ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ.ಅನುರಾಧ ಕೆ.ಎನ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಮಾ.20) ನಡೆದ 2024ರ ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರ್‌ಗಳಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಎಫ್.ಸಿ.ಟಿ, ಎಸ್.ಎಸ್.ಟಿ, ವಿ.ವಿ.ಟಿ ತಂಡದ ಮುಖ್ಯಸ್ಥರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗೆ ನಡೆದ ತರಬೇತಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳಿಗೆ ಕಡ್ಡಾಯ ಅನುಮತಿ ಹಾಗೂ ವೆಚ್ಚ ನಿರ್ವಹಣೆಗಳ ಬಗ್ಗೆ ನಿಗಾವಹಿಸಬೇಕು ಎಂದರು.
ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ನೇತೃತ್ವದಲ್ಲಿ ಚೆಕ್ ಪೋಸ್ಟ್‌ಗಳಿಗೆ ಎಸ್‌ಎಸ್‌ಟಿ ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸಾಕಷ್ಟು ಜಾಗರೂಕರಾಗಿ ವಾಹನಗಳ ತಪಾಸಣೆ ನಡೆಸಬೇಕು. ಚುನಾವಣೆಯು ಪ್ರಜಾಪ್ರಭುತ್ವದ ಅಂಗವಾಗಿದ್ದು, ಹಬ್ಬದ ರೀತಿಯಲ್ಲಿ ನಡೆಸೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ತರಬೇತುದಾರ ಅಭಿಜಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
