿಯನ್ನು ಗಮನಿಸಿದ ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ಈ ಹುಡುಗನಿಗೆ ಕಾಂಗ್ರೆಸ್ ಅಭ್ಯರ್ಥಿ ಕೊಡೋಣ ಎಂದು ಟಿಕೆಟ್ ಮನೆಗೆ ಕಳುಹಿಸಿದರು.

“ಕೃಷಿ ಕುಟುಂಬದಲ್ಲಿ ಜನಿಸಿದ ನಾನು ಅಂದು ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದೆ, ಮನೆಗೆ ಬರುವಂತೆ ಕರೆದು ಕಾಂಗ್ರೆಸ್‌ ಟಿಕೆಟ್‌ ನನ್ನ ಕೈಗಿಟ್ಟಿದ್ದರು. 28 ವರ್ಷ ವಯಸ್ಸಿನ ನನಗೆ ರಾಜಕೀಯ ಕುರಿತು ಅಷ್ಟೇನು ಗೊತ್ತಿರಲಿಲ್ಲ, ದೆಹಲಿ, ಸಂಸತ್‌ ಬಗ್ಗೆ ಪರಿಚಯವೂ ನನಗಿರಲಿಲ್ಲ. ಆದರೆ ಅನಿರೀಕ್ಷೆ ಎಂಬಂತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದ ಸದಾವಕಾಶ ನನ್ನ ಹೆಗಲಿಗೆ ಬಂದಿತ್ತು. ಅಂದಿನ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ ಶಂಕರ್ ದೇವ್ ಎಂಬುವರ ವಿರುದ್ಧ 1.05 ಲಕ್ಷ ಮತಗಳ (ಒಟ್ಟು ಮತಗಳು 1,58,817) ಭಾರಿ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸತ್‌ ಸದಸ್ಯನಾಗಿ ಲೋಕಸಭಾ ಪ್ರವೇಶ ಮಾಡಿದ್ದೇನೆ” ಎಂದು ಮಾಜಿ ಸಂಸದ ನರಸಿಂಗ್‌ರಾವ್‌ ಹುಲ್ಲಾ ಸೂರ್ಯವಂಶಿ ಅವರು ಈದಿನ.ಕಾಮ್‌ ಜೊತೆಗೆ ಮಾತನಾಡಿ ರಾಜಕೀಯ ಬದುಕಿನ ಸ್ವಾರಸ್ಯಕರ ಸಂಗತಿಗಳನ್ನು ಮೆಲುಕು ಹಾಕಿದರು.

1980ರ ದಶಕದಲ್ಲಿ ಗೆದ್ದ ಅತಿ ಕಿರಿಯ ಸಂಸದ :

1980ರಲ್ಲಿ ಮೊದಲ ಬಾರಿಗೆ ಗೆದ್ದು ಸಂಸದರಾಗಿ ಆಯ್ಕೆಯಾದ 28 ವರ್ಷದ ನರಸಿಂಗ್‌ರಾವ್‌ ಸೂರ್ಯವಂಶಿ ಅವರು ದೇಶದ ಅತ್ಯಂತ ಕಿರಿಯ ವಯಸ್ಸಿನ ಲೋಕಸಭಾ ಸದಸ್ಯ ಎಂಬ ದಾಖಲೆಗೆ ಸಾಕ್ಷಿಯಾಗಿದ್ದರು. ಅದೇ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತ್ರತ್ವದ ಸರ್ಕಾರದಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಆಯ್ಕೆಯಾದರು.

“ಗಡಿ ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ನನಗೆ ದೆಹಲಿ ಎಂಬ ಹೆಸರಷ್ಟೇ ಗೊತ್ತಿತ್ತು. ಒಮ್ಮೆಯೂ ದೆಹಲಿ ನೋಡರಲಿಲ್ಲ. ಸಂಸದನಾಗಿ ಆಯ್ಕೆಯಾದ ಬಳಿಕವೇ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿ ದೆಹಲಿಗೆ ತೆರಳಿದ್ದೇನೆ. ಅದೇ ಚುನಾವಣೆಯಲ್ಲಿ ಧರ್ಮಸಿಂಗ್ ಅವರು ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ನನ್ನದು ವಿಮಾನ ಟಿಕೆಟ್‌ ಕೂಡ ಅವರೇ ಬುಕ್‌ ಮಾಡಿಸಿ ಜೊತೆಗೆ ದೆಹಲಿ ಸಂಸತ್‌ಗೆ ಕರೆದುಕೊಂಡು ಹೋಗಿದ್ದರು” ಎಂದು ಸೂರ್ಯವಂಶಿ ಸ್ಮರಿಸುತ್ತಾರೆ.

“ಅಂದು ಚುನಾವಣೆಗೆ ಸ್ಪರ್ಧಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಈಗಿನಂತೆ ಅಂದಿನ ರಾಜಕೀಯದಲ್ಲಿ ದುಬಾರಿ ಚುನಾವಣೆ, ಜಾತಿ-ಧರ್ಮದ ರಾಜಕಾರಣ ಇರಲಿಲ್ಲ. ಪ್ರಚಾರ ಕೂಡ ಮಾಡುತ್ತಿರಲಿಲ್ಲ. ಆಯಾ ಊರಿನ ಪಕ್ಷದ ಕಾರ್ಯಕರ್ತರೇ ಪ್ರಚಾರ ಮಾಡಿ ಗೆಲ್ಲಿಸುತ್ತಿದ್ದರು. ಹೆಚ್ಚು ಕಮ್ಮಿ ಎರಡು ಲಕ್ಷ ಖರ್ಚಿನಲ್ಲಿ ಪೂರ್ತಿ ಚುನಾವಣೆ ಮುಗಿಯುತ್ತಿತ್ತು.ಮೊದಲ ಬಾರಿಗೆ ಗೆದ್ದಾಗ ನನ್ನ ಸಂಬಳ ಬರೀ 500 ರೂ. ಓಡಾಟದ ಖರ್ಚು 50 ರೂ. ಇತ್ತು” ಎಂದು ರಾಜಕೀಯ ಜೀವನದ ಸಂಗತಿಗಳು ಹಂಚಿಕೊಂಡರು.

19080 ರಿಂದ ಮೂರು ಬಾರಿ ಗೆದ್ದಾಗಲೂ ನನ್ನ ಬಳಿ ಕಾರು ಇರಲಿಲ್ಲ, ಒಂದು ಹಳೆ ಬೈಕ್‌ ಮಾತ್ರ ಇತ್ತು. ಗ್ರಾಮ ಪಂಚಾಯತ್‌ ಸದಸ್ಯನೂ ಆಗದ ನನ್ನಂತಹ ಹಳ್ಳಿ ಹುಡುಗನಿಗೆ ಗುರುತಿಸಿ ಟಿಕೆಟ್‌ ನೀಡಿದ ಪಕ್ಷ ಹಾಗೂ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಅಮೂಲ್ಯ ಪ್ರೀತಿ, ವಿಶ್ವಾಸದ ಬಗ್ಗೆ ನೆನೆಯುತ್ತಾರೆ.

95ರ ಇಳಿ ವಯಸ್ಸಿನಲ್ಲಿ ಜಯ ಕಂಡ ರಾಮಚಂದ್ರ ವೀರಪ್ಪ :

ರಾಮಚಂದ್ರ ವೀರಪ್ಪನವರು ಮೂಲತಃ ಹುಮನಾಬಾದ್‌ ತಾಲೂಕಿನವರು. ಶಾಲೆಯ ಮುಖ ನೋಡದಿದ್ದರೂ ಅವರು ಕನ್ನಡ ಓದು-ಬರಹ ಬಲ್ಲವರಾಗಿದ್ದರು. ಅಲ್ಲದೆ ಕನ್ನಡ, ಹಿಂದಿ, ಉರ್ದು, ದಖನಿ ಹಾಗೂ ಮರಾಠಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು.

ರಾಮಚಂದ್ರ ವೀರಪ್ಪನವರು 1991 ರಿಂದ 2004ರವರೆಗೆ ಸತತವಾಗಿ ಐದು ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ದಿಗ್ವಿಜಯ ದಾಖಲಿಸಿದ್ದರು. ಅವರ ಕೊನೆಯ ಚುನಾವಣೆ 2004 ರಲ್ಲಿ ಸ್ಪರ್ಧಿಸಿದಾಗ ಅವರಿಗೆ 95 ವರ್ಷ ವಯಸ್ಸಾಗಿತ್ತು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನರಸಿಂಗ್‌ರಾವ್ ಸೂರ್ಯವಂಶಿ ಅವರ ವಿರುದ್ಧ ಸ್ಚಂದ್ರ 23,539 ಮತಗಳ ಅಂತರದಿಂದ ಏಳನೇ ಬಾರಿಗೆ ಗೆದ್ದಿದ್ದರು. ಆದರೆ ಮೂತ್ರಪಿಂಡದ ಸಮಸ್ಯೆದಿಂದ ಬಳಲುತ್ತಿದ್ದ ಅವರು ಅದೇ ವರ್ಷ ನಿಧನರಾದರು.

ಸರಳ ಸಜ್ಜನಿಕೆಯ ರಾಜಕಾರಣಿ ರಾಮಚಂದ್ರ ವೀರಪ್ಪನವರು ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಜಯ ಸಾಧಿಸಿದ ದಾಖಲೆ ಜೊತೆಗೆ ಕ್ಷೇತ್ರದ ಅತ್ಯಂತ ಹಿರಿಯ ಸಂಸದ (95 ವರ್ಷ) ಎಂಬ ಕೀರ್ತಿಗೂ ಭಾಜನರಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳಿಂದ ಸಂಸದರಾಗಿ ಆಯ್ಕೆಯಾದ ಮೊದಲ ಸಂಸದರೂ ಹೌದು ಎಂಬುದು ಇನ್ನೊಂದು ವಿಶೇಷ.

ವೀರಪ್ಪನವರು ನಿಧನರಾದ ಬಳಿಕ ನಡೆದ 2004ರ ಚುನಾವಣೆಯಲ್ಲಿ ಅವರ ಪುತ್ರ ಬಸವರಾಜ ವೀರಪ್ಪ ಅವರು ನರಸಿಂಗ್‌ ರಾವ್ ಸೂರ್ಯವಂಶಿ ವಿರುದ್ಧ ಸ್ಪರ್ಧಿಸಿ 13,470 ಮತಗಳಿಂದ ಸೋತರು. ಸೂರ್ಯವಂಶಿ ಅವರು ನಾಲ್ಕನೇ ಅವಧಿಗೆ ಸಂಸದರಾದರು. ಈ ಮೂಲಕ ರಾಮಚಂದ್ರ ವೀರಪ್ಪನವರು ಕಟ್ಟಿ ಬೆಳೆಸಿದ ದಶಕದ ಬಿಜೆಪಿ ಭದ್ರಕೋಟೆ ಮತ್ತೆ‌ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ಸಫಲರಾದರು.

ಮತ್ತೊಂದು ದಾಖಲೆಗೆ ಸಾಕ್ಷಿಯಾಗುತ್ತಾ ಕ್ಷೇತ್ರ? :

2009 ರಿಂದ ಬೀದರ್‌ ಲೋಕಸಭಾ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟ ಬಳಿಕ ಮೂರು ಚುನಾವಣೆ ನಡೆದಿದೆ. 2009ರಲ್ಲಿ ಧರ್ಮಸಿಂಗ್‌ ಅವರು ಜಯ ಗಳಿಸಿದ್ದರು. 2014 ಹಾಗೂ 2019ರಲ್ಲಿ ಬಿಜೆಪಿಯಿಂದ ಭಗವಂತ್‌ ಖೂಬಾ ಎರಡು ಬಾರಿ ಜಯ ಗಳಿಸಿದ್ದಾರೆ.

ಈಗ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆಯ ಕಾವು ಜೋರಾಗಿದೆ. ಕಳೆದ ಬಾರಿ ನಡೆದಂತೆ ಖಂಡ್ರೆ ಹಾಗೂ ಖೂಬಾ ನಡುವೆ ನೇರ ಹಣಾಹಣಿಗೆ ಅಖಾಡ ಸಜ್ಜಾಗಿದೆ. ಕಳೆದ ಬಾರಿ ಹಾಲಿ ಸಚಿವ ಈಶ್ವರ ಖಂಡ್ರೆಯವರು ಸಂಸದ ಭಗವಂತ ಖೂಬಾ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈಗ ಈಶ್ವರ ಖಂಡ್ರೆ ತಮ್ಮ ಮಗ ಸಾಗರ್‌ ಖಂಡ್ರೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ.

ಹ್ಯಾಟ್ರಿಕ್‌ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಂದ್ರ ಸಚಿವ ಭಗವಂತ ಖುಬಾ ಅವರನ್ನು ಹೇಗಾದರೂ ಮಣಿಸಬೇಕೆಂದು ಪಟ್ಟು ಹಿಡಿದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಮಗನಿಗೆ ಟಿಕೆಟ್‌ ಕೊಡಿಸಿದ್ದಾರೆ. ಕಾಂಗ್ರೆಸ್ ರಾಜ್ಯದ ಐದು ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿದೆ. ಅದರಲ್ಲಿ ಸಚಿವ ಈಶ್ವರ ಖಂಡ್ರೆಯವರ ಪುತ್ರನಿಗೂ ಟಿಕೆಟ್‌ ಘೋಷಿಸಿದೆ. ಸಾಗರ್‌ ಖಂಡ್ರೆ ಕೇವಲ 26 ವಯಸ್ಸಿನವರು, ರಾಜ್ಯದ ಅತಿ ಕಿರಿಯ ಅಭ್ಯರ್ಥಿಯೂ ಹೌದು. ಸಾಗರ್‌ ಖಂಡ್ರೆ ಅವರನ್ನು ಹಾಲಿ ಸಂಸದ ಭಗವಂತ ಖೂಬಾ ವಿರುದ್ಧ ಕಣಕ್ಕಿಳಿಸಿ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಈಶ್ವರ ಖಂಡ್ರೆ ಹೊಸ ರಣತಂತ್ರ ರೂಪಿಸುತ್ತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಬಹು ಚರ್ಚಿತ ವಿಷಯ.

ಖೂಬಾ ಹಾಗೂ ಖಂಡ್ರೆ ನಡುವಿನ ರಾಜಕೀಯ ಜಿದ್ದಾಜಿದ್ದಿಯಲ್ಲಿ ಬಹುಶಃ ಸಾಗರ್‌ ಖಂಡ್ರೆಯವರು ಗೆದ್ದರೆ ಕ್ಷೇತ್ರದ ಅತ್ಯಂತ ಕಿರಿಯ ಸಂಸದ ಎಂಬ ದಾಖಲೆ ಸೃಷ್ಟಿಸುವ ಜೊತೆಗೆ ಮಾಜಿ ಸಂಸದ ನರಸಿಂಗ್‌ರಾವ್ ಸೂರ್ಯವಂಶಿ ಅವರ ಕಿರಿಯ ಸಂಸದ ಎಂಬ ದಾಖಲೆ ಮುರಿದಂತಾಗುತ್ತದೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿಯೂ 26 ವರ್ಷದ ಅತಿ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. ಆದರೆ ಮತದಾರರು ಯಾರಿಗೆ ಒಲಿಯುತ್ತಾರೆ ಎಂಬುದು ಜೂ.4ರ ಫಲಿತಾಂಶ ತನಕ ಕಾಯಲೇಬೇಕು.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಓಡಿಸ್ಸಾ ರಾಜ್ಯದ ಕೆಂದುಜಹಾರ್‌ ಕ್ಷೇತ್ರದಿಂದ (ಬಿಜೆಡಿ) ಪಕ್ಷದಿಂದ ಸ್ಪರ್ಧಿಸಿದ ಚಂದ್ರಾಣಿ ಮುರ್ಮು ಎಂಬ 25 ವರ್ಷದ ಯುವತಿ ಜಯ ಸಾಧಿಸಿ ದೇಶದ ಅತ್ಯಂತ ಕಿರಿಯ ಸಂಸದೆ ಎಂದು ಪ್ರಖ್ಯಾತಿ ಗಳಿಸಿದರು.

ಖೂಬಾ ಕ್ಷೇತ್ರದ ಮೊದಲ ಲಿಂಗಾಯತ ಸಂಸದ ಹಾಗೂ ಮಂತ್ರಿ :

ಬಿಜೆಪಿ ಪಕ್ಷದಿಂದ ಎರಡು ಬಾರಿ ಸತತವಾಗಿ ಗೆದ್ದಿರುವ ಸಂಸದ ಭಗವಂತ ಖೂಬಾ ಅವರು ಎರಡು ಮೊದಲುಗಳಿಗೆ ಸಾಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಸಂಸದರಲ್ಲಿ ಮೊದಲ ಲಿಂಗಾಯತ ಎಂಪಿ; ಇನ್ನೊಂದು ಮೊದಲ ಬಾರಿಗೆ ಕ್ಷೇತ್ರದ ಸಂಸದರೊಬ್ಬರಿಗೆ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನ ದಕ್ಕಿದ್ದು. ಇನ್ನು ಖೂಬಾ ಅವರು ಈ ಬಾರಿಗೆ ಜಯ ಸಾಧಿಸಿದರೆ ಹ್ಯಾಟ್ರಿಕ್‌ ಗೆಲುವಿನ ಜೊತೆಗೆ ಮೊದಲ ಬಾರಿಗೆ ಲಿಂಗಾಯತ ಸಂಸದ ಹ್ಯಾಟ್ರಿಕ್ ದಾಖಲಿಸಿದ್ದು ಹಾಗೂ ಔರಾದ ಮೂಲದ ಇಬ್ಬರು ಸಂಸದರು ಹ್ಯಾಟ್ರಿಕ್‌ ಸಾಧನೆಗೈದವರ ಪಟ್ಟಿಗೆ ಸೇರುತ್ತಾರೆ.

ನಾಲ್ಕು, ಏಳು ಹಾಗೂ ಎರಡು ಬಾರಿ ಗೆದ್ದಿರುವ ಕ್ರಮವಾಗಿ ನರಸಿಂಗ್‌ರಾವ್‌  ಸೂರ್ಯವಂಶಿ ಹಾಗೂ ಭಗವಂತ ಖೂಬಾ ಮೂಲತಃ ಔರಾದ ಕ್ಷೇತ್ರದವರಾದರೆ, ರಾಮಚಂದ್ರ ವೀರಪ್ಪ ಹುಮನಾಬಾದ್‌ ಮೂಲದವರು. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕಿನ ಮೂವರು ನಾಯಕರು, ಸಂಸದರಾಗಿ ಆಯ್ಕೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಆಡಳಿತ ನಡೆಸಿದ್ದು ಹೆಮ್ಮೆಯ ಸಂಗತಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು

ಇಲ್ಲಿಯ ತನಕ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಭಾಲ್ಕಿಯ ಖಂಡ್ರೆ ಕುಟುಂಬ ಕಳೆದ ಬಾರಿ ರಾಷ್ಟ್ರ ರಾಜಕಾರಣ ಪ್ರವೇಶಿಸಲು ಅಖಾಡಕ್ಕೆ ಇಳಿದರೂ ಫಲಿಸಲಿಲ್ಲ. ಇದೀಗ ಮತ್ತೊಮ್ಮೆ ಖಂಡ್ರೆ ಪರಿವಾರದ ಮೂರನೇ ತಲೆಮಾರು ಸಾಗರ್‌ ಖಂಡ್ರೆಯವರು ಚುನಾವಣಾ ಕಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ ಸಾಗರ್‌ ಖಂಡ್ರೆ ಗೆಲುವು ಕಂಡಿದ್ದರೆ, ಖಂಡ್ರೆ ಪರಿವಾರದವರೊಬ್ಬರು ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಂತೆ ಆಗುತ್ತದೆ. ಅದಕ್ಕೆ ಸಾಗರ್‌ ಖಂಡ್ರೆ ಮೊದಲಿಗರು ಎಂಬ ಕೀರ್ತಿಗೂ ಭಾಜನರಾಗುತ್ತಾರೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು, ಕಾದು ನೋಡೋಣ, ಏನಂತೀರಿ?

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಭಾಸ್‌ ಅಭಿನಯದ ‘ಕಲ್ಕಿ 2898 ಎಡಿ’ ಏಕಕಾಲದಲ್ಲೇ ಮೂರು ‘ಒಟಿಟಿ’ಗಳಿಗೆ ಮಾರಾಟ

ತೆಲುಗು ನಟ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಭಾರತದ ಅತ್ಯಂತ...

ಮೋದಿ ಸುಳ್ಳುಗಳು | ಶೋಷಣೆಯಿಂದ ಮುಕ್ತಿ ನೀಡದ ಮೋದಿ, ಬುಡಕಟ್ಟುಗಳ ಅಭಿವೃದ್ಧಿಗೆ ನಿಲ್ಲುತ್ತಾರೆಯೇ?  

ಜಾರ್ಖಂಡ್‌ನ ದುಮ್ಕಾದಲ್ಲಿ ಇಂದು ನಡೆದ ಸಾರ್ವಜನಿಕ  ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ...

ರೇವ್ ಪಾರ್ಟಿ | ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ತೆಲುಗು ನಟಿ ಹೇಮಾ

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್‌.ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ‘ರೇವ್‌ ಪಾರ್ಟಿ’ ಪ್ರಕರಣಕ್ಕೆ...

ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ | ಸಚಿವ ಬಿ.ನಾಗೇಂದ್ರ ವಜಾಗೊಳಿಸಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...